ಧಾರ್ಮಿಕ ಹಾಗೂ ಪುರಾಣ ಮಹಾಪುರುಷರು ಶ್ರೀ ರೇವಣಸಿದ್ಧರು
ದಿನಾಂಕ 5-3-2023 ಸಿರಿಗೆರೆ: ವಿಶ್ವಬಂಧು ಮರುಳಸಿದ್ಧರಿಗೆ ವಿದ್ಯಾದಾನ ಜೊತೆಗೆ ವೈಚಾರಿಕೆ ಪ್ರಜ್ಞೆ ಬಿತ್ತಿದ ಮಹಾಪುರುಷ ಹಾಗೂ ಕ್ರಾಂತಿಯೋಗಿ ಮರುಳಸಿದ್ಧರನ್ನಾಗಿ ರೂಪಿಸಿದ ಮಹಾಪುರುಷ ರೇವಣಸಿದ್ದರು ಎಂದು ಕನ್ನಡ ಅಧ್ಯಾಪಕ ಎಚ್.ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅಣ್ಣನ ಬಳಗದವರು ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ರೇವಣಸಿದ್ಧ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಭಾರತೀಯ ಭಾಷೆಗಳ ಸಾಹಿತ್ಯದಲ್ಲಿ ಐತಿಹಾಸಿಕ ವ್ಯಕ್ತಿಗಳು, ಧಾರ್ಮಿಕ ಮಹಾಪುರುಷರು, ಪುರಾಣ ಪುರುಷರಾಗಿ ಹೊರಹೊಮ್ಮಿದ್ದಾರೆ. ಇದರಿಂದಾಗಿ ನೈಜ ಇತಿಹಾಸದ ಪರಿಚಯ ನಮಗಾಗಿಲ್ಲ. ಇದಕ್ಕೆ ಕನ್ನಡ ಸಾಹಿತ್ಯವು ಹೊರತಾಗಿಲ್ಲ ಎಂದು ವಿಷಾದಿಸಿದರು. ಪವಾಡ ಕಥೆಗಳಿಂದ ಒಡಗೂಡಿದ ಪುರಾಣ ಗ್ರಂಥಗಳು ಲಭ್ಯವಾಗಿರದಿದ್ದರೆ ಕೇವಲ ಶರಣರ ವಚನಗಳಿಂದ ಅವರ ಚರಿತ್ರೆಯ ಹಂದರವನ್ನು ನಿರ್ಮಿಸಲು ಖಂಡಿತ ಆಗುತ್ತಿರಲಿಲ್ಲ. ವೀರಶೈವ ಪುರಾಣಗಳಿಗೆ ತಮ್ಮದೇ ಆದ ಮಹತ್ವವಿದೆ ಎಂದು ತಿಳಿಸಿದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ, ರೇವಣಸಿದ್ದರು ವಿಶ್ವಬಂಧು ಮರುಳಸಿದ್ಧರಿಗೆ ನಾಮಕರಣ ಮಾಡಿದ್ದಲ್ಲದೆ ಅವರಿಗೆ ವಿದ್ಯಾದಾನ ಮಾಡಿ ವೈದಿಕ ಧರ್ಮದ ಅಂಧ ಆಚರಣೆಗಳನ್ನು ವಿರೋಧಿಸಿ ಕ್ರಾಂತಿಯೋಗಿ ಮರುಳ ಸಿದ್ಧರನ್ನಾಗಿ ಮಾಡಿದ್ದಾರೆ. ಭಾರತೀಯ ಭಾಷೆಗಳ ಸಾಹಿತ್ಯದಲ್ಲಿ ಐತಿಹಾಸಿಕ ವ್ಯಕ್ತಿಗಳು, ಧಾರ್ಮಿಕ ಮಹಾಪುರುಷರು, ಪುರಾಣ ಪುರುಷರಾಗಿ ಹೊರಹೊಮ್ಮಿದ್ದಾರೆ. ದೃಷ್ಟಿಯಿಂದ ಇವರಿಬ್ಬರೂ ಬೇರೆ ಕಾಲದ ಬೇರೆ. ಅವರೀರ್ವರ ವಿಚಾರಧಾರೆಗಳು ಬಸವಾದಿ ಶರಣರ ಕಲ್ಯಾಣ ಕ್ರಾಂತಿಗೆ ಮೂಲ ಆಧಾರವಾಗಿ ನಿಂತಿವೆ ಎಂದರು.
ಇಂದು ಮಾಹಿತಿ ಯುಗದಲ್ಲಿ ನಾವು ಹೇಗೆ ಅರ್ಥೈಸಬೇಕು, ಯಾವುದಕ್ಕೆ ಮಹತ್ವ ನೀಡಬೇಕು ಎಂಬುದನ್ನು ಅರಿಯಬೇಕು ಹೀಗೆ ಅರಿತಾಗ ಎಷ್ಟೋ ಶರಣರ ಚರಿತ್ರೆಯಲ್ಲಿನ ಅನುಮಾನಾಸ್ಪದ ವಿಷಯಗಳು ಸ್ಪಷ್ಟವಾಗುವುವು. ಹಳೆಯ ಕಾವ್ಯ ಪುರಾಣಗಳ ಆಧಾರದಿಂದಲೇ ಅವರ ಚರಿತ್ರೆಯನ್ನು ನೈಜವಾದ ರೀತಿಯಲ್ಲಿ ಪುನಃ ರಚಿಸಲು ಸಾಧ್ಯವಾಗುವುದು ಎಂದರು.
ಬೆಳಗ್ಗೆ 6.30 ವಚನಗಾಯನವನ್ನು ಬಿ.ಲಿಂಗಯ್ಯ ವಸತಿ ಪ್ರೌಢಶಾಲೆಯ ಲಾವಣ್ಯ, ವಿದ್ಯಾ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಶಿವಮಂತ್ರ ಲೇಖನವನ್ನು ಬರೆದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ, ಉಪಾಧ್ಯಕ್ಷ ಯು.ಚಂದ್ರಪ್ಪ, ಸದಸ್ಯರಾದ ಎಚ್.ಎ.ವಿಶ್ವಕುಮಾರ್, ಪ್ರಸನ್ನಕುಮಾರ್, ಗಿರೀಶ್,ಪಿ.ಎಸ್.ನಾಗರಾಜ್ ಇತರರಿದ್ದರು.