ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ಗಯಾನ ದೇಶದ ಉಪಾಧ್ಯಕ್ಷ ಭರತ್ ಜಗದೇವ್

  •  
  •  
  •  
  •  
  •    Views  

ದಿನಾಂಕ  23-02-2023,  ಗುರುವಾರ
ಸ್ಥಳ: ನವದೆಹಲಿ

ಗಯಾನ ದೇಶದ ಸರ್ಕಾರಿ ಕಾರ್ಯಕ್ರಮಕ್ಕೆ ಶಿಷ್ಟಾಚಾರ ದೊಂದಿಗೆ ಶ್ರೀ ಜಗದ್ಗುರುಗಳವರಿಗೆ ಭಕ್ತಿಯ ಆಹ್ವಾನವಿತ್ತ ಉಪಾಧ್ಯಕ್ಷರು..!

ನವದೆಹಲಿಯಲ್ಲಿ ನಿನ್ನೆಯ ಸಂಜೆ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಗಯಾನಾ ದೇಶದ ಉಪಾಧ್ಯಕ್ಷರಾದ ಶ್ರೀ  ಭರತ್ ಜಗದೇವ್ ರವರು ದರ್ಶನಗೈದು, ಪ್ರಣಾಮಗಳನ್ನು ಸಮರ್ಪಿಸಿ ಆಶೀರ್ವಾದ ಪಡೆದರು.

ಪೂಜ್ಯರ ಆಶೀರ್ವಾದ ಪಡೆದು  ಚರ್ಚಿಸಿದ ಶ್ರೀ ಭರತ್ ಜಗದೇವ್ ರವರು ವಿಶೇಷವಾಗಿ ಏತ ನೀರಾವರಿಗಳ ಮೂಲಕ 500 ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಸಾರ್ಥಕ ಕಾರ್ಯದ ಬಗ್ಗೆ ಎಳೆ ಎಳೆಯಾಗಿ ತಿಳಿದುಕೊಂಡರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮೂಲಕ ರಾಜ್ಯದ 50 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ದಾಸೋಹ ನೀಡುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಶ್ರೀ  ಭರತ್ ಜಗದೇವ್ ರವರು ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿರುವ  ಪೂಜ್ಯರ ಶಿಕ್ಷಣ ದಾಸೋಹವನ್ನು ಮನಸಾ ಶ್ಲಾಘಿಸಿದರು.

ಗಯಾನಕ್ಕೆ ದಯಮಾಡಿಸುವಂತೆ ಪೂಜ್ಯರಿಗೆ ಆಮಂತ್ರಿಸಿದ ಉಪಾಧ್ಯಕ್ಷ ಜಯದೇವ್:
---------------------------

ಶ್ರೀ ಜಗದ್ಗುರುಗಳವರ ಸಮಾಜ ಸೇವಾ ಕಾರ್ಯಗಳನ್ನು ಗಮನಿಸಿದ ಗಯಾನಾದ ದೇಶದ ಉಪಾಧ್ಯಕ್ಷ ಶ್ರೀ  ಭರತ್ ಜಗದೇವ್ ರವರು ಗಯಾನ ದೇಶದಲ್ಲಿ ಸರ್ಕಾರದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವರಿದ್ಧು ಆ ಕಾರ್ಯಕ್ರಮಕ್ಕೆ ದಯಮಾಡಿಸುವಂತೆ ಗಯಾನಾ ದೇಶದಲ್ಲಿರುವ ಭಾರತೀಯ ವಿದೇಶಾಂಗ ಸೇವೆಯ ರಾಯಭಾರಿ ಶ್ರೀನಿವಾಸ್ IFS ರೊಂದಿಗೆ ಶಿಷ್ಟಾಚಾರದೊಂದಿಗೆ  ಭಕ್ತಿಯ ಆಮಂತ್ರಣವಿತ್ತರು. ಈ ಸಂದರ್ಭದಲ್ಲಿ ಗಯಾನಾ ದೇಶದ ರಾಯಭಾರಿ ಶ್ರೀನಿವಾಸ್ ರವರು, ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ್ ರವರ ಪುತ್ರ ಬಿಜೆಪಿ ಯುವ ಮುಖಂಡ ಜಿ.ಎಸ್ ಅನೀತ್ ಕುಮಾರ್ ರವರು  ಹಾಜರಿದ್ದರು.

ಯಾರು ಈ  ಶ್ರೀ  ಭರತ್ ಜಗದೇವ್...?
----------------------------

2020 ರಿಂದ ಗಯಾನಾದ ಉಪಾಧ್ಯಕ್ಷರಾಗಿರುವ ಶ್ರೀ ಭರತ್ ಜಗದೇವ್ ಅಧ್ಯಕ್ಷ ಇರ್ಫಾನ್ ಅಲಿ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಜಗದೇವ್ ರವರು 1964 ರಲ್ಲಿ ಬ್ರಿಟಿಷ್ ಗಯಾನಾದ ಡೆಮೆರಾರಾ-ಮಹೈಕಾದಲ್ಲಿನ ಯೂನಿಟಿ ಹಳ್ಳಿಯೊಂದರಲ್ಲಿ ಜನಿಸಿದ ಭಾರತೀಯ ಸಂಜಾತ. 1912 ರಲ್ಲಿ, ಅವರ ಅಜ್ಜ, ರಾಮ್ ಜಿಯಾವಾನ್ ಅವರು ಬ್ರಿಟಿಷ್ ಭಾರತದಲ್ಲಿನ ಯುನೈಟೆಡ್ ಪ್ರಾವಿನ್ಸ್ನ ಅವಧ್ ಪ್ರದೇಶದ ಅಮೇಥಿ ಜಿಲ್ಲೆಯ ಪ್ಯೂರ್ ಠಾಕುರೈನ್ ಗ್ರಾಮದಿಂದ ಬ್ರಿಟಿಷ್ ಗಯಾನಾಕ್ಕೆ ಭಾರತೀಯ ಒಪ್ಪಂದ ವ್ಯವಸ್ಥೆಯಡಿ ವಲಸೆ ಹೋಗಿದ್ದರು. (ಇಂದಿನ ಭಾರತದ ಉತ್ತರ ಪ್ರದೇಶ ರಾಜ್ಯ)  ಜಗದೇವ್ ಅವರು 13 ವರ್ಷದವರಾಗಿದ್ದಾಗ ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿ (PPP), ಪ್ರಗತಿಶೀಲ ಯುವ ಸಂಘಟನೆಯ ಯುವ ಘಟಕವನ್ನು ಸೇರಿದರು. 16 ನೇ ವಯಸ್ಸಿನಲ್ಲಿ PPP ಯ ಸದಸ್ಯರಾದರು. ನಂತರ ಅವರು ಪಕ್ಷದ ಸ್ಥಳೀಯ ನಾಯಕತ್ವದ ಸ್ಥಾನಗಳಿಗೆ ಏರಿದರು. ಸುಸ್ಥಿರ ಅಭಿವೃದ್ಧಿ, ಹಸಿರು ಬೆಳವಣಿಗೆ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಹಲವಾರು ಜಾಗತಿಕ ನಾಯಕತ್ವ ಸ್ಥಾನಗಳನ್ನು ಹೊಂದಿದ್ದಾರೆ.