ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸಿ : ಪ್ರೊ. ಎಸ್.ಬಿ ರಂಗನಾಥ್
ಸಿರಿಗೆರೆ: ಒಬ್ಬ ಶಿಕ್ಷಕ ವಿದ್ಯಾರ್ಥಿಗಳ ಪ್ರೀತಿ-ಸೌಹಾರ್ದತೆ-ಭಕ್ತಿ ಗೌರವಗಳನ್ನು ಗಳಿಸಿಕೊಳ್ಳಲು ಬರೀ ಶಿಕ್ಷಣ ನೀಡಿದರೆ ಸಾಲದು, ಸಾಧನೆ, ಪ್ರಾಮಾಣಿಕತೆ ಹಾಗೂ ಬಹುಮುಖ ಪ್ರತಿಭೆ ಅವರಲ್ಲಿರಬೇಕು ಎಂದು ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್ ಅಭಿಪ್ರಾಯಪಟ್ಟರು.
ಇಲ್ಲಿನ ಗುರುಶಾಂತೇಶ್ವರ ಭವನದಲ್ಲಿ ಹಾಗೂ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಎರಡನೇ ದಿನದ ತರಳಬಾಳು ಕ್ರೀಡಾಮೇಳದಲ್ಲಿ ವಿದ್ಯಾಸಂಸ್ಥೆಯ ನೌಕರರಿಗೆ ಏರ್ಪಡಿಸಿದ್ದ ಕ್ರೀಡೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಪ್ರತ್ಯಕ್ಷವಾಗಿ ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಕೊಡುಗೆ ನೀಡದಿದ್ದರೂ ಎಲ್ಲ ಕ್ಷೇತ್ರಗಳ ಉತ್ತಮರನ್ನು ಹುಟ್ಟುಹಾಕುವ ಕಾಯಕದಲ್ಲಿ ನಿರತರಾಗಿರುತ್ತಾರೆ. ಶಿಕ್ಷಕರ ನುಡಿ-ನಡತೆಯನ್ನು ನೋಡಿ ವಿದ್ಯಾರ್ಥಿಗಳು ಕಲಿಯುತ್ತಾರೆ. ಭವಿಷ್ಯದ ನಾಗರಿಕರನ್ನು ತಯಾರು ಮಾಡುವಿಕೆಯಲ್ಲಿ ಶಿಕ್ಷಕರ ಪಾತ್ರವು ಮಹತ್ವಪೂರ್ಣವಾದುದು. ಶಿಕ್ಷಕರು ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳುವ ಜೊತೆಗೆ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಹಾಗೂ ರಾಜ್ಯ, ರಾಷ್ಟçಮಟ್ಟಕ್ಕೆ ವಿದ್ಯಾರ್ಥಿಗಳನ್ನು ಬೆಳೆಸಲು ಪ್ರೇರೇಪಿಸಬೇಕು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ಎ.ವಾಮದೇವಪ್ಪ ಮಾತನಾಡಿ, ಇದೇ ಮೊದಲ ಬಾರಿಗೆ ಸಂಸ್ಥೆಯ ಎಲ್ಲಾ ಶಿಕ್ಷಕರಿಗೂ ಕ್ರೀಡೆಗಳನ್ನು ಏರ್ಪಡಿಸಿದ್ದು ಎಲ್ಲಾ ಶಿಕ್ಷಕರು, ಉಪನ್ಯಾಸಕರುಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಕೊರೊನ ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಕ್ರೀಡೆಯಲ್ಲಿ ಆಸಕ್ತಿ ತೋರುತ್ತಿರುವುದು ಸಂತೋಷದ ವಿಚಾರವಾಗಿದೆ. ಕ್ರೀಡಾಸಕ್ತಿ ಜೊತೆಗೆ ಪ್ರತಿಯೊಬ್ಬರೂ ಶಿಕ್ಷಣಕ್ಕೂ ಅಷ್ಟೇ ಮಾಹತ್ವ ಕೊಡಬೇಕು ಅಂದಾಗ ಮಾತ್ರ ನಾವು ಉನ್ನತ ಮಟ್ಟದ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
ಶಿಕ್ಷಕರಿಗೆ ಚೆಸ್, ಕೇರಂ, ವಾಲಿಬಾಲ್, ಥ್ರೋಬಾಲ್, ಷಟಲ್ ಬ್ಯಾಡ್ಮಿಟನ್, ಟೆನಿಕಾಯಿಟ್, ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಆಯೋಜಿಸಿತ್ತು.
ವಿದ್ಯಾರ್ಥಿಗಳಿಗೆ ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮೇಲಾಟಗಳು ನಡೆದವು.
ಮೈದಾನದಲ್ಲಿ ಬಲೂನ್ ಹಾರಾಟ ಮನರಂಜಿಸಿತ್ತು. ಶಿಕ್ಷಕರ ಕ್ರೀಡೆಗಳನ್ನು ನೋಡಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಶಿಕ್ಷಕರ ಕ್ರೀಡೆಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಶಾಲಾ-ಕಾಲೇಜಿನ ಪ್ರಾಚಾರ್ಯರು, ಮುಖ್ಯಶಿಕ್ಷಕರು, ದೈ.ಶಿ.ಶಿಕ್ಷಕರು ಮತ್ತು ಶ್ರೀಸಂಸ್ಥೆಯ ವಿದ್ಯಾರ್ಥಿಗಳು ಇದ್ದರು.