ತಲೆಯೊಳಗಿನ ಕೆಟ್ಟ ವಿಚಾರಗಳನ್ನು ತೆಗೆದುಹಾಕಿ, ಮನಸ್ಸನ್ನು ಶುದ್ಧಿಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ದಿನಾಂಕ 9.3.2023ರ ಗುರುವಾರದಂದು ಅರಸೀಕೆರೆ ತಾಲ್ಲೂಕು ನಾಗೇನಹಳ್ಳಿ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮದುಜ್ಜಯಿನಿ ಸದ್ಧರ್ಮಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು.

ಪರಮಪೂಜ್ಯರು ತಮ್ಮ ಆಶೀರ್ವಚನ ನೀಡುತ್ತಾ, ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದ್ದ ಮಂಡೆ ತೆಗೆಸುವುದು ಎಂಬ ಪದದ ತಪ್ಪು ಗ್ರಹಿಕೆಯನ್ನು ವಿಶ್ಲೇಷಿಸಿದರು. ಅದು ಮಂಡೆ ತೆಗಿಸುವುದು ಅಲ್ಲ  ಮುಡಿ ತೆಗಿಸುವುದು ಎಂದು ಆಗಬೇಕು. ಮುಡಿ ತೆಗಿಸುವುದು ಎಂದರೆ ತಲೆಯೊಳಗಿನ ಕೆಟ್ಟ ವಿಚಾರಗಳನ್ನು ತೆಗೆದುಹಾಕಿ, ಮನಸ್ಸನ್ನು ಶುದ್ಧಿಗೊಳಿಸಿಕೊಳ್ಳುವುದು ಎಂದು ಹೇಳಿದರು.

ಸಮಾರಂಭದಲ್ಲಿ ವಚನ ನೃತ್ಯಗಳನ್ನು ಪ್ರದರ್ಶಿಸಿದ ಹಾರನಹಳ್ಳಿ ಶ್ರೀ ತರಳಬಾಳು ಕಾನ್ವೆಂಟ್ ವಿದ್ಯಾರ್ಥಿಗಳ ನೃತ್ಯದ ಕುರಿತಾಗಿ ಮಾತನಾಡಿದ ಶ್ರೀಗಳು ಗರ್ಭಗುಡಿಯಲ್ಲಿರುವ ದೇವರೂ ದೇವರೆ. ಬಸವಣ್ಣನವರು ಕರುಣಿಸಿರುವ ಇಷ್ಟಲಿಂಗವೂ ಸಹ ದೇವರೆ. ನೀವು ಯಾವುದನ್ನು ಪೂಜಿಸಿದರೂ ಅದರ ಹಿಂದೆ ಇರುವ ಭಕ್ತಿಯು ಮುಖ್ಯವಾಗಿರುತ್ತದೆ.ಗೋಡೆ ಗಡಿಯಾರ ಮತ್ತು ಕೈಗಡಿಯಾರಗಳ ಉದಾಹರಣೆಯ ಮೂಲಕ ವಿಶ್ಲೇಷಿಸಿದರು.

ಮೀಸಲು ಬಗ್ಗೆ ಮಾತನಾಡುತ್ತಾ ಹೂವು, ನೀರು, ಹಾಲು ಮೀಸಲಲ್ಲ. ಏಕೆಂದರೆ ಹೂವು ದುಂಬಿಯಿಂದ ಎಂಜಲಾಗಿರುತ್ತದೆ. ನೀರು ಮೀನಿನಿಂದ ಎಂಜಲಾಗಿರುತ್ತದೆ ಆದ್ದರಿಂದ ನಿಜವಾದ ಮೀಸಲು ಎಂದರೆ ಭಕ್ತಿ ಎಂದು ತಿಳಿಸಿದರು.

ರೈತರ ಬಗ್ಗೆ ಮಾತನಾಡುತ್ತಾ ರಾಜಕಾರಣಿಗಳು ಚುನಾವಣಾ ಪ್ರಣಾಳಿಕೆಯಲ್ಲಿ ಹಲವಾರು ಆಶ್ವಾಸನೆ ನೀಡುತ್ತಾರೆ. ಅದರ ಬದಲು ರೈತರ ಭೂಮಿಯನ್ನು ಕೈಗಾರಿಕೆಗಳಿಗೆ ಬಳಸಿಕೊಂಡರೆ ಆ ಭೂಮಿಯ ಮಾಲೀಕತ್ವವು ರೈತರ ಹೆಸರಿನಲ್ಲಿಯೇ ಇರಬೇಕು ಎಂಬುದನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕು. ಅಂತಹ ಕಾನೂನನ್ನು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಎಚ್ ಆರ್ ಬಸವರಾಜಪ್ಪನವರು ಜಾರಿಗೆ ತರಲು ಹೋರಾಟ ಮಾಡಬೇಕೆಂದು ಹೇಳಿದರು.

ನಾವು ಈ ದಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಿಸಿಲು ಬೆಳದಿಂಗಳು ಅಂಕಣದಲ್ಲಿ ಪುಣ್ಯಕ್ಷೇತ್ರ ಕಾಶಿಯ ಗಂಗಾ ನದಿಯ ಮೇಲೆ ನೆನಪಿನ ದೋಣಿ ಎಂಬ ಲೇಖನದಲ್ಲಿ ಪುಣ್ಯಕ್ಷೇತ್ರ ಕಾಶಿಯ ಬಗ್ಗೆ ಹಾಗೂ ನಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡಿದ್ದೇವೆ ಅದನ್ನು ಎಲ್ಲರೂ ಓದಿಕೊಳ್ಳಿ ಎಂದು ತಿಳಿಸಿದರು.

ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ತಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಗ್ಗೆ ಪ್ರಸ್ತಾಪಿಸಿದರು.  ಇಂದು ಕೆಲವು ಮಠಾಧೀಶರು ಬಸವ ತತ್ವ ಪ್ರಸಾರದ ನೆಪದಲ್ಲಿ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ನಿಜವಾಗಿಯೂ ಆಚರಣೆಯಲ್ಲಿ ತರುತ್ತಿಲ್ಲವೆಂದು ಅಭಿಪ್ರಾಯಪಟ್ಟರು.

ತಾವು ಅಮೆರಿಕಕ್ಕೆ ಹೋದಾಗ ಗಣೇಶ ಹಬ್ಬದ ಸಂದರ್ಭ. ಅಲ್ಲಿನ ಒಂದು ಮಗು ತನ್ನ ತಾಯಿಯ ಬಳಿ  “ಗಣೇಶ ಯಾವುದೇ ಆಹಾರವನ್ನು ಸ್ವೀಕರಿಸುವುದಿಲ್ಲ ಆದರೆ ಏಕೆ ಅದರ ಹೊಟ್ಟೆ ದೊಡ್ಡದಾಗಿದೆ” ಎಂದು ಮುಗ್ಧ ಮನಸ್ಸಿನಿಂಧ ಕೇಳಿದ್ದ ಪ್ರಶ್ನೆಯನ್ನು ಸ್ಮರಿಸಿದರು. ಜಗತ್ತಿನಲ್ಲಿ ತಾಯಿಯು ಮಗುವಿನ ಮೇಲೆ ತೋರುವ ನಿಸ್ವಾರ್ಥ ತ್ಯಾಗವನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಚಿಕ್ಕಮಗಳೂರು ಶ್ರೀ ಬಸವ ಮಂದಿರದ ಡಾ. ಶ್ರೀ ಬಸವ ಮರುಳುಸಿದ್ದ ಸ್ವಾಮಿಗಳವರು, ರಾಜ್ಯ ರೈತ ಸಂಘದ ಅಧ್ಯಕ್ಷರು ಹಾಗೂ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಮಾಜ ಸಿರಿಗೆರೆಯ ಅಧ್ಯಕ್ಷರಾದ ಎಚ್ ಆರ್ ಬಸವರಾಜಪ್ಪ ಹಾಗೂ ಸಮಾಜದ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.