ರಾಜಕೀಯ ಬಲಕ್ಕೆ ಬಾಲಂಗೋಚಿಯಾದ ಜಾತಿಯ ಬಲ!
ರಾಮಾಯಣದಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ಕೌಶಿಕ ಮಹಾರಾಜನು ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾನೆ. ರಾಜನ ಆದರಾತಿಥ್ಯ ಮಾಡಲು ನೆರವಾದ ಮಹರ್ಷಿಗಳ ಆಶ್ರಮದಲ್ಲಿದ್ದ “ಶಬಲೆ” ಎಂಬ ಹಸುವಿನ ಮೇಲೆ ಕೌಶಿಕನ ಕಣ್ಣು ಬೀಳುತ್ತದೆ. ಕೇಳಿದ ವಸ್ತು ಮತ್ತು ಆಹಾರ ಪದಾರ್ಥಗಳನ್ನು ಕೊಡುವ ಶಕ್ತಿಯುಳ್ಳ ಈ ಹಸುವಿನ ಇನ್ನೊಂದು ಹೆಸರು ನಂದಿನಿ. ಅದರ ತಾಯಿ ಕಾಮಧೇನುವಿನಂತೆ ದಿವ್ಯಶಕ್ತಿಯುಳ್ಳ ಶಬಲೆಯನ್ನು ತನಗೆ ಕೊಟ್ಟರೆ ಒಂದು ಲಕ್ಷ ಗೋವುಗಳನ್ನು ಕೊಡುವುದಾಗಿ ಕೌಶಿಕ ಹೇಳುತ್ತಾನೆ. ಆದರೆ ವಸಿಷ್ಠರು ಒಪ್ಪುವುದಿಲ್ಲ. ಇದರಿಂದ ಕುಪಿತಗೊಂಡ ಕೌಶಿಕ ಬಲವಂತವಾಗಿ ಶಬಲೆಯನ್ನು ಎಳೆದುಕೊಂಡು ಹೋಗಲು ಮುಂದಾಗುತ್ತಾನೆ. ಅವನ ಬೆದರಿಕೆಗೆ ವಸಿಷ್ಠರು ಜಗ್ಗುವುದಿಲ್ಲ. ಅವನು ಪ್ರಯೋಗಿಸಿದ ದಿವ್ಯಾಸ್ತ್ರಗಳೆಲ್ಲವೂ ವಸಿಷ್ಠರ ಬ್ರಹ್ಮದಂಡದ ಮುಂದೆ ನಿಷ್ಕ್ರಿಯವಾಗುತ್ತವೆ. ಕೊನೆಗೆ ಕೌಶಿಕ ಮಹಾರಾಜ ತಲೆಬಾಗಿ ಬ್ರಹ್ಮತೇಜಸ್ಸಿನ ಮುಂದೆ ಕ್ಷಾತ್ರತೇಜಸ್ಸು ಕಳಾಹೀನವೆಂದು ಉದ್ಗರಿಸುತ್ತಾನೆ: “ಧಿಗ್ಬಲಂ ಕ್ಷತ್ರಿಯಬಲಂ! ಬ್ರಹ್ಮತೇಜೋ ಬಲಂ ಬಲಮ್!” ಕ್ಷತ್ರಿಯ ಬಲಕ್ಕೆ ಧಿಕ್ಕಾರವಿರಲಿ! ಬ್ರಹ್ಮತೇಜಸ್ಸೇ ನಿಜವಾದ ಬಲ! ಎಂದು ನತಮಸ್ತಕನಾದ ಕೌಶಿಕ ಮಹಾರಾಜನು ತನ್ನ ರಾಜ್ಯವನ್ನು ತೊರೆದು ಕಾಡಿನಲ್ಲಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿ ವಿಶ್ವಾಮಿತ್ರನೆಂಬ ಹೆಸರಿನಿಂದ ಪ್ರಖ್ಯಾತ ಋಷಿಯಾಗುತ್ತಾನೆ. ಕಠಿಣ ತಪಸ್ಸಿನಿಂದ ಬ್ರಹ್ಮರ್ಷಿಯೂ ಆಗುತ್ತಾನೆ. ಒಬ್ಬ ವ್ಯಕ್ತಿಯು ಶಾರೀರಿಕವಾಗಿ ಎಷ್ಟೇ ಬಲಶಾಲಿಯಾದರೂ ತೇಜಸ್ವಿಯಾದ ವ್ಯಕ್ತಿಯ ಮುಂದೆ ಕುಗ್ಗಿಹೋಗುತ್ತಾನೆ ಎಂದು ಸಮರ್ಥಿಸಲು ಈ ಕೆಳಗಿನ ಸಂಸ್ಕೃತ ಸುಭಾಷಿತವು ಮೂರು ಹೋಲಿಕೆಗಳನ್ನು ಕೊಡುತ್ತದೆ:
ಹಸ್ತೀ ಸ್ಥೂಲತರಃ ಸ ಚಾಂಕುಶವಶಃ ಕಿಂ ಹಸ್ತಿಮಾತ್ರೋಂಕುಶೋ?
ವಜ್ರೇಣಾಪಿ ಹತಾಃ ಪತಂತಿ ಗಿರಯಃ ಕಿಂ ವಜ್ರಮಾತ್ರೋ ಗಿರಿಃ?
ದೀಪೇ ಪ್ರಜ್ವಲಿತೇ ಪ್ರಣಶ್ಯತಿ ತಮಃ ಕಿಂ ದೀಪಮಾತ್ರಂ ತಮಃ?
ತೇಜೋ ಯಸ್ಯ ವಿರಾಜತೇ ಸ ಬಲವಾನ್ ಸ್ಥೂಲೇಷು ಕಃ ಪ್ರತ್ಯಯಃ?
ಇದರ ತಾತ್ಪರ್ಯ: 1) ಆನೆ ದೊಡ್ಡದು ಎಂದ ಮಾತ್ರಕ್ಕೆ ಅಂಕುಶ ಚಿಕ್ಕದು ಎಂದು ಹೀಗಳೆಯಲು ಸಾಧ್ಯವೇ? ಆನೆಯು ಗಾತ್ರದಲ್ಲಿ ಎಷ್ಟೇ ದೊಡ್ಡದಾದರೂ ಮಾವುತನ ಕೈಯಲ್ಲಿರುವ ಚಿಕ್ಕ ಅಂಕುಶ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. 2) ಗುಡ್ಡಬೆಟ್ಟಗಳು ದೊಡ್ಡವು, ಅವುಗಳ ಮುಂದೆ ವಜ್ರಾಯುಧ ಚಿಕ್ಕದು ಎಂದು ಕಡೆಗಣಿಸಲು ಸಾಧ್ಯವೇ? ಒಂದು ಕಾಲದಲ್ಲಿ ಪೌರಾಣಿಕ ಕತೆಯ ಪ್ರಕಾರ ಗುಡ್ಡ ಬೆಟ್ಟಗಳಿಗೆ ರೆಕ್ಕೆಗಳಿದ್ದುವಂತೆ. ಅವು ಆಕಾಶದಲ್ಲಿ ಅತ್ತಿಂದಿತ್ತ ಹಾರಾಡಿ ಆಕಾಶಮಾರ್ಗದಲ್ಲಿ ದೇವತೆಗಳ ಸಂಚಾರಕ್ಕೆ ಅಡ್ಡಿಯಾಗಿದ್ದುವಂತೆ. ಆಗ ಇಂದ್ರನು ತನ್ನ ವಜ್ರಾಯುಧದಿಂದ ಅವುಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿ ನೆಲಕ್ಕೆ ಉರುಳಿಸಿದನಂತೆ. ರೆಕ್ಕೆ ಕಳೆದುಕೊಂಡ ಗುಡ್ಡಬೆಟ್ಟಗಳು ಹಾರಾಡಲಾಗದೆ ಭೂಮಿಯ ಮೇಲೆ ನಿಂತಲ್ಲಿಯೇ ನಿಂತು “ಅಚಲ” ಎಂಬ ಹೆಸರನ್ನು ಪಡೆದುವಂತೆ! 3) ಕತ್ತಲು ದೊಡ್ಡದು ನಿಜ, ಆದರೆ ದೀಪ ಸಣ್ಣದು ಎಂದು ಅನಾದರಣೆ ಮಾಡಲು ಸಾಧ್ಯವೇ? ಸುತ್ತ ಕತ್ತಲು ಎಷ್ಟೇ ಆವರಿಸಿದ್ದರೂ ಉರಿಯುವ ಒಂದು ಸಣ್ಣ ಹಣತೆ ಎಂತಹ ಗಾಢಾಂಧಕಾರವನ್ನೂ ಓಡಿಸುತ್ತದೆ! ವಿಷ್ಣುಶರ್ಮನ “ಪಂಚತಂತ್ರ”ವೆಂಬ ಸಂಸ್ಕೃತ ಕಥಾಸಂಕಲನದ ಮಿತ್ರಭೇದ ಎಂಬ ಮೊದಲ ತಂತ್ರದಲ್ಲಿ ಈ ಶ್ಲೋಕ ಬರುತ್ತದೆ. ಪರಂಪರಾಗತವಾಗಿ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಬಸವಣ್ಣನವರು ಈ ಶ್ಲೋಕದಲ್ಲಿರುವ ಮೂರೂ ಹೋಲಿಕೆಗಳನ್ನು ಬಳಸಿಕೊಂಡು ಈ ಮುಂದಿನ ವಚನವನ್ನು ರಚನೆ ಮಾಡಿರುತ್ತಾರೆ:
ಕರಿ ಘನ; ಅಂಕುಶ ಕಿರಿದೆನ್ನಬಹುದೇ? ಬಾರದಯ್ಯಾ!
ಗಿರಿ ಘನ; ವಜ್ರ ಕಿರಿದೆನ್ನಬಹುದೇ? ಬಾರದಯ್ಯಾ!
ತಮಂಧ ಘನ; ಜ್ಯೋತಿ ಕಿರಿದೆನ್ನಬಹುದೇ? ಬಾರದಯ್ಯಾ!
ಮರಹು ಘನ; ನಿಮ್ಮ ನೆನೆವ ಮನ ಕಿರಿದೆನ್ನಬಹುದೇ? ಬಾರದಯ್ಯಾ
ಕೂಡಲ ಸಂಗಮದೇವಾ!
ಪಂಚತಂತ್ರದ ಶ್ಲೋಕದಲ್ಲಿರುವ ಮೂರೂ ಹೋಲಿಕೆಗಳನ್ನು ಬಸವಣ್ಣನವರು ಬಳಸಿಕೊಂಡು ಅದೇ ಭಾವ ಮತ್ತು ಅದೇ ದಾಟಿಯಲ್ಲಿ ವಚನ ರಚನೆ ಮಾಡಿದ್ದರೂ ಅವುಗಳ ಮೂಲಕ ಪ್ರತಿಪಾದಿಸುವ ವಿಚಾರಧಾರೆ ಮಾತ್ರ ಎರಡರಲ್ಲೂ ಬೇರೆ ಬೇರೆ. ಪಂಚತಂತ್ರದ ಶ್ಲೋಕವು ಶರೀರದಾರ್ಢ್ಯಕ್ಕಿಂತ ತೇಜಃಪುಂಜವಾದ ವ್ಯಕ್ತಿತ್ವ ಮೇಲುಗೈ ಸಾಧಿಸುತ್ತದೆಯೆಂದು ಸಾರಿದರೆ, ಬಸವಣ್ಣನವರ ವಚನವು ಮನುಷ್ಯನ ಮನಸ್ಸು ಎಷ್ಟೇ ಅಗಾಧವಾದ ಅಜ್ಞಾನ, ವಿಷಯಲೋಲುಪತೆಯಿಂದ ಕೂಡಿದ್ದರೂ ಸದಾ ದೇವರ ಧ್ಯಾನದಿಂದ ಅದೆಲ್ಲವನ್ನು ಮೆಟ್ಟಿ ನಿಲ್ಲಬಹುದು ಎಂದು ಬೋಧಿಸುತ್ತದೆ: ಮಾವುತನ ಅಂಕುಶವು ಆನೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಂತೆ! ಇಂದ್ರನ ವಜ್ರಾಯುಧವು ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿದಂತೆ! ದೀಪದ ಬೆಳಕು ಕತ್ತಲೆಯನ್ನು ನಿವಾರಿಸಿದಂತೆ! ಸಾಂಸಾರಿಕ ಸುಖ ಭೋಗೋಪಭೋಗಗಳಲ್ಲಿ ಮೈಮರೆತ (ಮರಹು) ಮನುಷ್ಯ “ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ” ಎಂದು ಪರಿತಪಿಸಿ ಆಧ್ಯಾತ್ಮಿಕ ಸಾಧನೆಯ ಪಥದಲ್ಲಿ ಅಡಿಯಿಡುವ ದೃಢವಾದ ಮನಸ್ಸು ಮಾಡಿದರೆ ನಿತ್ಯಸುಖವನ್ನು ಪಡೆಯಲು ಅದೊಂದು ದೊಡ್ಡ ಹೆಜ್ಜೆ!
ಕೈಯಲ್ಲಿದ್ದ ಖಡ್ಗವನ್ನು ಬಿಸಾಡಿ ತಂಬೂರಿ ಹಿಡಿದು ಧರ್ಮಬೋಧಕರಾಗಿ ಸಾಧು-ಸಂತರಾದ ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆಯೇ ಹೊರತು ತಂಬೂರಿಯನ್ನು ಒಡೆದು ಹಾಕಿ ಮತ್ತೆ ಖಡ್ಗಧಾರಿಗಳಾದ ಉದಾಹರಣೆಗಳಿಲ್ಲ! ರಣರಂಗದಲ್ಲಿ ಖಡ್ಗ ಹಿಡಿದು ಹೋರಾಡಿದ ಅಶೋಕ ಚಕ್ರವರ್ತಿ “ಬುದ್ಧಂ ಶರಣಂ ಗಚ್ಛಾಮಿ!” ಎಂದು ಬುದ್ಧನಿಗೆ ಶರಣಾದ. ರಾಜರ ತಲೆಗಳನ್ನು ಕತ್ತರಿಸಿ ಅವರ ಕೈ ಬೆರಳುಗಳನ್ನೇ ತನ್ನ ಕೊರಳ ಸರಮಾಲೆಯನ್ನಾಗಿ ಮಾಡಿಕೊಂಡ ಕ್ರೂರಿ ರಕ್ಕಸ ಅಂಗುಲೀಮಾಲ ತನ್ನೆದುರಿಗೆ ನಿರ್ಭಯದಿಂದ ಶಾಂತಚಿತ್ತನಾಗಿ ನಿಂತ ದಿವ್ಯ ತೇಜಸ್ವಿ ಬುದ್ಧನಿಗೆ ಹೆದರಿ “ಧಮ್ಮಂ ಶರಣಂ ಗಚ್ಛಾಮಿ” ಎಂದು ಶರಣಾದ. ಇಡೀ ಜಗತ್ತನ್ನೇ ಗೆಲ್ಲಬೇಕೆಂದು ಯುದ್ಧಗಳಲ್ಲಿ ಜಯಶಾಲಿಯಾಗುತ್ತಾ ಭಾರತಕ್ಕೆ ಬಂದ ಅಲೆಕ್ಸಾಂಡರ್ ಮರಣಶಯ್ಯೆಯಲ್ಲಿದ್ದಾಗ ತಾನು ಬರಿಗೈಲಿ ಹೋಗುತ್ತಿದ್ದೇನೆಂದು ಜನರಿಗೆ ತಿಳಿಯಲಿ ಎಂದು ಶವದ ಪೆಟ್ಟಿಗೆಯ ಹೊರಗೆ ತನ್ನ ಖಾಲಿ ಕೈಗಳನ್ನು ಇಟ್ಟು ರುದ್ರಭೂಮಿಗೆ ಕರೆದೊಯ್ಯಬೇಕೆಂದು ಸೇನಾಧಿಪತಿಗೆ ಆಜ್ಞಾಪಿಸಿದ. ಹೀಗೆ ಕ್ರೌರ್ಯವನ್ನು ಮೆರೆದು ರಕ್ತಸಿಕ್ತರಾದ ರಾಜ ಮಹಾರಾಜರುಗಳೆಲ್ಲರೂ ಹಿಂಸೆ ಕ್ರೌರ್ಯವನ್ನು ತ್ಯಜಿಸಿ ಧರ್ಮಕ್ಕೆ ಶರಣಾಗಿದ್ದಾರೆ. ತಂಬೂರಿ ಹಿಡಿದು ದಾಸಶ್ರೇಷ್ಠರೆನಿಸಿದ ಕನಕದಾಸರು “ಕುಲ-ಕುಲ-ಕುಲವೆಂದು ಹೊಡೆದಾಡದಿರಿ” ಎಂದರೇ ಹೊರತು ರಕ್ತ ಕುದಿಯುತ್ತಿದೆ ಎನ್ನಲಿಲ್ಲ ಮತ್ತೆ ಖಡ್ಗ ಹಿಡಿಯಲಿಲ್ಲ.
ರಾಮಾಯಣ ಮತ್ತು ಕನಕದಾಸರ ಕಾಲ ಈಗ ಬದಲಾಗಿದೆ. ಕ್ಷಾತ್ರಬಲ ಮತ್ತು ಬ್ರಹ್ಮತೇಜಸ್ಸಿನ ಬಲ ತಿರುವು ಮುರುವಾಗಿದೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮಠ-ಪೀಠಗಳ ಸ್ವಾಮಿಗಳು ಮತ್ತು ಗುಡಿಗುಂಡಾರಗಳಿಗೆ ರಾಜಕೀಯ ಧುರೀಣರು ದಾಂಗುಡಿ ಇಡುತ್ತಾರೆ. ಅವರ ಮೇಲಿನ ಭಕ್ತಿಯಿಂದ ಅಲ್ಲ; ಅವರ ಹಿಂದೆ ಅಪಾರ ಸಂಖ್ಯೆಯ ಭಕ್ತರಿದ್ದಾರೆಂಬ ಲೆಕ್ಕಾಚಾರದಿಂದ. ಮಠ-ಮಂದಿರಗಳು ಇಂದು ಭಕ್ತಿಯ ಕೇಂದ್ರಗಳಾಗಿ ಉಳಿದಿಲ್ಲ; ಚುನಾವಣೆಗೆ ಸ್ಪರ್ಧಿಸಲು “ಟಿಕೆಟ್" ದೊರಕಿಸಿಕೊಡುವ ರಾಜಕೀಯ ಕೇಂದ್ರಗಳಾಗಿವೆ. ಆಯಾಯ ಜಾತಿಯ “ಓಟು ಬ್ಯಾಂಕು"ಗಳೂ" ಆಗಿವೆ ರಾಜಕೀಯ ಬಲಕ್ಕೆ ಜಾತಿಯ ಬಲ ಬಾಲಂಗೋಚಿಯಾಗಿದೆ. "ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂದ ಕನಕದಾಸರ ವ್ಯಂಗ್ಯೋಕ್ತಿಯನ್ನು ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಬದಲಿಸಿ ಹೇಳಬಹುದಾದರೆ:
“ಎಲ್ಲಾರು ಮಾಡುವುದು ಓಟಿಗಾಗಿ ಮತ್ತು ನೋಟಿಗಾಗಿ!”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ಬಿಸಿಲು ಬೆಳದಿಂಗಳು ದಿ.23-2-2023. ವಾರಣಾಸಿ (ಕಾಶಿ)
ವಿಜಯ ಕರ್ನಾಟಕ