“ಎಲೆಮರೆಯ ಕಾಯಿಯಂತೆ ಬದುಕಿದ ತ್ಯಾಗ ಜೀವಿ ಶ್ರೀ ಎಸ್.ಎಂ. ರಾಜಶೇಖರಪ್ಪ

  •  
  •  
  •  
  •  
  •    Views  

ಸಿರಿಗೆರೆ: “ಕೆಲವರು ಹುಟ್ಟಿನಿಂದ ದೊಡ್ಡವರಾಗಿರುತ್ತಾರೆ. ಕೆಲವರು ಹುಟ್ಟಿ ದೊಡ್ಡವರಾಗುತ್ತಾರೆ. ಮತ್ತೆ ಕೆಲವರು ಸ್ಥಾನಬಲದಿಂದ ದೊಡ್ಡವರಂತೆ ಕಾಣಿಸಿಕೊಳ್ಳುತ್ತಾರೆ” ಎಂಬ ನುಡಿಗೆ ತಕ್ಕಂತೆ ಶ್ರೀ ಎಸ್.ಎಂ. ರಾಜಶೇಖರಪ್ಪನವರು ಹುಟ್ಟಿನಿಂದ ದೊಡ್ಡವರಾಗಿರಲಿಲ್ಲ. ಹುಟ್ಟಿ ದೊಡ್ಡವರಾಗಿ ಬೆಳೆದವರು. ಶಿಸ್ತನ್ನು ಜೀವನದಲ್ಲಿ ರೂಢಿಸಿಕೊಂಡು ಬಾಳಿದವರು. ಸಮಾಜದ ಬದುಕಿನಲ್ಲಿ ತಮ್ಮ ಬದುಕನ್ನು ಒಂದಾಗಿಸಿಕೊಂಡವರು. ಸದಾ ಸಮಾಜದ ಚಿಂತನೆ ಮಾಡುತ್ತಾ ಸಾವಿರಾರು ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಅವರ ನೋವಿಗೆ ಸ್ಪಂದಿಸಿದವರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಲವಾರು ಕಾಲೇಜುಗಳ ಸ್ಥಾಪನೆ, ಬೆಳವಣಿಗೆಗೆ ಕಾರಣರಾದವರು.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಎಂಬ ಪುಟ್ಟ ಗ್ರಾಮದಲ್ಲಿ 25.10.1937 ರಲ್ಲಿ ರೈತ ಕುಟುಂಬದ ಶ್ರೀ ಎಸ್.ಬಿ. ಮಹದೇವಪ್ಪ ಹಾಗೂ ಶ್ರೀಮತಿ ಗಂಗಮ್ಮನವರ ಪುಣ್ಯ ಗರ್ಭದಲ್ಲಿ ಪ್ರಥಮ ಪುತ್ರನಾಗಿ ಜನಿಸಿದರು. ಪುಟ್ಟ ಮಗುವಾಗಿದ್ದಾಗಿನಿಂದಲೂ ಅಪಾರ ತುಂಟತನದ ಹುಡುಗ ಮತ್ತು ಪ್ರಾಣಿಗಳ ಬಗ್ಗೆ ಅಪಾರ ಪ್ರೇಮ. ನಾಯಿ ಮರಿಯೊಂದನ್ನು ಸಾಕಿ ಒಂದೇ ತಟ್ಟೆಯಲ್ಲಿ ನಾಯಿಯೊಂದಿಗೆ ಸಹಭೋಜನ ಮಾಡುವಷ್ಟು ಮುಗ್ಧತೆ ಪುಟ್ಟ ಬಾಲಕನದು. ಅಲ್ಲದೆ ಮನೆಯಲ್ಲಿ ಮಾಡಿದ ತಿಂಡಿ ಇತ್ಯಾದಿಗಳನ್ನು ಒಬ್ಬನೇ ತಿನ್ನದೆ ಶಾಲೆಗೆ ಒಯ್ದು ತನ್ನ ಸ್ನೇಹಿತರೊಂದಿಗೆ ಹಂಚಿ ತಿನ್ನುವ ಔದಾರ್ಯ ಎಳವೆಯಿಂದಲೇ ಹರಿದು ಬಂದಿದೆ. ಯಾರಾದರೂ ಇಲ್ಲವೆಂದು ಬಂದರೆ ಅವರಿಗೆ ಮನೆಯಲ್ಲಿನ ವಸ್ತುಗಳನ್ನು ದಾನ ಮಾಡುತ್ತಾ ಅಪಾರ ಜನಪ್ರಿಯತೆ ಚಿಕ್ಕಂದಿನಲ್ಲೇ ಗಳಿಸಿದ್ದರು.

ಹಿರಿಯ ಜಗದ್ಗುರು ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು 1946 ರಲ್ಲಿ ಸಿರಿಗೆರೆಯಲ್ಲಿ ಆರಂಭಿಸಿದ ಮೊದಲ ವಿವಿಧೋದ್ದೇಶ ಪ್ರೌಢಶಾಲೆಯ ಕಟ್ಟಡವನ್ನು ಗಾರೆ ತಿರುವುದರಿಂದ ಕಲ್ಲಿನ ಕಟ್ಟಡ ಕಟ್ಟುವವರೆಗೂ ವಿದ್ಯಾರ್ಥಿಗಳೇ ನಿರ್ಮಾಣ ಮಾಡಿದುದು ಅಂದಿನ ವಿದ್ಯಾರ್ಥಿಗಳಲ್ಲಿನ ಕರ್ತೃತ್ವ ಶಕ್ತಿ ಹಾಗೂ ತ್ಯಾಗಕ್ಕೆ ನಿದರ್ಶನ. ಅಂದು ಗಾರೆ ತಿರುವುವಾಗ ಸಲಾಕೆಯೊಂದು ರಾಜಶೇಖರ್ ರವರ ಹಣೆಗೆ ಬಡಿದು ರಕ್ತ ಸುರಿದು ದೊಡ್ಡ ಗಾಯವೇ ಆಯಿತು. ಆದರೂ ಅದರ ಪರಿವೆಯೇ ಇಲ್ಲದೆ ಕಟ್ಟಡದ ಕೆಲಸದಲ್ಲಿ ತೊಡಗಿದ್ದರು. ಹಿರಿಯ ಜಗದ್ಗುರುಗಳಿಂದಲೇ ಪ್ರಥಮ ಚಿಕಿತ್ಸೆ ಪಡೆದುಕೊಂಡ ಅದೃಷ್ಟವಂತರು. ಇಂದಿಗೂ ಹಣೆಯಲ್ಲಿ ಶಾಶ್ವತವಾಗಿ ಅದರ ಗುರುತು ಉಳಿದು ಬಂದಿದೆ.

ಶ್ರೀ ಮಹದೇವಪ್ಪನವರ 7 ಮಕ್ಕಳಲ್ಲಿ ಹಿರಿಯರಾದ ಇವರು 60ರ ದಶಕದಲ್ಲಿ ಶಿಕ್ಷಣದ ಬಗ್ಗೆ ಅಷ್ಟೊಂದು ಕಾಳಜಿ ಇಲ್ಲದ ಪರಿಸ್ಥಿತಿಯಲ್ಲಿ ಅದರಲ್ಲೂ ಮಹಿಳೆಯರ ಶಿಕ್ಷಣದ ಬಗೆಗೆ ಆಸಕ್ತಿಯೇ ಇಲ್ಲದ ಕಾಲದಲ್ಲಿ ತಮ್ಮ ನಾಲ್ವರು ಸೋದರಿಯರು (ಅವರಲ್ಲಿ ಮೂವರು ಸಿರಿಗೆರೆ ಸಂಸ್ಥೆಯಲ್ಲಿ ಉಪನ್ಯಾಸಕಿಯರಾಗಿ ಸೇವೆ ಸಲ್ಲಿಸಿದರು) ಹಾಗೂ ಈರ್ವರು ಸೋದರರಿಗೆ ವೈದ್ಯಕೀಯ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾದರು. ಇಂದಿಗೂ ಶೀಗೇಹಳ್ಳಿ ಮಹದೇವಪ್ಪನವರ ಮನೆ ಎಂದರೆ ವಿದ್ಯಾವಂತ ಕುಟುಂಬ ಎಂಬ ಅಪಾರ ಗೌರವ, ಭಾವನೆ ಜನರಲ್ಲಿ ಕಂಡುಬರುತ್ತದೆ.

ತಾವು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಪ್ರೌಢಶಾಲೆಯಲ್ಲಿ ಹೆಚ್ಚಿನ ಅಂಕಗಳಿಸಿ, ಚಿತ್ರದುರ್ಗದಲ್ಲಿ ಇಂಟರ್ ಮೀಡಿಯೇಟ್ ಪೂರೈಸಿ ದಾವಣಗೆರೆ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ., ಶಿಕ್ಷಣ ಪಡೆದು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದರು. ಸುರತ್ಕಲ್ ನಲ್ಲಿ ತಮ್ಮ ಸೇವೆಯನ್ನು ಆರಂಭಿಸಿ, ನಂತರ ದಾವಣಗೆರೆಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಅವರು ಉಪನ್ಯಾಸಕರಾಗಿದ್ದಾಗ ಸಮಾಜ ಸೇವೆಯ ಕಾರ್ಯ ಬಾಹುಳ್ಯದಿಂದಾಗಿ ತರಗತಿಗೆ ಬರುವುದು ಮೂರು ಗಂಟೆ ತಡವಾದರೂ ವಿದ್ಯಾರ್ಥಿಗಳು ಇವರ ಪಾಠಕ್ಕೋಸ್ಕರ ಕಾಯುತ್ತಿದ್ದರು. ಸಾಮಾನ್ಯವಾಗಿ ಒಂದು ಸಾರಿ ಅವರ ಪಾಠ ಕೇಳಿಸಿಕೊಂಡವರು ಆ ವಿಷಯದಲ್ಲಿ ಅನುತ್ತೀರ್ಣರಾದುದೇ ಇಲ್ಲ. ಅಂತಹ ಪರಿಣಾಮಕಾರಿ ಬೋಧನೆ ಅವರದು. ತಮ್ಮ ವೃತ್ತಿಯೊಂದಿಗೆ ಬೃಹನ್ಮಠದ ಅದರಲ್ಲೂ ಹಿರಿಯ ಜನದ್ಗುರುಗಳವರೊಂದಿಗೆ ಅಪಾರ ಒಡನಾಟ ಹೊಂದಿದ್ದರು. ಮಾತಿಗೊಮ್ಮೆ ಶ್ರೀಗಳವರು “ನಾವು ಬಿ.ಎ., ಎಂ.ಎ. ಓದಿದವರಲ್ಲ. ನಾವು ಇಂಗ್ಲೀಷ್ ಕಲಿತವರಲ್ಲ” ಎನ್ನುತ್ತಲೆ ಕಲಿತ ಶಿಷ್ಯರಿಂದ ದೊಡ್ಡ ಸಂಸ್ಥೆಯೊಂದನ್ನು ಕಟ್ಟಿ ಲಕ್ಷಾಂತರ ಜನರಿಗೆ ಶಿಕ್ಷಣ ನೀಡಿದ್ದಲ್ಲದೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರಿಗೆ ನೆಮ್ಮದಿಯ ಬದುಕು ಕಲ್ಪಿಸಿದರು. ಅಂತಹ ಸಂದರ್ಭದಲ್ಲಿ ಹಿರಿಯ ಜಗದ್ಗುರುಗಳವರ ಆದೇಶದಂತೆ ಶಾಲೆ ಕಾಲೇಜುಗಳ ಆರಂಭ, ಬೆಳವಣಿಗೆ ಕಾರ್ಯಭಾರದ ಬಗೆಗೆ ಜವಾಬ್ದಾರಿ ಹೊರಿಸಿದಾಗ ಅದನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ದಾವಣಗೆರೆಯಲ್ಲಿನ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯ, ರಾಣೇಬೆನ್ನೂರಿನ ಎಸ್.ಟಿ.ಜೆ. ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿರಿಗೆರೆಯ ಎಂ.ಬಿ.ಆರ್. ಕಾಲೇಜುಗಳ ಆರಂಭ ಮಾಡುವಲ್ಲಿ ಅವರು ವಹಿಸಿದ ಪಾತ್ರ ಗಣನೀಯವಾದುದು.

29.8.83ರ ಅವಧಿಯಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ, ಅಲ್ಲಿನ ವಾರ್ಷಿಕ ಪಠ್ಯ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವಿರುವುದು. ಹೆಚ್ಚಿನ ಜವಾಬ್ದಾರಿ ಮೈಮೇಲೆ ಎಳೆದುಕೊಳ್ಳುವ ಸ್ವಭಾವದವರಾದ ಶ್ರೀಯುತರು ವಿದ್ಯಾರ್ಥಿಗಳನ್ನು ಉತ್ತರಭಾರತದ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರು. ಪ್ರವಾಸಕ್ಕೆ ಹೊರಡುವುದಕ್ಕೆ ಮೊದಲೆ ಪ್ರವಾಸದ ನೀಲನಕ್ಷೆ, ಉಳಿದುಕೊಳ್ಳುವ ಸ್ಥಳ, ಸಮಯಗಳನ್ನು ನಿಗದಿಪಡಿಸಿಕೊಂಡು ಅನೇಕ ಬಾರಿ ಗುರುತು ಪರಿಚಯದವರ ಸಹಾಯ ಪಡೆದು ಪ್ರವಾಸವನ್ನು ಸವಿನೆನಪಾಗುವಂತೆ ಮಾಡುತ್ತಿದ್ದರು. ಇಂದಿನ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

ಪೂರ್ವಾಶ್ರಮದಲ್ಲಿ ತಮ್ಮ ಬಿ.ಎ. ಪದವಿಯನ್ನು ಮೈಸೂರಿನಲ್ಲಿ ಬ್ಯಾಂಕ್ನೊಂದಿಗೆ ಪೂರೈಸಿ ಹಿರಿಯ ಜಗದ್ಗುರುಗಳವರ ಆಶಯದಂತೆ ಕಾಶಿಯಲ್ಲಿ ಸಂಸ್ಕೃತದಲ್ಲಿ ಪಿ.ಹೆಚ್.ಡಿ ಗಾಗಿ ಅಧ್ಯಯನ ಮಾಡುತ್ತಿದ್ದರು.

ಸಮಯಕ್ಕಾಗಲೇ ಶ್ರೀಯುತರು ಶ್ರೀಗಳವರೊಂದಿಗೆ ಅಪಾರ ಒಡನಾಟ ಹೊಂದಿದ್ದರಿಂದ ಶ್ರೀಗಳವರೊಂದಿಗೆ ತಾವು ತಮ್ಮ ವಿದ್ಯಾರ್ಥಿಗಳೊಂದಿಗೆ ಬರುವ ದಿನವನ್ನು ತಿಳಿಸಿ ಅವರಿಗೆ ಊಟ, ವಸತಿ ವ್ಯವಸ್ಥೆ ಮಾಡಲು ಕೇಳಿಕೊಂಡರು. ಅದರಂತೆ ಶ್ರೀಯುತರು ವಿದ್ಯಾರ್ಥಿಗಳನ್ನು ಕರೆದೊಯ್ದಾಗ ಶ್ರೀಗಳವರು ಅವರ ಹಾಸ್ಟೆಲ್ ನಲ್ಲೇ ಎಲ್ಲರಿಗೂ ವ್ಯವಸ್ಥೆ ಮಾಡಿದ್ದಲ್ಲದೇ ಎಲ್ಲರನ್ನೂ ಕರೆದೊಯ್ದು ಬನಾರಸ್ ವಿಶ್ವವಿದ್ಯಾಲಯವನ್ನು ತೋರಿಸಿದರು. ಇಂದಿಗೂ ಶ್ರೀಗಳವರು ಆ ದಿನಗಳನ್ನು ರಾಜಣ್ಣನೊಂದಿಗೆ ಕಳೆದ ದಿನಗಳೆಂದೇ ಪ್ರೀತಿಯಿಂದ ಸ್ಮರಿಸುತ್ತಾರೆ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಶ್ರೀಗಳವರು ತೆಗೆದುಕೊಂಡ ಶ್ರಮ ಅಪಾರ.

ಶ್ರೀಯುತರು ನೀರಾವರಿ ಇಲಾಖೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಹಾಗೂ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ದಾವಣಗೆರೆ ಮತ್ತು ತ್ಯಾವಣಗಿಯಲ್ಲಿ ಅಪಾರ ಸೇವೆ ಸಲ್ಲಿಸಿದರು. ಹರಪನಹಳ್ಳಿ ವಿಭಾಗಕ್ಕೆ ಸೇರಿದ ಕೊನೆಯ ಭಾಗದ ರೈತರಿಗೂ ಚಾನಲ್ ನೀರು ಬೆಳೆಗೆ ಸಿಗುವಂತೆ ಮಾಡಲು ಬೆಳಗಿನಿಂದ ಮಧ್ಯ ರಾತ್ರಿವರೆಗೂ ಶ್ರಮವಹಿಸಿ ದುಡಿದರು. ಇಂದಿಗೂ ಆ ರೈತರು ಶ್ರೀಯುತರು ಮಾಡಿದ ಕೆಲಸವನ್ನು ಸ್ಮರಿಸಿಕೊಳ್ಳುತ್ತಾರೆ. ಮಾನ್ಯ ಜೆ.ಹೆಚ್.ಪಟೇಲ್ ರವರು ಸರ್ಕಾರದಲ್ಲಿ ಅಧಿಕಾರದಲ್ಲಿದ್ದಾಗ ಕಾರಿಗನೂರಿನಲ್ಲಿ ಕಲ್ಯಾಣ ಮಂಟಪದ ನಿರ್ಮಾಣಕಾರ್ಯ, ದೇವಸ್ಥಾನ ಹಾಗೂ ಪುಷ್ಕರಣಿ ಜೀರ್ಣೋದ್ಧಾರ ಕಾರ್ಯವನ್ನು ಮಾಡಿದುದನ್ನು ಇಂದಿಗೂ ಅಲ್ಲಿನ ಜನ ಸ್ಮರಿಸುತ್ತಾರೆ.

ದಾವಣಗೆರೆ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ 300ಜನ ತಾತ್ಕಾಲಿಕ ಉದ್ಯೋಗದಲ್ಲಿದ್ದ ನೌಕರರನ್ನು ಸರ್ಕಾರದ ಮಟ್ಟದಲ್ಲಿ ಶ್ರಮವಹಿಸಿ ಅವರ ಹುದ್ದೆಯನ್ನು ಖಾಯಂಗೊಳಿಸಿ ಅವರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿದುದು ಅವರ ಪರೋಪಕಾರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗೆ ನೊಂದವರಿಗೆ ಅನೇಕ ರೀತಿಯಿಂದ ಸಹಾಯ ಮಾಡಿದ್ದಾರೆ.

ಸುಮಾರು 1975ರ ಸಂದರ್ಭದಲ್ಲಿ ದಾವಣಗೆರೆ ನಗರಸಭೆಗೆ ಕ್ರಿಯಾಶೀಲ ಪಂಪಾಪತಿಯವರು ಅಧ್ಯಕ್ಷರಾಗಿದ್ದಾಗ ಶ್ರೀಯುತರು ನಗರಸಭೆಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸನ್ನಿವೇಶದಲ್ಲಿ ಪಂಪಾಪತಿಯವರ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ ಇಡೀ ದಾವಣಗೆರೆ ನಗರದಲ್ಲಿ ಗಿಡ ಮರಗಳನ್ನು ನೆಡಿಸುದುದರ ಫಲವಾಗಿ ಇಂದು ದಾವಣಗೆರೆ ಎಲ್ಲೆಡೆ ಹಸಿರಾಗಿ ಕಂಗೊಳಿಸುತ್ತಿದೆ.

ಭದ್ರಾ ಎಡದಂಡೆ ಕಾಲುವೆ ಒಡೆದುಹೋಗಿ ಸಾವಿರಾರು ರೈತರ ಭತ್ತ, ಅಡಿಕೆ ಬೆಳೆಗಳು ಒಣಗಿ ಹೋದ ಸಂದರ್ಭ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಗ ಶ್ರೀಯುತರು ಕೇವಲ 2 ತಿಂಗಳಲ್ಲಿ ಹಗಲು ರಾತ್ರಿ ದುಡಿದು ಕಾಲುವೆ ದುರಸ್ತಿಗೊಳಿಸಿದರು. ಪರಿಣಾಮವಾಗಿ ಶ್ರೀಯುತರು ಅನಾರೋಗ್ಯಕ್ಕೆ ತುತ್ತಾದರು. ಹೀಗೆ ಸಮಾಜ ಸೇವೆಗಾಗಿ ತಮ್ಮ ಆರೋಗ್ಯಕ್ಕೂ ಗಮನ ತೋರದ ವ್ಯಕ್ತಿತ್ವ ಇವರದು.

ನ್ಯಾಯ ನಿಷ್ಟುರಿ ದಾಕ್ಷಿಣ್ಯ ಪರ ನಾನಲ್ಲ ಲೋಕ ವಿರೋಧಿ ಶರಣನಾರಿಗಂಜುವನಲ್ಲ- ಎಂಬ ಅಣ್ಣನವರ ನುಡಿಯಂತೆ ಸದಾ ಕಾಯಕ ಶೀಲರಾಗಿರುತ್ತಿದ್ದರು ನೇರ ಮಾತಿನ ನಿಷ್ಠುರವಾದಿಯಾದ, ಸತ್ಯಪರಿಪಾಲಕರು ಆಗಿದ್ದರಿಂದ ಶ್ರೀಯುತರು ಸಮಾಜದಲ್ಲಿ ಅನೇಕ ವಿರೋಧಗಳನ್ನು ಎದುರಿಸಬೇಕಾಯಿತು.

ಶ್ರೀಯುತರು ಹಾವೇರಿಯಲ್ಲಿ ಹೆದ್ದಾರಿ ಪ್ರಾಧಿಕಾರದಲ್ಲಿ ಕಾರ್ಯಪಾಲಕ ಅಭಿಯಂತರರಾಗಿ, ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರಾಗಿ ದಕ್ಷತೆಯಿಂದ ಸೇವೆಸಲ್ಲಿಸಿದುದರ ಪರಿಣಾಮ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಇಂಜಿನಿಯರ್ ಆಗಿದ್ದ ಶ್ರೀ ಪಂಚಗಟ್ಟಿಯವರು ಶ್ರೀಯುತರನ್ನು ತಮ್ಮ ನಿಗಮದಲ್ಲಿ ಡೆಪ್ಯುಟಿ ಸೆಕ್ರೆಟರಿಯಾಗಿ ಸೇವೆಸಲ್ಲಿಸಲು ಅವಕಾಶ ಕಲ್ಪಿಸಿದರು.

ಅವರು ವಾಸಿಸುತ್ತಿದ್ದ ದಾವಣಗೆರೆ ಕಿರವಾಡಿ ಲೇ ಔಟ್ನಲ್ಲಿ ಸುಮಾರು 30 ವರ್ಷಗಳ ಹಿಂದೆ ಎಲ್ಲಿ ಬೋರ್ ಹೊಡೆಸಿದರೂ ನೀರು ಸಿಗುತ್ತಿರಲಿಲ್ಲ. ಆಗ ಶ್ರೀಯುತರು ನೇತೃತ್ವ ವಹಿಸಿ ಹೋರಾಟ ಮಾಡಿ ನಗರ ಸಭೆಯಿಂದ ದೊಡ್ಡ ಪೈಪ್ ಹಾಕಿಸಿ ನೀರಿನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಸ್ವಂತ ಖರ್ಚಿನಲ್ಲಿ ಇಡೀ ಬಡಾವಣೆಯಲ್ಲಿ ಸಸಿ ನೆಡಿಸುವುದರ ಮೂಲಕ ಹಸಿರೀಕರಣಗೊಳಿಸಿರುವುದನ್ನು ಅಲ್ಲಿನ ನಿವಾಸಿಗಳು ಇಂದಿಗೂ ಸ್ಮರಿಸುತ್ತಾರೆ.

“ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ಪ್ರತಿಯಾಗಿ ಸಮಾಜಕ್ಕೆ ನಮ್ಮಿಂದ ಏನನ್ನು ಕೊಡಲು ಸಾಧ್ಯ” ಎಂಬ ಮಹೋನ್ನತ ಚಿಂತನಾಮನೋಭಾವ ಹೊಂದಿದ್ದ ಶ್ರೀಯುತರು ಅನಾರೋಗ್ಯಕ್ಕೆ ಎಲೆಮರೆಯ ಕಾಯಿಯಂತೆ, ದೀಕ್ಷೆ ತೊಟ್ಟವರಂತೆ ಬದುಕಿನ ಪ್ರತಿಯೊಂದು ಒಳಗಾಗುವವರೆಗೂ ಕ್ಷಣವನ್ನು ಸಮಾಜದ ಒಳಿತಿಗೆ ಅರ್ಪಿಸಿದರು.

“ಜ್ಯೋತಿಯೊಂದು ಜ್ಯೋತಿ ಬೆಳಗುವಂತೆ” ಹಿರಿಯ ಜಗದ್ಗುರುಗಳವರ ಪವಾಡ ಸದೃಶ ವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾದ ಈ ತ್ಯಾಗಮಯಿ ತಮ್ಮ ಕಠಿಣ ಪರಿಶ್ರಮ, ಕಾಯಕ ಶೀಲತೆ ಮತ್ತು ಸಮಾಜೋಪಕಾರಿ ಕೆಲಸಗಳಿಂದ ಇಂದಿನ ಪೀಳಿಗೆಗೆ ಆದರ್ಶ ಪ್ರಾಯರಾಗಿದ್ದಾರೆ.