ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲು ಶ್ರೀ ತರಳಬಾಳು ಜಗದ್ಗುರುಗಳವರ ಸಲಹೆ
ಬೆಂಗಳೂರು, ಜ.9- ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಲ್ಲಿ ಮಕ್ಕಳಿಗೆ ಒಳ್ಳೆಯ ಪಠ್ಯಗಳಲ್ಲಿ ಮಕ್ಕಳಿಗೆ ನೈತಿಕ ಮಾನವೀಯ ಮೌಲ್ಯಗಳು, ದೈವಭಕ್ತಿ, ದೇಶಭಕ್ತಿ ಸಂವಿಧಾನಕ್ಕೆ ಗೌರವ ಕೊಡುವ ಶಿಕ್ಷಣವನ್ನು ಅಳವಡಿಸುವುರ ಜೊತೆಗೆ ಪರೋಪಕಾರ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕಾದ ವಿಚಾರಗಳ ಕುರಿತು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣಲ್ಲಿ ಕರೆದಿದ್ದ ಸಭೆಯಲ್ಲಿ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಸಭೆಯಲ್ಲಿ ಶ್ರೀ ಜಗದ್ಗುರುಗಳವರು ಮಾತನಾಡಿ ಪ್ರಸ್ತುತ ಕರ್ನಾಟಕ ರಾಜ್ಯವು ದೇಶದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿದೆ. ನಮ್ಮದು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬರುವುದರಿಂದ ದೇಶದಲ್ಲಿ ಗುಣಮಟ್ಟದ ಶಿಕ್ಷಣ ವಿಸ್ತಾರವಾಗಲಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪುತ್ತಿರುವುದು ತುಂಬ ಕಳವಳ ಉಂಟುಮಾಡುತ್ತಿದೆ. ಆದ್ದರಿಂದ ಪ್ರಾಥಮಿಕ ಹಂತಗಳಲ್ಲೇ ಅವರಿಗೆ ನೈತಿಕ ಶಿಕ್ಷಣ ನೀಡುವುದು ಉತ್ತಮ. ರಾಮಾಯಣ, ಮಹಾಭಾರತ, ಭಗವದ್ಗೀತೆಯಲ್ಲಿರುವ ಮೌಲ್ಯಗಳನ್ನು ಅವರಿಗೆ ತಿಳಿ ಹೇಳಬೇಕಿದೆ ಎಂದರು.
ಇಂದು ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಪಠ್ಯಪುಸ್ತಕ ನೋಡುವ ಬದಲು ಮೊಬೈಲ್ ನೋಡುತ್ತಾರೆ. ಇದರಿಂದ ದಾರಿ ತಪ್ಪತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಅವರಿಗೆ ನೈತಿಕ ಶಿಕ್ಷಣ ಕೊಡಬೇಕು. ಧಾರ್ಮಿಕ ಮತ್ತು ಸಂಪ್ರದಾಯಗಳನ್ನು ಕೇವಲ ಬೋಧನೆಯಿಂದ ಹೇಳಲು ಸಾಧ್ಯವಿಲ್ಲ ಮಕ್ಕಳು ಅದನ್ನು ಪ್ರಾಯೋಗಿಕವಾಗಿ ಆಚರಿಸಿದರೆ ಮಾತ್ರ ಇದು ಎಷ್ಟು ಮಹತ್ವ ಎಂಬುದನ್ನು ಅವರಿಗೆ ಅರಿವಾಗುತ್ತದೆ ಎಂದರು.
ನಮ್ಮ ಪ್ರಕಾರ ಮಕ್ಕಳಿಗಿಂತ ಮೊದಲು ರಾಜಕಾರಣಿಗಳಿಗೆ ನೈತಿಕ ಶಿಕ್ಷಣ ಅಗತ್ಯವಿದೆ. ರಾಜಕಾರಣಿಗಳು ಸರಿಹೋದರೆ ಅರ್ಧ ಸಮಾಜ ಸುಧಾರಿಸುತ್ತದೆ. ಅವರೇ ದಾರಿ ತಪ್ಪಿದರೆ ನಾಗರಿಕ ಸಮಾಜವನ್ನು ಕಾಪಾಡುವವರು ಯಾರು ಶ್ರೀ ಜಗದ್ಗುರುಗಳವರು ಪ್ರಶ್ನೆ ಮಾಡಿದರು. ಶಿಕ್ಷಣದಲ್ಲಿ ಪರಿವರ್ತನೆ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ಆಧ್ಯಾತ್ಮಿಕ, ವ್ಯವಹಾರಿಕದಂತಹ ಮೂರು ಬಗೆಯ ಶಿಕ್ಷಣ ನೀಡಬೇಕು. ಇಂದಿನ ಶಿಕ್ಷಣದಲ್ಲಿ ಔದ್ಯೋಗಿಕ ಹಾಗು ವ್ಯಾವಹಾರಿಕ ಶಿಕ್ಷಣ ಸಿಗುತ್ತಿದೆ. ಆದರೆ ಆಧ್ಯಾತ್ಮಿಕ ಶಿಕ್ಷಣ ಸಿಗುತ್ತಿಲ್ಲ ಎಂದರು.
ಭಗವಾನ್ ಬುದ್ಧ ಹಾಗೂ ರಾಜನ ಕುದುರೆಯ ಕುರಿತಾದ ಕಥೆಯೊಂದಿಗೆ ಉದಾಹರಣೆ ನೀಡಿದ ಶ್ರೀಜಗದ್ಗುರುಗಳು, ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಬಗ್ಗೆ ಯಾವುದೇ ವಿವಾದವಿಲ್ಲ. ಆದರೆ ನೈತಿಕ ಶಿಕ್ಷಣ ನೀಡುವವರಿಗೆ ಮೊದಲು ಶಿಕ್ಷಣ ನೀಡಬೇಕು. ಆಗ ಮಕ್ಕಳು ಸರಿಯಾದ ನಡೆಯಲ್ಲಿ ನಡೆಯುತ್ತಾರೆ. ಸಭಾಧ್ಯಕ್ಷರಾದ ವಿಶ್ವೇಶ್ವರ ಕಾಗೇರಿ ಇದ್ದಾರೆ, ನೀವು ರಾಜಕಾರಣಿಗಳನ್ನ ಕರೆದು ಉತ್ತಮ ನೈತಿಕ ಶಿಕ್ಷಣ ನೀಡಿ ಆ ಮೂಲಕ ಬದಲಾವಣೆ ತನ್ನಿ ಎಂದು ಸಲಹೆ ನೀಡಿದರು.
ವಿಧಾನಸೌಧದಲ್ಲಿ ಹೇಗೆ ಕಾರ್ಯಕಲಾಪ ನಡೆಯುತ್ತಿದೆ ಅನ್ನೋದು ನೋಡಿದ್ದೇವೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸದನ ನಡೆಸುತ್ತೀರಿ.ಯಾವ ರೀತಿ ಆ ವೈಯಕ್ತಿಕ ನಿಂದನೆ ಆಗುತ್ತದೆ ಎಂಬುದು ಗೊತ್ತು. ಮೊದಲು ಇದಕ್ಕೆ ಕಡಿವಾಣ ಹಾಕಿ. ಇದಕ್ಕಾಗಿ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದರು.
ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಶಾಲೆ ಮತ್ತು ಮನೆಗಳಲ್ಲಿ ಮಕ್ಕಳಿಗೆ ಬೇಕಾದ ವಿಷಯನ್ನು ಕಲಿಯಲು ಅವಕಾಶ ಕಲ್ಪಿಸಬೇಕು. ಯಾರೇ ಆಗಲಿ ತನ್ನೊಳಗಿರುವ ವಿದ್ಯೆಯನ್ನು ಅರಿಯಲು ನಾವು ಅವಕಾಶ ಕೊಟ್ಟಾಗ ಅವರು ಮುಂದೆ ಬರಲು ಸಾಧ್ಯವಾಗುತ್ತದೆ. ಇಂಥ ಶಿಕ್ಷಣ ಮುಂದಿನ ದಿನಗಳಲ್ಲಿ ಅಗತ್ಯವಿದೆ ಎಂದು ಹೇಳಿದರು.
ಮಕ್ಕಳಿಗೆ ಶಿಕ್ಷಣದಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು, ಸಂಸ್ಕಾರ, ಪ್ರಜಾಪ್ರಭುತ್ವ, ಭಾರತದ ಸನಾತನ ಧರ್ಮ ಇಂತಹ ಮೌಲ್ಯಗಳನ್ನು ಅಳವಡಿಸಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವನಾಗೇಶ್ ಅವರು ನಾಡಿನ ವಿವಿಧ ಮಠಾಧೀಶರನ್ನು ಕರೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಲು ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಬಾಲ್ಯದಿಂದ ಯೂನಿವರ್ಸಿಟಿ ಯವರೆಗೂ ಕಲಿಯುವ ವಿದ್ಯೆಯೇ ಬೇರೆ. ವಿದ್ಯಾಶಾಲೆಗಳು ಯೂನಿವರ್ಸಿಟಿಗಳ ಅಸ್ತಿತ್ವವನ್ನು ಪ್ರಶ್ನಿಸುವ ಕಾಲ ಇದೆ. ಮನುಷ್ಯನ ಕೈಗೆ ವಿದ್ಯೆಯಿಂದ ಹತ್ತಿರವಾಗಬೇಕಿದ್ದ ವಿಚಾರ ದೂರವಾಗುತ್ತಿದೆ. ಮನುಷ್ಯನೊಳಗೆ ಇರುವ ವಿದ್ಯೆಯನ್ನು ಅರಿಯಲು ಅವಕಾಶ ಮಾಡಿಕೊಡಬೇಕಿದೆ ಎಂದರು.ಶಾಲೆ-ಮನೆಗಳಲ್ಲಿ ಮಕ್ಕಳಿಗೆ ಬೇಕಾದ ವಿಷಯವನ್ನು ರೂಪಿಸಬೇಕಿದೆ.ಶಿಕ್ಷಕರಿಗೆ ಅಂಥಹದೊಂದು ವಿದ್ಯೆ ಕೊಡಬೇಕಿದೆ. ಇಲ್ಲವಾದರೆ ಬುದ್ಧನ ಕುದುರೆಯ ಕಥೆ ಇಲ್ಲಿ ಬಂದು ನಿಲ್ಲುತ್ತದೆ. ಬಹಳ ದಶಕಗಳಿಂದ ಸಂಸ್ಥಾನಗಳು ಮಠಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡುಬಂದಿವೆ. ನಮ್ಮ ನೆಲಕ್ಕೆ ಅಂಥಹ ಶಕ್ತಿಯಿದೆ. ಆಧುನಿಕತೆಗೆ ತಕ್ಕಂತೆ ಶಿಕ್ಷಣ ಬೇಕು. ಎಷ್ಟೊ ನಮ್ಮ ಮಕ್ಕಳಿಗೆ ಹಲವಾರು ವಿಷಯಗಳು ಇನ್ನೂ ಗೊತ್ತಿಲ್ಲ ಎಂದರು.
ಏಕಾಏಕಿ ಅಡ್ವಾನ್ಸ್ಸ್ ಸೈಕಾಲಜಿ, ತತ್ವಜ್ಞಾನ ಇಂತಹ ಶಿಕ್ಷಣಗಳನ್ನು ಕಲಿಯಿರಿ ಎಂದರೆ ಸ್ವಲ್ಪ ಕಷ್ಟಕರವಾಗುತ್ತದೆ. ಹಂತ ಹಂತವಾಗಿ ಇದನ್ನು ಕಲಿಸುತ್ತಾ ಹೋಗಬೇಕೆಂದು ಅವರು ಕಿವಿಮಾತು ಹೇಳಿದರು.
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಮೌಲ್ಯ ಶಿಕ್ಷಣ, ಕ್ರೀಡೆಗಳಂತಹ ಚಟುವಟಿಕೆ ನೀಡಬೇಕು. ಸತ್ಯ, ಅಹಿಂಸೆ, ದಾನದ ತಿಳುವಳಿಕೆ ಬೇಕು. ಮಕ್ಕಳನ್ನು ರ್ಯಾಂಕ್ ಗಳಿಸುವ ಮಷಿನ್ ಆಗಿ ಮಾಡಿಕೊಳ್ಳಲಾಗಿದೆ. ಅವರಲ್ಲಿ ಪರಸ್ಪರ ವ್ಯವಹಾರ, ನಡೆ- ನುಡಿ ಸಂಸ್ಕಾರ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬರಿಗೆ ಗೌರವ ಕೊಡುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಿದೆ. ಶಿಕ್ಷಕರ ಮತ್ತು ತಂದೆ-ತಾಯಿ, ಸಮಾಜದ ಉತ್ತಮ ನಡುವಳಕೆಗಳಿಂದ ಮಕ್ಕಳಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಪಂಚತಂತ್ರದ ಕಥೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಮತ್ತೆ ಅದು ಆರಂಭವಾಗಬೇಕು. ಟಿವಿಯಲ್ಲಿ ಹಿಂಸೆಯ ವೈಭವ ಕಡಿಮೆ ಮಾಡಬೇಕು. ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು. ಇದು ಅವರ ಮೇಲೆ ಬೇರೆ ಪರಿಣಾಮ ಬೀರುತ್ತದೆ. ಮಾಂಸಹಾರವನ್ನು ಕಾಣುವ ಹಾಗೆ ನೇತು ಹಾಕುವುದನ್ನು ಕಡಿಮೆ ಮಾಡಿ. ಇದನ್ನು ಮರೆಮಾಡುವುದು ಉತ್ತಮ ಎಂದರು.
ಆನ್ಲೈನ್ ಮೂಲಕ ಸಭೆಯಲ್ಲಿ ಭಾಗಿಯಾದ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ ಮಾತನಾಡಿ, ಅಮೆರಿಕಾದಲ್ಲಿ 600 ಶೂಟೌಟ್ ಪ್ರಕರಣಗಳು ನಡೆದಿವೆ. ತೈಕ್ಟಣಕ ನೈತಿಕ ಪಾಠ ಈ ಹೊತ್ತಿನಲ್ಲಿ ಅಗತ್ಯವಿದೆ ಎಂದರು.
ಶಿಕ್ಷಕರಿಗೆ ಸರ್ವ ತೋಮುಖವಾದ ಪ್ರತಿಭೆ, ಶಿಕ್ಷಣ, ಮಕ್ಕಳಲ್ಲಿ ಆತ್ಮೀಯತೆ ಭಾವ ಕಲಿಸಿಕೊಡಬೇಕು. ಉತ್ತರ ಭಾರತದಲ್ಲಿ ನಶಾ ಪದಾರ್ಥಗಳು ಹೆಚ್ಚಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಮಕ್ಕಳು ದುಶ್ಚಟಕ್ಕೆ ಬಿದ್ದಿದ್ದಾರೆ. ನೆರೆಯ ರಾಜ್ಯದಲ್ಲಿ ಡ್ರಗ್ ಪ್ರಕರಣ ಹೆಚ್ಚಳಗೊಂಡಿದೆ. ನಮ್ಮ ರಾಜ್ಯದಲ್ಲಿ ಡ್ರಗ್ ಸಮಸ್ಯೆ ಇಲ್ಲ ಆದರೆ ನಗರದಲ್ಲಿ ಬೆಳೆಯಲು ಶುರುವಾಗಿದೆ.ಸಂತೋಷದ ವಾತಾವರಣದಲ್ಲಿ ಮಕ್ಕಳ ಕಲಿಕೆ ನಡೆಯಬೇಕು. ನರ್ಸರಿಯಲ್ಲಿ ದಿನಕ್ಕೆ 400 ಸಲ ಮುಗುಳು ನಗುತ್ತದೆ. ಬೆಳೆಯುತ್ತಾ ಕೇವಲ 17 ಸಲಮುಗುಳು ನಗುತ್ತಾರೆ. ಹಿಂಸೆಯಲ್ಲಿ ತೊಡಗಿದವರಿಗೆ ಇವತ್ತು ಹಿರೋ ಪಟ್ಟಕೊಡಲಾಗಿದೆ ಎಂದರು.
ನಮ್ಮ ಕಾಲದಲ್ಲಿ ಶಾಂತ ಸ್ಹರೂಪಿಗೆ ಹಿರೋ ಎಂದು ಹೇಳಿಕೊಡಲಾಗಿತ್ತು. ಶಿಕ್ಷಕರು ಮಾತ್ರ ಅಲ್ಲ ಪೋಷಕರಿಗೂ ಸೆಮಿನಾರ್ ಗಳನ್ನು ಆಯೋಜಿಸಬೇಕು. ಮಕ್ಕಳ ಮೇಲೆ ಶೇಕಾಡ 25% ಪ್ರಭಾವ ಪೋಷಕರಾದ್ದಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಕ್ಷ ಕಸ್ತೂರಿ ರಂಗನ್ ಮಾತನಾಡಿ, ದೇಶದ ಸಂಸ್ಕೃತಿಗೆ ಗುರುಗಳ ಪಾತ್ರ ಪ್ರಧಾನವಾಗಿರುತ್ತದೆ. ಹಾಗಾಗಿ ಸಭೆಯಲ್ಲಿ ಭಾಗಿಯಾಗಿರುವ ಎಲ್ಲರ ಅಭಿಪ್ರಾಯ ಪ್ರಮುಖವಾಗುತ್ತದೆ ಎಂದರು.
ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಸಮಾಜದಲ್ಲಿ ಮೌಲ್ಯ ಕುಸಿದಿದೆ ಎಂಬುದು ಸಾಮಾನ್ಯವಾಗಿ ಹೇಳುತ್ತೇವೆ. ಅನೇಕ ಸ್ವಾಮೀಜಿಗಳ ಬಳಿ ಹೋದಾಗ ಮೌಲ್ಯ ಕುಸಿತದ ಬಗ್ಗೆ ಶಿಕ್ಷಣದ ಪಾತ್ರ ಏನಿರಬೇಕು ಎಂದು ಕೇಳುತ್ತಿದ್ದರು. ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಬೇಕು.ಈ ದೇಶದಲ್ಲಿ ಮೌಲ್ಯ ಕುಸಿಯುತ್ತಿದೆ . ಕುಟುಂಬದಿಂದ ಶುರುವಾಗಿ ಆ ಮಗು ಆಚೆ ಬಂದ ಮೇಲೆ ಮಂದಿರ ಮಠ ಮೌಲ್ಯವನ್ನು ಕೊಡುತ್ತಿದ್ದವು. ಆದರೆ ಬೇರೆ ಬೇರೆ ಕಾರಣಗಳಿಂದ ಮೌಲ್ಯ ಕುಸಿಯುತ್ತಿದೆ. ಇದನ್ನು ಮನಗಂಡು ಈ ಸಭೆ ನಡೆಸಲಾಗಿದೆ ಎಂದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮಿಗಳು ವಿವಿಧ ಮಠಾಧೀಶರು,ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ನಾಗೇಶ್, ಸಭಾಧ್ಯಕ್ಷ ವಿಶ್ವೆಶ್ವರ ಕಾಗೇರಿ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಗಣ್ಯರು ಪ್ರಮುಖರು ಭಾಗಿಯಾಗಿದ್ದರು.