ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಎನ್ನುವುದಕ್ಕಿಂತ ಭಕ್ತಿ ಪ್ರತಿಷ್ಠಾಪನೆ ಎಂಬುದು ಸೂಕ್ತ : ತರಳಬಾಳು ಶ್ರೀಜಗದ್ಗುರುಗಳವರ ಅಭಿಮತ

  •  
  •  
  •  
  •  
  •    Views  

ದಿನಾಂಕ: 03-03-2023 - ಸ್ಥಳ : ಕೊಂಡಜ್ಜಿ ದಾವಣಗೆರೆ.

ಇಡೀ ಮಾನವ ಕುಲಕ್ಕೆ ಪ್ರಾಣ ಕೊಡುವವನು ದೇವರು. ದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಎನ್ನುವುದು ಸರಿಯಲ್ಲ. ಇದನ್ನು ಭಕ್ತಿ ಪ್ರತಿಷ್ಠಾಪನೆ ಎನ್ನುವುದು ಸೂಕ್ತ ಎಂದು  ಶ್ರೀ ತರಳಬಾಳು ಜಗದ್ಗುರು ಬೃಹ್ಮಠದ ಪೀಠಾಧಿಪತಿಗಳು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯ ಪಟ್ಟರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ ಹಾಗೂ ಗಂಗಾಪರಮೇಶ್ವರಿ ದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ನೆರವೇರಿಸಿ ಮಾತನಾಡಿದ ಶ್ರೀ ಜಗದ್ಗುರುಗಳವರು  ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ, ನನ್ನ ಕಾಲೇ ಕಂಬ, ದೇಹವೇ ದೇಗುಲ. ಶಿರವೇ ಹೊನ್ನ ಕಳಸವಯ್ಯವೆಂದು ಬಸವಣ್ಣ ಅವರು ಭಕ್ತಿಯನ್ನು ವಚನದಲ್ಲಿ ವರ್ಣಿಸಿದ್ದಾರೆ. ಹೀಗಾಗಿ ದೇವಸ್ಥಾನ ಕಟ್ಟುವುದಕ್ಕಿಂತ ಮನಸ್ಸಿನಲ್ಲಿಯೇ ದೇವರಭಕ್ತಿ ಕಾಣಬೇಕು ಎಂದರು. ಕೊಂಡಜ್ಜಿ ಗ್ರಾಮಸ್ಥರ ಗುರು ಭಕ್ತಿಯನ್ನು ಮೆಚ್ಚಲೇಬೇಕು. ಶ್ರದ್ಧಾ ಭಕ್ತಿಯಿಂದ ಎಲ್ಲ ಜಾತಿಯವರು ಒಂದಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದರು.

ದೇಶದಲ್ಲಿ ಧರ್ಮಗಳು ಜಾತಿಗಳಾಗಿ ಸಂಘರ್ಷಕ್ಕೆ ಇಳಿದಿರುವುದು ವಿಷಾದನೀಯ : 

ದೇಶದಲ್ಲಿ ಧರ್ಮಗಳು ಜಾತಿಗಳಾಗಿ ಬದಲಾಗಿದ್ದು, ಜಾತಿ, ಜಾತಿಗಳ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಧರ್ಮವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದು ಮನಸ್ಸಿನ ಒಳ ಧ್ವನಿ ಎಂದು ಶ್ರೀ ತರಳಬಾಳು ಜಗದ್ಗುರುಗಳವರು ಬೇಸರ ಬೇಸರ ವ್ಯಕ್ತಪಡಿಸಿದರು.

ಮಾನವನಲ್ಲಿ ಇರುವುದು ಎರಡೇ ಜಾತಿ. ಒಂದು ಗಂಡು ಮತ್ತೊಂದು ಹೆಣ್ಣು ಜಾತಿ ಮಾತ್ರ. ಈಗಿನ ಜಾತಿಗಳನ್ನು ನಾವು ಸೃಷ್ಠಿ ಮಾಡಿಕೊಂಡಿದ್ದೇವೆ. ಹೀಗಾಗಿ ಈ ಜಾತಿಗಳ ನಡುವಿನ ಸಂಘರ್ಷ ಬಿಟ್ಟು ಎಲ್ಲರೂ ಪ್ರೀತಿ ವಿಶ್ವಾಸದಿಂದ ಸಹ ಬಾಳ್ವೆ ನಡೆಸಬೇಕು ಎಂದು ಕರೆ ನೀಡಿದರು.

ಧರ್ಮ, ಭಾಷೆ, ಪ್ರಾಂತ್ಯ ಬಗ್ಗೆ ಎಲ್ಲರಿಗೂ ಒಂದು ಸೆಳೆತ ಇರುತ್ತದೆ. ವಿದೇಶದಲ್ಲಿ ಇರುವ ಭಾರತೀಯರಿಗೆ ತನ್ನ ದೇಶದ ಬಗ್ಗೆ ಸೆಳೆತ ಇರುವಂತೆ, ಕೊಂಡಜ್ಜಿ ಬಸಪ್ಪ ಮತ್ತು ಅವರ ಕುಟುಂಬಕ್ಕೆ ಕೊಂಡಜ್ಜಿ ಬಗ್ಗೆ ವಿಶೇಷ ಸೆಳೆತ ಇದೆ. ಇಂದಿನ ರಾಜಕೀಯದಲ್ಲಿ ಕೊಂಡಜ್ಜಿ ಬಸಪ್ಪ ಅವರಂತಹ ಪ್ರಾಮಾಣಿಕ ರಾಜಕಾರಣಿ ಸಿಗುವುದು ಅಪರೂಪ. ಇಂತಹ ಅಪರೂಪದ ರಾಜಕಾರಣಿ ಪಡೆದ ಕೊಂಡಜ್ಜಿ ಜನರೇ ಧನ್ಯರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಹಿರಿಯೂರಿನ ಷಡಾಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಎಚ್.ಎಸ್. ಶಿವಶಂಕರ್, ಮೋಹನ್ ಕೊಂಡಜ್ಜಿ, ನಿವೃತ್ತ ಐಪಿಎಸ್ ಅಧಿಕಾರಿ ಶಿವಕುಮಾರ್ ಕೊಂಡಜ್ಜಿ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಉಪಾಧ್ಯಕ್ಷ ಷಣ್ಮುಖಪ್ಪ ಕೊಂಡಜ್ಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಕೊಂಡಜ್ಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಜಿ. ಹನುಮಂತಪ್ಪ, ಆಂಜನೇಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗೌಡ್ರ ಸಂಗಪ್ಪ ಅಪಾರ ಭಕ್ತ ಸಮೂಹ ಪಾಲ್ಗೊಂಡರು.