ಪಾಣಿನಿ, ಪತಂಜಲಿ ಮತ್ತು ಕಾತ್ಯಾಯನ ಸಂಸ್ಕೃತ ವ್ಯಾಕರಣದ ತ್ರಿಮೂರ್ತಿಗಳು: ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಕಾಶಿಯ ಹಿಂದೂ ಬನರಾಸ್ ವಿಶ್ವ ವಿದ್ಯಾಲಯದಲ್ಲಿ ಶ್ರೀ ಜಗದ್ಗುರುಗಳವರ ಉಪನ್ಯಾಸಕ್ಕೆ ಪ್ರಾಧ್ಯಾಪಕರ ವಿದ್ಯಾರ್ಥಿಗಳ ಮನಸಾ ವಂದನೆ.

ದಿನಾಂಕ:17-02-2023 ಶುಕ್ರವಾರ - ಸ್ಥಳ: ಕಾಶಿ ವಾರಣಾಸಿ, ಉತ್ತರ ಪ್ರದೇಶ: ಪಾಣಿನಿ, ಪತಂಜಲಿ ಮತ್ತು ಕಾತ್ಯಾಯನ ಸಂಸ್ಕೃತ ವ್ಯಾಕರಣದ ತ್ರಿಮೂರ್ತಿಗಳಾಗಿದ್ದಾರೆ ಎಂದು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಉತ್ತರ ಪ್ರದೇಶದ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಭಾರತ ಅಧ್ಯಯನ ಕೇಂದ್ರ ಸಂಸ್ಕೃತ ಮತ್ತು ಗಣಕಯಂತ್ರ ವಿಭಾಗದ ಸಭಾಂಗಣದಲ್ಲಿ ಇಂದು ಸಂಸ್ಕೃತ ಮಹಾಕವಿ ಪಾಣಿನಿ ಮಹರ್ಷಿಯ ಅಷ್ಠಾದ್ಯಾಯಿ ಕುರಿತು  ಉಪನ್ಯಾಸ ನೀಡಿದ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಕಾಶಿ ವಿವಿಯ ಕೋರಿಕೆಯಂತೆ ವಿಶ್ವವಿದ್ಯಾಲಯದ ಸಂಸ್ಕೃತ ಮತ್ತು ಕಂಪ್ಯೂಟರ್ ವಿಜ್ಞಾನದ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರುಗಳವರು ಲ್ಯಾಪ್ ಟಾಪ್ ಮತ್ತು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ಮಂಡಿಸಿದ ಶ್ರೀ ಜಗದ್ಗುರುಗಳವರು, ಪಾಣಿನಿ ಮಹರ್ಷಿಯೇ ಜಗತ್ತಿನ ಮೊದಲ ಕಂಪ್ಯೂಟರ್ ತಂತ್ರಜ್ಞಾನಿ ಎಂದು ಪ್ರತಿಪಾದಿಸಿದರು. ವೈಜ್ಞಾನಿಕ ತಳಹದಿಯುಳ್ಳ ಪಾಣಿನಿ ಮಹರ್ಷಿಯೇ ಸಂಸ್ಕೃತ ವ್ಯಾಕರಣ ಕುರಿತ ಪಾಣಿನಿಯ ಸೂತ್ರಗಳನ್ನು ಆಧರಿಸಿದ ಅಷ್ಠಾದ್ಯಾಯಿ ಗ್ರಂಥವನ್ನು “ಗಣಕಾಷ್ಟಾಧ್ಯಾಯಿ” ಎಂಬ ತಂತ್ರಾಂಶವನ್ನು ಸಿದ್ಧಪಡಿಸಿ, ಸಂಸ್ಕೃತ ಅಧ್ಯಯನ ನಿರತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಅಧ್ಯಯನವನ್ನು ಸುಲಭಗೊಳಿಸಲು 1994ರಲ್ಲಿಯೇ ತಂತ್ರಾಂಶ ರೂಪಿಸಿಲಾಗಿದೆ. 1994ರ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ 9ನೇ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ “ಗಣಕಾಷ್ಟಾಧ್ಯಾಯಿ” ತಂತ್ರಾಂಶದ ಪ್ರಾತ್ಯಕ್ಷಿಕೆಯನ್ನು ಮೊದಲ ಬಾರಿಗೆ ನೀಡಿರುವು ಬಗ್ಗೆ ಶ್ರೀ ಜಗದ್ಗುರುಗಳವರು ತಿಳಿಸಿದರು.

“ಗಣಕಾಷ್ಟಾಧ್ಯಾಯಿ” ಸಂಸ್ಕೃತ ವ್ಯಾಕರಣ ಕುರಿತ “ಕಂಪ್ಯೂಟರ್ ತಂತ್ರಾಂಶ”: “ಗಣಕಾಷ್ಟಾಧ್ಯಾಯಿ(ಆವೃತ್ತಿ-5.0)” ಸಂಸ್ಕೃತದ ಅದ್ವಿತೀಯ ವೈಯಾಕರಣಿಯಾದ ಪಾಣಿನಿಯ ಸೂತ್ರಗಳನ್ನು ಆಧರಿಸಿರುವ ಸಂಸ್ಕೃತ ವ್ಯಾಕರಣ ಕುರಿತ ವಿಶಿಷ್ಟವಾದ ತಂತ್ರಾಂಶ. “ಪಾಣಿನಿಯ ಅಷ್ಟಾಧ್ಯಾಯಿ” ಎಂಬ ಮೂಲ ಕೃತಿಯಿಂದ ಈ ತಂತ್ರಾಂಶದ ಹೆಸರನ್ನು ಸೃಜಿಸಲಾಗಿದೆ. ಗಣಕದ ಮೂಲಕ ತಂತ್ರಾಂಶವನ್ನು ಸಿದ್ಧಪಡಿಸಿರುವ ಕಾರಣ, ಈ ತಂತ್ರಾಂಶಕ್ಕೆ “ಗಣಕಾಷ್ಟಾಧ್ಯಾಯಿ” ಎಂದು ಹೆಸರು ನೀಡಲಾಗಿದೆ. ಸಂಸ್ಕೃತ ವ್ಯಾಕರಣ ಕುರಿತು ಎಂಟು ಅಧ್ಯಾಯಗಳಿರುವ “ಅಷ್ಟಾಧ್ಯಾಯಿ” ಎಂಬ ಹೆಸರಿನ ಮೇರು ಕೃತಿಯನ್ನು ರಚನೆ ಮಾಡಿರುವ ಪಾಣಿನಿಯು ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಜೀವಿಸಿದ್ದನು. ಮೂಲ ಕೃತಿಯಲ್ಲಿ ಸುಮಾರು 4000 ಸೂತ್ರಗಳು ಇವೆ. (ಪ್ರತಿಯೊಂದು ಸೂತ್ರವೂ ಒಂದು ಸರಳ ವಾಕ್ಯದಷ್ಟು ಉದ್ದ ಮಾತ್ರ ಇದೆ. ಕೆಲವು ಸೂತ್ರಗಳಂತೂ ಕೇವಲ ಒಂದು ಪದ ಅಥವಾ ಹಲವು ಪದಗಳು ಮಾತ್ರ ಆಗಿವೆ.) ಈ ಸೂತ್ರಗಳು ಅತ್ಯಂತ ಸಂಕ್ಷಿಪ್ತವಾಗಿದ್ದು ಸಂಸ್ಕೃತ ಭಾಷೆಯ ವೈಜ್ಞಾನಿಕ ತಳಹದಿಯ ದ್ಯೋತಕವಾಗಿವೆ. ಈ ಕೃತಿಯು ಸಂಸ್ಕೃತ ಭಾಷೆಯ ಇಡೀ ವ್ಯಾಕರಣವನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ವಿವರಿಸುತ್ತದೆ. ಒಂದು ಭಾಷೆಯ ವ್ಯಾಕರಣವನ್ನು ಈ ರೀತಿಯಲ್ಲಿ ವಿವರಿಸುವ ಮತ್ತೊಂದು ಕೃತಿಯು ವಿಶ್ವದ ಯಾವುದೇ ಇತರ ಭಾಷೆಗಳಲ್ಲಿ ಕಂಡುಬರುವುದಿಲ್ಲ. ತರ್ಕಬದ್ಧವಾದ ಈ ಕೃತಿಯನ್ನು ಕಂಪ್ಯೂಟರ್ಗೆ ಅಳವಡಿಸಿರುವುದಾಗಿ ಶ್ರೀ ಜಗದ್ಗುರುಗಳವರು ಹಂಚಿಕೊಂಡರು. ಈ ತಂತ್ರಾಂಶವನ್ನು ಜಗತ್ತಿನಾದ್ಯಂತ ಲಕ್ಷಾಂತರ, ವಿದ್ಯಾರ್ಥಿಗಳು, ವಿದ್ವಾಂಸರು ಬಳಕೆ ಮಾಡುತ್ತಿರುವುದು ನಮಗೆ ಅತೀವ ತೃಪ್ತಿ ತಂದಿದೆ ಎಂದು ಅಭಿಪ್ರಾಯಪಟ್ಟರು.

ರಿಷಿ ರಾಜ್ ಪೊಪಟ್ ಯುವಕನ ಪಾಣಿನಿ ಪ್ರತಿಶೋಧನೆ ಅಮಾನ್ಯ :

ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿ.ಎಚ್.ಡಿ ವಿದ್ಯಾರ್ಥಿ ರಿಷಿ ರಾಜ್ ಪೊಪಟ್ ಅವರು ಪಾಣಿನಿ ಮಹರ್ಷಿಯ ಸೂತ್ರದ ಸಮಸ್ಯೆಯೊಂದಕ್ಕೆ ಪರಿಹಾರ ಹುಡುಕಿರುವುದು ತರ್ಕಬದ್ಧವಲ್ಲದ, ಅಮಾನ್ಯ ಮತ್ತು ತಪ್ಪು ದಾರಿಗೆಳೆಯುವಂತಾಗಿದೆ ಎಂದು ಶ್ರೀ ಶ್ರೀ ಜಗದ್ಗುರುಗಳವರು ತೀವ್ರವಾದ ಖಂಡನೆಯನ್ನು ವ್ಯಕ್ತಪಡಿಸಿದರು.

ಪಾಣಿನಿ ಮಹರ್ಷಿಯ “ಅಷ್ಟಾಧ್ಯಯಿ” ಸಂಸ್ಕೃತ ವ್ಯಾಕರಣ ಗ್ರಂಥವನ್ನು ಆಳವಾಗಿ ಅಧ್ಯಯನ ಮಾಡಿ, ಜಗತ್ತಿನಲ್ಲಿಯೇ ಮೊಟ್ಟ ಮೊದಲು ಸಾಪ್ಟ್ ವೇರ್ ರೂಪಿಸಿರುವ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ರಿಷಿ ರಾಜ್ ಪೊಪಟ್ ಎಂಬ ಯುವಕನ ಪ್ರತಿಶೋಧ ನಿಜಕ್ಕೂ ನಮಗೆ ಅಘಾತವನ್ನುಂಟುಮಾಡಿದೆ. ಈ ಯುವಕನ ವ್ಯಾಖ್ಯಾನವು ಅನೇಕ ಮಾಧ್ಯಮಗಳಲ್ಲಿ ಭಾವನಾತ್ಮಕವಾಗಿ ವ್ಯಾಪಕ ಪ್ರಚಾರವಾಗಿದೆ. ಸಂಶೋಧಕ ತನ್ನ ಅನುಕೂಲಕ್ಕೆ ತಕ್ಕಂತೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾನೆ. ಪೊಪಟ್ ಸಲ್ಲಿಸಿರುವ ಪ್ರಬಂಧದ ಮೂಲ ಪ್ರತಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡು ಪರಿಶೀಲಿಸಿರುವ  ಶ್ರೀಗಳು, ಪಾಣಿನಿ ಸೂತ್ರದಲ್ಲಿ “1.4.2–ವಿಪ್ರತಿಷೇದೇ ಪರಮ್ ಕಾರ್ಯಂ” ಭೇದಿಸಲು ಯಾವುದೇ ಒಗಟಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಈ ಸೂತ್ರದ ಸಾಂಪ್ರದಾಯಿಕ ತಿಳಿವಳಿಕೆ ಹೀಗಿದೆ- “ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮವು ಗೆಲ್ಲುತ್ತದೆ”ಆದರೆ ಈ ಅರ್ಥವನ್ನು ಪೊಪಟ್ ತಿರಸ್ಕರಿಸಲು ಪ್ರಯತ್ನಿಸುತ್ತಾನೆ ಎಂದು ಶ್ರೀಜಗದ್ಗುರುಗಳು ವಿವರಿಸಿದರು.

ಪಾಣಿನಿಯ ಸೂತ್ರಗಳು ಅಲ್ಪಾಕ್ಷರಮಸನ್ದಿಗ್ದಂ ಸಾರವತಿಶ್ವತೋಮುಖಮ್| ಅಸ್ತೊಭಮನವದ್ಯಂಚ ಸೂತ್ರಂ ಸೂತ್ರವಿದೋ ವಿದುಃ||

(ಸೂತ್ರಗಳು ಸಂಕ್ಷಿಪ್ತವು, ನಿಸ್ಸಂದಿಗ್ದವು, ಜಾಗತಿಕವಾಗಿಯೂ, ಸಮಗ್ರವಾಗಿಯೂ, ಸುಸಂಬದ್ಧ ಮತ್ತು ನಿಷ್ಕಳಂಕವಾಗಿವೆ). ಈಗಿರುವಾಗ ಪ್ರಸ್ತುತ ಸಂಶೋಧಕರ ಪ್ರಬಂಧವನ್ನು ಅನುಮೋದಿಸುವ ಮೊದಲು ವಿಶ್ವವಿದ್ಯಾಲಯದ ಮಾರ್ಗದರ್ಶಿಗಳು ಮತ್ತು ಪ್ರಾಧ್ಯಾಪಕರು ಕಾಳಜಿ ವಹಿಸಬೇಕಾಗಿತ್ತು. ಪಾಣಿನಿಯ ವ್ಯಾಕರಣದಲ್ಲಿ ಪ್ರವೀಣರಲ್ಲದ ವರದಿಗಾರರು ಈ ವಿಷಯವನ್ನು ಸಂಪೂರ್ಣ ಗಾಳಿಗೆ ತೂರಿ, 2500 ವರ್ಷಗಳ ನಂತರ ಗುಪ್ತ ನಿಧಿಯ ದೊಡ್ಡ ರಹಸ್ಯವನ್ನು ಬಹಿರಂಗ ಪಡಿಸಿದಂತೆ ಜಗತ್ತಿನಾದ್ಯಂತ ಜನರ ಮನಸ್ಸಿನಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ ಎಂದು ಶ್ರೀಜಗದ್ಗುರುಗಳು ಕಳವಳ ವ್ಯಕ್ತಪಡಿಸಿದರು.

ಪಾಣಿನಿ, ಪತಂಜಲಿ ಮತ್ತು ಕಾತ್ಯಾಯನ ಎಂಬ ಮೂವರು ವೈಯಾಕರಣಿಗಳು ಸಂಸ್ಕೃತ ವ್ಯಾಕರಣದ ತ್ರಿಮೂರ್ತಿಳಿದ್ದಂತೆ. ಪಾಣಿನಿಯ 4941 ಸೂತ್ರಗಳಿಗೆ ಪತಂಜಲಿ ಮತ್ತು ಕಾತ್ಯಾಯನರು ಈಗಾಗಲೇ ವ್ಯಾಖ್ಯಾನಗಳನ್ನು ಬರೆದು ಸಾವಿರಾರು ವರ್ಷಗಳು ಸಂದಿವೆ. ಜಗತ್ತಿನಾದ್ಯಂತ ಸಾವಿರಾರು ವಿದ್ವಾಂಸರು ಈಗಾಗಲೇ ಸಾಕಷ್ಟು ಅಧ್ಯಯನ, ವ್ಯಾಖ್ಯಾನಗಳನ್ನು ಬರೆದಿದ್ದಾರೆ.

ಆಸಕ್ತರು http://www.taralabalu.org/paniniವೆಬ್ ಸೈಟಿನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಂಡು ಗಮನಿಸಬಹುದು. ಸಂಶೋಧಕನ ಪ್ರತಿಪಾದನೆಯು ತಪ್ಪು ಎಂಬುದನ್ನು ಮನಗಣಬಹುದಾಗಿದೆ ಎಂದು ಪೂಜ್ಯರು ತಿಳಿಸಿದರು.

ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಭಾರತ ಅಧ್ಯಯನ ಕೇಂದ್ರ ಸಂಸ್ಕೃತ ಮತ್ತು ಗಣಕಯಂತ್ರ ವಿಭಾಗದ ಸಭಾಂಗಣದಲ್ಲಿ ಶ್ರೀಜಗದ್ಗುರುಗಳು ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ 3 ಗಂಟೆಗೆ ಎರಡು ಉಪನ್ಯಾಸ ನೀಡಿದರು. ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಶಿಯ ವಿದ್ವತ್ ಪರಿಷತ್ತಿನ ಪದ್ಮಭೂಷಣ ಆಚಾರ್ಯ ವಸಿಷ್ಠ ತ್ರಿಪಾಠಿ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಕಾಶಿ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರೊ.ಜಯಶಂಕರಲಾಲ್ ತ್ರಿಪಾಠಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಶ್ರೀ ಜಗದ್ಗುರುಗಳವರ ಉಪನ್ಯಾಸವನ್ನು ಆಸಕ್ತಿಯಿಂದ ಆಲಿಸಿದರು.

ಭಾರತದಲ್ಲಿ ಕಂಪ್ಯೂಟರ್ ತಂತ್ರಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿದ್ದಾಗಲೇ ಪಾಣಿನಿ ಮಹರ್ಷಿಗಳ “ಅಷ್ಟಾಧ್ಯಯಿ” ಗ್ರಂಥವನ್ನು ಶ್ರಿಗಳು ಗಣಕೀಕರಣ ಮಾಡಿದ್ದರು. ತಮ್ಮ ಆಳವಾದ ಅಧ್ಯಯನ, ಸಂಶೋಧನೆಗಳ ಮೂಲಕ 1993ರಲ್ಲಿಯೇ ಈ ಗ್ರಂಥಕ್ಕೆ ಸಾಪ್ಟ್ ವೇರ್ ರೂಪಿಸಿ, “ಗಣಕಾಷ್ಟಧ್ಯಯಿ” ಎಂದು ನಾಮಕರಣ ಮಾಡಿದ ಮೊದಲಿಗರು. ಆಸ್ಟ್ರೇಲಿಯಾದ ಮೆಲ್ಬೊರ್ನೊ ವಿಶ್ವವಿದ್ಯಾಲಯದಲ್ಲಿ 1994ರಲ್ಲಿ ಜರುಗಿದ 9ನೆಯ ವಿಶ್ವಸಂಸ್ಕೃತ ಸಮ್ಮೇಳನದಲ್ಲಿ ತಮ್ಮ ಸಂಶೋಧನೆಯ ವಿವರಗಳನ್ನು ಮಂಡಿಸಿ, ಸಾಪ್ಟ್ ವೇರ್ ಪ್ರಾತ್ಯಕ್ಷಿಕೆ ತೋರಿಸಿದ್ದರು. ಈ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಜಗತ್ತಿನ ಸಂಸ್ಕೃತ ವಿದ್ವಾಂಸರು ಸ್ವಾಮಿಜಿಯವರ ಈ ಸಂಶೋಧನೆಯನ್ನು ಕಂಡು ಬೆರಗಾಗಿದ್ದರು. ಕಂಪ್ಯೂಟರ್ ತಂತ್ರಜ್ಞಾನ ಈ ಮೊದಲು ವ್ಯವಹಾರಿಕವಾಗಿ ಮಾತ್ರ ಬಳಕೆಯಾಗುತಿತ್ತು. ಶ್ರೀಗಳ ಈ ಸಂಶೊಧನೆಯಿಂದ ಕಂಪ್ಯೂಟರ್ ಬಳಕೆಯ ವ್ಯಾಪಕತೆಯು ವಿಸ್ತರಿಸುವಂತಾಯಿತು.

ಕಂಪ್ಯೂಟರಿನ ಸೂತ್ರಗಳು ಮತ್ತು ಸಂಕೇತಗಳು ಪಾಣಿನಿ ಮಹರ್ಷಿಯ “ಅಷ್ಟಾಧ್ಯಯಿ” ಗ್ರಂಥದ ವ್ಯಾಕರಣದ ಸೂತ್ರಗಳನ್ನೇ ಹೋಲುತ್ತವೆ. ಆದುದರಿಂದ ಪಾಣಿನಿ ಮಹರ್ಷಿಗಳೇ ಜಗತ್ತಿನ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್  ಎಂದು ಶ್ರೀಗಳು ತಮ್ಮ ಅನೇಕ ಉಪನ್ಯಾಸಗಳಲ್ಲಿ ತಿಳಿಯಪಡಿಸಿದ್ದಾರೆ.

ವಿವಿಯಲ್ಲಿ ಶ್ರೀ ಜಗದ್ಗುರುಗಳವರಿಗೆ ಭಕ್ತಿ ಸ್ವಾಗತ..!

ಶ್ರೀ ತರಳಬಾಳು ಜಗದ್ಗುರುಗಳವರನ್ನು ವಿಶ್ವವಿದ್ಯಾಲಯದಿಂದ ಭಕ್ತಿ ಪೂರ್ವಕವಾಗಿ ಸ್ವಾಗತಿಸಲಾಯಿತು. ಶ್ರೀ ಜಗದ್ಗುರುಗಳು ಬೃಹನ್ಮಠದ ಪೀಠಾಧ್ಯಕ್ಷರಾಗುವ ಪೂರ್ವದಲ್ಲಿ ಕಾಶಿಯ ಹಿಂದೂ ಬನರಾಸ್ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ನಂತರ ಅದೇ ವಿವಿಯಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದರು. ಮೈಸೂರು ಯುವರಾಜ ಕಾಲೇಜನಲ್ಲಿ ಪದವಿ ಪೂರೈಸಿದ್ದ ಶ್ರೀ ಜಗದ್ಗುರುಗಳವರು ನಂತರ ಹಿರಿಯ ಜಗದ್ಗುರುಗಳವರು. ಅಪೇಕ್ಷೆಯಂತೆ ಕಾಶಿಯಲ್ಲಿ ಉನ್ನತ ವ್ಯಾಸಂಗಕ್ಕೆ ಕಾಶಿಗೆ ತೆರಳಿದ್ದರು.

ಪರಂಪರೆಯ ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಭಾರತದ ಯಾವುದೇ ಸ್ವಯಂಸೇವಾ ಅಥವಾ ಧಾರ್ಮಿಕ ಸಂಸ್ಥೆಗಳು ಕಂಪ್ಯೂಟರ್ ಕುರಿತು ಆಲೋಚಿಸುವ ಮುನ್ನವೇ ತಮ್ಮ ಬೃಹನ್ಮಠದ ಕಾರ್ಯಚಟುವಟಿಕೆಗಳಿಗೆ 1984ರಲ್ಲಿಯೇ ಕಂಪ್ಯೂಟರನ್ನು ಬಳಸುವ ಮೂಲಕ ದೇಶದ ಗಮನ ಸೆಳೆದಿದ್ದರು.

ದೇಶದ ಯಾವುದೇ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕರು ಲ್ಯಾಪ್ ಟಾಪ್ ಕಂಪ್ಯೂಟರ್ ಗಳ ಬಳಕೆಯನ್ನು ಆರಂಭಿಸುವ ಮುನ್ನವೇ, ಅಂದರೆ 1994ರಲ್ಲಿಯೇ ಶ್ರೀ ಜಗದ್ಗುರುಗಳವರು ಸ್ವಾಮೀಜಿಗಳು ಲ್ಯಾಪ್ ಟ್ಯಾಪ್ ನ್ನು ಖರೀದಿಸಿ ಬಳಸಿದ್ದಾರೆ!.