ಇಂದು ದಾವಣಗೆರೆಯಲ್ಲಿ ತರಳಬಾಳು ಜಗದ್ಗುರು ಬೃಹನ್ಮಠದಿಂದ ಬಸವಜಯಂತಿ ಆಚರಣೆ.
ಅಪರೂಪದ ಅತಿಥಿಗಳ ಉಪಸ್ಥಿತಿಯ ಉಪನ್ಯಾಸದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ.
----------------------
ಬಸವಣ್ಣನವರ ಷಟ್ ಸ್ಥಲ ವಚನಗಳು ಕೃತಿ ಲೋಕಾರ್ಪಣೆ ಮತ್ತು ಶ್ರೀ ಜಗದ್ಗುರುಗಳವರಿಂದ ಬಸವಾದಿ ಶರಣರ ವಚನಗಳ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ
----------------------
ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮೇಳೈಸಲಿವೆ ವಚನ ಗಾಯನ, ವಚನ ನೃತ್ಯ, ಭರತ ನಾಟ್ಯ.
---------------------
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರೈತಮುಖಿ, ನ್ಯಾಯಮುಖಿ, ಹೀಗೆ ನೂರಾರು ಸೇವಾ ಕೈಂಕರ್ಯಗಳು ವಿಶ್ವವ್ಯಾಪಿ ಮನ್ನಣೆಗೆ ಪಾತ್ರವಾಗಿವೆ. 12ನೆಯ ಶತಮಾನದ ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯ ಕಬಂಧ ಬಾಹುಗಳಿಂದ ರಕ್ಷಿಸಲು ಆಜೀವ ಪರ್ಯಂತ ಹೋರಾಡಿದರು. ಸಕಲರಿಗೂ ಲೇಸನ್ನು ಬಯಸಿದ ಅಣ್ಣ ಬಸವಣ್ಣನವರ ಹಿರಿಯ ಸಮಕಾಲೀನರಾದ, ಸಮತೆಯ ತತ್ವದ ಸಮಾನತೆಯ ಸಂಕೇತದ ಮೂಲ ಪುರುಷರಾಗಿ ವಿಶ್ವಕ್ಕೇ ಬಂಧುವಾದವರು ಮರುಳಸಿದ್ದರು.
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಜರುಗಿದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಕ್ರಾಂತಿಯು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಯುಗಪುರುಷ ಬಸವಣ್ಣನವರ ನೇತೃತ್ವದಲ್ಲಿ ರೂಪಗೊಂಡ ಸಮಾಜೋ ಧಾರ್ಮಿಕ ಈ ಆಂದೋಲನದ ಉಪ ಉತ್ಪನ್ನವೇ ವಚನ ಸಾಹಿತ್ಯ.
ಈ ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಕನ್ನಡ ನೀಡಿದ ಅಪೂರ್ವ ಕೊಡುಗೆ. ಇಂತಹ ವಚನ ಸಾಹಿತ್ಯವನ್ನು 20ನೆಯ ಶತಮಾನದಲ್ಲಿ ಬಹುಮುಖದಲ್ಲಿ ಪ್ರಚುರಪಡಿಸಿದ ಕೀರ್ತಿ ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು.
ಪರಮಪೂಜ್ಯರು ವಚನ ಸಾಹಿತ್ಯದ ಪರಿಮಳವನ್ನು ರಂಗಭೂಮಿ, ಉಪನ್ಯಾಸ, ಸಂಗೀತ, ಪುಸ್ತಕ ಪ್ರಕಟಣೆ ಮುಂತಾದ ಬಹುಮಾಧ್ಯಮಗಳ ಮೂಲಕ ನಾಡಿನ ತುಂಬೆಲ್ಲಾ ಪಸರಿಸುವಂತೆ ಮಾಡಿದರು. ವಚನ ಸಾಹಿತ್ಯವನ್ನು ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಿಗೆ ಶ್ರೀಮಠದಿಂದ ಅನುವಾದ ಮಾಡಿಸಿದ್ದು ವಚನ ಸಾಹಿತ್ಯದ ಇತಿಹಾಸದಲ್ಲಿ ದಾಖಲಾರ್ಹವಾದ ಸ್ಮರಣೀಯ ಕೆಲಸ. ಪೂಜ್ಯರು ವಚನ ಸಾಹಿತ್ಯದ ಪ್ರಚಾರದ ಬಗ್ಗೆ ಕಂಡ ಇನ್ನಷ್ಟು ಕನಸುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನನಸು ಮಾಡುತ್ತಿರುವುದು ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಪವಿತ್ರ ಕ್ಷೇತ್ರ ಕೂಡಲ ಸಂಗಮವು ,ಕೃಷ್ಣ ಮೇಲ್ದಂಡೆ ಅಣೆಕಟ್ಟಿನ ಯೋಜನೆಯಲ್ಲಿ ನಿರ್ಮಾಣವಾಗುತ್ತಿದ್ದ ನಾರಾಯಣಪುರ ಅಣೆಕಟ್ಟು ಪೂರ್ಣಗೊಂಡರೆ,ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಮಂಟಪ ,ಕೃಷ್ಣೆಯ ದಡದ ಮೇಲಿರುವ ಸಂಗಮೇಶ್ವರ ದೇವಾಲಯ, ಅದರ ಎದುರು ಅನತಿದೂರದಲ್ಲಿರುವ ನೀಲಮ್ಮನ ಗುಡಿ; ಈ ಎಲ್ಲಾ ಸ್ಮಾರಕಗಳು ಜಲಾಶಯದ ಗರ್ಭದಲ್ಲಿ ಅಡಗಿ ಹೋಗುವ ಸಂಭವವಿದ್ದಾಗ, ಜಲಾಶಯದ ಅಗತ್ಯ ಮತ್ತು ಅನುಕೂಲಗಳನ್ನು ಒಪ್ಪಿಕೊಂಡರು, ನಮ್ಮ ಮಹತ್ತರವಾದ ಸಂಸ್ಕೃತಿಯ ಸ್ಮಾರಕವೇ ಇಲ್ಲದಾಗುತ್ತದೆಂಬುದನ್ನು ಸುಲಭವಾಗಿ ಒಪ್ಪಿಕೊಳ್ಳದೆ, ವ್ಯಕ್ತಿ ಪ್ರತಿಷ್ಠೆಯಿಂದ ಬಂದ ಅಷ್ಟೂ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ತತ್ವ ನಿಷ್ಠವಾದ ಮತ್ತು ವ್ಯಾಪಕ ದೃಷ್ಟಿಯಿಂದ ಪರಿಗಣಿಸಿ ತಜ್ಞರ, ಧಾರ್ಮಿಕ ಮುಖಂಡರ, ವಿಚಾರವಂತರ ನೂರಾರು ಸಭೆ ಸಮಾಲೋಚನೆ ಮಾಡಿಸಿ, ಕೂಲಂಕುಷ ಅಧ್ಯಯನಗೈದು 1980ರಲ್ಲಿ "ಕೂಡಲಸಂಗಮದ ಪುನರುಜ್ಜೀವನ"ಕ್ಕೆ ಅಂದಿನ ರಾಷ್ಟ್ರಪತಿಯವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಯೋಜನೆಯ ಲೋಪಗಳನ್ನು ಅಮೂಲಾಗ್ರವಾಗಿ ಮನವರಿಕೆ ಮಾಡಿ ಕೂಡಲ ಸಂಗಮದ ಇಂದಿನ ಉಚ್ಛ್ರಾಯ ಸ್ಥಿತಿಗೆ ಹಗಲಿರುಳು ಶ್ರಮಪಟ್ಟು ಕಾರಣವಾದವರು. ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಎಂಬುದನ್ನು ಅನಿವಾರ್ಯವಾಗಿ ಈಗಿನ ಯುವ ಸಮೂಹಕ್ಕೆ ತಿಳಿಸಲೇಬೇಕಾಗುತ್ತದೆ.
ಯಾವುದೇ ಪ್ರಚಾರ ಪಡೆಯದೆ, ಮಾಧ್ಯಮಗಳಲ್ಲಿ ಆರ್ಭಟಿಸುವ ಅನಿವಾರ್ಯತೆ ಮತ್ತು ಅಗತ್ಯತೆ ತೋರದೆ ಶಿವಸಂಕಲ್ಪದಿಂದ ಬಸವಣ್ಣನವರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸುವ ಮೂಲಕ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿದ ನಮ್ಮ ಗುರುವರ್ಯರು ಬಸವಣ್ಣನವರನ್ನು ನಿಜಾರ್ಥದಲ್ಲಿ ವಿಶ್ವಗುರುವಾಗಿಸಿದ ಕರ್ಮಯೋಗಿಗಳು. ಬಸವಾದಿ ಶರಣರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ರಚನೆ, ಶರಣರ ಸಿದ್ದಾಂತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವೆಂಬಂತೆ ಅಭಿವ್ಯಕ್ತಿಗೊಳಿಸಿದ್ದು ತರಳಬಾಳು ಮಠ ಎಂದು ಹೆದೆಯುಬ್ಬಿಸಿ ಹೇಳುತ್ತೇವೆ.
90ರ ದಶಕದಲ್ಲಿಯೇ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇಡೀ ವಚನ ಸಾಹಿತ್ಯವನ್ನು ಬೆರಳತುದಿಯಲ್ಲಿ ನಿಲುಕುವಂತೆ ಮಾಡಿದ ಏಕಮಾತ್ರರು. “ಗಣಕ ಋಷಿ” ಎಂಬ ಬಿರುದಿಗೆ ಭಾಜನರಾದ ಪೂಜ್ಯರು ಭಾರತದಲ್ಲಿ ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ಕಣ್ಣು ಬಿಡುತ್ತಿದ್ದ ಕಾಲ. ಕ್ರಿಸ್ತ ಪೂರ್ವದ ಸಂಸ್ಕೃತದ ವೈಯ್ಯಾಕರಣಿ ಪಾಣಿನಿ ಮಹರ್ಷಿಯ “ಅಷ್ಟಾಧ್ಯಾಯಿ”ಎಂಬ ವ್ಯಾಕರಣ ಗ್ರಂಥವನ್ನು ಮತ್ತು ಬಸವಾದಿ ಶಿವಶರಣರ 21000 ವಚನಗಳನ್ನು ಕಂಪ್ಯೂಟರೀಕರಣ ಮಾಡಿ, “ಗಣಕಾಷ್ಟಾಧ್ಯಾಯಿ”ಮತ್ತು “ಗಣಕ ವಚನ” ಸಾಫ್ಟ್ ವೇರ್ ಸಿದ್ಧಪಡಿಸಿದ್ದು ಪೂಜ್ಯರ ತಂತ್ರಜ್ಞಾನದ ಆಸಕ್ತಿಯ ಫಲ.
ಕಂಪ್ಯೂಟರ್ ತಂತ್ರಜ್ಞಾನವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೇಗೆ ಬಳಸಿಕೊಳ್ಳುಬಹುದು ಎಂಬುದನ್ನು ಮೊದಲು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಶ್ರೀ ತರಳಬಾಳು ಜಗದ್ಗುರುಗಳವರದು. ಪೂಜ್ಯರ ಈ ಕೊಡುಗೆಯಿಂದ ಇಂದು ಜಗದಗಲ ಶಿವಶರಣರ ವಚನ ಸಾಹಿತ್ಯ ಮತ್ತು ಪಾಣಿನಿಯ ಅಷ್ಟಾಧ್ಯಾಯಿ ಕ್ಷಣಮಾತ್ರದಲ್ಲಿ ಆಸಕ್ತರಿಗೆ ದೊರಕುವಂತಾಗಿದೆ.
ಇದೀಗ ಗಣಕ ವಚನ ಸಾಫ್ಟ್ ವೇರ್ ನ್ನು ಪರಿಷ್ಕರಿಸಿ, ಈ ಕ್ಷಣದ ತಂತ್ರಜ್ಞಾನಕ್ಕೆ ತಕ್ಕಂತೆ ಇನ್ನಷ್ಟು ಆಧುನೀಕರಣಗೊಳಿಸಿ ಮೊಬೈಲ್ ಆ್ಯಪ್ ನಲ್ಲೂ ದೊರಕುವಂತೆ ಮಾಡಲಾಗಿದೆ.
ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಮಾಜ ಸೇವಾ ಕಾರ್ಯಗಳನ್ನು ಪರಿಚಯಿಸುವುದೆಂದರೆ “ಸೂರ್ಯನನ್ನು ಕನ್ನಡಿಯಲ್ಲಿ ಹಿಡಿದಂತೆ” ವೈಚಾರಿಕೆ, ಆಧುನಿಕತೆ, ಸಂಸ್ಕೃತಿಯೊಂದಿಗೆ ಸಾಗುವ ಶ್ರೀಜಗದ್ಗುರೂಗಳು ಸಮಾಜವನ್ನು ಶಿಕ್ಷಣ ಮತ್ತು ಶಿಸ್ತಿನ ಉತ್ಕೃಷ್ಠತೆಯೊಂದಿಗೆ ಬೆಳೆಸಿದವರು. ನಾಡಿನ ಸರ್ವತೋಮುಖ ಬೆಳವಣಿಗೆಗೆ ಹಗಲಿರುಳು ದಣಿವರಿಯದ ದಾಸೋಹಿಯಾಗಿದ್ದಾರೆ.
ಸೇವೆಯಿಂದಲೆ ಸುದ್ದಿಯಾಗುವ ಶ್ರೀಜಗದುರುಗಳವರು ಬಸವಾದಿ ಶರಣರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸುವ ಮೂಲಕ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿ ಬಸವಣ್ಣನವರನ್ನು ನಿಜಾರ್ಥದಲ್ಲಿ ವಿಶ್ವಗುರುವಾಗಿಸಿದ ಕರ್ಮಯೋಗಿಗಳು. ಬಸವಣ್ಣನವರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ರಚನೆ, ಶರಣರ ಸಿದ್ದಾಂತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವಾಗಿದೆ.