ಪ್ರಾಣಿಗಳ ಜೀವವೂ ಮುಖ್ಯವಲ್ಲವೇ?
ಪ್ರಾಣಿ ಪ್ರೀತಿ
ಪ್ರಾಣಿಗಳ ಜೀವವೂ ಮುಖ್ಯವಲ್ಲವೇ? ಕಾಡುಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷದಿಂದ ಸಾಕಷ್ಟು ಜೀವಗಳು ಬಲಿಯಾಗುತ್ತಿವೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮನುಷ್ಯ ತನ್ನ ದುರಾಸೆಯ ಕಬಂಧಬಾಹುವನ್ನು ಚಾಚಿರುವ ಫಲವಿದು. ಇದು ಬೆಂಗಳೂರಿಗೆ ಅಷ್ಟೇ ಸೀಮಿತವಾಗಿಲ್ಲ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕೆರೆಕಟ್ಟೆಗಳು, ಗೋಮಾಳಗಳು, ಬೆಟ್ಟಗುಡ್ಡಗಳು, ನದಿ ದಿಣ್ಣೆಗಳು, ಅರಣ್ಯದ ಆಯಕಟ್ಟಿನ ಭಾಗಗಳು ಹೇಳ ಹೆಸರಿಲ್ಲದ ಹಾಗೆ ಕೆಲವು ದಿನಗಳ ಹಿಂದೆ ಚಾಮರಾಜ ನಗರ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಣ ಕನ್ನಡ ಹೀಗೆ ಹಲವು ಕಡೆ ಆನೆ, ಹುಲಿ, ಚಿರತೆ, ಕರಡಿ ಇನ್ನಿತರೆ ಕಾಡುಪ್ರಾಣಿಗಳು ನಗರಗಳತ್ತ, ಹಳ್ಳಿಗಳತ್ತ ಮುಖಮಾಡಿರುವುದು ಗೊತ್ತೇ ಇದೆ. ರಾತ್ರಿ ಹೆಜ್ಜೆ ಇಡುತ್ತಿದ್ದಂತೆಯೇ ಆಹಾರ ಅರಸುತ್ತ ಮನುಷ್ಯನ ವಾಸತಾಣಗಳ ಕಡೆ ದಾಂಗುಡಿ ಇಡುತ್ತಿವೆ. ಕೆಲವು ದಿನಗಳ ಹಿಂದೆ ತುಮಕೂರು ತಾಲ್ಲೂಕಿನ ಬೈಚೇನಹಳ್ಳಿ ಗ್ರಾಮದಲ್ಲಿ ಮೂರು ವರ್ಷದ ಮಗುವೊಂದನ್ನು ಬಲಿಪಡೆದ ಚಿರತೆಯನ್ನು ಅರಣ್ಯ ಸಚಿವರು ಕಂಡಲ್ಲಿ ಗುಂಡಿಡಲು ಆದೇಶಿಸಿದ್ದಾರೆ. ಅರಣ್ಯ ಸಚಿವರು ಮನುಷ್ಯ ಜೀವ ನಮಗೆ ಮುಖ್ಯ ಎಂದು ಹೇಳಿರುವುದು ಸರಿಯಾಗಿದ್ದರೂ ಕಾಡು ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತಿರುವುದರ ಬಗ್ಗೆಯೂ ಚಿಂತಿಸಬೇಕಾದ ಅಗತ್ಯವೂ ಇದೆ ಎನ್ನುವುದನ್ನು ಮರೆಯ ಬಾರದು. ಕಳೆದ ಒಂದು ವಾರದಿಂದ ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಹುಡುಗಿಯನ್ನು ಕೊಂಡಿದೆ. ಜನ ಹೊರಗೆ ಬರಲು ಸಾಧ್ಯವಾಗದೆ ಭಯಭೀತರಾಗಿದ್ದಾರೆ. ಹೀಗೆ ಪ್ರತೀ ಬಾರಿ ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ವಾದಾಗಲೂ ಅದರ ಸುತ್ತ ನಾನಾ ವಿಲಕ್ಷಣ ಬೆಳವಣಿಗಳು ಸಂಭವಿಸುತ್ತಿವೆ. ಕಾಡು ಪ್ರಾಣಿಗಳಿಗೆ ಯಾರಾದರೂ ಬಲಿಯಾದಾಗ ಈ ರೀತಿಯ ಸ್ಥಳೀಯ ಜನರ ಆಕ್ರೋಶ ಮುಗಿಲು ಮುಟ್ಟುತ್ತದೆ. ತಕ್ಷಣ ಅಲ್ಲಿನ ಅರಣ್ಯಾಧಿಕಾರಿಯನ್ನು ಅದಕ್ಕೆ ಗುರಿ ಮಾಡಲಾಗುತ್ತದೆ. ಕೊನೆಗೆ ಸರ್ಕಾರದಿಂದ ಸಂತ್ರಸ್ತರಿಗೆ ಒಂದಿಷ್ಟು ಪರಿಹಾರದ ಹಣವನ್ನು ಘೋಷಿಸಲಾಗುತ್ತದೆ. ಅಲ್ಲಿಗೆ ಮುಗಿಯಿತು.
ಅರಣ್ಯ ಪ್ರದೇಶಕ್ಕೆ ಮನುಷ್ಯ ಯಾವಾಗ ಲಗ್ಗೆ ಇಡಲು ಆರಂಭಿಸಿದನೋ ಅಂದಿನಿಂದ ಇಂತಹ ಘಟನೆಗಳು ನಡೆಯುತ್ತಿವೆ. ಹಿಂದೆಲ್ಲ ಸಾಕಷ್ಟು ಪ್ರಮಾಣದ ಅರಣ್ಯ ಪ್ರದೇಶವಿತ್ತು. ಕಾಡಿನ ಪ್ರಮಾಣಕ್ಕೆ ತಕ್ಕಂತೆ ವನ್ಯ ಜೀವಿಗಳು ಇದ್ದುದರಿಂದ ಅವುಗಳು ತಮ್ಮ ವ್ಯಾಪ್ತಿಯಲ್ಲಿ ಬದುಕುತ್ತಿದ್ದವು. ಆದರೆ ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ಪ್ರದೇಶಗಳೆಲ್ಲ ಕೃಷಿ ಭೂಮಿಗಳಾಗಿ ಪರಿವರ್ತನೆಗೊಂಡು, ವನ್ಯ ಜೀವಿಗಳ ಸುತ್ತಾಟದ ವ್ಯಾಪ್ತಿ ಸಂಕುಚಿತಗೊಂಡಿದೆ. ಅವುಗಳಿಗೆ ಬೇಕಾದ ಆಹಾರ ಅಲ್ಲಿ ದೊರೆಯುತ್ತಿಲ್ಲ, ಹೀಗಾಗಿ ಮಾನವ ಕಾಡು ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಅತಿಯಾದ ನಗರೀಕರಣದಿಂದ ಅರಣ್ಯ, ಕೆರೆಗಳು, ಹುಲ್ಲುಗಾವಲು ಒತ್ತುವರಿಯಾಗಿವೆ. ಇದರಿಂದಾಗಿ ಚಿರತೆಗಳಿಗೆ ಬೇಕಾದ ಜಿಂಕೆ ಜಾತಿಯ ಪ್ರಾಣಿಗಳ ಆಹಾರ ಸಿಗುತ್ತಿಲ್ಲ. ಪ್ರತಿ ಪ್ರಾಣಿಗಳೂ ಆಹಾರ ಸರಪಳಿಗಳ ಮೂಲಕವೇ ಜೀವಿಸುತ್ತವೆ. ಇದರಲ್ಲಿ ಒಂದು ಕೊಂಡಿ ತುಂಡಾದರೂ ಅದು ಇಡೀ ಆಹಾರ ಸರಪಳಿಯನ್ನೇ ನಾಶಪಡಿಸುತ್ತದೆ. ವಾಸ್ತವವಾಗಿ ಚಿರತೆಗಳು ಅತ್ಯಂತ ಸಂಕೋಚದ ಪ್ರಾಣಿಗಳೆಂದು ಹೇಳುತ್ತಾರೆ. ಮನುಷ್ಯರನ್ನು ಕಂಡರೆ ಅಂಜುವ ಪ್ರಾಣಿಗಳು. ಇಂತಹ ಚಿರತೆಗಳೇ ತಮ್ಮ ಸಹಜ ಸ್ವಭಾವ ತೊರೆದು ಆಕ್ರಮಣ ಮಾಡಲು ಪರಿಸ್ಥಿತಿ ಬಂದಿದೆ ಎಂದರೆ, ಪ್ರಕೃತಿ ವ್ಯವಸ್ಥೆಯಲ್ಲಿ ಯಾವ ಪ್ರಮಾಣದ ಏರಿಳಿತಗಳು ನಡೆಯುತ್ತಿವೆ ಎಂಬುದನ್ನು ಊಹಿಸಬಹುದು. ಹೀಗೆ ಪ್ರತಿಯೊಂದು ಭಾಗದಲ್ಲೂ ಮಾನವ ವನ್ಯಜೀವಿಗಳ ಸಂಘರ್ಷಕ್ಕೆ ಅದರದ್ದೇ ಆದ ಕಾರಣಗಳಿವೆ. ಯಾವುದೇ ಕಾನೂನು ನಿಯಮಗಳು ಮಗುವನ್ನು ಮತ್ತೆ ತಂದು ಕೊಡಲು ಸಾಧ್ಯವಿಲ್ಲ. ಇಂತಹ ದುರ್ಘಟನೆಗಳು ಮತ್ತೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸುವುದು ಆದ್ಯತೆಯ ವಿಷಯವಾಗಬೇಕು. ಮನುಷ್ಯರ ಹಿತಾಸಕ್ತಿಯ ಜೊತೆಗೆ ಕಾಡುಪ್ರಾಣಿಗಳ ಜೀವಕ್ಕೂ ಬೆಲೆಕೊಡಬೇಕಾದ್ದು ಮನುಷ್ಯತ್ವದ ಹೆಗ್ಗುರುತಾಗಬೇಕಲ್ಲವೇ?
- ಗಿರಿಜಾಂಶಂಕರ್ ಜಿ.ಎಸ್ . ಇಡೇಹಳ್ಳಿ
ಕನ್ನಡ ಶಿಕ್ಷಕರು
ನೇರಲಕೆರೆ ಪ್ರೌಢಶಾಲೆ