ಮಠದ ಲೆಕ್ಕಪತ್ರ ದಾಖಲಾತಿಯಿಂದ ಪಾಣಿನಿ ಗಣಕಾಷ್ಟಧ್ಯಾಯಿವರೆಗೆ ಶ್ರೀ ತರಳಬಾಳು ಜಗದ್ಗುರುಗಳ ಕಂಪ್ಯೂಟರ್ ಪಯಣ

  •  
  •  
  •  
  •  
  •    Views  

ಸಿರಿಗೆರೆ ಡಿ.30: 90ರ ದಶಕದಲ್ಲಿ ಮಠದ ಲೆಕ್ಕಪತ್ರ ದಾಖಲಾತಿಗಾಗಿ ವಿದೇಶದಿಂದ ಕಂಪ್ಯೂಟರ್ ಖರೀದಿಸಲಾಗಿತ್ತು. ಆಗ ಅದಕ್ಕಾಗಿ ಬೇಕಾದ ತಂತ್ರಾಂಶವನ್ನು ರೂಪಿಸಿದೆವು. ಈ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದಿದ್ದು, “ಪಾಣಿನಿ ಮಹರ್ಷಿಯ ವ್ಯಾಕರಣ ಸೂತ್ರಗಳು” ಮತ್ತು “ಕಂಪ್ಯೂಟರ್ ಸಂಕೇತಗಳ” ಪರಸ್ಪರ ಹೋಲಿಕೆ. ಆಗ ನಮ್ಮ ಕಂಪ್ಯೂಟರ್ ಸಹಾಯಕ ಗಂಗಾಧರ್ ಎಂಬ ಯುವಕನೊಂದಿಗೆ ಡಾಸ್ ಪ್ರೊಗ್ರಾಮ್ ನಲ್ಲಿ “ಅಷ್ಟಾಧ್ಯಾಯಿ”ಯ ನಾಲ್ಕು ಸಾವಿರ ಸೂತ್ರಗಳಿಗೆ ಸಾಪ್ಟ್ ವೇರ್ ರೂಪಿಸಿದೆವು. 

1994ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ವಿಶ್ವವಿದ್ಯಾನಿಲಯದಲ್ಲಿ ನಡೆದ 9ನೆಯ ವಿಶ್ವ ಸಂಸ್ಕೃತ ಸಮ್ಮೇಳನದ ಸಂದರ್ಭ. ಆ ಸಮ್ಮೇಳನದಲ್ಲಿ ಈ ತಂತ್ರಾಂಶವನ್ನು ಪ್ರಸ್ತುತಪಡಿಸಿದೆವು. ಆಗ ವಿಶ್ವದ ಸಂಸ್ಕೃತ ವಿದ್ವಾಂಸರೆಲ್ಲರೂ ಆ ತಂತ್ರಜ್ಞಾನವನ್ನು ಅತ್ಯಾಧಾರದಿಂದ ಒಪ್ಪಿಕೊಂಡು, ಪ್ರಶಂಸಿಸಿದರು. ಅಲ್ಲದೆ 10ನೆಯ ವಿಶ್ವಸಂಸ್ಕೃತ ಸಮ್ಮೇಳನದ ಗೌರವಾಧ್ಯಕ್ಷರನ್ನಾಗಿ ಸರ್ವ ಸಮ್ಮತಿಯಿಂದ ಆಯ್ಕೆ ಮಾಡಿದರು.

1997ರಲ್ಲಿ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ 10ನೆಯ ವಿಶ್ವ ಸಂಸ್ಕೃತ ಸಮ್ಮೇಳನವನ್ನು ಅತ್ಯಂತ ವ್ಯವಸ್ಥಿತವಾಗಿ ಏರ್ಪಡಿಸಿದೆವು. ಅಷ್ಟೊತ್ತಿಗೆ ಡಾಸ್ ಪ್ರೊಗ್ರಾಮನ್ನು ವಿಂಡೋಸ್ ತಂತ್ರಜ್ಞಾನಕ್ಕೆ ಪರಿವರ್ತಿಸಲಾಯಿತು. ಆನಂತರ 2016ರಲ್ಲಿ ಮತ್ತೊಮ್ಮೆ ಈ ಪ್ರೊಗ್ರಾಮನ್ನು ಅಪ್ ಡೇಟ್ ಮಾಡಲಾಗಿದೆ.

ಪಾಣಿನಿ ಮಹರ್ಷಿಯು 14 ಮಹೇಶ್ವರ ಸೂತ್ರಗಳನ್ನಾಧರಿಸಿ 4000 ಶ್ಲೋಕ ರೂಪದ ಸೂತ್ರಗಳಲ್ಲಿ ಇಡೀ ಸಂಸ್ಕೃತ ವ್ಯಾಕರಣವನ್ನು ರಚಿಸಿದ್ದಾರೆ. ಬೀಜಗಣಿತದ ಸೂತ್ರಗಳ ಸಹಾಯದಿಂದ ಪ್ರತಿಯೊಂದು ಸೂತ್ರಗಳಿಗೆ ತಾರ್ಕಿಕವಾಗಿ ವಿವರಣೆ ನೀಡಲಾಗಿದೆ.

ಎಲ್ಲಿಯೂ ಸಂದೇಹಗಳಿಗೆ ಅವಕಾಶವಿಲ್ಲ. ಆದರೆ ಇತ್ತೀಚೆಗೆ ಭಾರತೀಯ ಮೂಲದ ರಿಷಿ ರಾಜ್ ಪೊಪೆಟ್ ಎಂಬ ಯುವಕ 2500 ವರ್ಷಗಳ ಸಮಸ್ಯೆಗೆ ಪರಿಹಾರ ಹುಡುಕಿದ್ದೇನೆ ಎಂದು ವ್ಯಾಪಕ ಪ್ರಚಾರ ಪಡೆದಿದ್ದಾನೆ. ಆದರೆ ಈ ಸಂಗತಿ ಸತ್ಯಕ್ಕೆ ದೂರವಾದುದು ಎಂದರು.

ಸಂದರ್ಭ : ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನೌಕರರ ಕ್ರೀಡಾಕೂಟಕ್ಕೆ  ಆಗಮಿಸಿದ್ದ ಶಿಕ್ಷಕರಿಗೆ ಸದ್ಧರ್ಮ ನ್ಯಾಯಪೀಠ ಆವರಣದಲ್ಲಿ  ಪ್ರಾತ್ಯಕ್ಷಿಕೆ ತೋರಿಸುವುದರ ಮೂಲಕ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸೋದಾಹರಣವಾಗಿ ವಿವರಿಸಿದರು.

ನಿರೂಪಣೆ : ನಾಗರಾಜ ಸಿರಿಗೆರೆ