ತರಳಬಾಳು ಬೃಹನ್ಮಠದಲ್ಲಿ ಮಹಾಶಿವರಾತ್ರಿ ಆಚರಣೆ

  •  
  •  
  •  
  •  
  •    Views  

ಸಿರಿಗೆರೆ: ತರಳಬಾಳು ಬೃಹನ್ಮಠದಲ್ಲಿ ಪ್ರತಿ ವರ್ಷದಂತೆ ಅಣ್ಣನ ಬಳಗದವರು ಆಯೋಜಿಸಿದ್ದ ಮಹಾಶಿವರಾತ್ರಿ ಕಾರ್ಯಕ್ರಮ ಶನಿವಾರ ಶಾಸ್ತ್ರೋಕ್ತವಾಗಿ ಜರುಗಿತು. ಶ್ರೀಮಠದಲ್ಲಿ ಅಭಿಷೇಕ ಹಾಗೂ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರತಿಮೆಗೆ ಹಾಗೂ ಶ್ರೀ ಗುರುಶಾಂತ ರಾಜದೇಶೀಕೇಂದ್ರ ಸ್ವಾಮಿಗಳವರ ಪ್ರತಿಮೆಗೆ ಪುಷ್ಪಾರ್ಚನೆ, ಪೂಜಾ ಕೈಂಕರ್ಯಗಳು ನಡೆಯಿತು. 

ಸಿರಿಗೆರೆಯ ವಿದ್ಯಾಸಂಸ್ಥೆಯ ಶ್ರೀ ತರಳಬಾಳು ಜಗದ್ಗುರು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ, ಶ್ರೀ ತರಳಬಾಳು ಸಿ.ಬಿ.ಎಸ್.ಇ, ಬಹದ್ದೂರ್ ಘಟ್ಟ, ಮುತ್ತುಗದೂರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಚನ ಕಂಠಪಾಠ ಸ್ಪರ್ಧೆಗಳು ಜರುಗಿದವು. ಶಿವಶರಣರ ವಚನ ಕಂಠಪಾಠ ಹಾಡಿದ ವಿದ್ಯಾರ್ಥಿಗಳಿಗೆ ಅಣ್ಣನ ಬಳಗದ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. 

ಶ್ರೀ ಮಠವನ್ನು ತಳಿರು ತೋರಣಗಳಿಂದ ಸಿಂಗಾರಿಸಲಾಗಿದ್ದು, ಶಿವಧ್ವಜಗಳು ರಾರಾಜಿಸಿದವು. ಸಂಜೆ ದಾವಣಗೆರೆಯ ಶರದಿ ಸಂಗೀತ ಶಾಲೆಯ ಶೋಭಾ ರಂಗನಾಥ್ ಅವರಿಂದ ಭಕ್ತಿಸುಧೆ ಕಾರ್ಯಕ್ರಮ ಜರುಗಿತು. 

ಅಣ್ಣನ ಬಳಗದ ಅಧ್ಯಕ್ಷರಾದ ಬಿ.ಎಸ್ ಮರಳಸಿದ್ದಯ್ಯ, ಉಪಾಧ್ಯಕ್ಷರಾದ ವಿಜಯಚಾರಿ, ಸದಸ್ಯರುಗಳು, ಗ್ರಾಮಪಂಚಾಯಿತಿ ಆಧ್ಯಕ್ಷ ಎಂ.ಜಿ.ದೇವರಾಜು, ಶಾಲಾ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು ಹಾಗೂ ಶಾಲಾಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.