ಕ್ರೀಡಾ ಸಾಧಕರ ಸಾಧನೆಯನ್ನು ಸವಾಲಾಗಿ ಸ್ವೀಕರಿಸಿ :ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಸಿರಿಗೆರೆ: ಆಕಾಶ ಕಾಯಗಳು ನಭೋಮಂಡಲದಲ್ಲಿ ನಿರ್ದಿಷ್ಟ ಕಕ್ಷೆಯಲ್ಲಿ ವೇಗವಾಗಿ ಸಂಚರಿಸುತ್ತವೆಯೋ ಹಾಗೆ ವಾರ್ಷಿಕ ತರಳಬಾಳು ಕ್ರೀಡಾಮೇಳಕ್ಕೆ ತರಬೇತಿ ಪಡೆದು ಪಥಸಂಚಲನದಲ್ಲಿ ಹೇಗೆ ಚಲನೆಯನ್ನು ಪ್ರದರ್ಶಿಸಿದ್ದೀರಿ ಹಾಗೆಯೇ ನಿಮ್ಮ ಜೀವನದ ಪಥದಲ್ಲಿ ಶ್ರಮಿಸಬೇಕಾದ ಪಥವನ್ನು ಅಥವಾ ದಾರಿಯನ್ನು ಗುರುತಿಸಿಕೊಳ್ಳಬೇಕಾಗಿರುವುದು ನಿಮ್ಮ ಕರ್ತವ್ಯ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಇಲ್ಲಿನ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿಶಾಲ ಮೈದಾನದಲ್ಲಿ ಡಿ.29 ರಿಂದ ಡಿ.31ರವರೆಗೆ ನಡೆಯುವ ಮೊದಲನೆ ದಿವಸದ ವಾರ್ಷಿಕ ತರಳಬಾಳು ಕ್ರೀಡಾಮೇಳ-2022ರ ಧ್ವಜವಂದನೆ ಸ್ವೀಕರಿಸಿದ ನಂತರ ಕ್ರೀಡಾಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು. 

ವಿದ್ಯಾರ್ಥಿಗಳಾದ ನೀವು ಶಾರೀರಿಕವಾಗಿ, ಸದೃಢವಾಗಿ ಇರುವುದರ ಜೊತೆಗೆ ಸ್ಪರ್ಧೆಯ ತುಡಿತ ಇರಬೇಕು. ನಿಮ್ಮ ಬದುಕು ಮರದಲ್ಲಿ ಉದುರುವ ಹಣ್ಣೆಲೆಯಾಗದೆ ಚಿಗುರೆಲೆ ಆಗಬೇಕು. ಇಂದಿನ ವೇದಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಮ್ಮ ವೇದಿಕೆಯ ಮೇಲಿರುವ ಅತಿಥಿಗಳ ಸಾಧನೆಯನ್ನು ಸವಾಲಾಗಿ ಸ್ವೀಕರಿಸಿ. ಆರೋಗ್ಯಕರ ಸ್ವಾಸ್ಥ್ಯ ಸ್ಪರ್ಧಾ ಮನೋಭಾವ ಬೆಳೆಸುವುದಕ್ಕೆ ಇಂತಹ ವೇದಿಕೆಗಳು ಸಹಕಾರಿಯಾಗಿದ್ದು ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಎಂದರು ಎಂದು ಕಿವಿಮಾತು ಹೇಳಿದರು.

ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಕ್ರೀಡೆ ಎಂದರೆ ಬರೀ ಸ್ಪರ್ಧೆಯಲ್ಲ ಅದು ಒಂದು ಶಿಕ್ಷಣವಾಗಿದೆ. ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಮತ್ತು ನಾಯಕತ್ವಗುಣ ಬೆಳೆಸುವುದಕ್ಕೆ ಸಹಕಾರಿಯಾಗಿದ್ದು, ವಿದ್ಯೆಯ ಜೊತೆಗೆ ಕ್ರೀಡೆಯು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. 

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಮಾತನಾಡಿ ಮಕ್ಕಳು ಒಂದು ಗ್ರಂಥಾಲಯದಲ್ಲಿರಬೇಕು, ಇಲ್ಲವೇ ಆಟದ ಮೈದಾನದಲ್ಲಿ ಇರಬೇಕು. ಜೀವನ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅವಶ್ಯಕವೋ ಹಾಗೆಯೇ ಶರೀರದ ಆರೋಗ್ಯಕ್ಕೆ ದೈಹಿಕ ಶಿಕ್ಷಣವೂ ಸಹ ಮುಖ್ಯವಾಗಿರುವುದರಿಂದ ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಯೋಗ್ಯವಾದ ನಾಗರೀಕರನ್ನಾಗಿ ಮಾಡುತ್ತದೆ ಕ್ರೀಡೆ ಎಂದರು.

ಬೆಂಗಳೂರು ಏಕಲವ್ಯ ಪ್ರಶಸ್ತಿ ವಿಜೇತ ಹಾಗೂ ರಾಷ್ಟ್ರೀಯ ಕ್ರೀಡಾಪಟು ಸಂಜಯ್ ರಾಜ್ ಹಾಗೂ ದಾವಣಗೆರೆ ದೈಹಿಕ ಶಿಕ್ಷಣ ಮುಖ್ಯಸ್ಥ  ಡಾ. ಕೆ.ವೆಂಕಟೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ರೀಡಾಮಾದರಿಗಳ ಪ್ರದರ್ಶನ ಮಾಡಲಾಗಿತ್ತು. ಕರಾಟೆ, ಕೇರಳದ ಕಲಾಟಿ, ಲೇಜಿಮ್ಸ್ ಪ್ರದರ್ಶಿಸಿದರು. ಪಥಸಂಚಲನ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಜಾನಪದ ಕಲಾತಂಡಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಡಿ.15ರಿಂದ 17ರವರೆಗೆ ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಥ್ರೋಬಾಲ್ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿನಿ ರೂಪಾ ಅವರನ್ನು ಗೌರವಿಸಲಾಯಿತು. 

ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಾಲಿಬಾಲ್, ಖೋಖೊ, ಥ್ರೂಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಟೆನಿಕಾಯಿಟ್ ಮುಂತಾದ ಕ್ರೀಡಾ ಸ್ಪರ್ಧೆಗಳು ನಡೆದವು. ಭೀಮಸಮುದ್ರದ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಟಿ.ಜಿ.ಅರುಣ್ ಕುಮಾರ್ ಹಾಗೂ ವಿ.ಎಂ.ವಿಂಚರ್ಸ್ ಪಾರ್ಟ್ ನರ್ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಿದ್ದರು. 

ಚೆನ್ನೈನ ನಿವೃತ್ತ ಪ್ರೊಫೆಸರ್ ಜಿ.ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ಎ.ವಾಮದೇವಪ್ಪ, ಶಾಲಾ-ಕಾಲೇಜಿನ ಪ್ರಾಚಾರ್ಯರು, ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶ್ರೀಸಂಸ್ಥೆಯ ವಿದ್ಯಾರ್ಥಿಗಳು ಇದ್ದರು.