ಭವಿಷ್ಯದಲ್ಲಿ ಕಾಳಧನಿಕರಿಗೆ ನೆರವಾಗುವ 2000 ರೂ. ನೋಟು

  •  
  •  
  •  
  •  
  •    Views  

ವೆಂಬರ್ 8 ರಂದು ಪ್ರಧಾನಿ ಮೋದಿಯವರು 500 ಮತ್ತು 1000 ರೂ. ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದಾಗ ಥಟ್ಟನೆ ನಮಗೆ ನೆನಪಾಗಿದ್ದು ಬಸವಣ್ಣನವರ ವಚನಗಳ ಈ ಮುಂದಿನ ಸಾಲುಗಳು: “ಧನವನಿರಿಸದಿರಾ, ಇರಿಸಿದರೆ ಭವ ಬಪ್ಪುದು ತಪ್ಪದು”, “ಇದ ನೆಚ್ಚಿ ಕೆಡಬೇಡ - ಸಿರಿಯೆಂಬುದ”, “ಕಣ್ಣಿನಲಿ ನೋಡಿ ಮಣ್ಣಿನಲಿ ನೆರಹಿ ಉಣ್ಣದೆ ಹೋಗದಿರಾ”! ಅಕ್ರಮವಾಗಿ ಕಾಳಧನವನ್ನು ಕೂಡಿಟ್ಟರೆ ಭವ ಭವಾಂತರಗಳ ಮಾತಿರಲಿ, ಈ ಭವದಲ್ಲಿಯೇ “ಬವಣೆ ಬಪ್ಪುದು ತಪ್ಪದು" ಎಂಬ ಪಾಠಾಂತರವನ್ನು ಅಡಿಟಿಪ್ಪಣಿಯಲ್ಲಿ ಕೊಡಬೇಕೆನಿಸಿತು. ಕ್ಷೀರಸಾಗರದಲ್ಲಿ ಹಾವಿನ ಹಾಸಿಗೆಯ ಮೇಲೆ ಲಕ್ಷ್ಮೀಯಿಂದ ಪಾದ ಒತ್ತಿಸಿಕೊಂಡು ಮಲಗಿದ ಸ್ಥಿತಿಕರ್ತ ವಿಷ್ಣುವಿನಂತೆ ಹವಾನಿಯಂತ್ರಿತ ಕೊಠಡಿಗಳಲ್ಲಿ ಧನಲಕ್ಷ್ಮಿಯ ತೂಗುಯ್ಯಾಲೆಯಲ್ಲಿ ಹಾಯಾಗಿ ಮಲಗಿದ್ದ ಕಾಳಧನಿಕರು ಮೋದಿ ಸರಕಾರದ ಈ ನಿರ್ಧಾರದಿಂದ ಬೆಳಗಾಗುವುದರೊಳಗೆ ನೋಟಿನ ಕೊಂಡಿ ಕಳಚಿ ಕೆಳಕ್ಕೆ ಬಿದ್ದು ಪಕ್ಕೆಲಬು ಮುರಿದುಕೊಂಡಿದ್ದಾರೆ. ಅವರು ಪೇರಿಸಿಟ್ಟುಕೊಂಡಿದ್ದ ನೋಟಿನ ಮೂಟೆಗಳು ಈಗ ರದ್ದಿ ಕಾಗದ ತುಂಬಿದ ಗೋಣಿಚೀಲಗಳಾಗಿ ಪರಿಣಮಿಸಿವೆ! ಕೋಟಿ ಕೋಟಿಗಟ್ಟಲೆ ಹಣವಿದ್ದರೂ ಹೊರತೆಗೆಯಲಾಗುತ್ತಿಲ್ಲ ವೆಚ್ಚ ಮಾಡಲು ಬರುತ್ತಿಲ್ಲ. ಆದರೆ ರಕ್ತದೊತ್ತಡ ಏರಿ ಆಸ್ಪತ್ರೆಗೆ ಸೇರಿದರೆ ಮಾತ್ರ ಧಾರಾಳವಾಗಿ ಖರ್ಚು ಮಾಡಲು ಮೋದಿ ಸರಕಾರ ಸೌಜನ್ಯ ತೋರಿದೆ!

ಹೀಗೆ ಕರೋಡಪತಿಗಳ ಒಡಲೊಳಗೆ ಬುಸುಗುಡುವ ಅಸಮಾಧಾನ ಒಂದೆಡೆಯಾದರೆ, ಶ್ರಮಜೀವಿಗಳ ಪರದಾಟ ಮತ್ತೊಂದೆಡೆ. ಇವರಿಗೆ ಬೇಕಾದದ್ದು ಕೋಟಿಯಲ್ಲ, ಕೊಸರು! ಗಂಡಸರು ಬೆವರು ಸುರಿಸಿ ಗಳಿಸಿದ ಹಣ, ಗೃಹಿಣಿಯರು ಹಾಲು ಮಾರಿ ಗಂಡಸರ ಕಣ್ಮರೆಸಿ ಸಾಸುವೆ ಡಬ್ಬಿಗಳಲ್ಲಿ ಅಡಗಿಸಿಟ್ಟ ನೋಟುಗಳು ಕೆಲಸಕ್ಕೆ ಬಾರದ ಕಾಗದದ ಚೂರುಗಳಾದರೆ ಗತಿಯೇನು? ಆತಂಕಕ್ಕೆ ಒಳಗಾಗಿ ಬ್ಯಾಂಕುಗಳ ಮುಂದೆ ಕ್ಯೂ ನಿಂತಿರುವ ಈ ಜನರ ಒಂದು ವರ್ಗ, ಇನ್ನೊಂದು ವರ್ಗದ ಜನರೆಂದರೆ ಇವರು ಬ್ಯಾಂಕಿನ ಮುಂದೆ ಕ್ಯೂ ನಿಲ್ಲುವುದು ತಮ್ಮ ಖಾತೆಯಲ್ಲಿರುವ/ಕೈಯಲ್ಲಿರುವ ಹಣವನ್ನು ಬಿಡಿಸಲು/ಬದಲಾಯಿಸಲು ಅಲ್ಲ. ಇವರು ವಾಸ್ತವವಾಗಿ ಕಾಳಧನಿಕರ ಕೈಗೂಲಿಗಳು. ಅವರಿಂದ ಕಾಳಧನವನ್ನು ಪಡೆದು ಬ್ಯಾಂಕಿನ ಮುಂದೆ ಕ್ಯೂ ನಿಂತು ನೋಟುಗಳನ್ನು ಬದಲಾಯಿಸಿಕೊಟ್ಟು ನೂರಿನ್ನೂರು ರೂಪಾಯಿ "ದಿನಗೂಲಿ" ಪಡೆಯುವ ಹೊಟ್ಟೆಪಾಡಿನ ಜನರಿವರು. ಕೈಬೆರಳಿಗೆ ಮಸಿ ಹಾಕುವುದರ ಮೂಲಕ ಕಾಳಧನಿಕರ ಸಂಚಿಗೆ ತೆರೆ ಬಿದ್ದಿತದಲ್ಲದೆ ಬಡವರ ಈ ವಿನೂತನ ದಂಧೆಗೆ ಕತ್ತರಿ ಬಿದ್ದಿದೆ. ಮೋದಿ ಕ್ರಮದ ಬಗ್ಗೆ ಕಾಳಧನಿಕರ ಮನಸ್ಸಿನಲ್ಲಿ ಅಸಮಾಧಾನದ ಲಾವಾರಸ ಒಳಗೊಳಗೇ ಚಿಮ್ಮುತ್ತಿದ್ದರೂ ತುಟಿಹೊಲಿದವರಂತೆ ಸುಮ್ಮನಿರಬೇಕಾಗಿದೆ.

ಹೆಚ್ಚು ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿರುವುದು ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಸಲವಲ್ಲ, 1978 ರಲ್ಲಿ ಮೊರಾರ್ಜಿ ದೇಸಾಯಿಯವರ ಜನತಾ ಸರಕಾರವು ಒಂದು ಸಾವಿರ, ಐದು ಸಾವಿರ ಮತ್ತು ಹತ್ತು ಸಾವಿರ ರೂ. ಗಳ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿತ್ತು. ಆದರೆ ಜನಸಾಮಾನ್ಯರಿಗೆ ಈಗಿನಂತೆ ಕೊಂಚವೂ ಬಿಸಿ ತಟ್ಟಿರಲಿಲ್ಲ. ಅಗ ಅಂತಹ ದೊಡ್ಡ ನೋಟನ್ನು ಕಣ್ಣಾರೆ ಕಂಡವರು ಅತಿ ವಿರಳ. ಜನರ ದುಡಿಮೆಯೂ ಹೆಚ್ಚು ಇರುತ್ತಿರಲಿಲ್ಲ. ಕಾಲೇಜು ಅಧ್ಯಾಪಕರ ವೇತನ ಆಗ ಮೂರಂಕಿಯ ಮೇಲೆ ಇರಲಿಲ್ಲ. ಬಂಗಾರದ ಬೆಲೆಯೂ 10 ಗ್ರಾಂಗೆ 600 ರೂ. ಗಳ ಆಸುಪಾಸಿನಲ್ಲಿತ್ತು! ಈಗ ನಿಷೇಧಿಸಿರುವ ಐದು ನೂರು ಮತ್ತು ಸಾವಿರ ರೂ. ನೋಟುಗಳು ಇಂದು ದಿನಗೂಲಿಗಳ ಕೈಯಲ್ಲೂ ಇರುತ್ತವೆ. ಅಂದಮೇಲೆ ಸಹಜವಾಗಿಯೇ ತೀವ್ರ ಪರಿಣಾಮ ಬೀರಿ ಜನರಿಗೆ ತೊಂದರೆ ಆಗಿದೆ ನಿಜ. ಆದರೆ ಶರೀರದೊಳಗೆ ದುರ್ಮಾಂಸ (tumor) ಬೆಳೆದಿದೆಯೆಂದು ಕಂಡುಬಂದರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿ ಹೊರತೆಗೆಯಲೇಬೇಕು. ಶರೀರದ ಆರೋಗ್ಯ ಕಾಪಾಡಲು ಅಗತ್ಯವಾಗಿ ಮಾಡಬೇಕಾದ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ನೋವನ್ನು ರೋಗಿಯು ಸಹಿಸಿಕೊಳ್ಳಲೇಬೇಕಾಗುತ್ತದೆ. ಇದು ದೀರ್ಘಕಾಲೀನವಲ್ಲ. ಶಸ್ತ್ರಚಿಕಿತ್ಸೆಯ ನೋವಿನ ನಂತರ ರೋಗಿಯು ಗುಣಮುಖನಾಗುತ್ತಾನೆ. ಹಾಗೆಯೇ ಸಮಾಜದ ದುರ್ಮಾಂಸವಾದ ಕಾಳಧನವನ್ನು ಕತ್ತರಿಸಿ ತೆಗೆದುಹಾಕಲು ಸರಕಾರ ಮಾಡಿದ ಆಪರೇಶನ್ ಇದು. ಒಂದು ವ್ಯತ್ಯಾಸವೆಂದರೆ ವೈದ್ಯರು ರೋಗಿಯ ಒಪ್ಪಿಗೆಯನ್ನು ಪಡೆದು ಶಸ್ತ್ರಚಿಕಿತ್ಸೆ ಮಾಡಿದಂತೆ ಸರಕಾರ ಕಾಳಧನಿಕರ ಒಪ್ಪಿಗೆ ಪಡೆದು ಮಾಡಲು ಬರುವುದಿಲ್ಲ. ದೇಶಾದ್ಯಂತ ಸಂಚಲನವನ್ನು ಉಂಟುಮಾಡಿದ ಸರಕಾರದ ಈ ದಿಢೀರ್ ನಿರ್ಧಾರದಿಂದ ಜನಸಾಮಾನ್ಯರಿಗೆ ಕೈಯಲ್ಲಿ ಹಣವಿಲ್ಲದೆ ತೊಂದರೆಯಾಗಿದ್ದರೂ ಅಸಂತುಷ್ಟಿ ಎಂಬುದಿಲ್ಲ. ಬಹುಸಂಖ್ಯಾತರಿಗೆ ಮೆಚ್ಚುಗೆ ಇದೆ. ಮಧ್ಯಮವರ್ಗದವರಲ್ಲಿ ಮೆಚ್ಚುವವರೇ ಬಹಳ ಹೆಚ್ಚು ವಿರೋಧಿಸುವವರು ಅತಿ ಕಡಿಮೆ.

ಭಾರತ ಸರಕಾರ ಕೈಗೊಂಡಿರುವ ಈ ನೋಟು ನಿಷೇಧ ಕುರಿತು ಇಂಗ್ಲೆಂಡಿನಲ್ಲಿರುವ ಶಿಷ್ಯರೊಬ್ಬರು ಅವರಿಗೆ ಬಂದ ಎರಡು ಮಿಂಚೋಲೆಗಳನ್ನು ನಮಗೆ ರವಾನಿಸಿರುತ್ತಾರೆ. ಅವುಗಳಲ್ಲಿ ನ್ಯೂಜಿಲೆಂಡ್ ಮೂಲದಿಂದ ಬಂದ ಮಿಂಚೋಲೆಯು ಭಾರತದಲ್ಲಿ ಕಾಳಧನಕ್ಕೆ ಕಾರಣವೇನೆಂದು ಸುದೀರ್ಘವಾಗಿ ಚರ್ಚಿಸುತ್ತದೆ. ಪ್ರಾಯಶಃ ಇದರ ಕರ್ತೃ ಅಲ್ಲಿ ನೆಲೆಸಿರುವ ಭಾರತೀಯ ಸಂಜಾತನೇ ಇರಬೇಕು. ಆತನ ಪ್ರಕಾರ ಭ್ರಷ್ಟಾಚಾರವೆಂಬುದು ಭಾರತೀಯ ಸಂಸ್ಕೃತಿಯಲ್ಲೇ ರಕ್ತಗತವಾಗಿ ಬಂದಿದೆ. ದೇವಾಲಯಗಳಲ್ಲಿ ಕಾಣಿಕೆ ಅರ್ಪಿಸಿ ಅದರ ಬದಲಾಗಿ ಜನರು ದೇವರಿಂದ ಪ್ರತಿಫಲ ಬಯಸುತ್ತಾರೆ. ಅದು ಭಕ್ತಿಗಿಂತ ಹೆಚ್ಚಾಗಿ ಕೊಡುಕೊಳ್ಳುವಿಕೆಯ ವ್ಯವಹಾರ! ದೇಗುಲಗಳ ಹೊರಗೆ ನಡೆಯುವ ಇಂಥ ವ್ಯವಹಾರ ಲಂಚವೆನಿಸಿಕೊಳ್ಳುತ್ತದೆ ಎಂದು ಮೂದಲಿಸುವ ಆತ ಒಂದು ಕಾಲದಲ್ಲಿ ಐರೋಪ್ಯ ದೇಶಗಳಲ್ಲಿ ಪಾಪವಿಮೋಚನೆ ಬಯಸುವ ಧನಿಕರು ಚರ್ಚುಗಳಿಗೆ ಇಂತಿಷ್ಟು ರುಸುಮು ಸಲ್ಲಿಸಿದರೆ ಸಾಕು ಧರ್ಮಗುರು ಪೋಫ್ ಅವರಿಂದ ಸ್ವರ್ಗದ ಸರ್ಟಿಪಿಕೇಟ್ ದೊರೆಯುತ್ತಿತ್ತು ಎಂಬುದನ್ನು ಮರೆತಂತೆ ತೋರುತ್ತದೆ. ಈ ಪದ್ಧತಿಯ ಹಿಂದೆ ಶ್ರೀಮಂತನೊಬ್ಬ ತಾನು ಸ್ವರ್ಗಕ್ಕೆ ಹೋಗಲು ಏನು ಮಾಡಬೇಕೆಂದು ಏಸುಕ್ರಿಸ್ತನನ್ನು ಕೇಳಿದಾಗ ನಿನ್ನಲ್ಲಿರುವ ಸಂಪತ್ತನ್ನು ಬಡಬಗ್ಗರಿಗೆ ದಾನವಾಗಿ ಕೊಡು ಎಂದು ಹೇಳಿದ್ದನ್ನು ಕೇಳಿ ಆತ ನಿರಾಸೆಯಿಂದ ಹಿಂದಿರುಗಿದ ಘಟನೆ ಕಾರಣವಿರಬಹುದು.ಆಗ ಏಸುಕ್ರಿಸ್ತನು ತನ್ನ ಶಿಷ್ಯರತ್ತ ತಿರುಗಿ ನಸುನಕ್ಕು ಹೇಳುತ್ತಾನೆ: “ಒಂದು ಸೂಜಿಯ ಸಣ್ಣ ರಂಧ್ರದಲ್ಲಿ ಬೃಹದಾಕರದ ಒಂಟೆಯಾದರು ನುಸುಳಬಹುದು ಈ ಶ್ರೀಮಂತ ಮಾತ್ರ ಸ್ವರ್ಗವನ್ನು ಪ್ರವೇಶಿಸಲು ಸಾಧ್ಯವಿಲ್ಲ” (It is rather easier for a camel to go through the eye of needle then the rich man to enter the Kingdom of God). ಹಾಗೆಯೇ ಭಾರತೀಯರು ಮಂದಿರಗಳಲ್ಲಿ ಅರ್ಪಿಸುವ ಕಾಣಿಕೆ ದೇವರಿಂದ ಇನ್ನೇನನ್ನೋ ಪಡೆಯುವ ಸಲುವಾಗಿ ಅಲ್ಲ. ವ್ಯವಹಾರಿಕವಾಗಿ ಹಾಗೆ ಕಂಡು ಬಂದರು ವಾಸ್ತವವಾಗಿ ದೇವರಿಗೆ ಸಮರ್ಪಣೆ ಮಾಡುವ ಈ ಕಾಣಿಕೆ “ ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು, ನಿಮ್ಮ ಸೊಮ್ಮಿಂಗೆ ಸಲ್ಲಿಸುವೆನು” ಎಂಬ ತಾತ್ವಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ಹಣದ ಮೇಲಿನ ಮೋಹವನ್ನು ಕಳೆದುಕೊಂಡು ನಿಸ್ವಾರ್ಥ ಸೇವೆ ಮಾಡಲು, ಇನ್ನು ಭಾರತೀಯರು ಭ್ರಷ್ಟರನ್ನು ಸಹಿಸಿಕೊಳುತ್ತಾರೆಯೇ ಹೊರತು ತಿದ್ದಲು ಮುಂದಾಗುವುದಿಲ್ಲ, ಆದ್ದರಿಂದ ಭ್ರಷ್ಟ ರಾಜಕಾರಣಿ ಇಲ್ಲಿ ಸುಲಭವಾಗಿ ಪುನರಾಯ್ಕೆ ಆಗುತ್ತಾನೆ. ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಧ್ಯವಿಲ್ಲ. ಎಂಬ ಆತನ ಆರೋಪ ಬಹುಮಟ್ಟಿಗೆ ನಿಜವೆನಿಸಿದರೂ ಭ್ರಷ್ಟಾಚಾರವೆಂಬುದು ಎಲ್ಲ ದೇಶಗಳಲ್ಲೂ ಇದೆ. ಅದಕ್ಕೆ ದೇಶಗಳ ಗಡಿ ಬಾಂದುಗಳಿಲ್ಲ ಎಂಬುದನ್ನು ಮನಗಾಣಬೇಕು.

ಎರಡನೆಯ ಮಿಂಚೋಲೆ ಭಾರತದಲ್ಲಿ ಈಗ ಹೆಚ್ಚಿನ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದಂತೆ ಅಮೇರಿಕಾದಲ್ಲಿ 1968 ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ 500, 1000, 5000 10000 ಮತ್ತು 1 ಲಕ್ಷ ಡಾಲರ್ ಗಳ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ ಹಿನ್ನೆಲೆಯನ್ನು ವಿವರಿಸುತ್ತದೆ. ಆಗ ಅಮೆರಿಕದ ಶ್ರೀಸಾಮಾನ್ಯರು ಭ್ರಷ್ಟರಾಜಕಾರಣಿಗಳ, ಮಾದಕವಸ್ತು ವ್ಯಾಪಾರಿಗಳ, ಸಜ್ಜನರ ಮುಖವಾಡದ ಬಿಳಿ ಕಾಲರ್ ಕ್ರಿಮಿನಲ್ ಗಳ ಅಡಕತ್ತರಿಯಲ್ಲಿ ಸಿಕ್ಕಿ ಹೈರಾಣಾಗಿ ಹೋಗಿದ್ದರು. ಬ್ಯಾಂಕಿಂಗ್ ವ್ಯವಸ್ಥೆಯೂ ಈಗಿನಷ್ಟು ಆಧುನೀಕರಣಗೊಂಡಿರಲಿಲ್ಲ. ಎಲ್ಲವೂ ನಗದು ರೂಪದಲ್ಲಿಯೇ ವ್ಯವಹಾರ ನಡೆಯುತ್ತಿದ್ದ ಸಂದರ್ಭವದು. ಯಾರೂ ನಿರೀಕ್ಷಿಸದ ರೀತಿಯಲ್ಲಿ ನಿಕ್ಸನ್ ಕೈಗೊಂಡ ದಿಟ್ಟ ಕ್ರಮ ಭ್ರಷ್ಟಾಚಾರಿಗಳ ಬೆನ್ನು ಮೂಳೆಯನ್ನು ಮುರಿದು ಹಾಕಿತು. ಬ್ಯಾಂಕಿಂಗ್ ವ್ಯವಸ್ಥೆ ಪುನಃ ಹಳಿಯ ಮೇಲೆ ಬಂದು ಹೆಚ್ಚು ವೇಗದಲ್ಲಿ ಬೆಳೆಯಲು ಸಾಧ್ಯವಾಯಿತು. ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಂಡಿತು. ಜನರು ಹಳೆಯ ನಗದು ವ್ಯವಹಾರದಿಂದ ನಗದು ರಹಿತ ಹೊಸ ವ್ಯವಹಾರಕ್ಕೆ ಆರಂಭದಲ್ಲಿ ಕಷ್ಟವಾದರೂ ಕ್ರಮೇಣ ಹೊಂದಿಕೊಂಡರು. ಲಂಚ ತೆಗೆದುಕೊಳ್ಳುವವರ ಕೈಗಳಿಗೆ ಬೀಗ ಹಾಕಿದಂತಾಯಿತು. ಭ್ರಷ್ಟಾಚಾರಕ್ಕೆ ಕಡಿವಾಣ ಬಿತ್ತು. ಅಮೆರಿಕದಲ್ಲಿ ಸಾಧ್ಯವಾದದ್ದು ಭಾರತದಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಸಿನಿಕತೆ ಬೇಡ ಎಂಬುದು ಈ ಮಿಂಚೋಲೆಯ ಸದಾಶಯ.

ಮೋದಿ ಸರಕಾರ ಮಾಡಿದ ದೊಡ್ಡ ತಪ್ಪೆಂದರೆ 500/1000 ರೂ.ಗಳ ನೋಟುಗಳನ್ನು ನಿಷೇಧ ಮಾಡಿದ್ದಲ್ಲ; ಹೊಸದಾಗಿ 2000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿರುವುದು. ಸಮಕಾಲೀನ ಆರ್ಥಿಕ ವಿದ್ಯಮಾನಗಳನ್ನು ಗಮನಿಸಿದರೆ ಜನಸಾಮಾನ್ಯರಿಗೆ 2000 ರೂ. ನೋಟು ಬೇಕಿಲ್ಲ, ಹೆಚ್ಚೆಂದರೆ 200 ರೂ. ಗಳ ನೋಟು ಇದ್ದರೆ ಸಾಕು. ಈಗಲೂ ಅಮೇರಿಕೆಯಲ್ಲಿ 100 ಡಾಲರ್ಗಿಂತ ಹೆಚ್ಚಿನ ಮುಖಬೆಲೆಯ ನೋಟು ಇಲ್ಲ, ಅಧಿಕ ಮೌಲ್ಯದ ನೋಟುಗಳು ಕಾಳಧನಿಕರಿಗೆ, ಭ್ರಷ್ಟ ರಾಜಕಾರಣಿಗಳಿಗೆ, ಲಂಚಕೋರರಿಗೆ ಹಾಸಿಗೆ ಹಾಸಿಕೊಟ್ಟಂತಾಗುತ್ತದೆ.ಈಗ ತಂದಿರುವ ನಿಷೇಧವು ಕಾಳಧನವನ್ನು ತಾತ್ಕಾಲಿಕವಾಗಿ ವಿಧ್ವಂಸಗೊಳಿಸಬಲ್ಲುದಾದರೂ ಈಗ ಹೊರತಂದಿರುವ ಹೆಚ್ಚಿನ ಮುಖಬೆಲೆಯ ನೋಟು ಭವಿಷ್ಯದ ದಿನಮಾನಗಳಲ್ಲಿ ಕಾಳಧನಸಂಗ್ರಹಣೆಯನ್ನು ದ್ವಿಗುಣಗೊಳಿಸುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 24.11.2016