ಬದುಕಿನ ಸುಖ-ದುಃಖ ಅರ್ಥೈಸುವ ಬೇವು-ಬೆಲ್ಲದ ಯುಗಾದಿ : ಶ್ರೀ ತರಳಬಾಳು ಜಗದ್ಗುರುಗಳವರು
ಬದುಕಿನ ಸುಖ-ದುಃಖ ಅರ್ಥೈಸುವ ಬೇವು-ಬೆಲ್ಲದ ಯುಗಾದಿ!
ಭಾರತೀಯರು ವಿಶ್ವದ ಇತರೆ ದೇಶಗಳ ಜನರಂತೆ ದೈನಂದಿನ ವ್ಯವಹಾರದಲ್ಲಿ ಇಂಗ್ಲೀಷ್ ಕ್ಯಾಲೆಂಡರನ್ನೇ ಅನುಸರಿಸುತ್ತಾರೆ. ಆದರೆ ಮಂಗಳ ಕಾರ್ಯಗಳನ್ನು ಮಾಡುವಾಗ ಮಾತ್ರ ಸಾಂಪ್ರದಾಯಿಕವಾಗಿ ದೇಶೀಯ ಪಂಚಾಂಗದ ತಿಥಿ ವಾರ ನಕ್ಷತ್ರಗಳನ್ನು ನೋಡುತ್ತಾರೆ. ಅಂತಹ ಹಬ್ಬಗಳಲ್ಲಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳ ಒಂದು ಪ್ರಮುಖವಾದ ಹಬ್ಬ "ಯುಗಾದಿ".
ಫಾಲ್ಗುಣ ಮಾಸದ ಅಮಾವಾಸ್ಯೆಯ ಮರುದಿನ ಬರುವ ಚೈತ್ರ ಮಾಸದ ಪಾಡ್ಯದ ದಿವಸವೇ ಯುಗಾದಿ ಹಬ್ಬ. ಹೊಸ ವರ್ಷದ ಮೊದಲ ದಿನ. ಹೊಸ ಚಿಗುರಿನಿಂದ ಗಿಡ ಮರಗಳು ಶೋಭಿಸುವಂತೆ ಜನರು ಮೈಗೆ ಎಣ್ಣೆ ನೀರು ಹಾಕಿಕೊಂಡು ಹೊಸ ಬಟ್ಟೆಯನ್ನು ಉಟ್ಟು ಸಡಗರ ಸಂಭ್ರಮಗಳಿಂದ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಒಂದು ವರ್ಷದ ಹಿಂದೆ ಆತಂಕ ಮತ್ತು ಭಯದಿಂದ ಸ್ವಾಗತಿಸಿದ್ದ ಪ್ಲವ ಸಂವತ್ಸರವು ಸಂಪೂರ್ಣ ಜಗತ್ತನ್ನು ತಲ್ಲಣಗೊಳಿಸಿದ ಕೊರೊನಾ ಮಹಾಮಾರಿಯ ರಕ್ಕಸ ಆರ್ಭಟಕ್ಕೆ ಸಾಕ್ಷಿಯಾಗಿ ನಿರ್ಗಮಿಸಲಿದೆ.
ಒಮೊಮ್ಮೆ ದುಃಖ-ದುಮಾನಗಳು, ಕಷ್ಟ-ಕೋಟಲೆಗಳು ಹಠಾತ್ತನೆ ಸುನಾಮಿ ಅಲೆಯಂತೆ ಎಲ್ಲಿಂದಲೋ ಬಂದು ಒಂದರ ಮೇಲೊಂದರಂತೆ ಸರದಿಯ ಮೇಲೆ ಬಂದೆರಗಿ ಮನುಷ್ಯನನ್ನು ಜರ್ಜರಿತಗೊಳಿಸುತ್ತವೆ. ಅವುಗಳಿಂದ ಪಾರಾಗುವುದು ಕಷ್ಟಸಾಧ್ಯವಾದರೂ ಅಂತಹ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಮನುಷ್ಯ ಸಿದ್ಧನಾಗಿರಬೇಕು.ಹೇಡಿಯಾಗಬಾರದು. ಕಹಿ ಇದೆ ಎನ್ನುವ ಕಾರಣಕ್ಕಾಗಿಯೇ ಸಿಹಿಯ ಅನುಭವ ಸಾಧ್ಯವಾಗಿರುವುದು. ಒಂದು ಪಕ್ಷ ಕಹಿ ಇಲ್ಲದೇ ಹೋಗಿದ್ದರೆ ಸಿಹಿ ಏನೆಂದು ಅರ್ಥವೇ ಆಗುತ್ತಿರಲಿಲ್ಲ. ಹಾಗೆಯೇ ಸುಖದ ಅನುಭವ. ದುಃಖ ಯಾರಿಗೂ ಬೇಕಿಲ್ಲ ನಿಜ. ಆದರೆ ಸುಖ ಏನೆಂದು ತಿಳಿಯುವುದಕ್ಕಾದರೂ ದುಃಖ ಬೇಕೇ ಬೇಕು. ಗೌತಮ ಬುದ್ಧ ಬುದ್ಧನಾಗಿದ್ದು ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದಾಗ ಅಲ್ಲ; ಹೊರಗೆ ಬಂದು ಜನರ ನೋವು ಸಂಕಷ್ಟಗಳ ಸರಮಾಲೆಯನ್ನು ನೋಡಿ ಮಮ್ಮಲ ಮರುಗಿ ಅಂತರ್ಮುಖಿಯಾಗಿ ಅರಿವಿನ ಕಣ್ದೆರೆದಾಗ.
ಲೌಕಿಕ ಜೀವನದ ಸುಖ-ಸಂತೋಷಗಳು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿರಬೇಕು. ಮೋಕ್ಷದ ಗುರಿಯನ್ನು ಹೊಂದಿರಬೇಕು. ದುಃಖ-ದುಮ್ಮಾನಗಳಿಂದ ವಿಮುಕ್ತನಾಗಿ ಶಾಶ್ವತ ಸುಖವನ್ನು ಪಡೆಯುವ ಹಂಬಲವಿರಬೇಕು. ಬದುಕಿನಲ್ಲಿ ಕೇವಲ ಬೆಲ್ಲವೇ ಇಲ್ಲ, ಬೇವೂ ಸಾಕಷ್ಟು ಇದೆ. ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಭಾವದಿಂದ ಸ್ವೀಕರಿಸುವ ಅಗತ್ಯವಿದೆಯೆಂದೇ ಯುಗಾದಿಯ ಹಬ್ಬದಂದು ಬೇವು-ಬೆಲ್ಲವನ್ನು ಬಂಧು-ಬಾಂಧವರಿಗೆ, ಆಪ್ತೇಷ್ಟರಿಗೆ ಹಂಚುವ ಸತ್ ಸಂಪ್ರದಾಯ ಇರುವುದು.
ಚಿಂತನಶೀಲ ಓದಗರೇ! ಕೆಲವೊಮ್ಮೆ ನಿತ್ಯ ಜೀವನದಲ್ಲಿ ನಿಮಗೆ ಬಹಳ ಬೇಕಾದವರು ಅಪರೂಪಕ್ಕೆ ಸಿಕ್ಕರೆ ಸಂತೋಷಪಟ್ಟು "ಯುಗಾದಿ ಚಂದ್ರನನ್ನು ನೋಡಿದಂತಾಯಿತು!" ಎಂದು ಉದ್ಗರಿಸುತ್ತೀರಲ್ಲವೇ? ಆದರೆ ಬಿದಿಗೆ ಚಂದ್ರನಂತೆ ಪ್ರಿಯವಾದ ಆ ವ್ಯಕ್ತಿಯನ್ನು ನೋಡಲು ನೀವು ನಿಜವಾಗಿಯೂ ಮಾಡಿದ ಪ್ರಯತ್ನ ಏನು? ನೋಡಲು ಸಾಧ್ಯವಾಗದೆ ಹತಾಶೆಗೊಂಡ ದಿನಗಳು ಎಷ್ಟು? ಅಂತೆಯೇ ನಿಮನ್ನು ಕಾಣಲು ಹಾತೊರೆವ ಜೀವಗಳಿಗೆ ನೀವು ಕಾಣಿಸಿಕೊಂಡದ್ದು ಎಷ್ಟು? ಪರಿತಪಿಸಿದ್ದು ಎಷ್ಟು? ಕಾಲದ ಕಾರ್ಮೋಡದಲ್ಲಿ ಅಡಗಿ ಕಣ್ಮರೆಯಾಗುವ ಮುನ್ನ ಅವರನ್ನು ಕಂಡು ಮಾತನಾಡಿಸಿರಿ. ಬದುಕಿನ ಒಬ್ಬಟ್ಟಿನ ಸವಿ ನಿಮಗೆ ಸಿಗುವುದು ಆಗಲೇ!
ಕರ್ನಾಟಕದ ಮನೆಮನೆಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಿರುವ ಯುಗಾದಿಯ ಈ ವರ್ಷದ "ಶೋಭಕೃತ್ ಸಂವತ್ಸರ"ವು ಜಗತ್ತಿಗೆ ಶುಭಫಲವನ್ನು ಹೊತ್ತು ತರಲಿ. ನಿಮ್ಮೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಂಸನೆಗಳು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ