ಪಂಚ ಭೂತಗಳಲ್ಲಿ ಲೀನರಾದ ಮಹಾ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳು : ತರಳಬಾಳು ಶ್ರೀಗಳ ಭಾವಪೂರ್ಣ ನಮನ
ಸಿರಿಗೆರೆ: ನಡೆ-ನುಡಿಗಳ ಒಂದಾಗಿ, ತನ್ನ ಬದುಕೇ ಒಂದು ಸಂದೇಶವೆಂಬಂತೆ ಬಾಳಿಬದುಕಿದ್ದ ಜ್ಞಾನಯೋಗಿ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಶಿವೈಕ್ಯರಾಗಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ ಹಾಗೂ ಅಮರ ಜೀವಿಯ ಅಗಲಿಕೆ ತೀವ್ರ ನೋವುಂಟು ಮಾಡಿದೆ.
ಪೂಜ್ಯರ ದಿವ್ಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ನಡೆದಾಡುವ ದೇವರು ಎಂದೇ ಖ್ಯಾತಿಯನ್ನು ಪಡೆದಿದ್ದ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅವರು ವಿಧಿವಶರಾಗಿದ್ದಾರೆ. ಶ್ರೀಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣ ವೈದ್ಯರ ತಂಡ ಅವರ ಚಿಕಿತ್ಸೆಯಲ್ಲಿ ತೊಡಗಿಕೊಂಡಿತ್ತು. ಆಶ್ರಮದ ಕೊಠಡಿಯಲ್ಲೇ ಶ್ರೀಗಳ ಚಿಕಿತ್ಸೆಯು ನಡೆಯುತ್ತಿತ್ತು.
ಅಲ್ಲದೇ ಜಿಲ್ಲಾಧಿಕಾರಿಯವರಾದ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಆದರೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ ಶ್ರೀಗಳಿಗೆ ಮಠದಲ್ಲಿಯೇ ನೀಡುತ್ತಿದ್ದ ಚಿಕಿತ್ಸೆ ಫಲಿಸದೇ ಅವರು ಮೊನ್ನೆ ಸಂಜೆ 6:05ಕ್ಕೆ ಲಿಂಗೈಕ್ಯರಾಗಿದ್ದಾರೆ.
ಸಿದ್ಧೇಶ್ವರ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಒಂದು ರೈತ ಕುಟುಂಬದಲ್ಲಿ 1941ರ ಅಕ್ಟೋಬರ್ 24 ರಂದು ಜನಿಸಿದ್ದರು. ಅವರು ನಾಲ್ಕನೇ ತರಗತಿಯವರೆಗೆ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ಓದಿದರು. ಅನಂತರ ಅವರು “ವೇದಾಂತ ಕೇಸರಿ” ಎಂದು ಹೆಸರನ್ನು ಪಡೆದಿದ್ದ, ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳ ಅವರ ಬಳಿ ಆಶ್ರಯವನ್ನು ಪಡೆದರು.
ಇವರ ಬುದ್ಧಿವಂತಿಕೆ ಮತ್ತು ಚುರುಕುತನವನ್ನು ಗುರ್ತಿಸಿದ ಹಿರಿಯ ಶ್ರೀಗಳು ತಾವು ಪ್ರವಚನ ಮಾಡಲು ಹೋಗುವಾಗಲೆಲ್ಲಾ ಅಲ್ಲಿಗೆ ಸಿದ್ಧೇಶ್ವರರನ್ನು ಸಹಾ ಕರೆದುಕೊಂಡು ಹೋಗಲು ಪ್ರಾರಂಭಿಸಿದರು. ಅದರ ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಯಾವುದೇ ಸಮಸ್ಯೆ ಇಲ್ಲದೇ ನಡೆಯುವಂತೆ ನೋಡಿಕೊಂಡರು.
ಸಿದ್ದೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ಪದವಿ ಯನ್ನು ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ಪಡೆದರು. ಅಲ್ಲಿ ಅವರು ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಇವರು ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಅಪಾರವಾದ ಜ್ಞಾನವನ್ನು ಅರ್ಜಿಸಿದರು.
ವಿಜಯಪುರದ ಜ್ಞಾನ ಯೋಗಾಶ್ರಮದ ಅಧಿಕಾರವನ್ನು ಇವರು ವಹಿಸಿಕೊಂಡ ಮೇಲೆ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಎಲ್ಲಾ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದರು. ಶ್ರೀಗಳು ತಮ್ಮ ಸೇವೆಗಾಗಿ ಯಾವುದೇ ಪ್ರಶಸ್ತಿಗಳನ್ನು ಆಶಿಸಿದವರಲ್ಲ. ಅವರಿಗೆ ಭಾರತ ಸರ್ಕಾರ ಘೋಷಣೆ ಮಾಡಿದ್ದ ಪದ್ಮಶ್ರೀ ಸೇರಿದಂತೆ ಹಲವು ಗೌರವಾನ್ವಿತ ಪ್ರಶಸ್ತಿಗಳನ್ನು ಬಹಳ ವಿನಯಪೂರ್ವಕವಾಗಿಯೇ ನಿರಾಕರಿಸಿದ್ದರು.
ಕಳೆದ ನಾಲ್ಕು ದಿನಗಳಿಂದಲೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ವೈದ್ಯರ ತಂಡವು ತಮ್ಮ ಶಕ್ತಿ ಮೀರಿ ಪ್ರಯತ್ನವನ್ನು ಮಾಡುತ್ತಿರುವುದಾಗಿ ತಿಳಿಸಿತ್ತು. ಡಿಸೆಂಬರ್ 31 ರಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ದರ್ಶನ ಪಡೆದಿದ್ದರು, ಶ್ರೀಗಳ ಆರೋಗ್ಯದ ಕುರಿತಾಗಿ ವಿಚಾರಿಸಿದ್ದರು, ಜೊತೆಗೆ ಮಾನ್ಯ ಪ್ರದಾನ ಮಂತ್ರಿಗಳು ಸಹ ಫೋನ್ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದ್ದರು.
ಜಾತಿ, ಜನಾಂಗ, ಧರ್ಮವನ್ನು ಮೀರಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ಸಿದ್ಧೇಶ್ವರ ಸ್ವಾಮೀಜಿ ಅವರು ಎಂದೂ ಕೂಡಾ ಪ್ರಚಾರವನ್ನು ಬಯಸಿದವರಲ್ಲ. ಇವರು ಪ್ರಚಾರಗಳಿಂದ ಸದಾ ದೂರವೇ ಉಳಿದಿದ್ದರು. ಅಲ್ಲದೇ ವಿವಾದ, ರಾಜಕೀಯ, ಸಂಘ-ಸಂಸ್ಥೆಗಳಿಂದಲೂ ಸಹಾ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಸ್ವಹಿತಕ್ಕಾಗಿ ಯಾರನ್ನೋ ಓಲೈಸುವ ಕೆಲಸವನ್ನಾಗಲೀ, ಯಾರದೋ ಪರವಾಗಿ ಮಾತನಾಡುವ ವ್ಯಕ್ತಿತ್ವ ಅವರದಾಗಿರಲಿಲ್ಲ.
ಅವರ ಅಗಲಿಕೆಯು ಅಸಂಖ್ಯಾತ ಭಕ್ತವೃಂದ ಮತ್ತು ಅವರ ಅನುಯಾಯಿಗಳಿಗೆ ತೀವ್ರವಾದ ನೋವನ್ನು ನೀಡಿದೆ. ಆದರೆ ಅವರು ನಮಗೆ ಬಿಟ್ಟು ಹೋಗಿರುವ ಪ್ರವಚನ ಅಥವಾ ದಾರಿದೀವಿಗೆಯಂಥ ಮಾತುಗಳು ಸದಾಕಾಲ ನಮ್ಮ ಜೊತೆಗಿರುತ್ತವೆ ಮತ್ತು ನಮ್ಮ ದಾರಿಗೆ ಬೆಳಕಾಗುತ್ತವೆ.