ಬಯಲು ಬಯಲನೆ ಬೆರೆತು ನಿರ್ವಯಲಾದ ವಿಜಯಪುರದ ಸಂತ!

  •  
  •  
  •  
  •  
  •    Views  

ನ್ನಡದ ಕಣ್ವ ಎನಿಸಿದ ಬಿ.ಎಂ. ಶ್ರೀಕಂಠಯ್ಯನವರು 1928 ರಲ್ಲಿ ಬಿಜಾಪುರದ ಯಾವುದೋ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೋಗಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಸಮಾರಂಭದ ಸಂಘಟಕರು ಜಗತ್ ಪ್ರಸಿದ್ಧವಾದ ಗೋಳಗುಮ್ಮಟವನ್ನು ತೋರಿಸಲು ಬಯಸಿದ್ದರು. ಅಲ್ಲಿಗೆ ಕರೆದುಕೊಂಡು ಹೋಗಲು ಸಂಘಟಕರು ಮು೦ದಾದಾಗ ಶ್ರೀಕಂಠಯ್ಯನವರು ನೀವು ತೋರಿಸಲು ಬಯಸಿದ ಐತಿಹಾಸಿಕ ಗೋಳಗುಮ್ಮಟಕ್ಕಿಂತಲೂ ನಿಮ್ಮ ಬಿಜಾಪುರದಲ್ಲಿಯೇ ಇನ್ನೊಂದು ದೊಡ್ಡದಾದ ಗೋಳಗುಮ್ಮಟವಿದೆ ಅದನ್ನು ನಾನು ನೋಡಲು ಬಯಸಿದ್ದೇನೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರಂತೆ. ಇದನ್ನು ಕೇಳಿ ಸಂಘಟಕರು ತಮಗೆ ಗೊತ್ತಿಲ್ಲದ ಇನ್ನಾವ ದೊಡ್ಡ ಗುಮ್ಮಟವಿರಬಹುದು ಎಂದು ತಬ್ಬಿಬ್ಬಾಗುತ್ತಾರೆ. ಆ ಗೋಳ ಗುಮ್ಮಟ ಬೇರೆ ಯಾವುದೂ ಅಲ್ಲ ವಚನ ಪಿತಾಮಹರೆನಿಸಿದ ಫ.ಗು ಹಳಕಟ್ಟಿಯವರು ಎಂದು ಬಿ.ಎಂ.ಶ್ರೀಯವರಿಂದ ತಿಳಿದು ಹರ್ಷಚಿತ್ತರಾಗಿ ಅವರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಹಳಕಟ್ಟಿಯವರು “ಮುರುಕಲು ಬಾಡಿಗೆ ಮನೆಯಲ್ಲಿ ಹರಕು ಚಾಪೆಯ ಮೇಲೆ” ಬಸವಾದಿ ಶಿವಶರಣರ ತಾಳೆಗರಿಗಳನ್ನು ಹರಡಿಕೊಂಡು ಕುಳಿತು ಚಾಳೀಸನ್ನು ಕಣ್ಣಿಗೆ ಏರಿಸಿಕೊಂಡು ಮಗ್ನರಾಗಿ ಓದುತ್ತಿರುತ್ತಾರೆ. ಇವರೇ ನಾನು ನೋಡ ಬಯಸಿದ “ವಚನದ ಗೋಳಗುಮ್ಮಟ” ಎಂದು ಬಿ.ಎಂ.ಶ್ರೀ ಉದ್ಗರಿಸುತ್ತಾರೆ. 

ತಾಳೆಗರಿಗಳಲ್ಲಿ ಅಡಗಿದ್ದ ಅಪಾರ ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದ ವಿಜಾಪುರದ ಎರಡನೆಯ “ವಚನ ಗೋಳಗುಮ್ಮಟ” ವಚನ ಪಿತಾಮಹ ಫ.ಗು. ಹಳಕಟ್ಟಿಯವರು. ವಚನ ಸಾಹಿತ್ಯದಲ್ಲಿರುವ ಅಧ್ಯಾತ್ಮಿಕ ಸುಧೆಯನ್ನು ಧರ್ಮಜಿಜ್ಞಾಸುಗಳಿಗೆ ತೃಪ್ತಿಯಾಗುವಂತೆ ನಾಡಿನಾದ್ಯಂತ ತಮ್ಮ ಪ್ರವಚನಗಳ ಮೂಲಕ ಉಣಬಡಿಸಿದ ವಿಜಾಪುರದ ಮೂರನೆಯ “ಅಧ್ಯಾತ್ಮಿಕ ಗೋಳಗುಮ್ಮಟ” ಶ್ರೀ ಸಿದ್ಧೇಶ್ವರ ಸ್ವಾಮಿಗಳವರು. ಅವರು ತೀವ್ರ ಅಸ್ವಸ್ಥರಾಗಿದ್ದಾರೆಂದು ತಿಳಿದು ಹಿಂದಿನ ಸೋಮವಾರ (ಜ.2) ಬಿಜಾಪುರದ ಜ್ಞಾನಯೋಗಾಶ್ರಮಕ್ಕೆ ಹೋದಾಗ ಸಾವಿನ ತೂಗುಯ್ಯಾಲೆಯಲ್ಲಿದ್ದರು. ನಿರ್ಮೋಹಿಯಾದ ಅವರ ಮುಖದಲ್ಲಿ ಯಾವುದೇ ವಿಷಾದದ ಛಾಯೆ ಇರಲಿಲ್ಲ. ಪ್ರಜ್ಞಾವಸ್ಥೆಯಲ್ಲಿ ಇಲ್ಲದ ಅವರನ್ನು ಮಾತನಾಡಿಸಲು ಆಗಲಿಲ್ಲವಲ್ಲಾ ಎಂಬ ವಿಷಾದ ನಮ್ಮನ್ನು ಆವರಿಸಿತ್ತು. ಆಮ್ಲಜನಕದ ಪೂರೈಕೆಯಿಂದ ಅವರು ಸ್ವತಃ ಉಸಿರಾಡುತ್ತಿದ್ದರು. ಯಾವ ಕ್ಷಣದಲ್ಲಾದರೂ ಅವರು ಕೊನೆಯುಸಿರು ಎಳೆಯಬಹುದೆಂದು ವೈದ್ಯರು ಹೇಳಿದರೂ ಅವರ ಸಾವಿನ ಗಳಿಗೆಯನ್ನು ನಿರೀಕ್ಷಿಸುತ್ತಾ ಅಲ್ಲಿಯೇ ವಾಸ್ತವ್ಯ ಮಾಡಲು ಮನಸ್ಸು ಬರಲಿಲ್ಲ. ಇನ್ನೂ ಹೆಚ್ಚು ಕಾಲ ಬದುಕಿ ಉಳಿಯಲಿ ಎಂಬ ಹಾರೈಕೆಯೊಂದಿಗೆ ಸಿರಿಗೆರೆಗೆ ಹಿಂದಿರುಗುತ್ತಿದ್ದಂತೆಯೇ ಅವರ ಸಾವಿನ ದಾರುಣ ಸುದ್ದಿ ಕಿವಿಗೆ ಅಪ್ಪಳಿಸಿತು. ಮರುದಿನ ಮತ್ತೆ ಬಿಜಾಪುರಕ್ಕೆ ಹೋದಾಗ ಬಿಜಾಪುರ ಸೈನಿಕ ಶಾಲೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ವೇದಿಕೆಯ ಮೇಲೆ ಯಾರ ಪರಿವೆಯೂ ಇಲ್ಲದೆ ಸಮಾಧಿಸ್ಥರಾಗಿ ಕುಳಿತಿದ್ದರು. ನಾಡಿನ ಎಲ್ಲ ಪ್ರಮುಖ ಮಠಾಧೀಶರು, ಮುಖ್ಯಮಂತ್ರಿಗಳು ಮತ್ತಿತರ ರಾಜಕೀಯ ಧುರೀಣರು ದುಃಖಭರಿತ ಅಪಾರ ಜನಸಾಗರದ ಮಧ್ಯೆ ನತಮಸ್ತಕರಾಗಿ ಕುಳಿತಿದ್ದರು. ಅಲ್ಲಿ ಸ್ಮಶಾನ ಮೌನ ಆವರಿಸಿತ್ತು ಎನ್ನುವುದಕ್ಕಿಂತ ಭಕ್ತಿಯ ಆರ್ದ್ರ ಭಾವ ಮಡುಗಟ್ಟಿತ್ತು!

ಶ್ರೀ ಸಿದ್ದೇಶ್ವರ ಸ್ವಾಮಿಗಳವರು ಕಾವಿಯನ್ನು ಧರಿಸಿ ಕೊರಳಲ್ಲಿ ರುದ್ರಾಕ್ಷಿ ಧಾರಣೆ ಮಾಡಿ ಸ್ವಾಮಿಗಳಾದವರಲ್ಲ. ಸರಳವಾದ ಶುಭ್ರ ಶ್ವೇತವಸ್ತ್ರಧಾರಿಗಳಾಗಿ ತಮ್ಮ ಪರಿಶುದ್ಧ ನಡೆ-ನುಡಿಗಳಿಂದ ಸ್ವಾಮಿಗಳಾಗಿ ಮಠಾಧೀಶರಿಗಿಂತಲೂ ಹೆಚ್ಚಿನ ಗೌರವಾದರಗಳಿಗೆ ಪಾತ್ರರಾಗಿದ್ದವರು. ಯಾವ ಬಿರುದು ಬಾವಲಿ ಪ್ರಶಸ್ತಿಗಳಿಗೂ ಹಾತೊರೆದವರಲ್ಲ. ದೇಶದ ಅತ್ಯುನ್ನತ “ಪದ್ಮಶ್ರೀ” ಪ್ರಶಸ್ತಿ ಬಂದರೂ ಅದನ್ನು ಗೌರವಯುತವಾಗಿ ಹಿಂದಿರುಗಿಸಿದ ನಿರ್ಮೋಹಿ. 

ಅವರ ಅಧ್ಯಾತ್ಮಿಕ ವಿಚಾರಜ್ಯೋತಿ ನಾಡಿನಾದ್ಯಂತ ಮತ್ತು ವಿಶ್ವಾದ್ಯಂತ ಬೆಳಗಲು ಅವರಿಗೆ ಹಣತೆ-ಎಣ್ಣೆ-ಬತ್ತಿಯಾಗಿ ನೆರವಾದವರು ಶ್ರೀ ಸುತ್ತೂರು ಜಗದ್ಗುರುಗಳವರು. ಮೈಸೂರು ಮಹಾರಾಜರ ರಾಜಲಾಂಛನ “ಗಂಡಭೇರುಂಡ” ಪಕ್ಷಿಯಂತೆ ಇಬ್ಬರದೂ ಅಧ್ಯಾತ್ಮಿಕ ಅವಿನಾಭಾವ ಸಂಬಂಧ. 

ಶ್ರೀ ಸಿದ್ಧೇಶ್ವರ ಸ್ವಾಮಿಗಳು ಜನ್ಮವೆತ್ತಿದ ಊರು “ಬಿಜ್ಜರಗಿ”. ಅವರು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರ ಶಿಷ್ಯರಾಗಿ ಮನೆ ಬಿಟ್ಟು ಬಿಜಾಪುರದ ಜ್ಞಾನ ಯೋಗಾಶ್ರಮವನ್ನು ಸೇರಿದ ಮೇಲೆ ಮತ್ತೆ ತಮ್ಮ ಊರಿನತ್ತ ಎಂದೂ ತಿರುಗಿ ನೋಡಿದವರಲ್ಲ. ಆದರೆ ತಮ್ಮ ಹುಟ್ಟಿದೂರಿನ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರ ಸಂಕಟವನ್ನು ಬಲ್ಲವರಾಗಿದ್ದರು. “ತಿಕೋಟಾ ಮತ್ತು ಸಾವಳಗಿ ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಭೂಮಿ ಬರಡು. ಆದರೆ ಬಂಗಾರದ ಬೆಲೆಯುಳ್ಳದ್ದು. ಇದಕ್ಕೆ ನೀವು ಬೊಗಸೆ ನೀರು ಕೊಟ್ಟರೆ ಸಾಕು, ಇದು ಅಮೇರಿಕಾದ ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ” ಎಂದು ಸಭೆಯೊಂದರಲ್ಲಿ ಕಿವಿಮಾತು ಹೇಳಿದ್ದನ್ನು ಕೇಳಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ಎಂ.ಬಿ ಪಾಟೀಲರು ನೀರಾವರಿ ಸಚಿವರಾಗಿದ್ದಾಗ ನೀರು ಹರಿಸಲು ಎತ್ತರದ ಪ್ರದೇಶವಾಗಿದ್ದರೂ ಕಾರ್ಯರೂಪಕ್ಕೆ ತಂದರು. 3600 ಕೋಟಿ ರೂಗಳ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯಡಿಯಲ್ಲಿ ಬಿಜ್ಜರಿಗೆ ಗ್ರಾಮದ ಕೆರೆ ತುಂಬಿದಾಗ ಅದರ ಉದ್ಘಾಟನೆಗೆಂದು ಶ್ರೀ ಸಿದ್ಧೇಶ್ವರ ಸ್ವಾಮಿಗಳನ್ನು ಆಹ್ವಾನಿಸಿದಾಗ ಅವರು ತಮ್ಮ ಹುಟ್ಟಿದೂರಿಗೆ ಬರಲು ಒಪ್ಪಲಿಲ್ಲವಂತೆ. ಆಗ ವ್ಯಾವಹಾರಿಕ ಜಾಣ್ಮೆಯುಳ್ಳ ಎಂ.ಬಿ. ಪಾಟೀಲರು ಸುತ್ತೂರು ಶ್ರೀಗಳವರನ್ನು ಆಹ್ವಾನಿಸಿ ಸಿದ್ಧೇಶ್ವರ ಸ್ವಾಮಿಗಳವರನ್ನು ಬರುವಂತೆ ಮಾಡಿಕೊಂಡರಂತೆ. 

ಇನ್ನು ಶ್ರೀ ಸಿದ್ದೇಶ್ವರ ಸ್ವಾಮಿಗಳವರು 2014 ರಷ್ಟು ಹಿಂದೆಯೇ ಗುರುಪೂರ್ಣಿಮೆಯಂದು ಬರೆದಿಟ್ಟಿದ್ದ ಉಯಿಲು ಪತ್ರ ಯಾರ ಊಹೆಗೂ ನಿಲುಕದ್ದು. ಸಾಮಾನ್ಯವಾಗಿ ಎಲ್ಲರೂ ಬರೆದಿಡುವುದು ಅಥವಾ ಮರಣಶಯ್ಯೆ ಯಲ್ಲಿದ್ದಾಗ ಒತ್ತಾಯಪೂರ್ವಕವಾಗಿ ಸಂಬಂಧಿಕರು ಬರೆಸಿಕೊಳ್ಳುವುದು ಅವರು ಹೊಂದಿದ ಆಸ್ತಿಪಾಸ್ತಿಗಳನ್ನು. ಆದರೆ ಶ್ರೀ ಸಿದ್ದೇಶ್ವರ ಸ್ವಾಮಿಗಳವರು ಬರೆದಿಟ್ಟಿರುವುದು ಅಧ್ಯಾತ್ಮಿಕ ಉಯಿಲು. ಅದರಲ್ಲಿರುವ ಮುಖ್ಯಾಂಶಗಳು: 

  • ಬದುಕು ಮುಗಿಯುತ್ತದೆ; ದೀಪ ಆರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ.
  • ಉಳಿಯುವುದು ಬರೀ ಬಯಲು. ಮಹಾ  ಮೌನ, ಶೂನ್ಯ ಸತ್ಯ! 
  • ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ,  ನೋಡಿ ತಿಳಿದು ಅನುಭವಿಸಿದ್ದೇನೆ. 
  • ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. 
  • ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಗೆ ಅರ್ಪಿತ ಮಾಡಬೇಕು. 
  • ಯಾವ ಶ್ರಾದ್ಧ ವಿಧಿ-ವಿಧಾನಗಳೂ ಅನಗತ್ಯ, 
  • ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು,

ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು ಎಂದು ಎಲ್ಲರಿಗೂ ವಿದಾಯ ಹೇಳಿ ತಮ್ಮ ಅಂತಿಮ ಅಪೇಕ್ಷೆಯನ್ನು ವ್ಯಕ್ತಪಡಿಸಿ ನಿರ್ವಯಲಾಗಿದ್ದಾರೆ. ಅವರ ಅಪೇಕ್ಷೆಯಂತೆ ಜ್ಞಾನಯೋಗಾಶ್ರಮದ ಒಳ ಆವರಣದಲ್ಲಿ ಪೂರ್ಣತ್ವವನ್ನು ಪ್ರತಿಬಿಂಬಿಸುವ ವೃತ್ತಾಕಾರದ ಕಟ್ಟೆಯ ಮೇಲೆ ಅವರ ಶರೀರ ಆಗ್ನಿಗೆ ಆಹುತಿಗೊಂಡು ಧಗಧಗಿಸಿ ಉರಿಯು ತ್ತಿರುವುದನ್ನು ಸುತ್ತೂರು, ಗದಗ, ರಾಮಕೃಷ್ಣಾಶ್ರಮ ಮತ್ತಿತರ ಶ್ರೀಗಳ ಜೊತೆಗೆ ನೋಡುತ್ತಾ ಕೂತಿದ್ದ ನಮಗೆ ನೆನಪಾಗಿದ್ದು ವೀರವಿರಾಗಿಣಿ ಅಕ್ಕಮಹಾದೇವಿ ಮತ್ತು ಅನುಭಾವಿ ಅಲ್ಲಮನ ಈ ಮುಂದಿನ ವಚನಗಳು:

ಚೆನ್ನಮಲ್ಲಿಕಾರ್ಜುನನ ಅರಿದ ಬಳಿಕ
ಆ ಕಾಯವ ನಾಯಿ ತಿಂದರೇನು
ನೀರು ಕುಡಿದರೇನು?
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು 
ಬಯಲು ಬಯಲಾಗಿ ಬಯಲಾಯಿತ್ತಯ್ಯಾ....
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.14-1-2023.