ತ್ರಿವಿಕ್ರಮನಂತೆ ಬೆಳೆದರೂ ಕುಬ್ಜನಾಗಿರುವ ಮನುಷ್ಯ!

  •  
  •  
  •  
  •  
  •    Views  

ಇಂದು “ಯುಗದ ಕವಿ, ಜಗದ ಕವಿ” ಎನಿಸಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನ (29.12.1904). ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾದ ಅವರು ಮಹಾಮಾತೆ ಶಾರದಾದೇವಿಯವರ ಜನ್ಮದಿನದಂದೇ ತಮ್ಮ ಜನ್ಮದಿನ ಬರುತ್ತದೆಯೆಂದು ಅವರ ಜೀವನ ಚರಿತ್ರೆಯಾದ “ನೆನಪಿನ ದೋಣಿಯಲ್ಲಿ” ಕಾಲಿಡುವ ಮುನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ಪ್ರಮುಖ ಕೃತಿಯಾದ “ಶ್ರೀ ರಾಮಯಣ ದರ್ಶನಂ” ಮಹಾಕಾವ್ಯವು ಕನ್ನಡ ಸಾಹಿತ್ಯದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾಗ್ರಂಥ  ಎಂಬುದು ಕನ್ನಡಿಗರಿಗೆ ಹೆಗ್ಗಳಿಕೆಯ ಸಂಗತಿ. ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿಯೇ ಓದಿ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ನಂತರ ಆ ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿ ನಡೆದ ಒಂದು ರೋಚಕ ಘಟನೆಯನ್ನು ಅದೇ ಕಾಲೇಜಿನಲ್ಲಿ ಓದಿದ ನಮಗೆ ನಮ್ಮ ಕನ್ನಡ ಪ್ರಾಧ್ಯಾಪಕರು ಹೇಳಿದ ನೆನಪು. ಮಹಾರಾಜ ಕಾಲೇಜಿನ ಮುಂಭಾಗದಲ್ಲಿದ್ದ ಸುಂದರವಾದ ಉಪವನದಲ್ಲಿ ತುಂಟ ಹುಡುಗರು ಅಡ್ಡಾದಿಡ್ಡಿ ತಿರುಗಾಡಿ ಹೂವಿನ ಗಿಡಗಳನ್ನು ಹಾಳು ಮಾಡುತ್ತಿದ್ದರಂತೆ. ಅದನ್ನು ಕಂಡು ಸಹಿಸದ ಕುವೆಂಪುರವರು ಆ ಉಪವನದಲ್ಲಿ “ಇದು ಜನಗಳ ದಾರಿ -->”, “ಇದು ದನಗಳ ದಾರಿ -->” ಎಂದು ಎರಡು ಸೂಚನಾ ಫಲಕಗಳನ್ನು ಹಾಕಿಸಿದ್ದರಂತೆ! ಆದರೂ ಮುಂದೆ MA (ಎಮ್ಮೆ) ಗಳಾಗಿ ಕೋಡು ಮೂಡಿಸಿಕೊಳ್ಳುವ ತುಂಟ ವಿದ್ಯಾರ್ಥಿಗಳಿಗೆ ಎರಡನೆಯ ದಾರಿಯೇ ಸರಿ ಕಂಡಿರಬೇಕೆಂದು ತೋರುತ್ತದೆ! ಅಂತಹ ದಂಡಪಿಂಡಗಳ ಕೊರಳಿಗೆ ವಿಶ್ವವಿದ್ಯಾನಿಲಯದ ಡಿಗ್ರಿಗಳು ದನಗಳ ಕೊರಳ ಗುದ್ದೇಕೋಲಾಗಿ ಪರಿಣಮಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.

ಮುಂದೆ ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾಗ “ಯಾರದಾದರೂ ಬುದ್ದಿಯನ್ನು ಹಾಳು ಮಾಡಬೇಕೆಂದಿದ್ದರೆ ಅವರನ್ನು ಯಾವುದಾದರೂ ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನಾಗಿ ಮಾಡಬೇಕು” ಎಂದು ಹೇಳುತ್ತಿದ್ದರಂತೆ. ವಿಶ್ವವಿದ್ಯಾನಿಲಯದ ಆಡಳಿತ ನಿರ್ವಹಣೆಯು ಅವರ ಕಾವ್ಯರಚನೆಗೆ ಅಡ್ಡಿಯುಂಟು ಮಾಡಿದ ಕಹಿ ಅನುಭವದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಆಡಿರಬೇಕೆಂದು ತೋರುತ್ತದೆ. ಈಗ ಉಪಕುಲಪತಿಗಳಾಗಿ ಆಯ್ಕೆಯಾಗ ಬಯಸುವವರು ಕರೋಡಪತಿ ಗಳಾಗಿರಬೇಕೆಂಬ ಆರೋಪ ಕೇಳಿಬರುತ್ತಿದೆ. ಆದಕಾರಣ ಕುವೆಂಪುರವರು ಆಡಿದ ಮೇಲಿನ ಸ್ವಾನುಭವದ ಕಟು ಮಾತಿನ ಎಳೆಯನ್ನು ಮುಂದುವರಿಸಿ “ಯಾರದಾದರೂ ಬುದ್ಧಿಯನ್ನು ಹಾಳು ಮಾಡಬೇಕೆಂಬ ಆಲೋಚನೆ ನಿಮಗೆ ಇದ್ದರೆ ಅಂಥವರನ್ನು ದೊಡ್ಡ ದೊಡ್ಡ ಮಠಗಳ ಸ್ವಾಮಿಗಳನ್ನಾಗಿ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ” ಎಂದು ಹೇಳಬಹುದು. ಬೆಳಗಿನಿಂದ ಸಂಜೆಯವರೆಗೆ ಶಿಷ್ಯರಿಂದ “ಬುದ್ದಿ, ಬುದ್ದಿ ಎನಿಸಿಕೊಂಡೇ ಅವರು ತಮ್ಮ ಬುದ್ಧಿಯನ್ನು ನಿಃಸಂಶಯವಾಗಿ ಕಳೆದುಕೊಳ್ಳುತ್ತಾರೆಂಬುದು ನಮ್ಮ ಸ್ವಾನುಭವ! ಈಗೀಗಲಂತೂ ಮಠಗಳಲ್ಲಿ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಚಿಂತನೆಗಳಿಗಿಂತ ಹೆಚ್ಚಾಗಿ ವ್ಯಾವಹಾರಿಕ ಹಗ್ಗಜಗ್ಗಾಟಗಳೇ ಜಾಸ್ತಿ. ಲೌಕಿಕ ಕಾಮನೆಗಳಿಂದ ದೂರವಿರುವ ಬದಲು ಮಠದ ಆಸ್ತಿಪಾಸ್ತಿಗಳನ್ನು ಲಪಟಾಯಿಸಲು ಹೊಂಚುಹಾಕಿ ಹಾರಾಡುವ ರಣಹದ್ದುಗಳೇ ಹೆಚ್ಚು ಕಾಣಿಸುತ್ತಿವೆ! “ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು” ಎಂದು ದೇವರ ದಾಸಿಮಯ್ಯನವರು ಹೇಳುವಂತೆ ಮಠಗಳಲ್ಲಿ ಕಳ್ಳಬೆಕ್ಕುಗಳು ಸೇರಿಕೊಂಡು ಕೋಲಾಹಲ ಎಬ್ಬಿಸಿ ಜನರ ಧಾರ್ಮಿಕ ಶ್ರದ್ಧೆಯೇ ಕುಸಿದು ಬೀಳುವಂತಾಗಿದೆ.

ಕಾವ್ಯಪ್ರತಿಭೆ ಎಂಬುದು “ಬುದ್ಧಿ ಭಾವಗಳ ವಿದ್ಯುದಾಲಿಂಗನ” ಎಂದು ಕುವೆಂಪುರವರು ಒಂದೆಡೆ ಹೇಳುತ್ತಾರೆ. ಕೆಲವೊಮ್ಮೆ ಬುದ್ಧಿ ಮತ್ತು ಹೃದಯ ಸಂಘರ್ಷಕ್ಕೆ ಒಳಗಾಗುತ್ತವೆ. ಅವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ, ಬುದ್ಧಿ ಜೀವಿಗಳಲ್ಲಿ ಬುದ್ಧಿಯ ತರ್ಕ ಮತ್ತು ವೈಚಾರಿಕತೆಯ ತೀವ್ರತೆ ಹೆಚ್ಚು. ಕವಿಯಾದವನಲ್ಲಿ ಬುದ್ಧಿಗಿಂತ ಹೃದಯದ ಭಾವನೆಗಳು ಮೇಲುಗೈ ಸಾಧಿಸುತ್ತವೆ. ಕವಿಯ ಭಾವತೀವ್ರತೆಯಲ್ಲಿ ಬುದ್ದಿ ಸೋಲುತ್ತದೆ. ಕವಿತೆಯನ್ನು ಬರೆಯಲು ಬುದ್ಧಿ ನೆರವಾಗಬಹುದೇ ಹೊರತು ಬುದ್ಧಿಯಿಂದಲೇ ಕವಿತೆ ಹುಟ್ಟುವುದು ಸಾಧ್ಯವಿಲ್ಲ. “ಮೂಗ ಕಂಡ ಕನಸಿನಂತಾಯಿತ್ತೆನ್ನ ಭಕ್ತಿ” ಎಂದು ಬಸವಣ್ಣನವರು ಹೇಳುವಂತೆ ಹೃದಯದ ಭಾವನೆಗಳ ಅಭಿವ್ಯಕ್ತಿಯಲ್ಲಿ ಶಬ್ದ ಸೋಲುತ್ತದೆ, ಮಾತು ಮೂಕವಾಗುತ್ತದೆ. ಕವಿತೆಯು “ಬುದ್ಧಿಭಾವಗಳ ವಿದ್ಯುದಾಲಿಂಗನ” ವಾದರೂ ಕವಿಯ ಹೃದಯದಲ್ಲಿರುವ ಭಾವತೀವ್ರತೆಯು ಬುದ್ಧಿಯನ್ನು ಸೋಲಿಸಿ ಮೇಲ್ಗೈ ಸಾಧಿಸುತ್ತದೆ. ಕವಿಯ ಕಲ್ಪನೆಯ ಮನೋವ್ಯಾಪಾರ ನಡೆಯುವುದು ಬುದ್ಧಿಯ. ಸ್ಥರದಲ್ಲಲ್ಲ, ಭಾವನೆಯ ನೆಲೆಯಲ್ಲಿ, ಆದಕಾರಣವೇ “ರವಿ ಕಾಣದ್ದನ್ನು ಕವಿ ಕಂಡ” ಎಂಬ ನಾಡ್ನುಡಿ ಬಂದದ್ದು.

ಬುದ್ಧಿಯ ಸ್ತರದಲ್ಲಿ ಚಿಂತಿಸುವ ವಿಜ್ಞಾನಿಯು ಈ ಜಗತ್ತನ್ನು ನೋಡುವ ದೃಷ್ಟಿಯೇ ಬೇರೆ, ಈ ಜಗತ್ತನ್ನು ನೋಡಿ ಒಬ್ಬ ಕವಿಯ ಹೃದಯದಲ್ಲಿ ಆವಿರ್ಭವಿಸುವ ಭಾವನೆಗಳೇ ಬೇರೆ. ಅವನಿಗೆ ಈ ಭೂಮಿ ನೋಡಲು ತುಂಬಾ ಸುಂದರ. ಇಲ್ಲಿರುವ ಮನಮೋಹಕವಾದ ಗಿಡ ಮರ ಬಳ್ಳಿಗಳು, ಆಹ್ಲಾದಕರವಾದ ಬಣ್ಣ ಬಣ್ಣದ ಹೂಗಳು, ಮೈಮನಸ್ಸುಗಳಿಗೆ ಮುದ ನೀಡುವ ತಂಗಾಳಿ, ಜುಳು ಜುಳು ಹರಿಯುವ ನದಿಗಳು, ಭೋರ್ಗರೆವ ಜಲಪಾತಗಳು, ಕವಲುದಾರಿಗಳಲ್ಲಿ ಕಣ್ಮನ ಸೆಳೆಯುವ ಹಳ್ಳ ಕೊಳ್ಳಗಳು, ಮೈಚಾಚಿ ನಿಂತ ಗುಡ್ಡ ಬೆಟ್ಟಗಳು, ಗಗನಚುಂಬಿಗಳಾದ ಪರ್ವತ ಶ್ರೇಣಿಗಳು, ದಿಗ್ ದಿಗಂತಗಳನ್ನು ದಾಟಿದ ಸಮುದ್ರಗಳು, ಗಗನದಲ್ಲಿ ರಂಗು ರಂಗಿನ ಚಿತ್ತಾರ ಬಿಡಿಸುವ ಮೋಡಗಳು! ಒಂದೇ ಎರಡೇ! ಅನೇಕ ವೇಳೆ ಪಾಶ್ಚಾತ್ಯ ರಾಷ್ಟ್ರಗಳಿಗೆ ವಿಮಾನದಲ್ಲಿ ಕುಳಿತು ಪಯಣಿಸುವಾಗ ಸಮುದ್ರ ಮತ್ತು ಆಕಾಶ ಒಂದಾದ ಅಪೂರ್ವ ಮಿಲನದ ಸೊಬಗನ್ನು ಸವಿಯುತ್ತಾ ನಮಗೆ ಮೈಮರವೆಯುಂಟಾದರೆ, ವಿಮಾನವೂ ಸಹ ಮೈಮರೆತು ಮುಂದೆ ಸಾಗದೆ ಆಕಾಶದಲ್ಲಿ ಹಾಗೆಯೇ ನಿಶ್ಚಲವಾಗಿ ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಆಗ ನಮ್ಮ ನೆನಪಿಗೆ ಬರುವ ಕವಿತೆಯೆಂದರೆ ಈ ಸೃಷ್ಟಿಯ ಸೊಬಗನ್ನು ಸಶಕ್ತ ಶಬ್ದಗಳಲ್ಲಿ ಸೆರೆಹಿಡಿದ ಕಾವ್ಯರ್ಷಿ ಕುವೆಂಪುರವರ ಈ ಮುಂದಿನ ಕವಿತೆ:

ಆನಂದಮಯ ಈ ಜಗ ಹೃದಯ 

ಏತಕೆ ಭಯ ಮಾಣೊ
ಸೂರ್ಯೋದಯ ಚಂದ್ರೋದಯ 
ದೇವರ ದಯೆ ಕಾಣೋ...
ರವಿವದನವೇ ಶಿವಸದನವೋ 
ಬರೀ ಕಣ್ಣದು ಮಣ್ಣೋ...
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ!

ಈ ಸೃಷ್ಟಿಯ ಆರಂಭದಲ್ಲಿ ಪ್ರಕೃತಿಯ ಎದುರಿಗೆ ಕುಬ್ಜನಾಗಿ ಗುಹೆಗಳಲ್ಲಿ ಅಡಗಿ ಕುಳಿತಿದ್ದ ಮನುಷ್ಯ ಇಂದು ಆಕಾಶದೆತ್ತರಕ್ಕೆ ಬೆಳೆದು ತ್ರಿವಿಕ್ರಮನಾಗಿ ಬ್ರಹ್ಮಾಂಡದಿಂದತ್ತತ್ತ ಸಾಗಿದ್ದಾನೆ. ಆದರೆ ವಿಪರ್ಯಾಸವೆಂದರೆ ಪ್ರಕೃತಿಯ ಮೇಲೆ ಸಾಕಷ್ಟು ಹಿಡಿತವನ್ನು ಸಾಧಿಸಿದ್ದರೂ ತನ್ನ ಮೇಲೆಯೇ ಹಿಡಿತವನ್ನು ಕಳೆದುಕೊಂಡಿದ್ದಾನೆ!

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ 
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ, ಸೋದರರೆ, ವಿಶ್ವಪಥಕೆ!    

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.29-12-2022.