ತರಳಬಾಳು ಹುಣ್ಣಿಮೆ-2023 ಕೊಟ್ಟೂರಿನಲ್ಲಿ ಕುಸ್ತಿ ವೈಭವ

  •  
  •  
  •  
  •  
  •    Views  

ವಿಶ್ವದ ಅತ್ಯಂತ ಪ್ರಾಚೀನ ಮತ್ತು ಹಳೆಯದಾದ ಕ್ರೀಡೆಗಳಲ್ಲಿ ಕುಸ್ತಿಯೂ ಒಂದು. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹೊಂದಿದೆ. ಕುಸ್ತಿ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜನಪ್ರಿಯವಾಗಿದೆ.

ಪ್ರಾಚೀನ ಭಾರತದಲ್ಲಿ ಕುಸ್ತಿಗೆ "ಮಲ್ಲಯುದ್ಧ" ಮತ್ತು ಉತ್ತರ ಭಾರತದಲ್ಲಿ "ದಂಗಲ್" ಎಂದು ಜನಪ್ರಿಯವಾಗಿತ್ತು. ಕ್ರಿ.ಪೂ. 708 ರಲ್ಲಿ ಕುಸ್ತಿಯನ್ನು ಕ್ರೀಡೆಯಾಗಿ ಒಲಿಂಪಿಕ್ ಗೆ ಸೇರಿಸಲಾಯಿತು ಇದು ಪ್ರತಿಷ್ಠಿತ ಮತ್ತು ಹಳೆಯ ಕ್ರೀಡೆಯಾಗಿದೆ.

ಪುರಾಣ ಕಾಲದಲ್ಲಿ ಮಲ್ಲಯುದ್ಧದ ವರ್ಣನೆಯಿದೆ. ಭೀಮ, ದುರ್ಯೋಧನ, ಕೀಚಕ, ಹನುಮಂತ, ಭರತ, ಬಾಹುಬಲಿ ಮಲ್ಲಯುದ್ಧದಲ್ಲಿ ಪ್ರವೀಣರಾಗಿದ್ದರು. ಶ್ರೀಕೃಷ್ಣ ತನ್ನ ಸೋದರ ಮಾವ ಕಂಸನನ್ನು ಕೊಲ್ಲಲು ಮಥುರಾ ನಗರಿಗೆ ಹೋದಾಗ, ಕಂಸನು ಕೃಷ್ಣ ಮತ್ತು ಬಲರಾಮರನ್ನು ಕೊಲ್ಲಿಸಲು ಛಲದಂಕ ಮಲ್ಲರನ್ನು ನೇಮಿಸಿರುತ್ತಾನೆ. ಕೃಷ್ಣ ಭೀಮನಿಗೆ ಮಲ್ಲಯುದ್ದ ಮಾಡುವಂತೆ ಪ್ರೇರೇಪಿಸಿ, ಜರಾಸಂಧನನ್ನು ಕೊಲ್ಲಿಸುತ್ತಾನೆ. ಅಂದಿನ ಮಲ್ಲಯುದ್ಧವೇ ಇಂದು "ಕುಸ್ತಿ" ಎಂಬ ಹೆಸರನ್ನು ಪಡೆದಿದೆ.

ಅಂದಿನ ರಾಜರು ಕುಸ್ತಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಸ್ವತಃ ತಾವೇ ಕುಸ್ತಿಯಲ್ಲಿ ಪರಿಣತಿ ಹೊಂದಿದ್ದರು. ವಿಜಯನಗರ ಅರಸರ ಕಾಲದಲ್ಲಿ ಗರಡಿ ಕಲೆ ಕರ್ನಾಟಕದಲ್ಲಿ ಆರಂಭವಾಗಿತ್ತು, ಸ್ವತಃ ಮಹಾರಾಜ ಶ್ರೀ ಕೃಷ್ಣದೇವರಾಯ ಸೇರಿದಂತೆ ಅನೇಕರು ಅಲ್ಲಿ ಪ್ರಸಿದ್ಧ ಜಟ್ಟಿಗಳಾಗಿದ್ದರು. ಮೈಸೂರಿನಲ್ಲಿ ಸುಮಾರು ಕ್ರಿ.ಶ. 1610 ರಲ್ಲಿ ಆರಂಭವಾದ ನವರಾತ್ರಿ ಉತ್ಸವದಲ್ಲಿ ಕುಸ್ತಿ ಕಲೆ ಪ್ರದರ್ಶಿಸಲ್ಪಟ್ಟಿತ್ತು. ರಾಜ ಮಹಾರಾಜರು ಪ್ರಖ್ಯಾತ ಪೈಲ್ವಾನರನ್ನು ಬೆಳೆಸಿ, ಈ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು. ಶ್ರೀಕೃಷ್ಣ ದೇವರಾಯ, ಶ್ರೀ ರಣಧೀರ ಕಂಠೀರವ ನರಸಿಂಹ ರಾಜ ಒಡೆಯರು, ಮದಕರಿ ನಾಯಕ ಕುಸ್ತಿಯಲ್ಲಿ ಪ್ರಾವಿಣ್ಯತೆ ಹೊಂದಿದ್ದರು.

ಗರಡಿ ಮನೆಯ ಪ್ರಧಾನ ಭಾಗವೆಂದರೆ ಮಟ್ಟಿ. ಅಂದರೆ ಕುಸ್ತಿ ಮಾಡುವ ಸ್ಥಳ. ಗೋದ, ಅಖಾಡ ಎಂದು ಇದನ್ನು ಕರೆಯುತ್ತಾರೆ. ಈ ಮಟ್ಟಿ ಕನಿಷ್ಠ ಹದಿನಾಲ್ಕು ಅಡಿ ಇರುವ ಒಂದು ಚೌಕ. ಇದರಲ್ಲಿ ಇಬ್ಬರು ಕುಸ್ತಿ ಮಾಡಬಹುದು. ಕೆಮ್ಮಣ್ಣು, ಕರ್ಪೂರ, ಕುಂಕುಮ, ಗಂಧದ ಹುಡಿ,ಎಳ್ಳೆಣ್ಣೆ ಮೊದಲಾದ ಸಾಮಗ್ರಿ ಬೆರೆಸಿ ಮಟ್ಟಿಯನ್ನು ತಯಾರಿಸಲಾಗುತ್ತದೆ. ಪೈಲ್ವಾನರು ತಾಲೀಮು ನಡೆಸಿದ ಬಳಿಕ, ಮಟ್ಟಿಯನ್ನು ಆಳವಾಗಿ ತೋಡಿ, ಅದರೊಳಗೆ ಮಲಗಿ ಮುಖವನ್ನು ಬಿಟ್ಟು, ಕತ್ತಿನವರೆಗೆ ಮಣ್ಣು ಮುಚ್ಚಿಕೊಂಡು ವಿಶ್ರಾಂತಿ ಪಡೆಯುತ್ತಾನೆ. ಹೀಗೆ ಮಲಗುವುದರಿಂದ ದೇಹದ ಕಾವು ಕಡಿಮೆಯಾಗುತ್ತದೆ.

ಕುಸ್ತಿ ಪಟುವಿನ ತೂಕ ಹಾಗೂ ವಯಸ್ಸಿನ ಆಧಾರದ ಮೇಲೆ ಅನೇಕ ವಿಭಾಗಗಳನ್ನು ವಿಂಗಡಿಸಿಕೊಂಡು ಪ್ರತಿ ವರ್ಷ "ಮೈಸೂರು ದಸರಾ"ದಲ್ಲಿ ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ದಸರಾ ಕಿಶೋರ, ದಸರಾ ಕುಮಾರ, ದಸರಾ ಕಂಠೀರವ ಪ್ರಶಸ್ತಿ ನೀಡಲಾಗುತ್ತದೆ. ಇವಲ್ಲದೆ ಮಹಾಪೂರ ಕೇಸರಿ, ಕರ್ನಾಟಕ ಕುಮಾರ ಪ್ರಶಸ್ತಿ ನೀಡಲಾಗುತ್ತದೆ. ಪ್ರಸಿದ್ಧ ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗೊಂದಿ ಉತ್ಸವ ಸೇರಿದಂತೆ ಅನೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸಿ, ಸರ್ಕಾರ ಪ್ರಶಸ್ತಿಗಳನ್ನು ನೀಡಿ, ಪ್ರೋತ್ಸಾಹಿಸುತ್ತಿದೆ.

ಹಿಂದಿನ ಕಾಲದ ಗರಡಿಮನೆಯಲ್ಲಿ ಕೈಹಿಡಿ, ಮಣೆ, ಮಲ್ಲಕಂಬ, ಹುಗಿದಿರುವ ಮಲ್ಲಕಂಬ, ಬೆತ್ತದಮಲ್ಲಕಂಬ. ಡಂಬೆಲ್ಲು, ಗದೆ ಅಥವಾ ಲೋಡು, ಬಳಪದ ಕಲ್ಲಿನ ಗಾಲಿ, ರಂಧ್ರವಿರುವ ದಪ್ಪನೆ ಕಬ್ಬಿಣದ ಗುಂಡು, ಗುದ್ದಲಿ ಮುಂತಾದ ವ್ಯಾಯಾಮ ಸಾಮಗ್ರಿಗಳು ಇರುತ್ತಿದ್ದವು. ದಂಡೆ ಒತ್ತುವುದು, ಬಸ್ಕಿ ಹೊಡೆಯುವುದು ಮತ್ತು ಮಟ್ಟಿ ಕುರಾಯಿಸುವುದು ಪ್ರಧಾನ ವ್ಯಾಯಾಮಗಳಾಗಿದ್ದವು.

ಇದೀಗ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಡಿಮೆಯಾಗಿರುವ ಈ ಗತವೈಭವ ಮರುದರ್ಶನ ಮಾಡಿಸಲು ಶ್ರೀ ತರಳಬಾಳು ಬೃಹನ್ಮಠ ಸಿರಿಗೆರೆ ಯ  ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನದೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೊಟ್ಟೂರು- ವಿಜಯನಗರ ಜಿಲ್ಲೆ ಯಲ್ಲಿ ನಡೆಯುತ್ತಿರುವ (28-01-2023 ರಿಂದ 05-02-2023) ತರಳಬಾಳು ಹುಣ್ಣಿಮೆ-2023 ರ ಅಂಗವಾಗಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲು ಮಾರ್ಗದರ್ಶನ ನೀಡಿರುತ್ತಾರೆ.

ಪೂಜ್ಯರ ಮಾರ್ಗದರ್ಶನದಂತೆ

ಮಹಾಮಂಟಪದ ಎದುರು ಬೃಹದಾಕಾರದ ವಿಶೇಷವಾಗಿ ಕೆಮ್ಮಣ್ಣಿನಿಂದ ತಯಾರಿಸಲ್ಪಟ್ಟ ಕುಸ್ತಿ ಅಖಾಡದಲ್ಲಿ ದಿನಾಂಕ- 04-02-2023 ರಂದು "ರಾಜ್ಯಮಟ್ಟದ ಮುಕ್ತ ಕುಸ್ತಿ ಸ್ಪರ್ಧೆ" ಆಯೋಜಿಸಲಾಗಿರುತ್ತದೆ.

18 ವರ್ಷ ವಯೋಮಿತಿಯ ಮೇಲ್ಪಟ್ಟ 65 ರಿಂದ 74 ದೇಹ ತೂಕವುಳ್ಳ  ಪುರುಷರಿಗೆ "ಶ್ರೀ ತರಳಬಾಳು ಕಂಠೀರವ" ಪ್ರಶಸ್ತಿ ಯೊಂದಿಗೆ "ಬೆಳ್ಳಿಗದೆ" ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುವುದು.

18 ವರ್ಷ ಮೇಲ್ಪಟ್ಟ 61 ರಿಂದ 65 ದೇಹ ತೂಕವುಳ್ಳ ಪುರುಷರಿಗೆ "ಶ್ರೀ ತರಳಬಾಳು ಕೇಸರಿ" ಪ್ರಶಸ್ತಿಯೊಂದಿಗೆ "ಬೆಳ್ಳಿ ಗದೆ" ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುವುದು.

18 ವರ್ಷ ಮೇಲ್ಪಟ್ಟ 57 ರಿಂದ 61 ದೇಹ ತೂಕವುಳ್ಳ ಪುರುಷರಿಗೆ "ಶ್ರೀ ತರಳಬಾಳು ಕುಮಾರ" ಪ್ರಶಸ್ತಿಯೊಂದಿಗೆ "ಬೆಳ್ಳಿಗದೆ" ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುವುದು.

ಈ ಮೇಲ್ಕಂಡ ಮೂರು ವಿಭಾಗಗಳಲ್ಲಿ ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ನೀಡಿ ಗೌರವಿಸಲಾಗುವುದು ಪ್ರತಿ ವಿಭಾಗವು ಆಕರ್ಷಕ ನಗದು ಬಹುಮಾನ, ಪ್ರಶಸ್ತಿ ಪತ್ರ,ಮತ್ತು ಪಾರಿತೋಷಕ ಹೊಂದಿರುತ್ತದೆ.

ಇದಲ್ಲದೆ ದಿನಾಂಕ-05-02-2023 ರಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಪೈಲ್ವಾನರುಗಳಿಂದ ಜೋಡಿ ಕುಸ್ತಿಗಳನ್ನು ಏರ್ಪಡಿಸಲಾಗಿರುತ್ತದೆ ಇ ಕುಸ್ತಿಪಟುಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಆಕರ್ಷಕ ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು.

ವಿಶೇಷ ಸೂಚನೆ:- 

  • 03-02-2023 ಬೆಳಿಗ್ಗೆ 10 ರಿಂದ ಮಧ್ಯಾಹ್ನ 02 ಗಂಟೆವರೆಗೆ ದೇಹ ತೂಕವನ್ನು ಪಡೆಯಲಾಗುವುದು.
  • ನಾಡಿನಲ್ಲಿರುವ ಎಲ್ಲಾ ಕುಸ್ತಿಪಟುಗಳಿಗೂ ಮುಕ್ತ ಅವಕಾಶವಿರುತ್ತದೆ.

ಬನ್ನಿ ಭಾಗವಹಿಸಿ, ಕುಸ್ತಿ ಕ್ರೀಡೆಯನ್ನು ಉಳಿಸಿ, ಬೆಳೆಸಿ ಮತ್ತು ಆಸ್ವಾದಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-(9448415287, 8747969381)


-ಲೇಖಕರು
ಸುಧಾಕರ .ಜಿ .ಲಕ್ಕವಳ್ಳಿ