ಜನಮಾನಸರಲ್ಲಿ ವೈಚಾರಿಕ ಪ್ರಜ್ಞೆ, ಆತ್ಮವಿಶ್ವಾಸ ಗಟ್ಟಿಗೊಳಿಸಿದವರು ಅಲ್ಲಮಪ್ರಭುದೇವರು
ಸಿರಿಗೆರೆ ಮಾರ್ಚ್- 22 : ಅಲ್ಲಮಪ್ರಭು ಜಯಂತಿ
12 ನೇ ಶತಮಾನದ ಶಿವಶರಣರಲ್ಲಿ ಅರಿವಿನ ಮಹಾಗುರು, ಅನುಭಾವಿ, ನೇರ ನಿಷ್ಠುರವಾದಿ. ಶಿವಶರಣರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದ ಮಹಾಮಹಿಮರೇ ಅಲ್ಲಮಪ್ರುಭುಗಳು ಎಂದು ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ತಿಳಿಸಿದರು.
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಐಕ್ಯಮಂಟಪದ ಆವರಣದಲ್ಲಿ ಅಣ್ಣನ ಬಳಗದವರು ಆಯೋಜಿಸಿದ್ದ “ಅಲ್ಲಮಪ್ರಭು ಜಯಂತಿ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲ್ಲಮಪ್ರಭುಗಳು ಗುಹೇಶ್ವರ ಎಂಬ ಅಂಕಿತನಾಮ ಬಳಸಿ 1600 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವರು ತಮ್ಮ ವಚನಗಳ ಮೂಲಕ ಅಂತರರಂಗ, ಬಹಿರಂಗಗಳನ್ನು ಅರ್ಥ ಮಾಡಿಸಿದರು. ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ ಮುಂತಾದ ಶರಣರಿಗೆ ಮಾರ್ಗದರ್ಶಕರಾಗಿದ್ದರು.
ದೇವಾಲಯಗಳಲ್ಲಿ ದೇವರು ಕಾಣಸಿಗದ ಭಕ್ತರಿಗೆ ದೇಹವೇ ದೇಗುಲ ಎಂದು ಕರಸ್ಥಲಕ್ಕೆ ಇಷ್ಟಲಿಂಗ ಕರುಣಿಸಿ ಲಿಂಗದ ರೂಪದಲ್ಲಿ ದೇವರ ಅನುಭಾವವನ್ನು ತೋರಿದ ಮಹಾಗುರು ಎಂದರು.
“ಶಿವ”ನನ್ನು ಗುರು, ಲಿಂಗ, ಜಂಗಮ, ಪ್ರಸಾದ ಮತ್ತು ಆಚಾರ ಎಂದು ಪಂಚ ವಿಧಗಳಲ್ಲಿ ತಿಳಸಿದ ಸಂಗನ ಬಸವಣ್ಣರು ಸರ್ವರಿಗೂ ಹಾಗೂ ಜಗತ್ತಿಗೂ ಗುರು ಎಂದು ತಮ್ಮ ವಚನದಲ್ಲಿ ಪ್ರಸ್ತುತ ಪಡಿಸಿದ್ದಾರೆ ಎಂದರು.
ಪರಮಪೂಜ್ಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿವೃದ್ಧಿಪಡಿಸಿರುವ ಶಿವಶರಣ ವಚನ ಸಂಪುಟ ತಂತ್ರಾಂಶದಲ್ಲಿ 200 ಕ್ಕೂ ಹೆಚ್ಚು ಶಿವಶರಣ ವಚನಗಳು ಬೆರಳ ತುದಿಗೆ ಸಿಗುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ನೀವು ಆ ವಚನಗಳನ್ನು ಓದುವ, ಅರ್ಥ ಗ್ರಹಿಸುವ, ಅಭ್ಯಾಸ ಬೆಳಸಿಕೊಳ್ಳಬೇಕು ಎಂದರು.
ಅಲ್ಲಮಪ್ರಭು ಜಯಂತಿಯ ಕುರಿತು ಉಪನ್ಯಾಸ ನೀಡಿದ ಸಿರಿಗೆರೆಯ ಬಿ. ಲಿಂಗಯ್ಯ ವಸತಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕಿ ಶರಣೆ ಸುಮಾ ಸಣ್ಣಗೌಡರ ಇವರು ಮಾತನಾಡಿ, ಅಲ್ಲಮಪ್ರಭು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು. ಆಗಿನ ಬನವಾಸಿ ಪ್ರಾಂತದ ಒಂದು ಹಳ್ಳಿ. ಕಾಲ ಸುಮಾರು ಕ್ರಿ.ಶ.1160 ತಂದೆ ನಿರಹಂಕಾರಿ, ತಾಯಿ ಸುಜ್ಞಾನಿ, ಗುರು ಅನಿಮಿಷದೇವ. ಇವರು ಶಿವದೇವಾಲಯದಲ್ಲಿ ಮದ್ದಳೆ ಬಾರಿಸುವ ಕೆಲಸ ಮಾಡುತ್ತಿದ್ದರು. ಅಲ್ಲಮಪ್ರಭುವಿನ ವಚನಗಳ ಅಂಕಿತನಾಮ ಗುಹೇಶ್ವರಾ. ಅಲ್ಲಮಪ್ರಭುವಿನ ವಚನಗಳನ್ನು ಬೆಡಗಿನ ವಚನಗಳು ಎಂದು ಕರೆಯಲಾಗುತ್ತದೆ. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗು ತಾತ್ವಿಕ ವಿಚಾರಗಳಿವೆ.
ಅಲ್ಲಮರ ಬದುಕನ್ನು ಕುರಿತು ಹರಿಹರ ಮತ್ತು ಚಾಮರಸ ಕವಿಗಳು ಬೇರೆಬೇರೆ ರೀತಿಯ ಕಥೆಗಳನ್ನು ಹೇಳಿದ್ದಾರೆ. ಅಲ್ಲಮಪ್ರಭು ಆಧ್ಯಾತ್ಮಿಕ ಅನುಭವಗಳ ಅಸಮಾನ್ಯ. ಆದ್ದರಿಂದಲೇ ಚಾಮರಸ ಕವಿ ತನ್ನ ಪ್ರಭುಲಿಂಗಲೀಲೆ ಕೃತಿಯಲ್ಲಿ ಅಲ್ಲಮಪ್ರಭುವನ್ನು ಈ ಲೋಕದ ಸಾಮಾನ್ಯ ಚೇತನವೆಂದು ಒಪ್ಪಿಕೊಳ್ಳದೆ ಕೈಲಾಸದಿಂದ ಬಂದ ಶಿವನ ಚಿತ್ಕಳೆ ಎಂದು ಚಿತ್ರುಸುತ್ತಾನೆ. ಸಾಕ್ಷಾತ್ ಶಿವಾಂಶ ಸಂಭೂತನಾದುದರಿAದ ಕಾಮಾದಿ ಅರಿಷಡ್ವರ್ಗಗಳು ಅವನನ್ನು ಸೋಂಕುವುದೇಯಿಲ್ಲ ಎಂದು ಹೇಳುತ್ತಾರೆ. ಅಲ್ಲಮಪ್ರಭುವನ್ನು ಶಿವನೊಡನೆ ಹೊಗಳಿ ಹೋಲಿಸಿ ಬರೆದ ಕಾವ್ಯ ಇದು.ಅಲ್ಲಮಪ್ರಭುವನ್ನು ಒಲಿಸಿಕೊಂಡು ಮಾಯಾ ಮೋಹದ ಬಲೆಯಲ್ಲಿ ಬೀಳಿಸಿ ತೋರಿಸುವೆನೆಂಬ ಮಾಯಾದೇವಿಯನ್ನೇ ಗೆದ್ದು ಅರಿಷಡ್ವರ್ಗಗಳನ್ನು ಗೆದ್ದವರು ಅಲ್ಲಮಪ್ರಭು.
ಬೆಡಗು ಎಂದರೆ- ಬೆರಗು, ಆಶ್ಚರ್ಯ, ಚೆಲುವು, ಗುಟ್ಟು, ಗೂಢ ಎಂದು ಅರ್ಥ. ಅಲ್ಲಮಪ್ರಭುವಿನ ವಚನಗಳು ಗೂಢವಾದ ಅರ್ಥವನ್ನು ಹೊಂದಿರುತ್ತವೆ. ಮೇಲ್ನೋಟಕ್ಕೆ ಒಂದು ಅರ್ಥ ನೀಡಿದರೆ ಅದರ ಮೂಲ ಅರ್ಥವೇ ಬೇರೆಯಾಗಿರುತ್ತದೆ.
ಇಲ್ಲಿ ಅಲ್ಲಮಪ್ರಭು ಗುರು, ಲಿಂಗ, ಜಂಗಮಕ್ಕೆ ತನ್ನನ್ನು ಅರ್ಪಿಸಿಕೊಂಡವನೇ ಶ್ರೇಷ್ಠ ಜಾತಿಯವನು ಎಂದು ಹೇಳುತ್ತಾರೆ. ಯಾವುದೇ ಜಾತಿಯನ್ನು ಲೆಕ್ಕಿಸದೇ ಅಹಂಕಾರವಳಿದಂತಹ ಮಹಾತ್ಮರ ಬಾಯಿಯ ತಂಬುಲವ ರುಚಿಸುವೆನು, ಅವರು ಬಿಟ್ಟು ಹೋದ ಉಡುಗೆಯನ್ನು ಹೊದೆವೆನು, ಅವರ ಪಾದರಕ್ಷೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬದುಕುವೆನು ಎಂದು ಹೇಳಿದ್ದಾರೆ. ಹೀಗೆ ಅಲ್ಲಮರ ವಚನಗಳನ್ನು ಓದಿದಾಗ ನಮ್ಮೊಳಗಿನ ಅಹಂಕಾರ ಅಳಿದು ಹೋಗುತ್ತದೆ.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಕಾಶ ಬಣಕಾರ, ಎಸ್. ಸುಜಾತ, ಪಿ.ಎಸ್. ನಾಗರಾಜ, ಶಿಕ್ಷಕರಾದ ಸಿ.ಎಸ್. ಗಿರೀಶ್, ಪ್ರಶಾಂತ್, ಗಿರೀಶ್, ಪ್ರಕಾಶ್, ನಿರ್ಮಲಾ, ಉಷಾ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಬನಶಂಕರಿ ಮತ್ತು ಸ್ನೇಹ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಹೆಚ್.ಕೆ. ಅನುಷ ಸ್ವಾಗತಿಸಿದರು. ಭೂಮಿಕಾ ವಂದಿಸಿದರು, ಇಂದ್ರಮ್ಮ ಮತ್ತು ರಶ್ಮಿ ನಿರೂಪಿಸಿದರು.