ಪಾಣಿನಿ ಸೂತ್ರ ಪರಿಹಾರದ ಸಂಶೋಧನೆ ತರ್ಕಬದ್ಧವಲ್ಲ : ಶ್ರೀ ತರಳಬಾಳು ಜಗದ್ಗುರುಗಳವರ ತೀವ್ರ ಪ್ರತಿಕ್ರಿಯೆ

  •  
  •  
  •  
  •  
  •    Views  

ಸಿರಿಗೆರೆ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿ ಎಚ್ ಡಿ ವಿದ್ಯಾರ್ಥಿ ರಿಷಿ ರಾಜ್ ಪೊಪಟ್ ಅವರು ಪಾಣಿನಿ ಮಹರ್ಷಿಯ ಸೂತ್ರದ ಸಮಸ್ಯೆಯೊಂದಕ್ಕೆ ಪರಿಹಾರ ಹುಡುಕಿರುವುದು ತರ್ಕಬದ್ಧವಲ್ಲದ, ಅಮಾನ್ಯ ಮತ್ತು ತಪ್ಪು ದಾರಿಗೆಳೆಯುವಂತಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರವಾದ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಪಾಣಿನಿ ಮಹರ್ಷಿಯ “ಅಷ್ಟಾಧ್ಯಯಿ” ಸಂಸ್ಕೃತ ವ್ಯಾಕರಣ ಗ್ರಂಥವನ್ನು ಆಳವಾಗಿ ಅಧ್ಯಯನ ಮಾಡಿ, ಜಗತ್ತಿನಲ್ಲಿಯೇ ಮೊಟ್ಟ ಮೊದಲು ಸಾಪ್ಟ್ ವೇರ್ ರೂಪಿಸಿರುವ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ರಿಷಿ ರಾಜ್ ಪೊಪಟ್ ಎಂಬ ಯುವಕನ ಪ್ರತಿಶೋಧ ನಿಜಕ್ಕೂ ನಮಗೆ ಅಘಾತವನ್ನುಂಟುಮಾಡಿದೆ. ಈ ಯುವಕನ ವ್ಯಾಖ್ಯಾನವು ಅನೇಕ ಮಾಧ್ಯಮಗಳಲ್ಲಿ ಭಾವನಾತ್ಮಕವಾಗಿ ವ್ಯಾಪಕ ಪ್ರಚಾರವಾಗುತ್ತಿದೆ ಎಂದಿರುವ ಶ್ರೀಗಳು, ಸಂಶೋಧಕ ತನ್ನ ಅನುಕೂಲಕ್ಕೆ ತಕ್ಕಂತೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾನೆ. ಪೊಪಟ್ ಸಲ್ಲಿಸಿರುವ ಪ್ರಬಂಧದ ಮೂಲ ಪ್ರತಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡು ಪರಿಶೀಲಿಸಿರುವ  ಶ್ರೀಗಳು, ಪಾಣಿನಿ ಸೂತ್ರದಲ್ಲಿ “1.4.2 – ವಿಪ್ರತಿಷೇದೇ ಪರಮ್ ಕಾರ್ಯಂ” ಭೇದಿಸಲು ಯಾವುದೇ ಒಗಟಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಈ ಸೂತ್ರದ ಸಾಂಪ್ರದಾಯಿಕ ತಿಳಿವಳಿಕೆ ಹೀಗಿದೆ- “ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮವು ಗೆಲ್ಲುತ್ತದೆ” ಆದರೆ ಈ ಅರ್ಥವನ್ನು ಪೊಪಟ್ ತಿರಸ್ಕರಿಸಲು ಪ್ರಯತ್ನಿಸುತ್ತಾನೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಣಿನಿಯ ಸೂತ್ರಗಳು ಅಲ್ಪಾಕ್ಷರಮಸನ್ದಿಗ್ದಂ ಸಾರವತಿಶ್ವತೋಮುಖಮ್| ಅಸ್ತೊಭಮನವದ್ಯಂಚ ಸೂತ್ರಂ ಸೂತ್ರವಿದೋ ವಿದುಃ|| (ಸೂತ್ರಗಳು ಸಂಕ್ಷಿಪ್ತವು, ನಿಸ್ಸಂದಿಗ್ದವು, ಜಾಗತಿಕವಾಗಿಯೂ, ಸಮಗ್ರವಾಗಿಯೂ, ಸುಸಂಬದ್ಧ ಮತ್ತು ನಿಷ್ಕಳಂಕವಾಗಿವೆ). ಈಗಿರುವಾಗ ಪ್ರಸ್ತುತ ಸಂಶೋಧಕರ ಪ್ರಬಂಧವನ್ನು ಅನುಮೋದಿಸುವ ಮೊದಲು ವಿಶ್ವವಿದ್ಯಾಲಯದ ಮಾರ್ಗದರ್ಶಿಗಳು ಮತ್ತು ಪ್ರಾಧ್ಯಾಪಕರು ಕಾಳಜಿ ವಹಿಸಬೇಕಾಗಿತ್ತು. ಪಾಣಿನಿಯ ವ್ಯಾಕರಣದಲ್ಲಿ ಪ್ರವೀಣರಲ್ಲದ ವರದಿಗಾರರು ಈ ವಿಷಯವನ್ನು ಸಂಪೂರ್ಣ ಗಾಳಿಗೆ ತೂರಿ, 2500 ವರ್ಷಗಳ ನಂತರ ಗುಪ್ತ ನಿಧಿಯ ದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದಂತೆ ಜಗತ್ತಿನಾದ್ಯಂತ ಜನರ ಮನಸ್ಸಿನಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ. ಆಸಕ್ತರು http://www.taralabalu.org/paniniವೆಬ್ ಸೈಟಿನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಂಡು ಗಮನಿಸಬಹುದು. ಮೇಲ್ಕಂಡ ಸಂಶೋಧಕರ ಪ್ರತಿಪಾದನೆಯು ತಪ್ಪು ಎಂಬುದನ್ನು ಮನಗಣಬಹುದಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಭಾರತದಲ್ಲಿ ಕಂಪ್ಯೂಟರ್ ತಂತ್ರಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿದ್ದಾಗಲೇ ಪಾಣಿನಿ ಮಹರ್ಷಿಗಳ “ಅಷ್ಟಾಧ್ಯಯಿ” ಗ್ರಂಥವನ್ನು ಶ್ರಿಗಳು ಗಣಕೀಕರಣ ಮಾಡಿದ್ದರು. ತಮ್ಮ ಆಳವಾದ ಅಧ್ಯಯನ, ಸಂಶೋಧನೆಗಳ ಮೂಲಕ 1993ರಲ್ಲಿಯೇ ಈ ಗ್ರಂಥಕ್ಕೆ ಸಾಪ್ಟ್ ವೇರ್ ರೂಪಿಸಿ, “ಗಣಕಾಷ್ಟಧ್ಯಯಿ” ಎಂದು ನಾಮಕರಣ ಮಾಡಿದ ಮೊದಲಿಗರು. ಆಸ್ಟ್ರೇಲಿಯಾದ ಮೆಲ್ಬೊರ್ನೊ ವಿಶ್ವವಿದ್ಯಾಲಯದಲ್ಲಿ 1994ರಲ್ಲಿ ಜರುಗಿದ 9ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ತಮ್ಮ ಸಂಶೋಧನೆಯ ವಿವರಗಳನ್ನು ಮಂಡಿಸಿ, ಸಾಪ್ಟ್ ವೇರ್ ಪ್ರಾತ್ಯಕ್ಷಿಕೆ ತೋರಿಸಿದ್ದರು.  ಈ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ  ಜಗತ್ತಿನ ಸಂಸ್ಕೃತ ವಿದ್ವಾಂಸರು ಸ್ವಾಮಿಜಿಯವರ ಈ ಸಂಶೋಧನೆಯನ್ನು ಕಂಡು ಬೆರಗಾಗಿದ್ದರು. ಕಂಪ್ಯೂಟರ್ ತಂತ್ರಜ್ಞಾನ ಈ ಮೊದಲು ವ್ಯವಹಾರಿಕವಾಗಿ ಮಾತ್ರ ಬಳಕೆಯಾಗುತಿತ್ತು. ಶ್ರೀಗಳ ಈ ಸಂಶೊಧನೆಯಿಂದ ಕಂಪ್ಯೂಟರ್ ಬಳಕೆಯ ವ್ಯಾಪಕತೆಯು ವಿಸ್ತರಿಸುವಂತಾಯಿತು.

ಕಂಪ್ಯೂಟರಿನ ಸೂತ್ರಗಳು ಮತ್ತು ಸಂಕೇತಗಳು ಪಾಣಿನಿ ಮಹರ್ಷಿಯ “ಅಷ್ಟಾಧ್ಯಯಿ” ಗ್ರಂಥದ ವ್ಯಾಕರಣದ ಸೂತ್ರಗಳನ್ನೇ ಹೋಲುತ್ತವೆ. ಆದುದರಿಂದ ಪಾಣಿನಿ ಮಹರ್ಷಿಗಳೇ ಜಗತ್ತಿನ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್  ಎಂದು ಶ್ರೀಗಳು ತಮ್ಮ ಅನೇಕ ಉಪನ್ಯಾಸಗಳಲ್ಲಿ ತಿಳಿಯಪಡಿಸಿದ್ದಾರೆ.

 ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಅನೇಕ ಸಂಸ್ಕೃತ ವಿದ್ವಾಂಸರು ರಿಷಿ ರಾಜ್ ಪೊಪಟ್ ಅವರ ಈ ಸಂಶೋಧನೆಯ ವಿವರವನ್ನು ನಿರಾಕರಿಸಿದ್ದಾರೆ. ಅನೇಕ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಪಾಣಿನಿ, ಪತಂಜಲಿ ಮತ್ತು ಕಾತ್ಯಾಯನ ಎಂಬ ಮೂವರು ವೈಯಾಕರಣಿಗಳು ಸಂಸ್ಕೃತ ವ್ಯಾಕರಣದ ತ್ರಿಮೂರ್ತಿಗಳಿದ್ದಂತೆ. ಪಾಣಿನಿಯ 4941 ಸೂತ್ರಗಳಿಗೆ ಪತಂಜಲಿ ಮತ್ತು ಕಾತ್ಯಾಯನರು  ಈಗಾಗಲೇ ವ್ಯಾಖ್ಯಾನಗಳನ್ನು ಬರೆದು ಸಾವಿರಾರು ವರ್ಷಗಳು ಸಂದಿವೆ. ಜಗತ್ತಿನಾದ್ಯಂತ ಸಾವಿರಾರು ವಿದ್ವಾಂಸರು ಈಗಾಗಲೇ ಸಾಕಷ್ಟು ಅಧ್ಯಯನ, ವ್ಯಾಖ್ಯಾನಗಳನ್ನು ಬರೆದಿದ್ದಾರೆ.