ಶಿವರಾತ್ರಿಯಂದು ಲಿಂಗೈಕ್ಯರಾದ ಬೀರೂರು ಮಾರ್ಗದ ಎಂ.ಮಲ್ಲಿಕಾರ್ಜುನಪ್ಪನವರ ಆತ್ಮಕ್ಕೆ ಶಾಂತಿ ಕೋರಿದ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಮಾರ್ಗದ ಕ್ಯಾಂಪ್ ಬೀರೂರು : ಶರಣ ಮಾರ್ಗದ ಎಂ.ಮಲ್ಲಿಕಾರ್ಜುನಪ್ಪನವರು

ಜನನ : 1937 ಜುಲೈ 1 ರಂದು

ಜನ್ಮಸ್ಥಳ : ಬೀರೂರು

ತಂದೆ :ಶರಣ ಮಾರ್ಗದ ಎಂ.ಮಹದೇವಪ್ಪನವರು

ತಾಯಿ  : ಶರಣೆ ಚೆನ್ನಮ್ಮನವರು

ಶ್ರೀಯುತರು ತಮ್ಮ ಬಾಲ್ಯ ಜೀವನದ ಪ್ರಾಥಮಿಕ ಶಿಕ್ಷಣವನ್ನು ಬೀರೂರಿನಲ್ಲಿ ಮುಗಿಸಿದರು. ನಂತರ ಪ್ರೌಢಶಿಕ್ಷಣವನ್ನು ಸಿರಿಗೆರೆಯಲ್ಲಿ ಪಡೆದರು. ಇವರ ತಂದೆ ಮಾರ್ಗದ ಮಹದೇವಪ್ಪನವರು ಶ್ರೀಮಠಕ್ಕೆ ನಿಕಟವರ್ತಿಗಳಾಗಿದ್ದರಿಂದ ಇವರಿಗೆ ವಿದ್ಯಾಭ್ಯಾಸ ವೇಳೆಯಲ್ಲಿ ಮಠದಲ್ಲಿಯೇ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರದಲ್ಲಿ ಪಿ.ಯು.ಸಿ ವಿದ್ಯಾಭ್ಯಾಸಕ್ಕೆ ಚಿಕ್ಕಮಗಳೂರಿಗೆ ಸೇರಿ, ಅರ್ಧದಲ್ಲಿಯೇ ಮೊಟಕುಗೊಳಿಸಿದರು. ತಮ್ಮ ಅಣ್ಣನವರಾದ ಮಾರ್ಗದ ಮಲ್ಲಪ್ಪನವರು ರಾಜಕೀಯ ಧುರೀಣರಾಗಿದ್ದು ಅವರನ್ನು ಬೆಂಬಲಿಸಿ ಮನೆಯಲ್ಲಿದ್ದು ಒಟ್ಟು ಕುಟುಂಬದ ಜವಾಬ್ದಾರಿ ಹೊತ್ತು, ಪ್ರಗತಿಪರ ಕೃಷಿಕರಾಗಿ ಅಡಿಕೆ ಬೆಳೆಯನ್ನು ಸಮೃದ್ಧವಾಗಿ ಬೆಳೆದು ಕುಟುಂಬದ ಪ್ರಗತಿಗೆ ಆಸರೆಯಾದರು. ಶ್ರೀಯುತರು ಬೀರೂರಿನಲ್ಲಿ "ಮಾರ್ಗದ ಅಣ್ಣಯ್ಯ" ಎಂದೇ ಖ್ಯಾತರಾಗಿದ್ದಾರೆ. ನಂತರದಲ್ಲಿ ಇವರ ಬಾಳಸಂಗಾತಿಯಾಗಿ ಬಂದ ಹೊನ್ನಾಳಿಯ ಪ್ರತಿಷ್ಟಿತ ಬೆನಕನಹಳ್ಳಿ ಗೌಡ್ರ ಮನೆತನದ ಶರಣೆ ಶಾಂತಮ್ಮನವರು ಶ್ರೀಯುತರಿಗೆ ಹೆಗಲಾಗಿ ಅವರ ಎಲ್ಲಾ ಕೆಲಸಕಾರ್ಯಗಳಲ್ಲಿ ಜೊತೆಗೆ ನಡೆದುಬಂದವರು. ಇವರಿಗೆ ಒಬ್ಬಳು ಹೆಣ್ಣು ಮಗಳು ಮತ್ತು ಮೂರು ಜನ ಗಂಡು ಮಕ್ಕಳು. ಈ ದಂಪತಿಗಳ ಕೃಪಾಶೀರ್ವಾದದಿಂದ ಅವರ ಎಲ್ಲಾ ಮಕ್ಕಳು ಸುಸಂಸ್ಕೃತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 

ಹಿಂದೆ ಬೀರೂರಿನ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಲಿಂಗ್ಲಾಪುರದ ಮಹದೇವಪ್ಪನವರ ಜೊತೆಯಲ್ಲಿ ಅಣ್ಣಯ್ಯನವರು ಉಪಾಧ್ಯಕ್ಷರಾಗಿ ಶ್ರೀಮಠದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದವರು. ಇವರ ಪರಿಶ್ರಮದಿಂದ ಬೀರೂರಿನಲ್ಲಿ "ಶ್ರೀ ತರಳಬಾಳು ಜಗದ್ಗುರು ಕಲ್ಯಾಣ ಮಂಟಪ" ನಿರ್ಮಾಣವಾಯಿತು. ಕಲ್ಯಾಣ ಮಂಟಪದ ಪ್ರಾರಂಭೋತ್ಸವವನ್ನು ಪರಮಪೂಜ್ಯರ ದಿವ್ಯಸಾನ್ನಿಧ್ಯದಲ್ಲಿ ಹಾಗೂ ಅಂದಿನ ಕೇಂದ್ರ ಮಂತ್ರಿಗಳಾದ ಸುಷ್ಮಾ ಸ್ವರಾಜ್ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಜೊತೆಗೆ ಆ ದಿನವೇ ಶ್ರೀಅಕ್ಕಮಹಾದೇವಿ ಬಾಲಿಕಾ ಉಚಿತ ಪ್ರಸಾದ ನಿಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಅಲ್ಲದೇ 1981ರಲ್ಲಿ ಬೀರೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಶ್ರೀಯುತರ ಪಾತ್ರ ಸ್ಮರಣೀಯವಾದುದು. ಮುಂದೆ ಚಿಕ್ಕಮಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಇವರನ್ನು ಪರಮಪೂಜ್ಯರು ಖಜಾಂಚಿಗಳನ್ನಾಗಿ ನೇಮಿಸಿದ್ದು ಇವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ನಂತರದಲ್ಲಿ ಇವರ ಕಾರ್ಯಕ್ಷಮತೆಯನ್ನು ಕಂಡ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಇವರನ್ನು ವಿದ್ಯಾಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿದರು. ನಂತರದಲ್ಲಿ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಉಪಾಧ್ಯಕ್ಷರಾದರು. ಅಂದಿನಿಂದ ಇಂದಿನವರೆಗೂ ಶ್ರೀಮಠ ಮತ್ತು ಸಮಾಜದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡಿದ್ದವರು. 

ಬೀರೂರಿನಲ್ಲಿರುವ ಶ್ರೀಸಂಸ್ಥೆಯ ಅಡಿಕೆತೋಟ, 35 ಎಕರೆ ಜಮೀನು, ಶ್ರೀ ತರಳಬಾಳು ಜಗದ್ಗುರು ಕಲ್ಯಾಣ ಮಂಟಪ, ಶ್ರೀ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ, ಶ್ರೀ ಅಕ್ಕಮಹಾದೇವಿ ಬಾಲಿಕಾ ಉಚಿತ ಪ್ರಸಾದ ನಿಲಯ ಹಾಗೂ ಶ್ರೀ ಸಂಸ್ಕೃತ, ವೇದ ಮತ್ತು ಜ್ಯೋತಿಷ್ಯ ಪಾಠಶಾಲೆ ಇವೆಲ್ಲವುಗಳ ಜವಾಬ್ದಾರಿ ಹೊತ್ತು ತಮ್ಮ ಜೀವಿತದ ಕೊನೆಯವರೆಗೂ ಶ್ರೀಮಠದ ಸದ್ಭಕ್ತರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಶ್ರೀಯುತರು ದಿನಾಂಕ: 18-02-2023 ರ ಮಹಾಶಿವರಾತ್ರಿ ದಿನದಂದು ಲಿಂಗೈಕ್ಯರಾಗಿರುತ್ತಾರೆ. ಭಗವಂತ ಇವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಾರೈಸಿದ್ದಾರೆ.