ಪ್ರಜಾಪ್ರಭುತ್ವ ರಾಜಪ್ರಭುತ್ವಕ್ಕಿಂತ ಭಿನ್ನವೇ?

  •  
  •  
  •  
  •  
  •    Views  

ಆಡಳಿತದ ಚುಕ್ಕಾಣಿ ಹಿಡಿದಿರುವ ಕೈ ಎಂಥವು ಎಂಬುದರ ಮೇಲೆ ಪ್ರಜಾಪ್ರಭುತ್ವದ ಯಶಸ್ಸು

ರ್ನಾಟಕ ವಿಧಾನಸಭೆಯ ಚುನಾವಣಾ ಕುರುಕ್ಷೇತ್ರ ಕೊನೆಗೊಂಡಿದೆ. ಚುನಾವಣಾ ಫಲಿತಾಂಶ ಎಲ್ಲ ಸಮೀಕ್ಷೆಗಳನ್ನೂ ತಲೆಕೆಳಗಾಗಿಸಿದೆ. ಅಭ್ಯರ್ಥಿಗಳು ಚುನಾವಣೆಗಳನ್ನು ನೀತಿಯುತವಾಗಿ ನಡೆಸಿದ್ದಾರೆಂದು ಹೇಳಲು ಬರುವುದಿಲ್ಲ. ಜನರೂ ಸಹ ನೀತಿಯುತವಾಗಿಯೇ ಮತದಾನ ಮಾಡಿದ್ದಾರೆಂದು ನಂಬಲೂ ಸಾಧ್ಯವಿಲ್ಲ. ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದಲೂ ಬಾಯತಂಬುಲ ಮೆಲಿದ ಮಹಾನುಭಾವರು! ಮಧ್ಯಾಹ್ನ 3 ಗಂಟೆಯಾದರೂ ಇನ್ನೂ ಓಟು ಮಾಡಿಲ್ಲವೆಂದು ಕೈಬೆರಳನ್ನು ತೋರಿಸಿ ವಸೂಲಿಬಾಜಿ ಮಾಡಿಕೊಂಡ ಮಹಾ ಮೇಧಾವಿಗಳು! ಭ್ರಷ್ಟಾಚಾರವೆಂಬುದು ಪ್ರಜಾಪ್ರಭುತ್ವದ ಒಂದು ಅವಿಚ್ಛಿನ್ನ (inseparable) ಭಾಗವಾಗಿ ಪರಿಣಮಿಸಿದೆ. ಆದರೂ ವಿಧಾನಸಭೆಯು ಅತಂತ್ರವಾಗದಂತೆ, ರಾಜಕೀಯ ಧುರೀಣರು ಅಧಿಕಾರ ಲಾಲಸೆಯಿಂದ ರೆಸಾರ್ಟ್ ರಾಜಕೀಯ ಮಾಡದಂತೆ, ಸ್ಥಿರ ಸರಕಾರವನ್ನು ಸ್ಥಾಪಿಸಿ ನೆಮ್ಮದಿಯಿಂದ ರಾಜ್ಯಾಡಳಿತ ನಡೆಸಲು ಅನುಕೂಲವಾಗುವಂತೆ ಜನರು ಬಹುಮತ ನೀಡಿರುವುದು ಸ್ವಾಗತಾರ್ಹ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಬೆಂಬಲದಿಂದ ಅಧಿಕಾರಕ್ಕೆ ಬಂದ ಇದುವರೆಗಿನ ಯಾವುದೇ ಸರಕಾರ ಭ್ರಷ್ಟಾಚಾರದ ಆರೋಪದಿಂದ ಹೊರತಾಗಿಲ್ಲ. ಆರಂಭದಲ್ಲಿ ಜನಮನ್ನಣೆಯನ್ನು ಗಳಿಸಿದರೂ ಕ್ರಮೇಣ ಭ್ರಮನಿರಸನಗೊಳ್ಳುವಂತಾಗಿದೆ. ಮತದಾರರು ಪ್ರತಿ ಚುನಾವಣೆಯಲ್ಲಿಯೂ ಒಂದು ಸರಕಾರವನ್ನು ಕಿತ್ತು ಹಾಕಿ ಮತ್ತೊಂದು ಸರಕಾರವನ್ನು ಅಧಿಕಾರಕ್ಕೆ ತರುತ್ತಲೇ ಬಂದಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಕಂಡುಬರುತ್ತಿರುವ ಭ್ರಷ್ಟಾಚಾರದ “ಬೆಳವಣಿಗೆ”ಯ ಒಂದು ವಾರೆನೋಟ! ಇಂದಿನ ಕೊಳಕು ರಾಜಕಾರಣದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಯಾರಿಗೂ ನೈತಿಕ ಹಕ್ಕು ಇಲ್ಲ. ಆಡಳಿತ ಪಕ್ಷವಿರಲಿ, ವಿರೋಧ ಪಕ್ಷವಿರಲಿ ಎಲ್ಲರ ಕೈಗಳೂ ಒಂದಲ್ಲ ಒಂದು ರೀತಿಯಲ್ಲಿ ಮಲಿನಗೊಂಡಿವೆ. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯನ್ನು ಕಲ್ಲು ಹೊಡೆದು ಸಾಯಿಸಲು ಮುಂದಾದ ಜನರನ್ನು ಕಂಡು “ನಿಮ್ಮಲ್ಲಿ ಯಾವ ಪಾಪವನ್ನೂ ಮಾಡದವರು ಮೊದಲ ಕಲ್ಲು ಎಸೆಯಿರಿ” ಎಂದು ಸವಾಲು ಹಾಕಿದ “ಏಸುಕ್ರಿಸ್ತ” ಈಗ ಯಾರಿದ್ದಾರೆ? ತಮ್ಮ ತಮ್ಮ ಜಾತಿಯ ಶಿಷ್ಯರಿಗೇ ಮಂತ್ರಿಪದವಿ ಕೊಡಬೇಕೆಂದು ಸವಾಲು ಹಾಕುವವರೇ ಹೆಚ್ಚು. ಧರ್ಮಬೋಧೆಯನ್ನು ಮರೆತು ರಾಜಕೀಯ ರಾಡಿ ಎಬ್ಬಿಸುವವರೇ ಜಾಸ್ತಿ.

ಹಿಂದಿನ ರಾಜಮಹಾರಾಜರುಗಳ ಆಳ್ವಿಕೆಗಿಂತ ಇಂದಿನ ಪ್ರಜಾಪ್ರಭುತ್ವದ ಆಳ್ವಿಕೆ ತಾತ್ವಿಕವಾಗಿ ಶ್ರೇಷ್ಠವೆನಿಸಿದರೂ ನಿರಂಕುಶಪ್ರಭುತ್ವ ಈಗಲೂ ಮುಂದುವರಿದಿದೆ. ರಾಜಮಹಾರಾಜರುಗಳು ತಮ್ಮ ಅಧಿಕಾರ ಗದ್ದುಗೆಯ ಉಳಿವಿಗಾಗಿ, ಸಾಮ್ರಾಜ್ಯದ ವಿಸ್ತರಣೆಗಾಗಿ ಮಾಡುತ್ತಿದ್ದ ಕಾದಾಟ ಮತ್ತು ತಂತ್ರಗಾರಿಕೆಗಳು ಬೇರೊಂದು ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ  ನುಸುಳಿವೆ. ವಂಶಪಾರಂಪರ್ಯವಾಗಿ ಅಧಿಕಾರವನ್ನು ಗಳಿಸುವ ಸನ್ನಾಹ ಕೊನೆಗೊಂಡಿಲ್ಲ. ರಾಜಮಹಾರಾಜರುಗಳ ಕಾಲದಲ್ಲಿ ರಾಜನ ವರ್ತನೆ, ಆಡಳಿತ ಹೇಗಿರಬೇಕೆಂಬುದಕ್ಕೆ “ರಾಜಧರ್ಮ” ಎಂದು ಕರೆಯುತ್ತಿದ್ದರು. ಪ್ರಾಚೀನ ಧರ್ಮಶಾಸ್ತ್ರಗಳು ಕೇವಲ ಧಾರ್ಮಿಕ ವಿಧಿ-ವಿಧಾನಗಳ ಕಟ್ಟಳೆಗಳಷ್ಟೇ ಆಗಿರಲಿಲ್ಲ; ಸಾಮಾಜಿಕ ಜೀವನವನ್ನು ನಿಯಂತ್ರಿಸುವ ರಾಜ್ಯಾಡಳಿತದ ಶಾಸನಗಳೂ (state-laws) ಆಗಿದ್ದವು. ಅವುಗಳಲ್ಲಿ ರಾಜನು ಹೇಗೆ ರಾಜ್ಯಭಾರ ಮಾಡಬೇಕೆಂಬ ಕೆಲವು ವಿಧಿನಿಷೇಧಗಳು ಹೀಗಿವೆ:

  • “ನೃಪಸ್ಯ ಪರಮೋ ಧರ್ಮಃ ಪ್ರಜಾನಾಂ ಪರಿಪಾಲನಮ್" (ಪ್ರಜೆಗಳ ಪರಿಪಾಲನೆಯೇ ರಾಜನ ಪರಮಧರ್ಮ) -ಶುಕ್ರನೀತಿಸಾರ.

  • “ಪ್ರಜಾಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಮ್”(ಪ್ರಜೆಗಳ ಸುಖವೇ ತನ್ನ ಸುಖ, ಪ್ರಜೆಗಳ ಹಿತವೇ ತನ್ನ ಹಿತ ಎಂದು ರಾಜನು ಭಾವಿಸಬೇಕು) -ಕೌಟಿಲ್ಯನ ಅರ್ಥಶಾಸ್ತ್ರ.

  • “ಸರ್ವೋ ದಂಡಜಿತೋ ಲೋಕೋ ದುರ್ಲಭೋ ಹಿ ಶುಚಿರ್ನರಃ| ದಂಡಸ್ಯ ಹಿ ಭಯಾತ್ಸರ್ವಂ ಜಗದ್ಭೋಗಾಯ ಕಲ್ಪತೇ”(ಜನರು ಶಿಕ್ಷೆಗೆ ಹೆದರಿ ನಡೆಯುತ್ತಾರೆಯೇ ಹೊರತು ಸಂಸ್ಕಾರವಂತರಾಗಿ ನಡೆಯುವವರು ವಿರಳ)  -ಮನುಸ್ಮೃತಿ,

  • ಯುದ್ಧದಲ್ಲಿ ಮಡಿದ ಯೋಧರ ಮಡದಿಯರಿಗೆ ರಾಜನು ಜೀವನಾಂಶವನ್ನು ಕೊಡಬೇಕು. -ವಸಿಷ್ಠ ಧರ್ಮಸೂತ್ರ.

  • “ಯಥಾಲ್ಪಾಲ್ಪಮದಂತ್ಯಾದ್ಯಂ ವಾರ್ಯೋಕೋವತ್ಸಷಟ್ ಪದಾಃ| ತಥಾಲ್ಪಾಲ್ಪೋ ಗೃಹೀತವ್ಯೋ ರಾಷ್ಟ್ರಾದ್ರಾಜ್ಞಾಬ್ದಿಕಃ ಕರಃ” (ಹೇಗೆ ದುಂಬಿಗಳು ಹೂವುಗಳಿಗೆ ನೋವಾಗದಂತೆ ಸ್ವಲ್ಪ ಸ್ವಲ್ಪವೇ ಮಕರಂದವನ್ನು ಹೀರುತ್ತವೆಯೋ ಹಾಗೆ ಜನರಿಗೆ ಹೆಚ್ಚು ಹೊರೆಯಾಗದಂತೆ ಅತ್ಯಲ್ಪ ಸುಂಕವನ್ನು (tax) ರಾಜನು ವಿಧಿಸಬೇಕು.

ಕುರುಕ್ಷೇತ್ರ ಯುದ್ಧ ಗೆದ್ದ ಮೇಲೆ ಧರ್ಮರಾಯನು ರಕ್ತದ  ಮಡುವಿನಲ್ಲಿ ಬಿದ್ದಿದ್ದ ಬಂಧು-ಬಾಂಧವರ ಹೆಣಗಳ ರಾಶಿಯನ್ನು ನೋಡಿ ದುಃಖಿತನಾಗಿ ತನ್ನಿಂದಲೇ ಈ ದುರಂತ ಸಂಭವಿಸಿತೆಂದು ಪಶ್ಚಾತ್ತಾಪ ಪಟ್ಟು ರಾಜ್ಯಸಿಂಹಾಸನವನ್ನು ಏರಲು ಬಯಸದೆ ಕಾಡಿಗೆ ಹೋಗುವ ತನ್ನ ನಿರ್ಧಾರವನ್ನು ಪ್ರಕಟಿಸುತ್ತಾನೆ. ಅರ್ಜುನಾದಿ ಸಹೋದರರು ಎಷ್ಟೇ ಹೇಳಿದರೂ ಕೇಳುವುದಿಲ್ಲ. ಶ್ರೀಕೃಷ್ಣನು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಪಿತಾಮಹನ ಹತ್ತಿರ ಕರೆದೊಯ್ಯುತ್ತಾನೆ. ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮಪಿತಾಮಹರು ಧರ್ಮರಾಯನಿಗೆ ರಾಜಧರ್ಮದ ವಿಚಾರವಾಗಿ ಹೇಳಿದ ಕೆಲವು ಹಿತ ನುಡಿಗಳು ಹೀಗಿವೆ:

  • “ಕೃಪಣಾನಾಥವೃದ್ಧಾನಾಂ ವಿಧವಾನಾಂ ಚ ಯೋಷಿತಾಂ.| ಯೋಗಕ್ಷೇಮಂ ಚ ವೃತ್ತಿಂ ಚ ನಿತ್ಯಮೇವ ಪ್ರಕಲ್ಪಯೇತ್ (ಬಡವರು, ಅನಾಥರು, ವೃದ್ಧರು, ವಿಧವೆಯರು, ಮಹಿಳೆಯರು ಮೊದಲಾದವರ  ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದ್ದು ರಾಜನ ಕರ್ತವ್ಯ).

  • “ನೃಪತಿಃ ಸುಮುಖಶ್ಚ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ|” ರಾಜನು ಯಾವಾಗಲೂ ಪ್ರಸನ್ನವದನನಾಗಿರಬೇಕು, ಇತರರೊಡನೆ ಮಾತನಾಡುವಾಗ ಹಸನ್ಮುಖಿಯಾಗಿರಬೇಕು.

  • “ಪುತ್ರಾ ಇವ ಪಿತುರ್ಗೇಹೇ ವಿಷಯೇ ಯಸ್ಯ ಮಾನವಾಃ| ನಿರ್ಭಯಾ ವಿಚರಿಷ್ಯಂತಿ ಸ ರಾಜಾ ರಾಜಸತ್ತಮಃ||” ತಂದೆಯ ಮನೆಯಲ್ಲಿ ಹೇಗೆ ಮಕ್ಕಳು ನಿರ್ಭಯವಾಗಿ ಆಡಿಕೊಂಡು ಇರುತ್ತಾರೋ ಹಾಗೆ ಯಾವ ರಾಜನ ರಾಜ್ಯದಲ್ಲಿ ಪ್ರಜೆಗಳು ನಿರಾತಂಕವಾಗಿ ಜೀವನವನ್ನು ಸಾಗಿಸುತ್ತಾರೋ ಆ ರಾಜನೇ ಶ್ರೇಷ್ಠನು.

  • “ನ ಯಸ್ಯ ಕೂಟಂ ಕಪಟಂ ನ ಮಾಯಾ ನ ಚ ಮತ್ಸರಃ| ವಿಷಯೇ ಭೂಮಿಪಾಲಸ್ಯ ತಸ್ಯ ಧರ್ಮಃ ಸನಾತನಃ||” ಒಳ್ಳೆಯ ರಾಜನ ಆಡಳಿತದಲ್ಲಿ ಸುಳ್ಳು, ಮೋಸ, ವಂಚನೆ, ಕಳ್ಳತನ, ಅಸೂಯೆ ಇರುವುದಿಲ್ಲ.

  • “ಮಾ ತೇ ರಾಷ್ಟ್ರೇ  ಯಾಚನಕಾಃ ಭೂವನ್ಮಾ ಚಾsಪಿ ದಸ್ಯವಃ|” ನಿನ್ನ ರಾಜ್ಯದಲ್ಲಿ ಭಿಕ್ಷುಕರು ಇಲ್ಲದಂತಾಗಲಿ, ಕಳ್ಳಕಾಕರು ಇಲ್ಲದಂತಾಗಲಿ.

  • “ತದ್ರಾಜ್ಯೇ ರಾಜಕಾಮಾನಾಂ ನಾನ್ಯೋ ಧರ್ಮಃ ಸನಾತನಃ| ಋತೇ ರಕ್ಷಾಂ ತು ವಿಸ್ಪಷ್ಟಾಂ ರಕ್ಷಾ ಲೋಕಸ್ಯ ಧಾರಿಣೀ||” ರಾಜ್ಯದಲ್ಲಿರುವ ಪ್ರಜೆಗಳನ್ನು ಸಂರಕ್ಷಿಸುವುದೇ ರಾಜನ ಪ್ರಮುಖ ಕರ್ತವ್ಯ. ಇದಕ್ಕಿಂತ ಮಿಗಿಲಾದ ಕರ್ತವ್ಯ ಬೇರೇನೂ ಇಲ್ಲ.

“ರಾಜಧರ್ಮ”ವನ್ನು ಕುರಿತು ಹೇಳಿದ ಮೇಲಿನ ಹಿತೋಕ್ತಿಗಳು ಇಂದಿನ ಮಂತ್ರಿಮಹೋದಯರಿಗೂ ಅನ್ವಯಿಸುತ್ತವೆ. ರಾಜಪ್ರಭುತ್ವವೇ ಆಗಲಿ, ಪ್ರಜಾಪ್ರಭುತ್ವವೇ ಆಗಲಿ, ಅದು ಜನರ ಹಿತರಕ್ಷಣೆಯ ಒಂದು ಆಡಳಿತ ವ್ಯವಸ್ಥೆ. ಯಾವುದೇ ವ್ಯವಸ್ಥೆ ಇರಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕೈಗಳು ಎಂಥವು ಎಂಬುದರ ಮೇಲೆ ಅದರ ಯಶಸ್ಸು ನಿಂತಿದೆ. 

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವವೆಂಬ ಸೌಧದ ಮೂರು ಬಲವಾದ ಸ್ತಂಭಗಳೆಂದು ಪರಿಭಾವಿಸಲಾಗಿದೆ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ ಹೇಳುವುದಾದರೆ ಈ ಕಂಬಗಳು ದುರ್ಬಲವಾಗಿ ಒಂದೊಂದೇ ಕಳಚಿ ಬೀಳತೊಡಗಿವೆ. ನಿತ್ಯವೂ ಹಿಂಸೆ, ಕ್ರೌರ್ಯ, ಆತಂಕ ಮತ್ತು ಭಯದ ವಾತಾವರಣದಲ್ಲಿ ನಾಡಿನ ಜನತೆ ಬದುಕುತ್ತಿದ್ದು ಯಾರೂ ಏನೂ ಮಾಡಲು ಸಾಧ್ಯವಿಲ್ಲವೆಂಬಂತಾಗಿರುವುದು ವಿಷಾದನೀಯ ಸಂಗತಿ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

-- ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.18-5-2023.