ದೀಪಾವಳಿಯೋ ಅಥವಾ ಪಟಾಕಿಗಳ ಹಾವಳಿಯೋ?

ಈಗ ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ, ಸಂಭ್ರಮ. ತಮಸೋ ಮಾ ಜ್ಯೋತಿರ್ಗಮಯ (ಓ ದೇವರೇ! ಕತ್ತಲೆಯಿಂದ ಬೆಳಕಿನೆಡೆಗೆ ನನ್ನನ್ನು ಕರೆದೊಯ್ಲಿ!) ಎಂಬ ಸಂದೇಶ ಸಾರುವ ಈ ಬೆಳಕಿನ ಹಬ್ಬವಾದ ದೀಪಾವಳಿಯು ಇಂದು ಮನೆ ಮನಗಳ ಒಳ ಹೊರಗನ್ನು ಬೆಳಗಲು ಬಂದಿದೆ. ಕೊರೊನಾ ಸಂಕಟ ಕೊನೆಗೊಳ್ಳುತ್ತಿರುವ ಈ ದಿನಗಳಲ್ಲಿ ಬೆಳಕಿಗಾಗಿ ಹಂಬಲಿಸಲು ತುಸು ಸಂತಸ ಸಂಭ್ರಮಗಳನ್ನು ಅನುಭವಿಸಲು ಜನರು ಈಗ ಸಜ್ಜಾಗುತ್ತಿದ್ದಾರೆ.
ಯಾರಾದರೂ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುವಾಗ ನಿಮ್ಮ ನೆಚ್ಚಿನ ನಟ/ನಟಿ ಯಾರು? ನಿಮ್ಮ ನೆಚ್ಚಿನ ಚಿತ್ರಗೀತೆ ಯಾವುದು? ಸಿನೆಮಾ ಯಾವುದು? ನಿಮಗೆ ಪ್ರಿಯವಾದ ತಿಂಡಿ ತಿನುಸು ಯಾವುದು? ನಿಮ್ಮ ನೆಚ್ಚಿನ ಕವಿ ಯಾರು? ಇತ್ಯಾದಿ ಕೇಳಿ ಉತ್ತರ ಪಡೆಯುವುದುಂಟು. ನಿಮ್ಮ ನೆಚ್ಚಿನ ಕವಿತೆ ಯಾವುದು? ಎಂದು ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರನ್ನು ಯಾರೂ ಕೇಳಿದಂತಿಲ್ಲ, ಆದರೂ ಎಲ್ಲ ಕಾವ್ಯಾಸಕ್ತರಿಗೂ ಗೊತ್ತಿರುವ ಸಂಗತಿ ಜಿ.ಎಸ್.ಎಸ್ ಅವರು ರಚಿಸಿದ ಸಾವಿರಾರು ಕವಿತೆಗಳಲ್ಲಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಕವಿತೆಯೆಂದರೆ “ನನ್ನ ಹಣತೆ”! ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಆಯೋಜಿಸುವ ಬೆಳದಿಂಗಳ ಕವಿಗೋಷ್ಠಿಯಲ್ಲಿ ಅವರು ಬಹಳ ಸಲ ಪಾಲುಗೊಂಡಿದ್ದರು, ಕೆಲವೊಮ್ಮೆ ಅಧ್ಯಕ್ಷರಾಗಿ, ಮತ್ತೊಮ್ಮೆ ಮುಖ್ಯ ಅತಿಥಿಗಳಾಗಿ, ಮಗುದೊಮ್ಮೆ ಉದ್ಘಾಟಕರಾಗಿ, ಅನೇಕ ಬಾರಿ ಅವರು ವಾಚಿಸುತ್ತಿದ್ದುದು ಇದೇ “ನನ್ನ ಹಣತೆ” ಎಂಬ ಪದ್ಯ:
ವೇದ, ಶಾಸ್ತ್ರ ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ- ಹೂಬಾಣ ಸುಟ್ಟಿದ್ದೇವೆ
ತಮಸೋ ಮಾ ಜ್ಯೋತಿರ್ಗಮಯ ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ...
ಆದರೂ ಹಣತೆ ಹಚ್ಚುತ್ತೇನೆ ನಾನೂ
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ,
ನೀನು ಯಾರೋ, ಮತ್ತೆ ನಾನು ಯಾರೋ!
–(ಜಿ.ಎಸ್.ಎಸ್ - ನನ್ನ ಹಣತೆ)
ಪದ್ಯದ ಮೊದಲ ಭಾಗದಲ್ಲಿ ಕವಿ ಬೂದಿಯನ್ನು ಕಂಡದ್ದು ದೀಪದ ಬೆಳಕಿನಿಂದ ಅಲ್ಲ; ಬದುಕನ್ನು ಬೆಳಗಿಸುವ ಜ್ಞಾನದ ಹಣತೆಯನ್ನು ಅನಾದರಣೆ ಮಾಡಿ, ಗೊಡ್ಡುಸಂಪ್ರದಾಯಗಳ ಮತಾಪು-ಪಟಾಕಿ-ಸುರುಸುರುಬತ್ತಿಯನ್ನು ಸುಟ್ಟಿದರಿಂದ! ಹಣತೆ ಜ್ಞಾನದ ಪ್ರತೀಕ; ಪಟಾಕಿ ಪೊಳ್ಳುತನದ ಪ್ರತೀಕ. ಅವನು ಬಹಳ ಪಟಾಕಿ ಹೊಡೆಯುತ್ತಾನೆ ಎನ್ನುವ ಆಡುಮಾತಿನಲ್ಲಿ ಇದನ್ನು ಮನಗಾಣಬಹುದು. ಅನೇಕ ದೀಪಾವಳಿಗಳು ಬಂದು ಹೋಗಿವೆ. ಆದರೂ ಮನುಷ್ಯನ ಹೃದಯ ಮಾತ್ರ ಇನ್ನೂ ಕಗ್ಗತ್ತಲ ಕೋಣೆಯಾಗಿಯೇ ಉಳಿದಿದೆ. ಈ ಕವಿತೆಯ ಮೊದಲ ಸಾಲುಗಳನ್ನು ಓದುವಾಗ ಜಿ.ಎಸ್.ಎಸ್ ನಿರಾಶಾವಾದಿಯಾಗಿ ಕಾಣಿಸಿದರೆ ಪದ್ಯದ ಕೊನೆಯ ಸಾಲಿಗೆ ಬಂದಾಗ ಗಹನವಾದ ದಾರ್ಶನಿಕ ಪ್ರಶ್ನೆಗೆ ಇಂಬು ಮಾಡಿಕೊಟ್ಟಿದ್ದಾರೆ. ಹಣತೆ ಆರಿದ ಮೇಲೆ ನೀನು ಯಾರೋ ಮತ್ತೆ ನಾನು ಯಾರೋ? ಎಂಬ ಕೊನೆಯ ಸಾಲು "Philosophy begins where the Science ends!" ಎಂಬ ಆಂಗ್ಲ ನುಡಿಯನ್ನು ನೆನಪು ಮಾಡಿಕೊಡುತ್ತದೆ.
ಹಣತೆ ಹಚ್ಚುತ್ತೇನೆ. ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ ಎನ್ನುವ ಆಶಾಭಾವನೆಯಿಂದ ಕೂಡಿದ ಮಧ್ಯದ ಸಾಲುಗಳು ಇಬ್ಬರು ಪ್ರಿಯವಾದ ವ್ಯಕ್ತಿಗಳ ಸಂಬಂಧವನ್ನು ಸೂಚಿಸುತ್ತವೆ. ಅವರು ಗಾಢವಾಗಿ ಪ್ರೀತಿಸುವ ಪತಿ-ಪತ್ನಿ ಇರಬಹುದು, ತಂದೆ ತಾಯಿಗಳಿರಬಹುದು, ಅಕ್ಕ-ತಂಗಿಯರಿರಬಹುದು, ಅಣ್ಣ-ತಮ್ಮಂದಿರಬಹುದು ಅಥವಾ ಜೀವದ ಗೆಳೆಯರಿರಬಹುದು. ಅವರ ಮುಖವನ್ನು ಸದಾ ನೋಡುತ್ತಿರಬೇಕೆಂಬ ಹಂಬಲದ ಇಂಗಿತಾರ್ಥ ಇಲ್ಲಿದೆ; ಇಬ್ಬರು ವ್ಯಕ್ತಿಗಳ ಮಧ್ಯೆ ಇರುವ ಗಾಢವಾದ ಪ್ರೀತಿ ವಿಶ್ವಾಸಗಳ ಸೆಳೆತವೂ ಇಲ್ಲಿದೆ. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ 15 ದಿನ ಮುಂಚಿತವಾಗಿ ಬರುವ ಭೂಮಿಹುಣ್ಣಿಮೆಯಂದು ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ನಮ್ಮನ್ನು ತೋಟಕ್ಕೆ ಕರೆದುಕೊಂಡು ಹೋಗಿ ಎಲೆಬಳ್ಳಿಯ ಮರಕ್ಕೆ ಹೊಸ ಸೀರೆಯನ್ನು ಉಡಿಸಿ, ಬಳೆಗಳನ್ನು ತೊಡಿಸಿ, ತಮ್ಮ ಮೈಮೇಲಿನ ಒಡವೆಗಳನ್ನೇ ಅದಕ್ಕೆ ಹಾಕಿ ಅಲಂಕರಿಸಿ, ಪೂಜೆ ಮಾಡಿ ಪಾದೋದಕವನ್ನು ತೋಟದಲ್ಲೆಲ್ಲಾ ಸಿಂಪಡಿಸಿ ನಂತರ ಬಾಳೆ ಎಲೆಯಲ್ಲಿ ನಮಗೆ ಬಡಿಸುತ್ತಿದ್ದ ಹಬ್ಬದ ಅಡುಗೆಯ ಸವಿ ವರ್ಣಿಸಲಸದಳ! ಸಾಹಿತ್ಯ ಕೃತಿಗಳಲ್ಲಿ ಬರುವ ವನದೇವತೆಯ ಪರಿಕಲ್ಪನೆ ಆಗ ಎಳೆವಯಸ್ಸಿನಲ್ಲಿ ನಮಗೆ ಇರಲಿಲ್ಲ
ಜೀವನದಲ್ಲಿ ಇಂಥ ಸೆಳೆತ ಇರುವ ಜನರೇ ಇರುತ್ತಾರೆಂದು ಹೇಳಲು ಬರುವುದಿಲ್ಲ, ಬದಲಾಗಿ “ಸತ್ತರೂ ಅವನ ಮುಖ ನೋಡುವುದಿಲ್ಲ!” ಎನ್ನುವ ಕಡುವೈರಿಗಳೂ ಇರುತ್ತಾರೆ. ಸುಮ್ಮನೆ ಇದ್ದರೂ ಕಾಲು ಕೆದರಿ ನ್ಯಾಯ ತೆಗೆಯುವವರು ಇದ್ದಾರೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದರೂ ವೃಥಾ ಅವರ ವಿರುದ್ದ ಕುಹಕ, ಕುತಂತ್ರಗಳನ್ನು ಮಾಡುವ ಧೂರ್ತರೂ ಇದ್ದಾರೆ. ತಮ್ಮ ಜವಾಬ್ದಾರಿ ಕೆಲಸಗಳು ಏನೆಂದು ತಿಳಿದು ಕಾರ್ಯನಿರ್ವಹಿಸದೆ ಅಹಂಕಾರದ ಮದ ಗಜವನೇರಿ ಸದಾ ನಿಂದಿಸುವ, ಕೊಂಕು ಮಾತುಗಳನ್ನಾಡುವ ಈ ಜನರು ಹಣತೆ ಹಚ್ಚುವ ಜನರಲ್ಲ, ಬದಲಿಗೆ ಬೆಂಕಿ ಹಚ್ಚುವ ಜನ! ಇಂಥವರನ್ನು ಕಂಡೇ ಬಸವಣ್ಣನವರು ಹೇಳಿದ್ದು: “ಕೋಣನ ಹೇರಿಂಗೆ ಕುನ್ನಿ ಬುಸುಗುಡುತ್ತಾ ಬಾಲವ ಬಡಿವಂತೆ ತಾವೂ ಮಾಡರು, ಮಾಡುವವರನೂ ಮಾಡಲೀಯರು! ಮಾಡುವ ಭಕ್ತರ ಕಂಡು ಸೈರಿಸಲಾರದವರ ಕೂಗಿಡೆ, ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವಾ!
ಹಾಗೆ ನೋಡಿದರೆ ಸಭೆ ಸಮಾರಂಭಗಳಲ್ಲಿ ಹಣತೆ ಹಚ್ಚುವುದು ಬಹಳ ಕಷ್ಟ. ಈ ದೇಶದಲ್ಲಿ ಮಾತಿನ ಚಕಮಕಿಯಿಂದ ಬೆಂಕಿ ಹಚ್ಚುವುದು ಬಹಳ ಸುಲಭ. ಸಭೆಯ ಆರಂಭದಲ್ಲಿ ದೀಪವನ್ನು ಬೆಳಗಿಸುವುದು ಸವಾಲಿನ ಕೆಲಸವಾದರೂ ಕಷ್ಟಪಟ್ಟು ಹಚ್ಚುತ್ತೇವೆ. ಕೇವಲ ಯಾಂತ್ರಿಕವಾಗಿ ಹಚ್ಚಿ ವೇದಿಕೆಯಲ್ಲಿ ಆಸೀನರಾಗಲು ನಮಗೆ ಮನಸ್ಸಾಗುವುದಿಲ್ಲ. ಸಮಾರಂಭ ಮುಗಿಯುವ ತನಕ ದೀಪವು ಬೆಳಗುತ್ತಿರಬೇಕೆಂಬ ನಮ್ಮ ಹಂಬಲವು ಕೇವಲ ಹಂಬಲವಾಗಿ ಉಳಿದ ಸಂದರ್ಭಗಳೇ ಹೆಚ್ಚು! ಗಾಳಿಯ ಹೊಡೆತಕ್ಕೆ ಅದು ಆರಿಹೋಗಿ ದೀಪ ಬೆಳಗಿ ಸುವ ಶಾಸ್ತ್ರ ಮುಗಿದ ನಂತರ ಮಂಕುಕವಿದ ದೀಪವನ್ನು ಸಂಘಟಕರು ಎತ್ತಿಡುತ್ತಾರೆ. ಅವರು ದೀಪ ಎತ್ತಿಟ್ಟರೆ ಶ್ರೋತೃಗಳು ಸಭೆಯಲ್ಲಿ ಕೇಳಿದ ಜೀವನಕ್ಕೆ ಬೆಳಕಾಗುವ ಉನ್ನತ ವಿಚಾರಗಳನ್ನು ಕೇವಲ ಯಾಂತ್ರಿಕವಾಗಿ ಕೇಳಿಸಿಕೊಂಡು ಮೃಷ್ಟಾನ್ನ ಭೋಜನ ಸವಿದ ಮೇಲೆ ಅಲ್ಲಿಯೇ ಮರೆತು ಬಾಯಿ ಚಪ್ಪರಿಸುತ್ತಾ ನಿರ್ಗಮಿಸುತ್ತಾರೆ! ಆದರೂ ನಿರಾಶರಾಗದೆ ತಾಯಿಯು ಹಠಮಾರಿ ಮಗುವಿನ ಕೈಗಳನ್ನು ಬಿಗಿಯಾಗಿ ಹಿಡಿದು ಬಲವಂತವಾಗಿ ಒಳಲೆಯಲ್ಲಿ ಹಾಲುಣಿಸುವ ಪ್ರಯತ್ನ ನಮ್ಮದಾಗಿದೆ.
ಜೆ.ಎಸ್.ಎಸ್ ಅವರ ನನ್ನ ಹಣತೆಯು ಆಧುನಿಕ ಕವಿತೆಯಾದರೂ ಆಧ್ಯಾತ್ಮಿಕ ಸುಳುಹುಗಳನ್ನು ಒಳಗೊಂಡಿದೆ. ಹಣತೆ ಆರಿದ ಮೇಲೆ ನಾನು ಯಾರೋ, ಮತ್ತೆ ನೀನು ಯಾರೋ! ಎಂಬ ಮುಕ್ತಾಯದ ಸಾಲು ಆಧ್ಯಾತ್ಮ ಚಿಂತನೆಗೆ ಅನುವು ಮಾಡಿಕೊಡುತ್ತದೆ. ಇದಕ್ಕೆ ಉತ್ತರ ಆತ್ಮಸಾಕ್ಷಾತ್ಕಾರದ ದಾರಿಯನ್ನು ಅರುಹಲು ಅನುಭಾವಿ ಅಲ್ಲಮನು ಅಕ್ಕಮಹಾದೇವಿಗೆ ಹೇಳಿದ ಈ ಮುಂದಿನ ವಚನದಲ್ಲಿದೆ:
ನೀನು ನಾನು ಎಂಬ ಉಭಯ ಸಂಗವಳಿದು
ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ
ತುಟ್ಟತುದಿಯ ಮೆಟ್ಟಿನೋಡಲು
ಬಟ್ಟಬಯಲು ಕಾಣಬಹುದು ನೋಡಾ!
ಆ ಬಯಲ ಬೆರೆಸುವಡೆ
ತ್ರಿಕೂಟ ಗಿರಿಯೊಳಗೊಂದು ಕದಳಿಯುಂಟು ನೋಡಾ!
ಆ ಕದಳಿಯ ತಿಳಿದು ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ,
ನಡೆ ಅಲ್ಲಿಗೆ ತಾಯೆ ಗುಹೇಶ್ವರ ಲಿಂಗದಲ್ಲಿ
ಪರಮಪದವಿ ನಿನಗೆ ಸಯವಪ್ಪುದು ನೋಡಾ!
ಈ ವಚನವು ನಮ್ಮ ಪರಮಾರಾಧ್ಯ ಗುರುವರ್ಯರಿಗೆ ಅತ್ಯಂತ ಪ್ರಿಯವಾಗಿತ್ತು. ಇದನ್ನು ಆಧರಿಸಿ ಶ್ರೀಶೈಲದಲ್ಲಿರುವ ಕದಳೀವನ ಸಂಶೋಧನೆಯನ್ನು ಮಾಡಲು ಅವರು ನೂರಾರು ಶಿಷ್ಯರೊಂದಿಗೆ ಕದಳೀವನ ಪ್ರವಾಸವನ್ನು 1962ರಲ್ಲಿ ಏರ್ಪಡಿಸಿದ್ದರು. ನಾವಾಗ ಹದಿನಾಲ್ಕು ವರ್ಷದ ಬಾಲಕ! ಕದಳೀವನ, ಅಕ್ಕನ ಹಳ್ಳ, ಅಕ್ಕನ ಗವಿಗಳನ್ನು ಬೆರಗು ಕಣ್ಣುಗಳಿಂದ ನೋಡಿದ ಆ ಪ್ರವಾಸದ ನೆನಪು ಈಗಲೂ ನಮಗೆ ಅಚ್ಚ ಹಸಿರಾಗಿದೆ. ಪ್ರವಾಸಿ ತಂಡದಲ್ಲಿ ಪ್ರಸಿದ್ದ ಸಾಹಿತಿಗಳಾದ ಎಚ್. ತಿಪ್ಪೇರುದ್ರಸ್ವಾಮಿ ಮತ್ತು ಮಹದೇವ ಬಣಕಾರರು ಇದ್ದರು. ತಿಪ್ಪೇರುದ್ರಸ್ವಾಮಿಯವರು ಪ್ರವಾಸದ ನಂತರ ಕದಳಿ ಕರ್ಪುರ ಎಂಬ ಕಾದಂಬರಿಯನ್ನೇ ಬರೆದರು!
ಪರ್ವತಾರೋಹಣ ಮಾಡುವುದು ಅಷ್ಟು ಸುಲಭದ ಸಾಹಸವೇನಲ್ಲ, ಈ ಮೇಲಿನ ವಚನದಲ್ಲಿ ಹೇಳಲಾದ ಶ್ರೀಶೈಲದಲ್ಲಿರುವ ತ್ರಿಕೂಟಗಿರಿ, ಕದಳಿವನ ಕೇವಲ ಭೌಗೋಳಿಕ ಪ್ರದೇಶಗಳಲ್ಲ, ಬದಲಾಗಿ ವ್ಯಕ್ತಿಯು ಆಧ್ಯಾತ್ಮಿಕ ಸಾಧನೆಯಲ್ಲಿ ಏರಬಹುದಾದ ಉನ್ನತ ಸ್ತರಗಳು. ಹೀಗಾಗಿ ಅವು ಸಮರ್ಥ ಪ್ರತಿಮೆ (Image) ಗಳಾಗಿ ನಿಲ್ಲುತ್ತವೆ! ಅಕ್ಕನ ಈ ಮುಂದಿನ ವಚನ ಅದಕ್ಕೆ ಪುರಾವೆಯನ್ನು ಒದಗಿಸುತ್ತದೆ. ಶರಣ-ಸತಿ ಲಿಂಗ-ಪತಿ ಎಂದು ಚೆನ್ನಮಲ್ಲಿಕಾರ್ಜುನನನ್ನು ತನ್ನ ಪತಿಯೆಂದು ಪರಿಗಣಿಸಿದ್ದ ವೈರಾಗ್ಯನಿ ಅಕ್ಕಮಹಾದೇವಿಯು ಈ ವಚನದಲ್ಲಿ ಚೆನ್ನಮಲ್ಲಿಕಾರ್ಜುನನ ಮಗಳಾಗಿ ಬಿಗಿದಪ್ಪಬಯಸಿರುವುದು ಒಂದು ವಿಶೇಷ.
ಕದಳಿಯೆಂಬುದು ತನು, ಕದಳಿಯೆಂಬುದು ಮನ
ಕದಳಿ ಎಂಬುದು ವಿಷಯಂಗಳು
ಕದಳಿಯೆಂಬುದು ಭವ ಘೋರಾರಣ್ಯ
ಕದಳಿಯೆಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು,
ಭವಗೆದ್ದು ಬಂದ ಮಗಳೆಂದು
ಕರುಣದಿ ತೆಗೆದು ಬಿಗಿದಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು!
ಮನೆಮನೆಗಳಲ್ಲಿ ಹಚ್ಚುವ ದೀಪದ ಬೆಳಕು ಜ್ಞಾನದ ಸಂಕೇತ; ಕತ್ತಲು ಆಜ್ಞಾನದ ಸಂಕೇತ. ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು, ನಮ್ಮ ಅಜ್ಞಾನ ನಿವಾರಣೆಯಾಗಿ ಆತ್ಮಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿಂದ ಬೆಳಕಿನೆಡೆಗೆ ಸಾಗಿದೆಯೇ? ದೀಪದ ಬುಡದಲ್ಲೇ ಕತ್ತಲು. ಪಟಾಕಿಗಳ ಸದ್ದು ಅಡಗಲಿಲ್ಲ ದೀಪ ಹಚ್ಚಿದಕ್ಕಿಂತ ಪಟಾಕಿ ಹೊಡೆದಿದ್ದೇ ಜಾಸ್ತಿ. ದೀಪಾವಳಿಯನ್ನು ಕುರಿತು ಬಹಳ ಹಿಂದೆ ಬರೆದ ನಮ್ಮ ಕವಿತೆ ಹೀಗಿದೆ:
ಮತ್ಸರದ ಸುರುಸುರು ಬತ್ತಿ
ಹತ್ತಿ ಉರಿಯುತಿದೆ ಸುತ್ತಲೂ ಮತ್ತರದ ಸುರುಸುರು ಬತ್ತಿ
ಹಚ್ಚಲಾದೀತೇ ಅದರಿಂದ ಮತ್ತೊಂದು ಹಣತೆಯ ಬತ್ತಿ!
ಹಣತೆ ಹಣತೆಯ ಕೂಡಿದರೆ ಕಂಗೊಳಿಸುವುದು ಜ್ಯೋತಿ
ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ
ಯಾರ ಬದುಕಿನ ಅಂಗಳದಲ್ಲಿ ಯಾರು ಇಡುವರೋ ಬತ್ತಿ
ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಕುಯುಕ್ತಿ!
ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!
- ಶ್ರೀ ತರಳಬಾಳು ಜಗದ್ಗುರು
ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ವಿಜಯಕರ್ನಾಟಕ