ಮತದಾನ ಮಾಡದಿದ್ದಲ್ಲಿ ಸರ್ಕಾರದ ವಿಶೇಷ ಸೌಲಭ್ಯಗಳನ್ನು ನಿಲ್ಲಿಸಿ : ಶ್ರೀ ತರಳಬಾಳು ಜಗದ್ಗುರುಗಳವರು
ಸಿರಿಗೆರೆ : ಚುನಾವಣೆಗಳಲ್ಲಿ ಮತಚಲಾಯಿಸುವುದು ನಾಗರಿಕರೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಆ ಕರ್ತವ್ಯಗಳನ್ನು ನಿಭಾಯಿಸುವುದು ಎಲ್ಲರ ಹೊಣೆಗಾರಿಕೆ. ಹೀಗಿದ್ದೂ ಚುನಾವಣೆಗಳಲ್ಲಿ ತಮ್ಮ ಮತಗಳನ್ನು ಚಲಾಯಿಸದೆ ನಿರ್ಲಕ್ಷ್ಯ ತೋರುವ ನಾಗರಿಕರಿಗೆ ಸರ್ಕಾರವು ತಾನು ನೀಡುವ ವಿಶೇಷ ಸೌಲಭ್ಯಗಳನ್ನು ನಿಲ್ಲಿಸಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯಪಟ್ಟರು.
ಸಿರಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 71ರಲ್ಲಿ ಮತ ಚಲಾಯಿಸಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಇದರಿಂದ ಜನರಲ್ಲಿ ಮತ ಚಲಾಯಿಸುವ ಮನೋಭಾವವನ್ನು ಬೆಳೆಸಬಹುದಾಗಿದೆ ಎಂದರು. ದೇಶದಲ್ಲಿ ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಅದನ್ನು ಬಳಸಿಕೊಂಡು ಮತದಾರರು ಎಲ್ಲಿಯೇ ಇದ್ದರೂ ತಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತಚಲಾಯಿಸುವಂತ ತಂತ್ರಾಂಶವನ್ನು ರೂಪಿಸಬೇಕು. ಚುನಾವಣಾ ಆಯೋಗ ಈಗಾಗಲೇ ಹಲವು ಮಹತ್ತರ ಕೆಲಸಗಳನ್ನು ಮಾಡಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮತದಾನದ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಿಸಬೇಕು. ಆಗ ಎಲ್ಲರೂ ಮತದಾನದಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ ಎಂದರು.
ರಾಜಕಾರಣ ತೀರಾ ಹದಗೆಟ್ಟಿದೆ. ಪಕ್ಷಾಂತರ ಕಾಯಿದೆಗಳನ್ನು ಬಿಗಿಗೊಳಿಸದೇ ಇದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ವ್ಯಕ್ತಿಗೆ ತಕ್ಷಣಕ್ಕೆ ಮಣೆ ಹಾಕದೆ ಆ ವ್ಯಕ್ತಿ ಕನಿಷ್ಠ5 ವರ್ಷಗಳ ಕಾಲವಾದರೂ, ಹೊಸ ಪಕ್ಷದಲ್ಲಿ ಕೆಲಸ ಮಾಡಿದ ನಂತರವೇ ಆತನಿಗೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಬೇಕು. ಇಂತಹ ನಿಬಂಧನೆಗಳನ್ನು ಚುನಾವಣಾ ಆಯೋಗ ತೀವ್ರಗತಿಯಲ್ಲಿ ಜಾರಿಗೆ ತರಬೇಕು ಎಂದರು.
ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವ ಅಧಿಕಾರ:
ಸಾಂಪ್ರದಾಯಿಕವಾಗಿ ಬಹುಮತಕ್ಕೆ ಅಗತ್ಯವಾದಷ್ಟು ಶಾಸಕರ ಸಂಖ್ಯಾಬಲ ಒಂದು ಪಕ್ಷಕ್ಕೆ ಲಭಿಸದೇ ಹೋದಲ್ಲಿ ಅತಿ ಹೆಚ್ಚು ಸಂಖ್ಯಾಬಲ ಹೊಂದಿರುವ ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುವಂತಹ ಕಾಯಿದೆ ಜಾರಿಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಇದರಿಂದ ಪಕ್ಷಾಂತರ ಹಾಗೂ ರೆಸಾರ್ಟ್ ರಾಜಕಾರಣ ವನ್ನು ಕೊನೆಗೊಳಿಸಬಹುದು. ಜನರಿಗೆ ಅಗತ್ಯವಾದ ಮಸೂದೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಬೇರೆ ಪಕ್ಷಗಳ ಸದಸ್ಯರ ಮನವೊಲಿಸಿ ಅವರ ಬೆಂಬಲವನ್ನು ಪಡೆದುಕೊಳ್ಳಬಹುದು. ಈಗ ಕಲುಷಿತಗೊಂಡ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಆಲೋಚನೆ ಹೀಗಿದೆ ಎಂದರು.
ಪಕ್ಷಾಂತರ ಕುರಿತ ಚರ್ಚೆ:
ರಾಜ್ಯದಲ್ಲಿ ಇತ್ತೀ ಚಿನ ದಿನಗಳಲ್ಲಿ ಪಕ್ಷಾಂತರದ ಅವಾಂತರ ಹೆಚ್ಚಿದೆ. ಇದನ್ನು ಕಾನೂನಿನ ಅಡಿಯಲ್ಲಿ ನಿರ್ಭಂದಿಸುವ ಕುರಿತಂತೆ ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ಮಾಡಲಾಗುವುದು. ಚುನಾವಣಾ ಪ್ರಕ್ರಿಯೆಗಳು ಮುಗಿದ ನಂತರ ಈ ಕುರಿತು ಕಾನೂನು ತಜ್ಞರು, ನ್ಯಾಯವಾದಿಗಳು ಮುಂತಾದವರ ಜೊತೆಗೆ ಸಮಾಲೋಚನೆ ನಡೆಸುವ ಉದ್ದೇಶ ಇದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.