ಹೆಚ್ಚು ಸಂಖ್ಯಾಬಲ ಹೊಂದಿರುವ ಪಕ್ಷಕ್ಕೆ ಸರಕಾರ ರಚಿಸುವಂತಹ ಕಾನೂನಿನ ತಿದ್ದುಪಡಿ ಅವಶ್ಯಕತೆ

  •  
  •  
  •  
  •  
  •    Views  

ಹೆಚ್ಚು ಸಂಖ್ಯಾಬಲ ಹೊಂದಿರುವ ಪಕ್ಷಕ್ಕೆ ಸರಕಾರ ರಚಿಸುವಂತಹ ಕಾನೂನಿನ ತಿದ್ದುಪಡಿ ಅವಶ್ಯಕತೆ ಇದೆ ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನೀಡಿರುವ ಸಲಹೆಯನ್ನು ದೇಶದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುವುದು ಅಗತ್ಯವೆನಿಸುತ್ತದೆ. ಕೇವಲ ಎರಡೇ ಪಕ್ಷಗಳು ಇರುವಂತಹ ದೇಶಗಳಿಗೆ ಸಂಖ್ಯಾಬಲದ ಸಮಸ್ಯೆ ತಲೆದೋರುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಬಹುಪಕ್ಷಗಳು ಇರುವುದರಿಂದ ಒಂದೇ ಪಕ್ಷ ಇಂತಿಷ್ಟೇ ಸಂಖ್ಯಾಬಲ ಪಡೆಯಬೇಕೆಂಬ ಕಾನೂನು ಇರುವುದರಿಂದ ದಿನನಿತ್ಯ ರಾಜಕೀಯ ಅಸ್ಥಿರತೆ, ಅರಾಜಕತೆಯ ಚಟುವಟಿಕೆಗಳು ನಡೆಯುತ್ತಿವೆ. ವರ್ಷ ವರ್ಷಕ್ಕೂ ಹೊಸ ಹೊಸ ರಾಜಕೀಯ ಪಕ್ಷಗಳು ಉದಯವಾಗುತ್ತಿರುವುದರಿಂದ ಇಂತಿಷ್ಟೇ ಬಹುಮತ ಪಡೆದ ಪಕ್ಷ ಸರಕಾರ ರಚಿಸಲು ಸಾಧ್ಯವಾಗುತ್ತಿಲ್ಲ. ಐದು ವರ್ಷದ ಆಡಳಿತದ ಅವಧಿಯಲ್ಲಿ ಕಡಿಮೆ ಸ್ಥಾನ ಪಡೆದವರು ಸಂಖ್ಯಾಬಲದಲ್ಲಿ ಹೆಚ್ಚು ಸ್ಥಾನ ಇರುವ ಪಕ್ಷಗಳೊಂದಿಗೆ ನಡೆಸುವ ಮುಸುಕಿನ ಗುದ್ದಾಟದಿಂದಾಗಿ ರಾಜ್ಯದ ಅಭಿವೃದ್ಧಿಗಳು ನೆಲಕಚ್ಚುತ್ತವೆ.

ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವು ಬಹುಮತ ಇಲ್ಲದೆ ಹೋದಾಗ ಬೇರೆ ಪಕ್ಷದ ಶಾಸಕರನ್ನು ಸೆಳೆದುಕೊಂಡೋ ಅಥವಾ ರಾಜೀನಾಮೆ ಕೊಡಿಸಿಯೋ ಬಹುಮತ ಸಾಬೀತು ಮಾಡಲು ಮುಂದಾಗುತ್ತದೆ. ಇನ್ನು ಬಹುಮತವಿಲ್ಲದ ವಿವಿಧ ಪಕ್ಷಗಳು ಹೊಂದಾಣಿಕೆ (ನೈತಿಕತೆಯೋ ಅಥವಾ ಅನೈತಿಕತೆಯೋ) ಮಾಡಿಕೊಂಡು ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವು ಅಧಿಕಾರವನ್ನು ಹಿಡಿಯದಂತೆ ಅಡ್ಡಗಾಲು ಹಾಕಿ ಆಡಳಿತ ನಡೆಸದಂತೆ ಮಾಡುತ್ತವೆ. ಹೀಗಾಗಿ ಅತೀ ಹೆಚ್ಚು ಸ್ಥಾನ ಪಡೆದ ಪಕ್ಷವು ಸಹಜವಾಗಿಯೇ ಮುನಿಸಿಕೊಂಡು ಸರಕಾರವನ್ನು ಕೆಡವಿ ತಾವು ಅಧಿಕಾರಕ್ಕೆ ಬರಲು ಏನೆಲ್ಲಾ ರಾಜಕೀಯ ಪ್ರಯೋಗಗಳು ಬೇಕೋ, ಏನೆಲ್ಲಾ ರಾಜಕೀಯ ಪಟ್ಟುಗಳು ಬೇಕೋ ಅದೆಲ್ಲವನ್ನೂ ಮಾಡುತ್ತದೆ. ಹೀಗಾದಾಗ ಒಂಥರಾ ಕೆರೆದಡ ಆಟದಂತೆ ಪಕ್ಷದ ಶಾಸಕರು ಅತ್ತಿಂದ ಇತ್ತ, ಇತ್ತಿಂದ ಅತ್ತ ನೆಗೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ ಇಂತಿಷ್ಟೇ ಸಂಖ್ಯಾಬಲದ ಪಕ್ಷವು ಮಾತ್ರ ಅಧಿಕಾರ ಹಿಡಿಯಬೇಕೆಂಬ ನಿಯಮವಿದ್ದಾಗಲೂ ಎರಡು ಮೂರು ಪಕ್ಷಗಳು ಸೇರಿ ಬಹುಮತ ತೋರಿಸಲು ಏನೆಲ್ಲಾ ಸರ್ಕಸ್ ಮಾಡುತ್ತವೆ ಎನ್ನುವುದನ್ನು ನೋಡುತ್ತಿದ್ದೇವೆ. ವಿವಿಧ ತತ್ವ ಸಿದ್ಧಾಂತಗಳನ್ನು ಹೊಂದಿರುವ ಬೇರೆ ಬೇರೆ ಪಕ್ಷಗಳು ಸೇರಿ ಒಟ್ಟಾಗಿ ಆಡಳಿತ ನಡೆಸುತ್ತೇವೆ ಎಂದುಕೊಂಡ ಕೆಲವೇ ತಿಂಗಳಲ್ಲಿ ಒಬ್ಬರ ಮೇಲೆ ಒಬ್ಬರು ಗೂಬೆಯನ್ನು ಕೂರಿಸುವ ಪ್ರಸಂಗಗಳು ಹೆಚ್ಚಾಗಿ ಮತ್ತೆ ರಾಜಕೀಯ ಅಸ್ಥಿರತೆ ತಲೆದೋರುತ್ತದೆ. 

ನನಗೆ ಆ ಖಾತೆ ಬೇಕು, ಈ ಖಾತೆ ಬೇಕು ಎಂದು ಕಿತ್ತಾಡುವುದರಲ್ಲಿಯೇ ದಿನದೂಡುವಂತಹ ವ್ಯವಸ್ಥೆ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರತಿದಿನವೂ ಯಾವ ಶಾಸಕ ಯಾರಿಗೆ ಬೆಂಬಲ ಕೊಡುತ್ತಾರೆ, ಯಾರ ವಿರುದ್ಧ ತೊಡೆತಟ್ಟುತ್ತಾರೆ ಎನ್ನುವ ಸಂದರ್ಭಗಳೇ ಬರುವುದರಿಂದ ರಾಜ್ಯದ ಸರ್ವಾಂಗೀಣ ಪ್ರಗತಿ ಹೇಗೆ ಸಾಧ್ಯ? ಮುಖ್ಯಮಂತ್ರಿಗಳಾದವರು ಬರೀ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಕಾಲ ಕಳೆದರೆ ಒಂದು ಸುಸ್ಥಿರ ಸರಕಾರ ನಡೆಸಲು ಹೇಗೆ ಸಾಧ್ಯ? ಇನ್ನು ಪಕ್ಷದಿಂದ ಹೊರತಾಗಿರುವ ಪಕ್ಷೇತರ ಶಾಸಕರ ಒಲವು ಯಾವ ಸಂದರ್ಭದಲ್ಲಿ ಯಾವ ಕಡೆ ಹೋಗುತ್ತದೆ ಎಂದು ಹೇಳಲಾಗದು. ಗೆದ್ದ ಎತ್ತಿನ ಬಾಲ ಹಿಡಿಯುವಂತಹ ಪರಿಸ್ಥಿತಿ! ಇವರು ಒಂಥರಾ ಜಂಪಿಂಗ್ ಸ್ಟಾರ್‌ಗಳ ಹಾಗೆ ಬೆಳಗ್ಗೆ ಒಂದು ಮನೆಯಲ್ಲಿ ಇದ್ದರೆ, ಮಧ್ಯಾಹ್ನ ಒಂದು ಮನೆ, ರಾತ್ರಿ ಆಗುವುದರೊಳಗೆ ಮತ್ತೊಂದು ಮನೆ. ಹೀಗೆ ರಾಜಕೀಯ ಚದುರಂಗದಾಟದಲ್ಲಿ ಕುದುರೆಯ ವ್ಯಾಪಾರ, ರೆಸಾರ್ಟ್ ರಾಜಕೀಯವನ್ನು ದೇಶದ ಜನ ನೋಡಿ ನೋಡಿ ಬೇಸತ್ತಿದ್ದಾರೆ. ಕೊನೆಗೆ ರಾಜೀನಾಮೆಯ ಅಂತ್ಯದೊಂದಿಗೆ ಒಬ್ಬರು ಮತ್ತೊಬ್ಬರ ಮೇಲೆ ಕೆಸರೆರಚಾಟ, ಮತ್ತೊಮ್ಮೆ ಚುನಾವಣೆಯ ಕದನಕ್ಕೆ ಪಕ್ಷಗಳ ಭರ್ಜರಿ ಪ್ರಚಾರ, ಈ ಎಲ್ಲಾ ರಾಜಕೀಯ ದೊಂಬರಾಟವನ್ನು ರಾಜ್ಯದ ಮತದಾರ ಪ್ರಭುಗಳು ನೋಡುವಂತಹ ಪರಿಸ್ಥಿತಿ. ಈ ಹಿನ್ನೆಲೆಯಲ್ಲಿ ಯಾವ ಪಕ್ಷ ಸಂಖ್ಯಾಬಲದಲ್ಲಿ ಹೆಚ್ಚಿರುತ್ತದೆಯೋ ಅಂತಹ ಪಕ್ಷಕ್ಕೆ ಅಧಿಕಾರ ನಡೆಸುವಂತಹ ಕಾನೂನಿನ ತಿದ್ದುಪಡಿ ಅಗತ್ಯವಿದೆ ಎಂದು ಸ್ವಾಮೀಜಿಗಳು ಹೇಳಿರುವುದನ್ನು ಅಧಿಕಾರ ನಡೆಸುವವರು ಬದ್ಧತೆಯಿಂದ ಸ್ವೀಕಾರ ಮಾಡಿದರೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಳಿತು. ಮುಂದಿನ ದಿನಗಳಲ್ಲಿ ಖಂಡಿತ ಇಂತಹ ಅಸ್ಥಿರತೆಯ ರಾಜಕೀಯ ಬೆಳವಣಿಗೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಅಲ್ಲದೆ ಯಾವುದೇ ಪಕ್ಷ ಆಪರೇಷನ್ ಸ್ಪೆಷಲಿಸ್ಟ್‌ಗಳ ಆತಂಕವಿಲ್ಲದೆ ಸಂಪೂರ್ಣ ಆಡಳಿತವನ್ನು ನಡೆಸಲು ಸಾಧ್ಯವಾಗುತ್ತದೆ. ಈ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕಡೆಗೆ ಹೆಚ್ಚಿನ ಆದ್ಯತೆ ಕೊಡಲು ಸಾಧ್ಯವಾಗುತ್ತದೆ.


- ಗಿರಿಜಾಶಂಕರ್‌ ಜಿ. ಎಸ್. ನೇರಲಕೆರೆ