ಲಿಂಗೈಕ್ಯ ಶ್ರೀ ಮಾರ್ಗದ ಮಲ್ಲಿಕಾರ್ಜುನಪ್ಪ – ಅಣ್ಣಯ್ಯ ನವರ ಸಂಸ್ಮರಣೆ
ದಿನಾಂಕ: 05.03.2023, ಬೀರೂರು
ಜನನ : 01.07.1938
1898 ರಿಂದ 1908 ರವರೆಗಿನ ಹತ್ತು ವರ್ಷಗಳಲ್ಲಿ ಪ್ರಪಂಚದಾದ್ಯಂತ ಪ್ಲೇಗ್ ಖಾಯಿಲೆಯ ಮೂರನೆಯ ಹಂತ ಕಾಣಿಸಿಕೊಂಡಾಗ, ಭಾರತ ದೇಶ ಒಂದರಲ್ಲೇ ಮರಣ ಹೊಂದಿದವರ ಸಂಖ್ಯೆ 60 ಲಕ್ಷ ಜನರು. 1900 ನೆಯ ಇಸವಿಯ ಆಸು ಪಾಸಿನ ವರ್ಷದಲ್ಲಿ ಬೀರೂರಿನ ಮಧ್ಯಭಾಗದಲ್ಲಿ ನೆಲೆಸಿದ್ದ ಮನೆತನದ ಮೂಲ ಪುರುಷರುಗಳಾದ ಗುರುನಂಜಪ್ಪ ಮತ್ತು ಬಸವಲಿಂಗಪ್ಪ ಸಹೋದರರು ಪ್ಲೇಗ್ ಕಾಯಿಲೆಯಿಂದ ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಬಸವಲಿಂಗಪ್ಪನವರ ಏಕೈಕ ಪುತ್ರನಾದ ಚಿಕ್ಕ ಹುಡುಗನಾದ ಮಹದೇವಪ್ಪನನ್ನು ಕರೆದುಕೊಂಡು ಊರಿನಿಂದ ಎರಡು ಕಿ.ಮೀ. ದೂರದ ಹೊರವಲಯದಲ್ಲಿದ್ದ ಬಯಲು ಪ್ರದೇಶಕ್ಕೆ ಬಂದು ನೆಲೆಸುತ್ತಾರೆ. ತಮ್ಮ ತಮ್ಮ ಕುಟುಂಬಗಳನ್ನು ಪ್ಲೇಗ್ನಿಂದ ರಕ್ಷಿಸಿಕೊಳ್ಳಲು ಊರ ಕುಟುಂಬಗಳಿಗೆ ತೋರಿಸಿದ ಮಾರ್ಗ- ಬಯಲು ಪ್ರದೇಶವಾದ್ದರಿಂದ ಈ ಸ್ಥಳಕ್ಕೆ ಮಾರ್ಗದ ಕ್ಯಾಂಪ್ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ.
ಮಾರ್ಗದ ಮನೆತನದ ಮುಂದಿನ ಮೂಲ ಪುರುಷ-ಮಾರ್ಗದ ಮಹದೇವಪ್ಪನವರು. ಮೊದಲ ಪತ್ನಿ ನಂಜಮ್ಮನವರು ತರೀಕೆರೆ ತಾಲ್ಲೂಕು, ಹುಣಸಘಟ್ಟ ಗ್ರಾಮದ ಎನ್.ಆರ್.ಹಲಗಪ್ಪನವರ ಹಿರಿಯ ಸಹೋದರಿ. ಮಹದೇವಪ್ಪ-ನಂಜಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳು-ಮಾರ್ಗದ ಮಲ್ಲಪ್ಪನವರು ಮತ್ತು ಮಾರ್ಗದ ರುದ್ರಪ್ಪನವರು. ನಂಜಮ್ಮನವರ ಮರಣಾ ನಂತರ ಮಹದೇವಪ್ಪನವರು ವರಿಸಿದ್ದು - ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಟ್ನಳ್ಳಿಯ ಚನ್ನಮ್ಮನವರನ್ನು.
ಮಾರ್ಗದ ಮಹದೇವಪ್ಪನವರನ್ನು ನಾವುಗಳೆಲ್ಲರೂ ಕರೆಯುತ್ತಿದ್ದದ್ದು “ಅಜ್ಜಪ್ಪನವರು” ಎಂದೂ ಹಾಗೂ ಚನ್ನಮ್ಮನವರನ್ನು “ಅವ್ವ” ಎಂದು. ಮಾರ್ಗದ ಮಹದೇವಪ್ಪನವರು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1945 ರಿಂದ 1947 ರವರೆಗೆ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿ ಅಂದರೆ MRA (Member-Representative Assembly) ಆಗಿ ಚುನಾಯಿತರಾಗಿ, ಮೈಸೂರು ಮಹಾರಾಜರ ಆಸ್ಥಾನದಲ್ಲಿ ಬೀರೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅದೇ ಕಾಲದಲ್ಲಿ ಲಿಂಗದಹಳ್ಳಿಯ ಎಲ್. ಸಿದ್ದಪ್ಪನವರು ಸಹ ಚನ್ನಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಸ್ಥಾನಕ್ಕೆ ಚುನಾಯಿತರಾಗಲು ಆಯಾ ಕ್ಷೇತ್ರದ ಭೂಮಿ/ಜಮೀನುಗಳ ಖಾತೆದಾರರುಗಳು ಮಾತ್ರ ಮತ ಚಲಾಯಿಸುವ ಹಕ್ಕುಳ್ಳವರಾಗಿದ್ದರು.
1957-62 ರ ಸಮಯದಲ್ಲಿ ಬೀರೂರಿನ ಶಾಸಕರಾದ ಘರ್ಜೆ ಮರುಳಪ್ಪನವರ ಕಾಲದಲ್ಲಿ ಮಾರ್ಗದ ಮಹದೇವಪ್ಪನವರು ಬೀರೂರಿನ STJV ಹಾಸ್ಟೆಲ್ ಅಂದರೆ ಶ್ರೀ ತರಳಬಾಳು ಜಗದ್ಗುರು ವೀರಶೈವ ಹಾಸ್ಟೆಲ್ನ ಜವಾಬ್ದಾರಿಯನ್ನು ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿದ್ದ ಸಮಯದಲ್ಲಿ ಸರ್ಕಾರದಿಂದ STJV ಹಾಸ್ಟೆಲ್ಗೆ ಪಡೆದ ಸುಮಾರು 45 ಎಕರೆ ಜಮೀನು ಬಗ್ಗೆ ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದ್ದ ಹಣವನ್ನು ಒಟ್ಟು ಕುಟುಂಬದ ಹಣದಲ್ಲಿ ಕಟ್ಟಿ, ನಂತರದ ದಿನಗಳಲ್ಲಿ ಸಿರಿಗೆರೆ ಮಠದಿಂದ ಪಡೆದುಕೊಂಡರು ಎಂಬುದನ್ನು ಸಿರಿಗೆರೆ ಮಠದ ಹಿರಿಯ ಜಗದ್ಗುರುಗಳಾದ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಮಾರ್ಗದ ಮಹದೇವಪ್ಪನವರ 1980 ನೇ ಇಸವಿಯ “ಶಿವಗಣಾರಾಧನೆ” ಕಾರ್ಯಕ್ರಮದಲ್ಲಿ ತಿಳಿಸಿದ್ದನ್ನು ಊರಿನ ಪ್ರಮುಖರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಮಹದೇವಪ್ಪ-ಚನ್ನಮ್ಮ ದಂಪತಿಗೆ ಏಳು ಜನ ಮಕ್ಕಳು - ಮೂರು ಹೆಣ್ಣು ಮತ್ತು ನಾಲ್ಕು ಗಂಡು. ಅವ್ವನಿಗೆ ಮೊದಲ ಪತ್ನಿಯ ಎರಡು ಮಕ್ಕಳೂ ಸೇರಿ ಒಟ್ಟು ಒಂಭತ್ತು ಜನ ಮಕ್ಕಳನ್ನು ಸಾಕಿ ಸಲಹುವ ಗುರುತರ ಜವಾಬ್ದಾರಿ. ಅವ್ವನ ಮೊದಲ ನಾಗಮ್ಮ-ನನ್ನ ತಾಯಿ-ಹುಣಸಘಟ್ಟದ ಲಿಂಗಮರಿಯಪ್ಪನವರ ಪತ್ನಿ, ಎರಡನೇ ಪತ್ರಿ ಲಲಿತಮ್ಮ-ಚನ್ನಗಿರಿಯ ಲಿಂಗದಹಳ್ಳಿಯ ಶಿವಮೂರ್ತಿಯವರ ಪತ್ನಿ, ಮೂರನೆಯ ಪುತ್ರಿ-ಶಾಂತಮ್ಮಸಿದ್ದಪ್ಪನವರ ಪುತ್ರ ಎಲ್.ಎಸ್. ದಾವಣಗೆರೆಯ ಆಲೂರು ಮುರಿಗೆಪ್ಪನವರು ಪತ್ನಿ. ಚನ್ನಮ್ಮನವರ ನಾಲ್ಕು ಜನ ಗಂಡು ಮಕ್ಕಳಲ್ಲಿ ಮೊದಲನೆಯವರೇ ಮಲ್ಲಿಕಾರ್ಜುನಪ್ಪನವರು- ಅಣ್ಣಯ್ಯನವರು. ಅಣ್ಣಯ್ಯ ಚಿಕ್ಕವನಾಗಿದ್ದಾಗ ವಿದ್ಯಾಭ್ಯಾಸದ ತಳಹದಿ ಸಿಕ್ಕಿದ್ದು ಸಿರಿಗೆರೆ ಸಂಸ್ಥಾನದ ಮಠದ ಶಾಲೆಯಲ್ಲಿ. ಈಗ ಮೈಸೂರಿನಲ್ಲಿ ನೆಲೆಸಿರುವ ಅಣ್ಣಯ್ಯನವರ ಶಾಲಾ ಸಹಪಾಠಿ ಶ್ರೀ ಜ್ಯೋತಿ ಲಿಂಗನಗೌಡರು ಹೇಳುವ ಪ್ರಕಾರ, ಮಲ್ಲಿಕಾರ್ಜುನಪ್ಪನವರನ್ನು “ಮಲ್ಲಿ” ಎಂದು ಸಹಪಾಠಿಗಳೆಲ್ಲರೂ ಕರೆಯುತ್ತಿದ್ದರು. ಅಂದಿನ ಕಾಲದ ಪ್ರತಿಷ್ಠಿತ ಮಾರ್ಗದ ಮನೆತನದ ಹುಡುಗನಾಗಿದ್ದರಿಂದ, ಮಲ್ಲಿಗೆ ಪ್ರತಿದಿನ ಸಿರಿಗೆರೆಯ ಮಠದಲ್ಲೇ ಊಟದ ವ್ಯವಸ್ಥೆ ಏರ್ಪಡಿಸಲಾಗುತ್ತಿತ್ತು. ಇತರೆ ವಿದ್ಯಾರ್ಥಿಗಳಿಗೆ ಮಠದ ಹಾಸ್ಟೆಲ್ನಲ್ಲಿ ಊಟದ ವ್ಯವಸ್ಥೆ ಇರುತ್ತಿತ್ತು.
ಯೌವನಾವಸ್ಥೆಯಲ್ಲಿ ಅಣ್ಣಯ್ಯ ವರಿಸಿದ್ದು ಹೊನ್ನಾಳಿ ತಾಲ್ಲೂಕು, ಬೆನಕನಹಳ್ಳಿಯ ಶಾಂತಮ್ಮನವರನ್ನು. ಶಾಂತಮ್ಮನವರು ಬೆನಕನಹಳ್ಳಿಯ ದೊಡನೆ ಶಂಕ್ರಪ್ಪಗೌಡ್ರು-ಬಸಮ್ಮ ದಂಪತಿಯ ಪುತ್ರಿ. ಶಾಂತಮ್ಮನವರ ಸಹೋದರರುಗಳಾದ ಡಿ.ಜಿ. ಬಸವನಗೌಡ್ರು ಮತ್ತು ಡಿ.ಜಿ. ಶಾಂತನಗೌಡ್ರು ಇಬ್ಬರೂ ಸಹ ಹೊನ್ನಾಳಿಯ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆನಕನಹಳ್ಳಿಯ ಶಾಂತಮ್ಮನವರ ಮನೆತನ ಸಿರಿಗೆರೆ ಸಂಸ್ಥಾನ ಮಠಕ್ಕೆ 1960 ರ ದಶಕದಲ್ಲಿ ಬೆಳ್ಳಿ ಪಲ್ಲಕ್ಕಿಯನ್ನು ದಾನವಾಗಿ ಕೊಟ್ಟ ಹಿರಿಮೆ ಹೊಂದಿದೆ.
ಅಣ್ಣಯ್ಯ-ಶಾಂತಮ್ಮನವರಿಗೆ ನಾಲ್ಕು ಜನ ಮಕ್ಕಳು-ಒಂದು ಹೆಣ್ಣು ಮತ್ತು ಮೂರು ಗಂಡು, ಮಗಳು ಸುಮ ಮತ್ತು ಗಂಡು ಮಕ್ಕಳಾದ ಮಾರ್ಗದ ಸುರೇಶ್, ಮಾರ್ಗದ ದಿನೇಶ್ ಮತ್ತು ಮಾರ್ಗದ ವಿನೋದ್. ಎಂಟು ಜನ ಮೊಮ್ಮಕ್ಕಳು ಶೃತಿ ಮತ್ತು ಸುನಿಲ್, ಸ್ಮರಣ್ ಮತ್ತು ಓಂಕಾರ್, ದರ್ಶನ್ ಮತ್ತು ಮತ್ತು ಮೇಘಾ ಹಾಗೂ ನವ್ಯ ಮತ್ತು ನೀಲ, ಒಬ್ಬ ಮರಿ ಮೊಮ್ಮಗ-ವೀರೇನ್ ರೋಹನ್.
ಅಣ್ಣಯ್ಯನವರಿಗೆ ಸಾಂಸಾರಿಕ ಜೀವನದ ಜೊತೆ ಜೊತೆಗೆ ಹಿರಿಯ ಸಹೋದರ ಮಾರ್ಗದ ಮಲ್ಲಪ್ಪನವರ ರಾಜಕೀಯ ಜೀವನದ ಮೇಲುಸ್ತುವಾರಿ ಮತ್ತು ಕುಟುಂಬದ ಆಸ್ತಿಗಳ ನಿರ್ವಹಣೆಯ ಜವಾಬ್ದಾರಿ.
ಮಾರ್ಗದ ಮಲ್ಲಪ್ಪನವರು 1967, 1972 ಮತ್ತು 1978 ರಲ್ಲಿ ಮೂರು ಬಾರಿ ಬೀರೂರಿನ ಶಾಸಕರಾಗಿ ಆಯ್ಕೆ. 1978 ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸುರವರ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗಿ ಆಯ್ಕೆ ಈ ಮೂರೂ ಅವಧಿಗಳ ಚುನಾವಣೆ ಸಂದರ್ಭದಲ್ಲಿ ಕಿರಿಯ . ಸಹೋದರರುಗಳಾದ ಮಾರ್ಗದ ರುದ್ರಪ್ಪನವರು, ಅಣ್ಣಯ್ಯನವರು, ಮಾರ್ಗದ ಬಸವಲಿಂಗಪ್ಪನವರು, ಮಾರ್ಗದ ಡಾ|| ಗುರುನಂಜಪ್ಪನವರು ಹಾಗೂ ಮಾರ್ಗದ ಷಡಾಕ್ಷರಪ್ಪನವರ ಸಹಕಾರ ಅನನ್ಯವಾದದ್ದು.
ಅಣ್ಣಯ್ಯನವರು 1972-73 ನೇ ಸಾಲಿನಲ್ಲಿ ಬೀರೂರು ಪುರಸಭೆಯ ಅಧ್ಯಕ್ಷರಾಗಿ, ಬೀರೂರಿನ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢ ಶಾಲೆಗೆ ಅಭಿವೃದ್ಧಿ, ಉನ್ನತೀಕರಣ ಮತ್ತು ಆರ್ಥಿಕ ಸಹಾಯ, ಬೀರೂರಿನ ತರಳಬಾಳು ವಿದ್ಯಾ ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾಗಿ, ಸಿರಿಗೆರೆಯ ತರಳಬಾಳು ಸಂಸ್ಥಾನ ಮಠದ ಸಾಧು ವೀರಶೈವ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿ, ಬೀರೂರಿನ ಅಡಿಕೆ ಬೆಳೆಗಾರರ ಸಂಘದ ಗೌರವಾಧ್ಯಕ್ಷರಾಗಿ ಹಾಗೂ 2003 ನೇ ಸಾಲಿನಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿಯ ಕೋಶಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿರುತ್ತಾರೆ.
ಬೀರೂರು ಹಾಗೂ ಸುತ್ತಮುತ್ತಲಿನ ಯಾವುದೇ ಮನೆತನದ ವ್ಯಕ್ತಿಗಳ ನಡುವಿನ ವೈಮನಸ್ಸು ಅಥವಾ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಅಣ್ಣಯ್ಯನವರ ಅಂತಿಮ ತೀರ್ಮಾನವೇ ವೇದ ವಾಕ್ಯ. ಅಣ್ಣಯ್ಯನವರ ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ವ್ಯಾಜ್ಯ ಮತ್ತು ಕಲಹಗಳಲ್ಲಿ ಪರಿಹಾರವನ್ನು ಕಂಡುಕೊಂಡು, ಸೌಹಾರ್ದತೆಯಿಂದ ಬಾಳಿದ ಮತ್ತು ಬಾಳುತ್ತಿರುವ ಕುಟುಂಬ ಮತ್ತು ಮನೆತನಗಳು ಅನೇಕ.
ಶಾಂತಮ್ಮನರು ಮತ್ತು ಮಾರ್ಗದ ಮಲ್ಲಿಕಾರ್ಜುನಪ್ಪನವರು ಅನ್ನೋನ್ಯ ದಾಂಪತ್ಯದ ಪ್ರತೀಕವಾಗಿ ನಮ್ಮೆದುರು ಬದುಕಿ ಬಾಳಿದ್ದಾರೆ. ಕಾಲ ನಿರ್ಧರಿಸಿದ ಶುಭದಿನಗಳಂದು ಅಂದರೆ ಶಾಂತಮ್ಮನವರು ಗೌರೀ ಹಬ್ಬದ ದಿವಸ ಹಾಗೂ ಅಣ್ಣಯ್ಯನವರು ಮಹಾಶಿವರಾತ್ರಿಯ ದಿವಸ ಲಿಂಗೈಕ್ಯರಾಗಿರುವುದು ಶಿವ-ಪಾರ್ವತಿಯರ ಅರ್ಧ ನಾರೀಶ್ವರ ಪ್ರಜ್ಞೆಗೆ ನಿದರ್ಶನ.
ವರ ಕವಿ ಡಾ|| ದ.ರಾ. ಬೇಂದ್ರೆಯವರು ಆಧ್ಯಾತ್ಮ ಕವಿ ಮಧುರ ಚೆನ್ನರನ್ನು ಮಣ್ಣು ಮಾಡಿದ ದಿನ “ಅವರನ್ನು ಸಾವಿನ ನಂತರ ನಾವು ಹೂತಿಲ್ಲ ಅವರನ್ನು ಬಿತ್ತಿದ್ದೇವೆ” ಎಂದು ಹೇಳಿದ ಮಾತು ಇಲ್ಲಿ ಅತ್ಯಂತ ಪ್ರಸ್ತುತ. ಶಾಂತಮ್ಮ ಮತ್ತು ಅಣ್ಣಯ್ಯನವರನ್ನು ನಾವೂ ಸಹ ಬಿತ್ತಿದ್ದೇವೆ. ಅವರಿಬ್ಬರ ಆದರ್ಶ ದಾಂಪತ್ಯದ ಭಾವಗಳು ಮೊಳೆತು, ಚಿಗುರಿ, ಹುಲುಸಾಗಿ ಬೆಳೆದು, ನಮ್ಮೆಲ್ಲರಿಗೂ ದಾರಿ ದೀಪವಾಗಲಿ. ಅವರಿಬ್ಬರ ವಿಚಾರಧಾರೆ ಮತ್ತು ಚಿಂತನೆಗಳು ನಮ್ಮೆಲ್ಲರ ಏಳಿಗೆಗೆ ಸಹಕರಿಸಲಿ, ಶರಣು ಶರಣಾರ್ತಿಗಳು.
ಸಹಕಾರ : ಶ್ರೀಮತಿ ವಿಶಾಲ ಮತ್ತು ಶ್ರೀಯುತ ಮಾರ್ಗದ ಷಡಾಕ್ಷರಪ್ಪನವರು, ಶ್ರೀಮತಿ ನಳಿನ ಮತ್ತು ಶ್ರೀ ಮಾರ್ಗದ ಸುರೇಶ್, ಶ್ರೀಮತಿ ಅನುಪಮ ಮತ್ತು ಶ್ರೀ ಮಾರ್ಗದ ದಿನೇಶ್, ಶ್ರೀಮತಿ ಗಾಯಿತ್ರಿ ಮತ್ತು ಶ್ರೀ ಮಾರ್ಗದ ವಿನೋದ್, ಶ್ರೀ ಮಾರ್ಗದ ಮಧು ಮತ್ತು ಪ್ರೊ|| ಶ್ರೀಮತಿ ಪದ್ಮಾ ಕಲ್ಯಾಣ್ ಕುಮಾರ್
ಸಂಗ್ರಹ : ಶ್ರೀಮತಿ ಸುಮ ರವಿ ಮತ್ತು ಶ್ರೀ ಹುಣಸಘಟ್ಟ ಲಿಂಗಮರಿಯಪ್ಪ ರವಿ