ಭಕ್ತಿಯ ವೈಭವಕ್ಕೆ ಸಾಕ್ಷಿಯಾಯ್ತು ಆನಗೋಡು ಮರುಳಸಿದ್ದೇಶ್ವರ ರಥೋತ್ಸವ..!
ದಿನಾಂಕ: 06-04-2024 ಆನಗೋಡು, ದಾವಣಗೆರೆ ಜಿಲ್ಲೆ : ತೇರನೇರಿ ಗುರು ಮರುಳಸಿದ್ಧರಿಗೆ ಭಕ್ತಿ ಸಮರ್ಪಿಸಿದ ಶ್ರೀ ತರಳಬಾಳು ಜಗದ್ಗುರುಗಳವರಿಂದ ಭಕ್ತರಿಗೆ ಆಶೀರ್ವಾದ..!
ಪ್ರತಿ ವರ್ಷದಂತೆ ಮರುಳಸಿದ್ಧ ರಥೋತ್ಸವಕ್ಕೆ ವರುಣಾಗಮನದ ಭಕ್ತಿ ಸೋಜಿಗ..!
ಪರಮಗುರುವಿನ ಮಾರ್ಗದರ್ಶನದಲ್ಲಿ ಅಂತರಂಗದ ಸಾಧನೆ ಬೆಳೆದು ಸಂಸ್ಕಾರ ವೃದ್ಧಿಯಾದಂತೆ ಅಲ್ಲಿ ದೇವತಾ ದರ್ಶನವುಂಟು. ಸಂಸ್ಕಾರವು ಪೂರ್ಣ ಪ್ರಮಾಣದಲ್ಲಿ ಬೆಳೆದಾಗ ಜೀವನದ ತುತ್ತತುದಿಯಲ್ಲಿ ಬೆಳಗುವ ದೇವದೇವನ ದರ್ಶನವೂ ಉಂಟು. ಎಂಬುದಕ್ಕೆ ಅಕ್ಷರಶಃ ಸಾಕ್ಷಿಯಾಗಿದ್ದು ನಿನ್ನೆ ಸಂಜೆ ಆನಗೋಡಿನಲ್ಲಿ ಭಕ್ತಿಯ ಸಂಭ್ರಮದಿಂದ ಶ್ರೀ ತರಳಬಾಳು ಗುರು ಪರಂಪರೆಯ ಸದ್ಧರ್ಮ ಪೀಠ ಸಂಸ್ಥಾಪನಾಚಾರ್ಯ ಶ್ರೀ ವಿಶ್ವಬಂಧು ಮರುಳಸಿದ್ದರ ಮಹಾರಥೋತ್ಸವ.
ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸದ್ಧರ್ಮ ಪೀಠದ ಮೂಲ ಗುರುವಿಗೆ ತೆರನೇರಿ ಪುಷ್ಪ ಸಮರ್ಪಿಸಿ, ಮರುಳಸಿದ್ಧ ಸ್ವಾಮಿಯ ಆಶೀರ್ವಾದದ ಪುಷ್ಪ ಪತ್ರೆಗಳನ್ನು ಭಕ್ತರಿಗೆ ವಿನಿಯೋಗಿಸುವ ಮೂಲಕ ಚಾಲನೆ ನೀಡಿದಾಗ ನೆರೆದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಹರ್ಷೋದ್ಗಾರದಿಂದ ಶ್ರೀ ವಿಶ್ವಬಂಧು ಮರುಳಸಿದ್ಧರಿಗೆ ಜಯವಾಗಲಿ, ಶ್ರೀ ತರಳಬಾಳು ಗುರು ಪರಂಪರೆಗೆ ಜಯವಾಗಲೆಂಬ ಜಯಘೋಷಗಳು ಮುಗಿಲು ಮುಟ್ಟಿದವು.
ಆನಗೋಡು ಮರುಳಸಿದ್ಧ ರಥೋತ್ಸವದಂದು ವರುಣನ ಆಗಮನದ ಸಂಪ್ರದಾಯದಂತೆ ಈ ವರ್ಷವು ಆನಗೋಡು ಸುತ್ತ ಹಲವೆಡೆ ಮಳೆಯಾಗಿದ್ದು
ಭಕ್ತಿ ಸೋಜಿಗದ ಸಾಕ್ಷಾತ್ಕಾರವಾದಂತಿತ್ತು. ಶ್ರೀ ವಿಶ್ವಬಂಧು ಮರುಳಸಿದ್ಧರ ಉತ್ಸವ ಮೂರ್ತಿಯನ್ನು ಹೊತ್ತ ರಥವು, ತಿಳಿದು, ತೋರಣ, ಕದಳಿ, ಬಾಳೆ, ಹೂವು, ಶಿವ ಧ್ವಜಗಳಿಂದ ಅಲಂಕೃತವಾಗಿದ್ದ ರಥವನ್ನು ಭಕ್ತಾದಿಗಳು ಎಳೆದು, ಹಣ್ಣು-ಜವನ ಎಸೆದು ತಮ್ಮ ಭುವನದ ಭಾಗ್ಯ ಮರುಳಸಿದ್ಧರಿಗೆ ಭಕ್ತಿ ಪ್ರಣಾಮಗಳನ್ನು ಸಮರ್ಪಿಸಿದರು.
ಇಷ್ಟಾರ್ಥವನ್ನು ದಯಪಾಲಿಸುವ ಆನಗೋಡು ಶ್ರೀ ಮರುಳಸಿದ್ಧರ ರಥೋತ್ಸವಕ್ಕೆ ನಾಡಿನ ನಾನಾಕಡೆಗಳಿಂದ ಭಕ್ತರು ಭಾಗವಹಿಸಿ, ಧನ್ಯರಾಗುವುದು ಇಲ್ಲಿನ ವಿಶೇಷವಾಗಿದೆ, ಜಾತ್ರೆಯಲ್ಲಿ ಮಕ್ಕಳು, ನವ ವಿವಾಹಿತರು ಯುವಕ-ಯುವತಿಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಡಿದ್ದು ವಿಶೇಷ.
ಮಹಾರಥೋತ್ಸವದ ತನ್ನಿಮಿತ್ತ ಮಾರ್ಚ್ 26 ರಿಂದ ಕಳೆದ ಮೂರು ದಿನಗಳಿಂದ ನಿಮಿತ್ತ ಗಾಲಿಹೊರಹಾಕುವುದು, ಕಂಕಣಧಾರಣೆ, ದಾಸೋಹ, ವಿವಿಧ ವಂಶದವರಿಂದ ವಿವಿಧ ಸಮಾಜದವರಿಂದ ಅರಿಶಿನ ಎಣ್ಣೆ ಸಮರ್ಪಣೆ, ವಿಶೇಷ ಪೂಜೆ, ಕೈಂಕರ್ಯಗಳು, ನೆರವೇರಿದವು.
ಕ್ರಾಂತಿಯೋಗಿ ಮರುಳಸಿದ್ಧೇಶ್ವರ:
ಹನ್ನೇರಡನೇಯ ಶತಮಾನದ ಬಸವಾದಿ ಶಿವ ಶರಣರ ಹಿರಿಯ ಸಮಕಾಲೀನರಾದ ಶ್ರೀ ವಿಶ್ವಬಂಧು ಮರುಳಸಿದ್ದರು ಅಂದಿನ ಜಾತಿ ಪದ್ಧತಿ, ಮೂಢನಂಬಿಕೆ, ಪುರೋಹಿತಶಾಹಿ ವಿರುದ್ಧ ಹೋರಾಡಿದ ಮಹಾತಪಸ್ವಿ ಹಾಗು ಪವಾಡ ವಿರೋಧಿ ಪವಾಡ ಪುರುಷರು. ಸಮತೆಯ ತತ್ವದ ಸಮಾನತೆಯ ಸಂಕೇತದ ಮೊದಲ ಹೆಜ್ಜೆಯ ಪ್ರತೀಕದ ಮರುಳಸಿದ್ದರು ಕೊಲ್ಲಾಪುರದ ಮಹಾಲಕ್ಷ್ಮಿಯು(ಮಾಯೆ) ಶಿವ ಭಕ್ತರ ವಿರೋಧಿ ನೀತಿಯನ್ನು ಯುಕ್ತಿಯಿಂದ ಜಯಿಸಿ ಲಿಂಗ ದೀಕ್ಷೆ ಕರುಣಿಸಿದ ಮಹಾಮಹೀಮರು ತನ್ನ ನಂತರ ಸಮಾಜದ ಶ್ರೇಯೋಭಿವೃದ್ದಿಯ ದಿವ್ಯ ಕನಸು ಕಂಡು ಇಂದಿನ ಬಳ್ಳಾರಿ ಜಿಲ್ಲೆ,ಕೂಡ್ಲಿಗಿ ತಾಲ್ಲೂಕಿನ, ಉಜ್ಜಯಿನಿ ಅಂದಿನ ಕಗ್ಗಲ್ಲುಪುರದ ಪೂರ್ವಾಶ್ರಮದ ಸಾಕುತಂದೆ ಬಾಚಣ್ಣನ ಗೌಡ ನಿಂದ ಒಂಭತ್ತು ಪಾದದ ಭೂಮಿಯನ್ನು ಪಡೆದು ಮಾಘ ಶುದ್ಧ ಪೌರ್ಣಿಮೆಯ ಅಮೃತ ಗಳಿಗೆಯಲ್ಲಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾ ಪೀಠ ಸ್ಥಾಪಿಸಿ ಶ್ರೀ ಪೀಠದ ಮೇಲೆ ತೆಲುಗಬಾಳಿನ ಮೂಕಸಿದ್ದರನ ಮಾತನಾಡುವ ಸಿದ್ದರನ್ನಾಗಿಸಿ ತಮ್ಮ ಸರ್ವಶಕ್ತಿಯನ್ನು ಧಾರೆಯನ್ನು ತರಳಾ ಬಾಳು ಎಂದು ಆಶೀರ್ವದಿಸುವ ಮೂಲಕ ತರಳಬಾಳು ಗುರು ಪರಂಪರೆಯ ಮೂಲ ಪುರುಷರಾಗಿದ್ದಾರೆ. ಈ ಪರಂಪರೆಯಲ್ಲಿ ಸಾಗಿಬಂದ ಗುರುವರ್ಯರು ತರಳಬಾಳು ಜಗದ್ಗುರುಗಳೆಂದು ವಿಶ್ವ ಪ್ರಸಿದ್ದಿಯಾಗಿದ್ದಾರೆ.
ಈ ತರಳಬಾಳು ಪಂಚಾಕ್ಷರಿ ಮಂತ್ರದಲ್ಲಿ ಸಂಪೂರ್ಣ ಮನುಕುಲದ ಅಭ್ಯುಧಯವೇ ಕೇಂದ್ರಿಕೃತವಾಗಿದೆ. ಕಾಲನುಕಾಲ ನಂತರದ ಕುಹಕಿಗಳ ವರ್ತನೆಗೆ ಛೀ ಎಂದು ಶ್ರೀ ತರಳಬಾಳು ಜಗದ್ಗುರು ಸದ್ದರ್ಮ ಸಿಂಹಾಸನಾ ಪರಂಪರೆಯ ದಿವ್ಯಕೇಂದ್ರ ಸಿರಿಗೆರೆಯನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.
ಈ ಪರಂಪರೆಯ ಜ್ಞಾನ ಜ್ಯೋತಿ ದೇಶ ವಿದೇಶಗಳಲ್ಲಿ ಧೇದೀಪ್ಯಮಾನವಾಗಿ ಪ್ರಜ್ವಲಿಸುತ್ತಿದೆ. ಶ್ರೀ ಪೀಠದ ಇಂದಿನ ಸುವರ್ಣಯುಗದ ಪ್ರಶಂಸೆಗೆ ತರಳಬಾಳು ಗುರುಪರಂಪರೆಯು ಎಲ್ಲಾ ಗುರುವರ್ಯರ ಸಮಾಜಮುಖಿ ಕಾಳಜಿಯೇ ಕಾರಣವಾಗಿದೆ. ಇಂತಹ ದೀರ್ಘ ಐತಿಹ್ಯ ಶ್ರೀ ಗುರು ಪರಂಪರೆಯ ಮೂಲಪುರುಷ ಶ್ರೀ ವಿಶ್ವಬಂಧು ಮರುಳಸಿದ್ದ ಕೇವಲ ಗುರುವಾಗದೇ ನಾಡಿನ ಎಲ್ಲಾ ವರ್ಗದ ಜನರ ಮನೆದೇವರಾಗಿರುವುದು ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ. ಶ್ರೀ ಮರುಳಸಿದ್ದರು ಲೋಕ ಸಂಚಾರ ಕೈಗೊಂಡು ಜನರನ್ನು ಸುಜ್ಞಾನದ ತೆಕ್ಕೆಗೆ ಕರೆದೊಯ್ಯುವ ಸಂಧರ್ಭದಲ್ಲಿ ನಡೆದ ಜೀವಂತ ದೃಶ್ಯವಾಳಿಗಳ ಸ್ಮರಣಾರ್ಥವೇ ಇಂದು ಮರುಳಸಿದ್ದರ ನೂರಾರು ದೇವಾಲಯಗಳು ನಿರ್ಮಾಣ ವಾಗಿರುವುದು. ರಥೋತ್ಸವಗಳು ,ವಿಶೇಷ ಪೂಜಾ ಕೈಂಕರ್ಯಗಳು ದಿನ ಪ್ರತಿ ಜರುಗುತ್ತಿರುವುದು.
ಪಟ್ಟ ಭದ್ರ ಹಿತಾಸಕ್ತಿಗಳು ಮರುಳಸಿದ್ಧರ ಮೇಲೆ ಮದಿಸಿದ ಆನೆಯನ್ನು ಬಿಟ್ಟು ದಾಳಿ ನಡೆಸಿದಾಗ ಆನೆಯ ಕೋಡನ್ನು ಮುರಿದು ತಮ್ಮ ತಪಸ್ವೀ ಶಕ್ತಿಯಿಂದ ಆನೆಯನ್ನು ಮಣಿಸಿದ್ದರಿಂದ ಆನಗೋಡು ಮರುಳಸಿದ್ದರ ಪವಾಡ ಕ್ಷೇತ್ರವಾಗಿದೆ. ದಾವಣಗೆರೆಯ ಸಮೀಪದ ಆನಗೋಡಿನಲ್ಲಿ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಿ ಲಕ್ಷಾಂತರ ಸದ್ಭಕ್ತರ ಉಪಸ್ಥಿತಿಯಲ್ಲಿ ತರಳಬಾಳು ಗುರುಪರಂಪರೆಯ ಮೂಲಪುರುಷರ ಶ್ರೀ ಮರುಳಸಿದ್ದರ ಮಹಾರಥೋತ್ಸವ ಪ್ರತಿ ವರ್ಷ ನಡೆಯುವುದು.