ತರಳಬಾಳು ಪೀಠ ಉಜ್ಜಿನಿಯಿಂದ ಸಿರಿಗೆರೆಗೆ ಬಂದಿದ್ದು ಹೇಗೆ?
ಪಾಳೆಯಗಾರರು ಲಿಂಗಧಾರಿಗಳಾಗುವ ಸಂಭ್ರಮದಲ್ಲಿ ಈ ಘೋರ ವಿಪತ್ತು ನಮಗೊದಗಿತೆಂದು ನಮ್ಮ ಪರಂಪರೆಯವರು ಹೇಳುತ್ತಿದ್ದಾರೆ. ಆಗ ಉಜ್ಜಯಿನಿಯು ಅಲ್ಲಿನ ಜರಮಲೆಯಂಬ ಪಾಳೆಯಪಟ್ಟಿಗೆ ಸೇರಿದ್ದಿತು. ಹರಪನಹಳ್ಳಿ ಪಾಳೆಯಗಾರರು ಲಿಂಗಧಾರಿ ಯಾಗಲು ಆಗಿನ ಉಜ್ಜಯಿನಿಯ ನಮ್ಮ ಗುರುಗಳವರನ್ನು ಕೇಳಿದನೆಂದೂ, ಆದರೆ ಜರಮಲೆಯ ಪಾಳೆಯಗಾರನು ಅದಕ್ಕೆ ವಿರೋಧಿಸಿದನೆಂದೂ ಈ ನಿಮಿತ್ತವಾಗಿ ಯುದ್ಧವು ನಡೆದು ಜರಮಲೆಯ ನಾಯಕನು ಸೋತಿದ್ದರಿಂದ ಆ ನಾಡು ಶತ್ರುವಶ ವಾಯಿತಾಗಿ ಗುರುಗಳವರು ಖೇದಪಟ್ಟು, ಶತ್ರು ರಾಜ್ಯದಲ್ಲಿರುವುದು ಕ್ಷೇಮಕರವಲ್ಲವೆಂದೂ, ತಮ್ಮ ನಾಯಕನು ವಿಪತ್ತಿಗೊಳಗಾಗಿರುವಾಗ ತಾವು ಆತನ ಅಭಿಮತಕ್ಕೆ ವಿರುದ್ಧವಾಗಿ ಹರಪನಹಳ್ಳಿ ನಾಯಕನಿಗೆ ಲಿಂಗ ಸಂಸ್ಕಾರವನ್ನು ಕೊಡುವುದು ಮಾನವೋಚಿತ ವಾಗಲಾರದೆಂದೂ, ಭಾವಿಸಿ ಆ ಸ್ಥಳವನ್ನು ಬಿಟ್ಟು ತಮ್ಮ ವಂಶಜರೊಂದಿಗೆ ದೇಶಾಟನೆಗೆ ಹೊರಟರು. ಆಗ ಸಾರಂಗಮಠದವರೆಂಬುವರು ತಾವು ಉಜ್ಜಯಿನಿಯ ಪೀಠವನ್ನು ಆಕ್ರಮಿಸಿ ಆ ಹರಪನಹಳ್ಳಿ ನಾಯಕನಿಗೆ ಬಾಳೆಹಳ್ಳಿ, ಶ್ರೀಶೈಲ, ವಗೈರೆ ಪೀಠಾಧಿಪತಿಗಳ ಬೆಂಬಲದಿಂದ ಕೊಟ್ಟೂರಲ್ಲಿ ಲಿಂಗವನ್ನು ಧರಿಸಿದರೆಂದು ತಿಳಿದುಬಂದಿರುತ್ತದೆ. ಸಾರಂಗಮಠದವರು ನಿಜವಾದ ಉಜ್ಜಯಿನಿಯ ಪೀಠಾಧಿಪತಿ ಗಳಾಗಿದ್ದಲ್ಲಿ ತಮ್ಮ ಮೂಲಸ್ಥಾನದಲ್ಲಿ ಅವನಿಗೆ ಲಿಂಗಧಾರಣೆಯನ್ನು ಮಾಡದೆ ಕೊಟ್ಟೂರಲ್ಲಿ ಏಕೆ ಮಾಡಿದರು? ತಾವು ಒಬ್ಬರೇ ಮಾಡದೆ ದೂರದೂರದ ಬಾಳೆಹಳ್ಳಿ, ಶ್ರೀಶೈಲದವರನ್ನು ಏಕೆ ಬರಮಾಡಿ ಕೊಂಡರು? ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅಂದು ಉಜ್ಜಯಿನಿಯಲ್ಲಿ ಶಾಂತಿ ಭಂಗವಾಗಿತ್ತೆಂದೂ ತಾವು ಮುಖ್ಯ ಪೀಠಾಧಿಪತಿಗಳಲ್ಲದವರಾದುದರಿಂದ ಇತರ ಪೀಠಗಳ ಬೆಂಬಲವನ್ನು ಪಡೆಯಬೇಕಾ ಯಿತೆಂದೂ ವ್ಯಕ್ತವಾಗುವುದಿಲ್ಲವೆ? ಈ ಪ್ರಸಂಗದಲ್ಲಿಯೇ ನಮ್ಮವರು ಉಜ್ಜಯಿನಿಯನ್ನು ಬಿಟ್ಟಿರಬೇಕೆಂದು ಊಹಿಸುವುದು ಸಯುಕ್ತಿಕವಾಗಿದೆ. ಈಗಲೂ ಜರಮಲೆಯ ನಾಯಕರ ವಂಶಜರಿದ್ದಾರೆ. ಈಗಲೂ ಅವರಿಗೆ ಮರುಳಸಿದ್ಧನೇ ಮನೆದೇವತೆಯಾಗಿದ್ದಾನೆ. ಈಗಲೂ ಅವರಿಗೆ ದೊರೆಗಳೆಂದೇ ಕರೆಯುತ್ತಿದ್ದಾರೆ. ಪ್ರತಿ ವರ್ಷದಲ್ಲೂ ರಥೋತ್ಸವದ ನಂತರ ಮರುಳಸಿದ್ಧನ ಕುರುಡಿ ಗ್ರಾಮದ ಲೀಲೆಯ ಸ್ಮಾರಕವಾಗಿ ದೇವಸ್ಥಾನದ ಶಿಖರಕ್ಕೆ ಎಣ್ಣೆಯನ್ನು ಎರೆಯುತ್ತಾರೆ. ಆದರೆ ಮೊದಲು ಆ ದೊರೆಗಳದೇ ಆಗಬೇಕಾಗಿದೆ. ಈ ದೊರೆಗಳ ಸಂಬಂಧವಾಗಿ ಇನ್ನೂ ಕೆಲವು ವಿಷಯಗಳು ನಮ್ಮ ಪರಿಶೀಲನೆಯಲ್ಲಿವೆ. ನಮಗೆ ಪ್ರಮಾಣವೆಂದು ನಿರ್ಣಯವಾಗದ ಯಾವ ವಿಷಯವನ್ನೂ ಬಹಿರಂಗಪಡಿಸುವ ಬಯಕೆಯಿಲ್ಲ.
ಹೀಗಾಗಿ ನಮ್ಮವರು ದೇಶಾಂತರಗಳನ್ನು ಸಂಚರಿಸುತ್ತಾ ಕೊನೆಗೆ ಪಾಲ್ಕುರಿಕೆಯಲ್ಲೂ, ಸಿರಿಗೆರೆಯಲ್ಲೂ ನೆಲಸಿ ತಮ್ಮ ಪೀಠಗಳನ್ನು ಪುನಃ ಸ್ಥಾಪಿಸಿರುತ್ತಾರೆ. ಅಲ್ಲದೆ ಇನ್ನೂ ಅನೇಕ ಕಡೆ ಸ್ಥಾಪಿಸಿರುವ ಕುರುಹುಗಳಿವೆ. ಈ ಪೈಕಿ ದಾವಣಗೆರೆ ತಾಲ್ಲೂಕಿನ ಅನಗೋಡಲ್ಲಿ, ಒಂದು ತರಳಬಾಳು ಮಠವಿದ್ದಂತೆ ಶಾಸನವಿದೆ. ಶ್ರೀ ಪಾಲ್ಕುರಿಕೆ ಮಠದಲ್ಲೂ ಉಜ್ಜಯಿನಿ ಸದ್ಧರ್ಮ ಸಿಂಹಾಸನದ ಕರ್ತರಾದ ಸಿದ್ಧಲಿಂಗದೇವರೆಂಬುವರ ಗದ್ದುಗೆಯ ಮೇಲೆ ಅವರು ಕೈಲಾಸವಾಸಿಗಳಾದ ದಿನವನ್ನು ಸೂಚಿಸುವ ಶಾಸನವಿದೆ. ಹಿಂದಿನಿಂದಲೂ ಸಿರಿಗೆರೆಯ ಮಠವು ತರಳಬಾಳು ಮಠವೆಂದೇ ವ್ಯವಹರಿಸಲ್ಪಟ್ಟಿದೆ. ಜಂಬಪ್ಪದೇವರೆಂಬುವರು ಸಿರಿಗೆರೆಯಲ್ಲೂ, ಸಪ್ಟೆ ಸಿದ್ಧಲಿಂಗದೇವರು ಪಾಲ್ಕುರಿಕೆಯಲ್ಲೂ ಮಠಗಳನ್ನು ಸ್ಥಾಪಿಸಿರುತ್ತಾರೆ. ಇವರನ್ನು ಸರ್ವಭೂಷಣ ಸಿದ್ದಲಿಂಗ ದೇವರೆಂದು ಅನ್ನುವ ವಾಡಿಕೆ ಇದ್ದಂತೆ ಕಂಡುಬರುತ್ತದೆ. ಈ ಬಗ್ಗೆ ವಿಶದವಾಗಿ ಶೋಧನೆಗಳನ್ನು ಮಾಡುವುದರಲ್ಲಿದ್ದೇವೆ. ಈ ಮಠಗಳ ಬೇರೆ ಬೇರೆಯಾದ ಆಡಳಿತವು ನಮ್ಮ ಉಜ್ಜಯಿನಿ ಪೀಠತ್ವದ ಸಾಧನೆಗೆ ಪ್ರತಿಬಂಧಕವಾಗಿದ್ದಿತಲ್ಲದೆ, ಒಂದೊಂದು ಪ್ರಸಂಗದಲ್ಲಿ ಇವುಗಳೇ ಪರಸ್ಪರವಾಗಿ ಕಲಹವನ್ನು ಮಾಡುವ ಅನಿವಾರ್ಯಕ್ಕೆ ಸಿಲುಕಬೇಕಾಗಿದ್ದಿತು. ಇದನ್ನು ತಪ್ಪಿಸುವುದಕ್ಕಾಗಿಯೇ ಇವುಗಳ ಏಕೀಕರಣ ಮಾಡಬೇಕಾಯಿತು. ನಮ್ಮ ಇತಿಹಾಸವನ್ನು ಇಂದು ನೀವು ಕೇಳಿರುವಿರಷ್ಟೆ. ಇದರಿಂದ ಈ ಏಕೀಕರಣವು ಎಷ್ಟು ಸಮಂಜಸವೂ, ಉಪಯುಕ್ತವೂ ಆಗಿದೆಯೆಂಬುದು ನಿಮಗೆ ಸ್ಪಷ್ಟವಾಗುತ್ತದೆ. ನಮ್ಮ ಉಜ್ಜಯಿನಿ ಪೀಠದ ಹಕ್ಕನ್ನು ಮತ್ತೆ ಸ್ಥಾಪಿಸುವುದೇ ಈ ಏಕೀಕರಣದ ಮುಖ್ಯೋದ್ದೇಶವಾಗಿರುತ್ತದೆ.
ಆ ಬಗ್ಗೆ ಇದೊಂದು ಪೂರ್ವ ಸಿದ್ಧತೆಯೆಂದೂ ಹೇಳಬಹುದು. ಈ ಉಭಯ ಮಠಗಳನ್ನು ಸ್ಥಾಪಿಸಿದ ನಂತರ ನಮ್ಮ ಮೇಲೆ ಒಂದರ ಮೇಲೊಂದೊದಗಿದ ವಿಪತ್ಪರಂಪರೆಯಲ್ಲಿ ನಮಗಿದ್ದ ಅಲ್ಪ ಸಮಾಜದ ಬಲದಿಂದ ನಾವು ಕೇವಲ ಸ್ವಂತವಾದ ಬುದ್ಧಿ, ಶಕ್ತಿ, ಧನ, ಜನಗಳಿಂದ ವಿಜಯಿಗಳಾಗುವುದೆಂದರೆ ಆಶ್ಚರ್ಯಕರವಾದುದೇ ಸರಿ. ಆದ್ದರಿಂದ ನಮ್ಮಲ್ಲಿ ಸತ್ಯವಿದೆಯೆಂದೂ, ನಮ್ಮ ಮೇಲೆ ಮರುಳಸಿದ್ಧನ ಅಮೋಘ ಕೃಪೆಯಿದೆಯೆಂದೂ, ಭಾವಿಸುವುದು ಸೂಕ್ತವಾಗಿದೆ. ನಾವು ಹೋರಾಡ ಹತ್ತಿದ ಮೇಲೆ ನಮ್ಮ ಮೇಲೆ ಬಿದ್ದ ವೀರಶೈವರ ಎಲ್ಲಾ ಮುಖ್ಯಪೀಠಗಳೂ, ನಮ್ಮಿಂದ ಸೋಲಿಸಲ್ಪಟ್ಟಿವೆಯೆಂಬುದಕ್ಕೆ ಆಯಾಯಾ ಕೋರ್ಟಿನ ರೆಕಾರ್ಡುಗಳೇ ಸಾಕ್ಷಿಗಳಾಗಿವೆ.
- ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
(ದಿನಾಂಕ 29.12.1943 ರಂದು ಹಳೇಬೀಡು ಗ್ರಾಮದಲ್ಲಿ ನಡೆದ ಸಮಾರಂಭದ ಆಶೀರ್ವಚನ)
ಆಕರ ಗ್ರಂಥ: ಸಂಕಲ್ಪ
ಪುಟ: 73,74,75