ಕೈಗಾರಿಕರಣಕ್ಕೆ ರೈತರ ಭೂ ಸ್ವಾಧೀನದಿಂದ ಅನ್ನದಾತನ ಬದುಕು ಅತಂತ್ರ : ಶ್ರೀ ತರಳಬಾಳು ಜಗದ್ಗುರುಗಳವರ ಆತಂಕ

  •  
  •  
  •  
  •  
  •    Views  

ತಿಪಟೂರು  14-01-2023 : ರಾಜ್ಯದಲ್ಲಿ ಕೈಗಾರಿಕರಣದ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಭೂಮಿಯಯನ್ನು ಖಾಯಂ ಆಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ರೈತರು ಅತಂತ್ರರಾಗುತ್ತಾರೆ. ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು.

ತಿಪಟೂರಿನ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವ ಉದ್ಘಾಟಿಸಿ ಸಾನ್ನಿಧ್ಯವಹಿಸಿ ಆಶೀರ್ವಚನ ದಯಪಾಲಿಸಿದ ಶ್ರೀ ಜಗದ್ಗುರುಗಳವರು  ರಾಜ್ಯಸರ್ಕಾರ ಕೂಡಲೇ ಇದನ್ನು ನಿಲ್ಲಿಸಿ ರೈತರ ಜಮೀನನ್ನು ಖಾಯಂ ಸ್ವಾಧೀನಪಡಿಸಿಕೊಳ್ಳದೇ ರೈತರ ಜಮೀನನನು ಪಡೆದರೂ ರೈತರ ಹೆಸರಿನಲ್ಲಿ ಭೂಮಿ ಇರುವಂತೆ ಗೊತ್ತುವಳಿ ವಿಧೇಯಕ ಮಂಡಿಸಬೇಕು. ಪ್ರತಿ ತಿಂಗಳು ಜಮೀನಿನಲ್ಲಿ ಬೆಳೆಯುವ ಬೆಳೆಯ ಆಧಾರದಲ್ಲಿ ವಂತಿಕೆಯನ್ನು ನೀಡುವ ಕಾರ್ಯವಾಗಬೇಕಿದೆ. ವಿದೇಶಗಳಲ್ಲಿ ಈಗಾಗಲೇ ಈ ರೀತಿಯಲ್ಲಿ ಭೂಮಿಯ ಬಳಕೆ ಪ್ರಾರಂಭವಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿ ಸಾಮಾಜಿಕ ಕ್ರಾಂತಿ, ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಸಂಚಾರ ಮಾಡುವ ಮೂಲಕ ಪಸರಿಸುತ್ತಾ ಸಮಾಜದ ಉದ್ಧಾರಕ್ಕಾಗಿ ಕ್ರಾಂತಿ ಮಾಡಿದವರು ಶರಣರಾಗಿದ್ದಾರೆ. ಪ್ರತಿಯೊಬ್ಬ ಶರಣ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಿದ್ಧರಾಮ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತ್ಯ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ರಾಜಶೇಖರಪ್ಪರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾರ್ಜುದ ದೇಶೀಕೇಂದ್ರ ಸ್ವಾಮೀಜಿ, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ, ಸಚಿವ ಗೋವಿಂದ ಎಂ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರುಗಳು ಭಾಗವಹಿಸಿದ್ದರು.

ತಿಪಟೂರಿನ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.

ಜಯಂತಿ ಮಹೋತ್ಸವದಲ್ಲಿ ಬೆಳಿಗ್ಗೆ ಧ್ವಜಾರೋಹಣ ಮೂಲಕ ಪ್ರಾರಂಭವಾಗಿ ಪೂರ್ಣ ಕುಂಭ ಸ್ವಾಗತದ ಮೂಲಕ, ಜಾನಪದ ನೃತ್ಯ ಕಲೆಗಳ ಪ್ರದರ್ಶನದೊಂದಿಗೆ ಗೋಡೆಕೆರೆಯ ಸಿದ್ಧರಾಮೇಶ್ವರರನ್ನು ವೇದಿಕೆ ಕರೆತರಲಾಯಿತು.

ಜಯಂತಿಯ ಅಂಗವಾಗಿ ರಾಜ್ಯಮಟ್ಟದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ವಿಭಿನ್ನ ಬಗೆಯ ತಂತ್ರಜ್ಞಾನಗಳ ಪರಿಚಯ, ಪ್ರದರ್ಶನ, ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ವಿವಿಧ ಪ್ರಕಾಶನದ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.