ಬೆರಳ ತುದಿಗೆ ಹಚ್ಚುವ ಮಸಿ ಮುಖಕ್ಕೆ ಮೆತ್ತದಿರಲಿ!

ಕರ್ನಾಟಕ ವಿಧಾನಸಭೆಯ ಚುನಾವಣೆ ಇನ್ನೊಂದು ವಾರದೊಳಗೆ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ. ಚುನಾವಣೆಗೂ ಪ್ರಜಾಪ್ರಭುತ್ವಕ್ಕೂ ಹತ್ತಿರದ ಸಂಬಂಧವಿದೆ. ನಮ್ಮ ದೇಶವು ಜನಸಂಖ್ಯೆಯ ದೃಷ್ಟಿಯಿಂದ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಚುನಾವಣೆಗಳಲ್ಲಿ ಜಾತಿಗಳು ಪ್ರಧಾನ ಪಾತ್ರ ವಹಿಸುತ್ತವೆ. ನಮ್ಮ ಸಂವಿಧಾನವು ಜಾತ್ಯತೀತ ದೃಷ್ಟಿಯನ್ನು ಹೊಂದಿದ್ದರೂ ಜಾತಿಯ ಲೆಕ್ಕಾಚಾರವಿಲ್ಲದೆ ಯಾವ ಚುನಾವಣೆಯೂ ನಡೆಯುವುದಿಲ್ಲ. ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಸರ್ಕಾರ ರಚನೆ ಮಾಡುವವರೆಗೂ ಜಾತಿಯೇ ಅಲಿಖಿತ ಸಂವಿಧಾನವಾಗಿದೆ. ಪ್ರಜಾಪ್ರಭುತ್ವದ ಬುನಾದಿ ಚುನಾವಣೆಯಾದರೆ ಚುನಾವಣೆಗೆ ಜಾತಿಯೇ ಭದ್ರ ಬುನಾದಿ. ಆದಕಾರಣ ಚುನಾವಣೆಯ ಅಬ್ಬರ ಪ್ರಚಾರದ ಈ ಸಂದರ್ಭದಲ್ಲಿ ಮತಗಳಿಕೆಗೆ ಎಲ್ಲ ರಾಜಕೀಯ ಪಕ್ಷಗಳಿಂದ ಜಾತಿಗಳ ಓಲೈಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸಂವಿಧಾನದ ಆಶಯ ಜಾತ್ಯತೀತವಾಗಿದ್ದರೆ ಆಡಳಿತದ ಚುಕ್ಕಾಣಿ ಹಿಡಿಯ ಬಯಸುವ ರಾಜಕೀಯ ಧುರೀಣರಿಗೆ ಜಾತಿಯೇ ಬಂಡವಾಳ. ಜಾತಿಯೇ ಬುನಾದಿಯಾದರೆ ಪ್ರಜಾಪ್ರಭುತ್ವವೆಂಬ ಕಟ್ಟಡ ಕುಸಿದುಬೀಳುತ್ತದೆ. ಈಗಾಗಲೇ ಸಾಕಷ್ಟು ಶಿಥಿಲಗೊಂಡಿದೆ. ದೇಶವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಚುನಾವಣೆಗಳು ಪರಿಶುದ್ಧವಾಗಿರಬೇಕು. ಚುನಾವಣೆಗಳು ಪರಿಶುದ್ಧಗೊಳ್ಳ ಬೇಕೆಂದರೆ ಮತದಾರರು ಪ್ರಜ್ಞಾವಂತರಾಗಬೇಕು.
ಚುನಾವಣೆಗೆ ಸ್ಪರ್ಧಿಸಿರುವ. ಅಭ್ಯರ್ಥಿಗಳ ಪೈಕಿ ಉತ್ತಮರಾದವರನ್ನು ನೋಡಿ ಓಟು ಹಾಕಬೇಕೋ ಪಕ್ಷವನ್ನು ನೋಡಿ ಓಟು ಹಾಕಬೇಕೋ ಎಂಬ ಪ್ರಶ್ನೆ ಪ್ರಜ್ಞಾವಂತ ಮತದಾರರ ಮುಂದಿದೆ. ಕುಡಿಯದ ಗಂಡಿಗೆ ಮಗಳನ್ನು ಕೊಡಬೇಕೆಂದು ತಂದೆತಾಯಿಗಳು ಬಯಸಿದರೆ ದೇಶದ ಉದ್ದಗಲಕ್ಕೂ ಅಂತಹ ಗಂಡೇ ಸಿಕ್ಕುವುದಿಲ್ಲ. ಅವರಲ್ಲಿಯೇ ಕಡಿಮೆ ಕುಡಿಯುವ ಗಂಡನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಕನ್ಯಾದಾನಕ್ಕೂ ಮತ್ತು ಮತದಾನಕ್ಕೂ ಒಂದು ವೃತ್ಯಾಸವಿದೆ. ಕನ್ಯಾದಾನ ಮಾಡುವವರು ಗಂಡಿನವರಿಗೆ ವರದಕ್ಷಿಣೆ ತೆರಬೇಕು. ಹಿಂದಿನ ಕಾಲದಲ್ಲಿ ಕನ್ಯಾಪಿತೃಗಳಿಗೆ ಗಂಡಿನವರು "ತೆರ” ಕೊಡುತ್ತಿದ್ದರು. ಈಗ ರಾಜ್ಯಲಕ್ಷ್ಮಿಯನ್ನು ವರಿಸುವವರು ಮತದಾರರಿಗೆ “ತೆರ”ತೆರಬೇಕಾದ ಪರಿಸ್ಥಿತಿ ಉಂಟಾಗಿದೆ.
ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆದುಂಬಿಸಿಕೊಳ್ಳುವ ಪೂರ್ವದಲ್ಲಿ ಗಂಡಿನ ತಂದೆ ತಾಯಿಗಳು ಎಷ್ಟೆಲ್ಲಾ ನಕ್ಷತ್ರ, ರಾಶಿ, ಕುಂಡಲಿ ನೋಡಿ ಅಳೆದು ತೂಗಿ ತೀರ್ಮಾನಕ್ಕೆ ಬರುತ್ತಾರೆ! ಸೊಸೆ ರೂಪವತಿಯಾಗಿರಬೇಕು, ಗುಣವತಿಯೂ ಆಗಿರಬೇಕು, ತಮ್ಮ ಸಂಸಾರದ ಜೊತೆ ಹೊಂದಿಕೊಂಡು ಹೋಗುವವಳಾಗಬೇಕು ಎಂದೆಲ್ಲಾ ಸಾವಿರ ಸಲ, ಸಾವಿರ ರೀತಿಯಲ್ಲಿ ಯೋಚನೆ ಮಾಡಿ ಮುಂದುವರಿಯುತ್ತಾರೆ. ಹೆಚ್ಚು ವರದಕ್ಷಿಣೆ ಸಿಗುತ್ತದೆ. ಎಂದ ಮಾತ್ರಕ್ಕೆ ಯಾರೂ ಕಾಲಿಲ್ಲದವಳನ್ನು/ಕಣ್ಣಿಲ್ಲದವಳನ್ನು/ಕುರೂಪಿಯನ್ನು ಸೊಸೆಯಾಗಿ ಸ್ವೀಕರಿಸಲು ಸುತರಾಂ ಇಷ್ಟಪಡುವುದಿಲ್ಲ. ತಮ್ಮ ಕೌಟುಂಬಿಕ ನೆಲೆಯಲ್ಲಿ ಇಷ್ಟೆಲ್ಲಾ ಜಾಗರೂಕತೆ ವಹಿಸುವ ನಮ್ಮ ಜನ ದೇಶದ ಹಣೆಯ ಬರೆಹವನ್ನು ನಿರ್ಧರಿಸುವ ಚುನಾವಣೆಯಲ್ಲಿ ಏಕೆ ನಿಷ್ಕಾಳಜಿಯಿಂದ ವರ್ತಿಸುತ್ತಿದ್ದಾರೆ? ಹಣದ ಕಾರಣಕ್ಕೋ ಜಾತಿಯ ಕಾರಣಕ್ಕೋ ಅಯೋಗ್ಯರನ್ನು ಆರಿಸಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಚಪ್ಪಡಿ ಎಳೆದುಕೊಳುತ್ತಿದ್ದಾರೆ! ದೇಶವೂ ಒಂದು ದೊಡ್ಡ ಅವಿಭಕ್ತ ಕುಟುಂಬ ಇದ್ದ ಹಾಗೆ. ಕೌಟುಂಬಿಕ ಸ್ತರದಲ್ಲಿ ಹೇಗೆ ಯೋಚನೆ ಮಾಡಿ ಜಾಗೃತಿ ವಹಿಸುತ್ತಾರೋ ಹಾಗೆ ದೇಶದ ಸ್ತರದಲ್ಲಿ ಜಾಗೃತಿ ವಹಿಸುತ್ತಿಲ್ಲ. ಇದೇ ಇಂದಿನ ರಾಷ್ಟ್ರೀಯ ದುರಂತ.
ರಾಜಕೀಯ ಧುರೀಣರು ಅಬ್ಬರದ ಚುನಾವಣಾ ಪ್ರಚಾರಸಭೆಗಳಲ್ಲಿ ಪರಸ್ಪರ ಮಾಡುತ್ತಿರುವ ನಿಂದೆ-ಪ್ರತಿನಿಂದೆಗಳ ಕೆಸರೆರಚಾಟ ಮಹಾಭಾರತ ಯುದ್ಧ ಮುಗಿದ ನಂತರ ನಡೆದ ಅರ್ಜುನ-ಬಬ್ರುವಾಹನರ ಕಾಳಗದ ಪ್ರಸಂಗವನ್ನು ನೆನಪಿಗೆ ತರುತ್ತಿದೆ. ಮಣಿಪುರದ ಯುವರಾಜ ಬಬ್ರುವಾಹನ ಅರ್ಜುನನ ಬೆಂಗಾವಲಿನಲ್ಲಿ ಬಂದ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕುತ್ತಾನೆ. ತನ್ನ ರಾಜಮಾತೆ ಚಿತ್ರಾಂಗದೆಯಿಂದ ಅರ್ಜುನನೇ ತನ್ನ ತಂದೆ ಎಂದು ತಿಳಿದು ಭಾವುಕನಾಗಿ ನಮಸ್ಕರಿಸಲು ಹೋಗುತ್ತಾನೆ. ಆಗ ತನ್ನ ತಾಯಿಯನ್ನು ಜಾರಿಣಿ ಎಂದು ಅರ್ಜುನ ನಿಂದಿಸಿದ್ದು ಅವನ ಕ್ಷಾತ್ರಗುಣವನ್ನು ಕೆರಳಿಸುತ್ತದೆ. ನಟಸಾರ್ವಭೌಮ ಡಾ. ರಾಜಕುಮಾರ್ ದ್ವಿಪಾತ್ರಗಳಲ್ಲಿ ಅಭಿನಯಿಸಿದ “ಬಬ್ರುವಾಹನ” ಎಂಬ ಚಲನಚಿತ್ರದಲ್ಲಿ ಬರುವ ಸಂಭಾಷಣೆಯ ಪರಿಷ್ಕೃತ ನಿರೂಪಣೆ:
ಅರ್ಜುನ: ಛೀ! ದೂರ ಸರಿ. ನಿನ್ನ ಅಪವಿತ್ರವಾದ ಕೈಗಳಿಂದ ನನ್ನ ಪಾದಗಳನ್ನು ಮುಟ್ಟಬೇಡ. ನೀನು ನಿಜವಾಗಿಯೂ ನನ್ನ ಮಗನೇ ಆಗಿದ್ದರೆ ರಣರಂಗದಲ್ಲಿ ತಕ್ಕ ಉತ್ತರ ಕೊಡುತ್ತಿದ್ದೆ. ಹೀಗೆ ಹೇಡಿಯಂತೆ ಲಜ್ಜೆಗೆಟ್ಟು ಬಂದು ಕಾಲು ಹಿಡಿಯುತ್ತಿರಲಿಲ್ಲ. ದೈನ್ಯದಿಂದ ನತಮಸ್ತಕನಾಗಿರುವುದನ್ನು ನೋಡಿದರೆ ನೀನೊಬ್ಬ ಜಾರಿಣಿಯ ಮಗನೇ ಇರಬೇಕು.
ಬಬ್ರುವಾಹನ: ಏನು? ಏನೆಂದೆ? ನನ್ನ ತಾಯಿಯನ್ನು ಜಾರಿಣಿ ಎನ್ನುತ್ತೀಯಾ? ಇದೇ ಮಾತನ್ನು ಬೇರೆ ಯಾರಾದರೂ ಆಡಿದ್ದರೆ ಅವರ ರುಂಡ ಮುಂಡಗಳನ್ನು ತುಂಡರಿಸಿ ರಣಚಂಡಿಗೆ ಔತಣ ನೀಡುತ್ತಿದ್ದೆ.
ಅರ್ಜುನ: ಏಯ್, ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ ನೀನು. ಇರಲಿ, ಪ್ರಾಣಭೀತಿಯಿಂದ ತಲೆ ತಗ್ಗಿಸಿ ಬಂದವರ ತಲೆ ಕಾಯುವುದೇ ನಮ್ಮ ಧರ್ಮ. ಹಾಂ, ಕ್ಷಮಿಸಿದ್ದೇನೆ, ಏಳು ಮೇಲೇಳು?
ಬಬ್ರುವಾಹನ: ಹಗಲಿರುಳು ನೆರಳಂತೆ ನಿನ್ನ ತಲೆಕಾಯ್ದು ಕಾಪಾಡಿದವನು ಶ್ರೀಕೃಷ್ಣನೆಂದು ನಿನಗೆ ನೆನಪಿದೆಯಾ? ನಿನಗೆ ಜಯವ ತಂದುಕೊಟ್ಟವನು ಯದುನಂದನನೆಂದು ಈ ಜಗತ್ತಿಗೇ ಗೊತ್ತು! ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ!
ಅರ್ಜುನ: ನಿನ್ನಂತಹ ಹುಲ್ಲುಕಡ್ಡಿಯನ್ನು ಕತ್ತರಿಸಿ ಹಾಕಲು ಅವನೇಕೆ ಬೇಕೋ?
ಬಬ್ರುವಾಹನ: ನೀನು ಹೀಗೆ ಕೆಂಗಣ್ಣಿನಿಂದ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂದಿಸಿದ ಮರುಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದುಹೋಗಿ, ಪಾಪದ ಮೂಟೆ ನಿನ್ನ ಹೆಗಲು ಏರಿದೆ.
ಅರ್ಜುನ: ಏಯ್ ಮೂಢ! ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇದಿಸಿ, ರಣರಂಗದಲ್ಲಿ ವೀರವಿಹಾರ ಮಾಡಿದ ನನ್ನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ? ಹರನೊಡನೆ ಹೋರಾಡಿ ಪಾಶುಪತಾಸ್ತ್ರವನ್ನು ಪಡೆದವನು ನಾನು. ರಣರಂಗದಲ್ಲಿ ಶತ್ರುಗಳ ತಲೆಗಳನ್ನು ತುಂಡರಿಸಿದ ಉಗ್ರಪ್ರತಾಪಿ ನಾನು.
ಬಬ್ರುವಾಹನ: ಅಹಹ್ಹಾಹಹಾ! ಉಗ್ರಪ್ರತಾಪಿಯೋ ಪಾಪಿಯೋ! ತುಂಬಿದ ಸಭೆಯೊಳಗೆ ದುಃಶಾಸನನು ದ್ರೌಪದಿಯ ಸೀರೆಯನ್ನು ಎಳೆಯುವಾಗ ಎಲ್ಲಿ ಅಡಗಿತ್ತೋ ನಿನ್ನ ಈ ಶೌರ್ಯ? ಕಾಲಿಗೆ ಗೆಜ್ಜೆಗಳನ್ನು ಕಟ್ಟಿ ತಕಥೈ ಎಂದು ಕುಣಿದು ಹೆಂಗಳೆಯರಿಗೆ ನಾಟ್ಯವನ್ನು ಕಲಿಸಿದ ನಪುಂಸಕ ನೀನು. ಚಕ್ರವ್ಯೂಹದೊಳಗೆ ನುಗ್ಗಿ ಛಲದಿಂದ ಭೇದಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟ ನೀನು. ಗಂಡುಗಲಿಗಳನ್ನು ಎದುರಿಸಿ ಗೆಲ್ಲುವ ತಾಕತ್ತು ನಿನಗೆಲ್ಲಿದೆಯೋ ಶಿಖಂಡಿ?
ಅರ್ಜುನ: ಶಿಖಂಡಿ ಎಂದಡಿಗಡಿಗೆ ನುಡಿಯ ಬೇಡವೋ ಮೂಢಾ, ಭಂಡರೆದೆಗುಂಡಿಗೆಯ ಖಂಡಿಸುತ ರಣಚಂಡಿಗೌತಣವನೀವ ಈ ಗಾಂಡೀವಿ. ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ!
ಬಬ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ಈ ರಣರಂಗ. ಎತ್ತು ನಿನ್ನ ಆ ಗಾಂಡೀವ. ಹೂಡು ಪರಮೇಶ್ವರನು ಕೊಟ್ಟ ಆ ಪಾಶುಪತಾಸ್ತ್ರವ!
ಚಿಕ್ಕಂದಿನಲ್ಲಿ ಹಿರಿಯ ಓದುಗರು ನೋಡಿರಬಹುದಾದ ಇಂತಹ ವೀರರಸಭರಿತ ಪೌರಾಣಿಕ ಸಿನಿಮಾಗಳು ಈಗ ರಜತ ಆಧುನಿಕ ಪರದೆಯ ಮೇಲೆ ನೋಡಲು ಸಿಗುವುದಿಲ್ಲ. ಆಧುನಿಕ ಮಹಾಭಾರತದ ಜನನಾಯಕರು ಅಬ್ಬರದ ಚುನಾವಣಾ ಪ್ರಚಾರದ ವೇಳೆ ಮಾಡುತ್ತಿರುವ ವೈಯಕ್ತಿಕ ನಿಂದೆ-ಪ್ರತಿನಿಂದೆಗಳು ಮಾತ್ರ ಕಿರುತೆರೆಯ ಮೇಲೆ ಧಾರಾಳವಾಗಿ ಸಿಗುತ್ತಿವೆ.
ಪ್ರಜಾಪ್ರಭುತ್ವದಲ್ಲಿ “ಪ್ರಭು” ಎನಿಸಿಕೊಂಡಿರುವ ಜನಸಾಮಾನ್ಯರು ರಾಜಕಾರಣಿಗಳ ಜೀತದಾಳುಗಳಾಗಿದ್ದಾರೆ. ಐದು ವರ್ಷಗಳಿಗೊಮ್ಮೆ ಅಭ್ಯರ್ಥಿಗಳು ಕೈಮುಗಿದು ಮನೆ ಬಾಗಿಲಿಗೆ ಬಂದಾಗ ಎಲ್ಲ ಪಕ್ಷದವರಿಂದಲೂ ತೆರೆಮರೆಯಲ್ಲಿ ತಮ್ಮ ಹರಿದ ಜೇಬನ್ನು ತುಂಬಿಸಿಕೊಳ್ಳುವ ಜಾಣ್ಮೆ ತೋರಿಸುತ್ತಿದ್ದಾರೆ. ಮದ್ಯ ಮತ್ತು ದುಡ್ಡಿನ ಆಮಿಷಕ್ಕೆ ಒಳಗಾಗಿ ಓಟು ಮಾಡಿದರೆ ಮತದಾನ ಕೇಂದ್ರದಲ್ಲಿ ಕೈಬೆರಳಿಗೆ ಹಚ್ಚುವ ಮಸಿ ಮುಖಕ್ಕೆ ಮೆತ್ತಿಕೊಂಡ ಮಸಿಯಾಗುತ್ತದೆ! ಅದನ್ನು ಅಳಿಸಿಕೊಳ್ಳಲು ಮತ್ತೆ ಐದು ವರ್ಷ ಕಾಯಬೇಕಾಗುತ್ತದೆ ಎಂಬುದು ಮತದಾರರ ನೆನಪಿನಲ್ಲಿರಲಿ! ಓಟು ಮಾಡುವಾಗ ಬೆರಳ ತುದಿಗೆ ಹಚ್ಚಿದ ಮಸಿ ತಾಯಂದಿರು ಮಗುವಿನ ಹಾಲು ಗಲ್ಲದ ಮೇಲೆ ಪ್ರೀತಿಯಿಂದ ಇಡುವ ದೃಷ್ಟಿಬೊಟ್ಟಿನಂತಿರಲಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
”ಬಿಸಿಲು ಬೆಳದಿಂಗಳು” ದಿ.4-5-2023.