ಭೂ ಒಡೆಯನಾದ ರೈತನು ಕೈಗಾರಿಕೋದ್ಯಮಿಗಳ ಆಳಾಗದಿರಲಿ!

  •  
  •  
  •  
  •  
  •    Views  

ಇಂದು 74ನೆಯ ಗಣರಾಜ್ಯೋತ್ಸವ. ದೇಶವು ಸ್ವತಂತ್ರಗೊಂಡಾಗ ಅದಕ್ಕೊಂದು ಸಂವಿಧಾನವನ್ನು ರೂಪಿಸುವುದು ಕಠಿಣವಾದ ಸವಾಲಾಗಿತ್ತು. ಡಾ. ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಇಡೀ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೇ ಅತ್ಯದ್ಭುತವಾಗಿದೆ ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯ. ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನಲ್ಲಿ ನಡೆದ “International Peace, Security and Human Development” ಕುರಿತು ಏರ್ಪಾಡಾಗಿದ್ದ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಟ್ರಿನಿಡ್ಯಾಡ್ ದೇಶದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಬೆಳಗಿನ ಉಪಾಹಾರದ ವೇಳೆ ಪರಿಚಿತರಾದರು. ನಿವೃತ್ತಿಯ ನಂತರ ಅವರು ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದವರು. ಟ್ರಿನಿಡ್ಯಾಡ್ ನಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಮ್ಮ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿದ್ದರಂತೆ. ಮಾತಿನ ಸಂದರ್ಭದಲ್ಲಿ ಅವರು ನಮ್ಮ ದೇಶದ ಸಂವಿಧಾನವನ್ನು ಕುರಿತು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದು ನಮಗೆ ಹೆಮ್ಮೆಯನ್ನುಂಟು ಮಾಡಿತು.

ಸಂಭಾಷಣೆ ಮುಂದುವರಿದು ಆತ್ಮೀಯ ಸ್ವರೂಪವನ್ನು ಪಡೆದಾಗ ನೇರವಾಗಿ ಅವರ ಮುಂದಿಟ್ಟ ನಮ್ಮ ಪ್ರಶ್ನೆ: “ಜಗತ್ತಿನ ನಾನಾ ದೇಶಗಳಿಂದ ಮಾಜಿ ಪ್ರಧಾನಿಗಳು/ರಾಷ್ಟ್ರಾಧ್ಯಕ್ಷರುಗಳು/ ರಾಜಕೀಯ ನೇತಾರರು ಈ ಶೃಂಗ ಸಮ್ಮೇಳನಕ್ಕೆ ಬಂದಿದ್ದಾರೆ. ಎಲ್ಲರೂ ವಿಶ್ವಶಾಂತಿ ಆಗಲೇಬೇಕು ಎನ್ನುವವರೇ ಹೊರತು ತಾವು ಅಧಿಕಾರದಲ್ಲಿದ್ದಾಗ ಶಾಂತಿ ಸ್ಥಾಪನೆಗೆ ಮಾಡಿದ ಪ್ರಯತ್ನ ಮತ್ತು ಅದಕ್ಕೆ ಎದುರಾದ ಅಡ್ಡಿ ಆತಂಕಗಳೇನೆಂದು ಯಾರೂ ಹೇಳುತ್ತಿಲ್ಲವೇಕೆ?” ಎಂದು ಕೇಳಿದಾಗ ನಿವೃತ್ತ ನ್ಯಾಯಾಧೀಶರು ಮುಗುಳ್ನಗುತ್ತಾ ತಟ್ಟನೆ ಉತ್ತರಿಸಿದರು: “Swamiji, Power is different from Service. Unless political leaders in power have a service motive, peace cannot be achieved!" “ಅಧಿಕಾರ ಮತ್ತು ಸೇವೆ ಎರಡೂ ಭಿನ್ನ. ಅಧಿಕಾರವುಳ್ಳ ರಾಜಕೀಯ ನೇತಾರರಲ್ಲಿ ಸೇವಾ ಮನೋಭಾವ ಇಲ್ಲ. ಸೇವಾ ಮನೋಭಾವ ಇರುವವರಲ್ಲಿ ಅಧಿಕಾರವಿಲ್ಲ. ಅಧಿಕಾರ ಮತ್ತು ಸೇವೆ ಎರಡೂ ಒಂದೆಡೆ ಸಮ್ಮಿಳಿತಗೊಳ್ಳದ ಹೊರತು ಶಾಂತಿ ನೆಲೆಸಲು ಸಾಧ್ಯವಿಲ್ಲ” ಎಂಬುದು ಆ ನ್ಯಾಯಮೂರ್ತಿಗಳ ಮಾತಿನ ಆಶಯ.

ನಮ್ಮ ಸಂವಿಧಾನದ ಪೀಠಿಕೆಯಲ್ಲಿ (Preamble) ಪ್ರಸ್ತಾಪಿಸಿರುವ ಸಾಮಾಜಿಕ-ಧಾರ್ಮಿಕ ಸಮಾನತೆ, ಸ್ತ್ರೀ-ಪುರುಷ ಸಮಾನತೆ, ಕಂದಾಚಾರಗಳ ನಿರ್ಮೂಲನೆ, ಆರ್ಥಿಕ ವ್ಯವಸ್ಥೆ, ಆತ್ಮಗೌರವ, ಅಭಿವ್ಯಕ್ತಿ ಸ್ವಾತಂತ್ರ್ಯ ಮೊದಲಾದ ಪ್ರಮುಖ ಅಂಶಗಳೆಲ್ಲವೂ ಬಸವಾದಿ ಶಿವಶರಣರ ವಚನಗಳಲ್ಲಿ ಕಾಣಬರುತ್ತವೆ. ಒಂದು ರೀತಿಯಲ್ಲಿ ನಮ್ಮ ದೇಶದ ಸಂವಿಧಾನದ ತಾಯಿಬೇರು ಮತ್ತು ಪ್ರಜಾಪ್ರಭುತ್ವದ ಪ್ರತಿರೂಪ ಬಸವಾದಿ ಶಿವಶರಣರ ವಚನ ಸಾಹಿತ್ಯ ಮತ್ತು ಅನುಭವ ಮಂಟಪದಲ್ಲಿವೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಕಳೆದ ಏಳು ದಶಕಗಳಲ್ಲಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ನಮ್ಮ ಸಂವಿಧಾನಕ್ಕೆ ಅನೇಕ ತಿದ್ದುಪಡಿಗಳನ್ನು ತರಲಾಗಿದೆ. 

ಅವುಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಂವಿಧಾನ ಜಾರಿಗೆ ಬಂದ ಆರಂಭದ ವರ್ಷ ಮತ್ತು ನಂತರದ ವರ್ಷಗಳಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಕೆಲವೇ ಕೆಲವರು ಜಮೀನುದಾರರ ವಶದಲ್ಲಿದ್ದ ಅಪಾರ ಜಮೀನುಗಳನ್ನು “ಉಳುವವನೇ ಒಡೆಯ” ಎಂದು ಬಡ ರೈತರ ಪರವಾಗಿ ಮಹತ್ತರವಾದ ಬದಲಾವಣೆ ತಂದದ್ದು ಒಂದು ವಿಶೇಷ.

ಆದರೆ ಈಗ ಏನಾಗುತ್ತಿದೆ? ಉಳುವವನೇ ಒಡೆಯನಾಗಿದ್ದ ಬಡ ರೈತನ ಜಮೀನುಗಳನ್ನು ಕೈಗಾರಿಕೋದ್ಯಮಗಳಿಗೆ ಕಡ್ಡಾಯವಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಸರಕಾರ ರೈತರ ಪರವಾಗಿ ಕೋಟ್ಯಂತರ ರೂಗಳ ಅನೇಕ ಏತ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ಕಾರಣ ಮಂದಹಾಸ ಮೂಡಿದ್ದ ರೈತರ ಮುಖ ಮತ್ತೆ ಕಮರಿದಂತಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಾಗ ನೀರಿನ ಹಾಹಾಕಾರವಿತ್ತು. ಈಗ ನೀರಿನ ಪೂರೈಕೆಯಾಗಿದ್ದು ತೋಟ ತುಡಿಕೆ ಮಾಡುವ ಆಸೆ ಹೊಂದಿದ್ದ ರೈತರ ಕನಸುಗಳು ಭಗ್ನಗೊಂಡಿವೆ. ಈ ದೇಶದ ಬೆನ್ನೆಲುಬು ರೈತ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಭೂಸ್ವಾಧೀನದಿಂದ ಆತನ ಬೆನ್ನೆಲುಬು ಮುರಿದು ಅನ್ನದಾತ ಬೀದಿಯ ಭಿಕಾರಿಯಾಗುವ ದುಸ್ಥಿತಿ ಬಂದಿದೆ. ಅವನಿಗೆ ಕೃಷಿಕಾಯಕವನ್ನು ಬಿಟ್ಟರೆ ಬೇರೆ ಯಾವ ಉದ್ಯೋಗ ಮಾಡಲೂ ಅವನಿಂದ ಸಾಧ್ಯವಿಲ್ಲ. “ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೋ? ಬೇಯದ ಅಶನವನುಂಬ ಠಾವಾವುದು ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗಕ್ಕೆ?” ಎಂದು ಶಿವಯೋಗಿ ಸಿದ್ಧರಾಮರು ಪರಿತಪಿಸಿದಂತಾಗಿದೆ. ಹಾಗಾದರೆ ದೇಶದ ಅಭಿವೃದ್ಧಿಗೆ ಕೈಗಾರೀಕರಣ ಆಗಬಾರದೇ? ಕೋರೋನಾ ಕಾಲದಲ್ಲಿ ಎಷ್ಟೋ ಕೈಗಾರಿಕೆಗಳು ಮುಚ್ಚಿಹೋದವು. ಆಗ ಈ ದೇಶದ ಜನರಿಗೆ ಅನ್ನ ನೀಡಿ ಹಸಿವು ತಣಿಸಿದಾತ ರೈತ. ಅಂತಹ ರೈತನನ್ನು ಬದುಕಿಸುವ ಬಗೆ ಹೇಗೆ? ಪರಿಹಾರ ಧನವನ್ನು ಕೊಟ್ಟ ಮಾತ್ರಕ್ಕೇ ಅವನು ಬೇರೊಂದು ಬದುಕು ಕಟ್ಟಿಕೊಳ್ಳಲು ಆಗುವುದಿಲ್ಲ. ಕಂಪನಿಗಳಲ್ಲಿ ಕೆಲಸ ಕೊಡುವ ಭರವಸೆ ಮೃಗ ಮರೀಚಿಕೆಯಾಗಿದೆ. ಎಷ್ಟೋ ಕಂಪನಿಗಳು ಕಡಿಮೆ ಹಣದಲ್ಲಿ ಜಮೀನನ್ನು ಪಡೆದು ಭೂಮಾಲೀಕರಾಗಿ ಯಾವ ಕ೦ಪನಿಯನ್ನೂ ನಡೆಸದೆ ಹೆಚ್ಚಿನ ಹಣಕ್ಕೆ ಭೂಮಿಯನ್ನು ಮಾರಿದ ಉದಾಹರಣೆಗಳು ಇವೆ. ರೈತನೂ ಬದುಕಬೇಕು, ಕೈಗಾರಿಕೆಗಳೂ ನಡೆಯಬೇಕು. ಈ ನಿಟ್ಟಿನಲ್ಲಿ ಹೊಸತೊಂದು ಚಿಂತನೆ ನಡೆಯಬೇಕಾಗಿದೆ. ನಮ್ಮ ಚಿಂತನೆಯಲ್ಲಿ:  

  • ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದ ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಂಡನೆಂಬ ಹತಾಶ ಭಾವನೆ ರೈತನ ಹೃದಯದಲ್ಲಿ ಮೂಡಬಾರದು. 
  • ರೈತನು ತನ್ನ ಜಮೀನಿನ ಖಾಯಂ ಒಡೆಯನಾಗಿರಬೇಕು: ಕಂಪನಿಗಳ ಆಳಾಗಬಾರದು.
  • ರೈತನನ್ನು ಕಂಪನಿಯ ಪಾಲುದಾರನನ್ನಾಗಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ; ಕಂಪನಿಯ ಲಾಭಾಂಶವೂ ಅವನಿಗೆ ಬೇಕಾಗಿಲ್ಲ, ಅದು ಅವನಿಗೆ ತಿಳಿಯುವುದೂ ಇಲ್ಲ.
  • ರೈತನು ಪ್ರತಿ ವರ್ಷ ತನ್ನ ಭೂಮಿಯನ್ನು ಸ್ವತಃ ಉಳುಮೆ ಮಾಡಿದಾಗ ಏನು ಉತ್ಪನ್ನ ಬರುತ್ತಿತ್ತೋ ಅಷ್ಟು ಆದಾಯವನ್ನು ಕೈಗಾರಿಕಾ ಕಂಪನಿಗಳು ರೈತನಿಗೆ ತಿಂಗಳಿಗೋ, ತ್ರೈಮಾಸಿಕವಾಗಿಯೋ, ವಾರ್ಷಿಕವಾಗಿಯೋ ಸತಾಯಿಸದೆ ಕೊಡುವಂತಾಗಬೇಕು. ಇದರಿಂದ ಕಂಪನಿಗೂ ಹೆಚ್ಚು ಬಂಡವಾಳ ಬೇಕಾಗಿಲ್ಲ: ರೈತನೂ ಸುಖವಾಗಿರುತ್ತಾನೆ.
  • ಅಂತಹ ಒಂದು ಒಡಂಬಡಿಕೆ (MOU) ರೈತ ಮತ್ತು ಕಂಪನಿಗಳ ಮಧ್ಯೆ ಆಗಬೇಕು.
  • ಕಂಪನಿಗಳು ಮುಚ್ಚುವ ಪರಿಸ್ಥಿತಿ ಬಂದರೆ ಕಂಪನಿಯ ಕಟ್ಟಡಗಳು, ಉಪಕರಣಗಳನ್ನು ಹರಾಜು ಹಾಕಬೇಕೇ ಹೊರತು ರೈತನ ಜಮೀನನ್ನು ಹರಾಜು ಹಾಕಬಾರದು.
  • ರೈತನ ಜಮೀನು ರೈತನಿಗೇ ಉಳಿಯಬೇಕು. ಅವನು ತನ್ನ ಭೂಮಿಯ ಖಾಯಂ ಒಡೆಯನಾಗಿ ಮುಂದುವರಿಯಬೇಕು. ಆಗ ರೈತ ಭಾರತದ ಭುಜಬಲ ಚಕ್ರವರ್ತಿಯಾಗುತ್ತಾನೆ.

ಇಂತಹ ಒಂದು ತಿದ್ದುಪಡಿಯನ್ನು ಸಂವಿಧಾನಕ್ಕೆ ತಂದರೆ ಈ ದೇಶದ ಅನ್ನದಾತ ನೆಮ್ಮದಿಯಿ೦ದ ಬದುಕಿಯಾನು. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ರವರು ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿಗಳನ್ನು ಕುರಿತು ಹೇಳಿದ ಒಂದು ಕಿವಿಮಾತು ಇಲ್ಲಿ ಉಲ್ಲೇಖನಾರ್ಹ: “ಸಂವಿಧಾನ ಒಂದು ಫಲವತ್ತಾದ ಭೂಮಿ. ಆದರೆ ಅದನ್ನು ಸರಿಯಾಗಿ ಉತ್ತುವವರು ಬಿತ್ತುವವರು ಯಾರೂ ಇಲ್ಲದಿದ್ದರೆ ಹೇಗೆ? ಅಂತಹ ಪರಿಸ್ಥಿತಿ ನಮ್ಮ ಸಂವಿಧಾನಕ್ಕೆ ಬರದಿರಲಿ!” ಸಂವಿಧಾನ ಶಿಲ್ಪಿಯಾದ ಡಾ. ಅಂಬೇಡ್ಕರ್ ರವರಿಗೆ ಒಮ್ಮೆ ಪೂನಾ ಭಾಂಡಾರ್ಕರ್ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಒಂದು ಪ್ರಶ್ನೆಯನ್ನು ಕೇಳಲಾಯಿತಂತೆ: “ನಮ್ಮ ಸಂವಿಧಾನವು ಸರಿ ಇಲ್ಲವೆಂದು ಕಂಡುಬಂದರೆ, ಮತ್ತೊಂದು ಸಂವಿಧಾನವನ್ನು ರಚಿಸಬಹುದೇ?” ಅದಕ್ಕೆ ಅಂಬೇಡ್ಕರ್ ರವರು ಕೊಟ್ಟ ಉತ್ತರ:

"A worst constitution with the best people will work the best and the best constitution with the worst people will fall down on its own like a pack of cards!"

(ಒಂದು ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಒಳ್ಳೆಯ ಜನರಿದ್ದರೆ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಅದೇ ಒಂದು ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಜನರು ತುಂಬಾ ಕೆಟ್ಟವರಾಗಿದ್ದರೆ ಅದು ಜೋಪಾನವಾಗಿ ಜೋಡಿಸಿಟ್ಟಿದ್ದ ಕಾರ್ಡುಗಳಂತೆ ತನಗೆ ತಾನೇ ಕುಸಿದು ಬೀಳುತ್ತದೆ!).

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.26-1-2022.