ಶಾಲಾ ಕಾಲೇಜುಗಳಲ್ಲಿ ಸಂಗೀತ ಮತ್ತು ನೃತ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು : ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ ಡಿ.31 : ಶಾಲಾ ಕಾಲೇಜುಗಳಲ್ಲಿ “ಸಂಗೀತ ಮತ್ತು ನೃತ್ಯ ಶಿಕ್ಷಣಕ್ಕೆ” ಒತ್ತು ನೀಡಬೇಕು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಕ್ರೀಡಾಮೇಳ-2022ರ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯುಳ್ಳದ್ದು, ಆ ಮನಸ್ಸನ್ನು ಹದಗೊಳಿಸಲು ಸಂಗೀತ ಶಿಕ್ಷಣ ಅವಶ್ಯಕತೆಯಿದೆ. ಸರ್ಕಾರವು ಶಾಲೆಗಳಲ್ಲಿ ಸಂಗೀತ ಹಾಗೂ ನೃತ್ಯ ಶಿಕ್ಷಕರನ್ನ ನೇಮಕಾತಿ ಮಾಡಿಕೊಳ್ಳಬೇಕು ಎಂಬುದು ನಮ್ಮ ಆಲೋಚನೆಯಾಗಿದೆ. ಭಾರತೀಯ ಪರಂಪರೆಯಲ್ಲಿ ಕಲೆಗಳಿಗೆ ಮಹತ್ವದ ಸ್ಥಾನವಿದೆ. ಕಲೆಗಳು ಇದೂವರೆಗೂ ಪಠ್ಯ ಪೂರಕವಾಗಿದ್ದವು. ಅವು ಪಠ್ಯದ ಅವಿಭಾಜ್ಯ ಅಂಗವಾಗಬೇಕು. ಕಲೆ, ಸಾಹಿತ್ಯದಿಂದ ಮನಸ್ಸು ಅರಳುವಂತಾಗಬೇಕು.
ನಿಮ್ಮೆಲ್ಲರಿಗೂ ಹೊಸ ವರ್ಷ-2023, ಹೊಸ ಚೈತನ್ಯ, ಹೊಸ ಸಾಧನೆಗಳ ತುಡಿತಕ್ಕೆ ದಾರಿಯಾಗಲಿ. ಹಿಂದಿನ ವರ್ಷದ ತಪ್ಪುಗಳು ಮರುಕಳಿಸದ ಹಾಗೆ ವಿದ್ಯಾರ್ಥಿಗಳ ಮನಸ್ಸು ಚಿಗುರೊಡೆಯಬೇಕು. ಎಲ್ಲರೂ ಉನ್ನತ ಹಂತಕ್ಕೆ ಹೋಗಬೇಕಾದರೆ ಸಮಾಜ, ಕಾನೂನು, ಆತ್ಮಭಯಗಳೆಂಬ ಮೂರು ವಿಧಾನಗಳನ್ನು ತಿಳಿಯಬೇಕು ಎಂದರು ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ತರಳಬಾಳು ಬೃಹನ್ಮಠದ ಕ್ಯಾಲೆಂಡರ್-2023ರ ಪ್ರತಿಯನ್ನು ಸಚಿವ ಬಿ.ಸಿ.ನಾಗೇಶ್ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಶಿಕ್ಷಣ ಸಾಕ್ಷರತಾ ಇಲಾಖೆಯ ಸಚಿವ ಬಿ. ಸಿ .ನಾಗೇಶ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಗು ಕೇಂದ್ರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.ಪಠ್ಯದ ಜೊತೆಗೆ ಕಲೆ, ಕ್ರೀಡೆಗಳಿಗೆ ಮಹತ್ವ ನೀಡುವುದರೊಂದಿಗೆ ಸಮಗ್ರ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ ಸಿ ನಾಗೇಶ್ ತಿಳಿಸಿದರು.
ಮೆಕಾಲೆ ಶಿಕ್ಷಣ ಪದ್ಧತಿಯಿಂದ ಭಾರತೀಯರಲ್ಲಿ ಕೀಳರಿಮೆ ಮೂಡಿಸಿತ್ತು. ಸ್ವಾತಂತ್ರ್ಯ ನಂತರ ಭಾರತ ವಿಶ್ವಗುರು ಆಗುವತ್ತ ಮುನ್ನಡೆಯುತ್ತಿದೆ. ಹಾಲು, ಆಹಾರ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಉಪಗ್ರಹ ಉಡಾವಣೆಯಲ್ಲಿ ಭಾರತದ ಸಾಧನೆ ಅಸಾಧರಣವಾದುದು. ಮುಂಬರುವ ದಿನಗಳಲ್ಲಿ ಪಠ್ಯದಲ್ಲಿ ನೈತಿಕ ಶಿಕ್ಷಣವನ್ನು ಬೋಧಿಸಲಾಗುತ್ತದೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.
ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಆರುಸಾವಿರ ವಿದ್ಯಾರ್ಥಿಗಳು ಕ್ರೀಡೆಯ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಕ್ರೀಡಾಮೇಳದಲ್ಲಿ “ಕ್ರೀಡಾ ಮಾದರಿಗಳನ್ನು” ಶಾಲಾ ವಿದ್ಯಾರ್ಥಿಗಳು ಮಾಡಿ ಗಮನ ಸೆಳೆದರು. ಪೂಜ್ಯಶ್ರೀಗಳವರು ನೌಕರರ ಹಾಗೂ ವಿದ್ಯಾರ್ಥಿಗಳ ಕ್ರೀಡೆಗಳನ್ನು ಅತ್ಯಂತ ಉತ್ಸುಕತೆಯಿಂದ ವೀಕ್ಷಿಸಿದರು.
ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಎ.ಪರಶುರಾಮಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್ ಬಿ ರಂಗನಾಥ್ ಮತ್ತು ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಮುಖ್ಯಶಿಕ್ಷಕರು, ನೌಕರರ ವರ್ಗದವರು, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ, ಕಾರ್ಯದರ್ಶಿ, ಸದಸ್ಯರುಗಳು, ಕಲಾಸಂಘದ ಅಧ್ಯಕ್ಷ ರಾಜಶೇಖರಯ್ಯ,ನಿಲಯ ಪಾಲಕರು,ಸಿರಿಗೆರೆ ಉಪಪೋಲಿಸ್ ಠಾಣೆಯ ಸಿಬ್ಬಂದಿ, ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.
ಎಂ.ಎನ್.ಶಾಂತಾ ಸ್ವಾಗತಿಸಿದರು, ಅಣ್ಣನ ಬಳಗದ ಅಧ್ಯಕ್ಷ ಬಿ.ಎಂ.ಮರುಳಸಿದ್ಧಯ್ಯ ನಿರೂಪಿಸಿದರು, ವಿ.ವಿಜಯಾಚಾರಿ ವಂದಿಸಿದರು,