ನೂತನ ಶಾಸಕರುಗಳಿಗೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಜಲಪಾಠ..! ಭ್ರಷ್ಟಾಚಾರ ರಹಿತವಾಗಿ ಪಾರದರ್ಶಕವಾಗಿರಲು ಸೂಚನೆ.
ಶ್ರೀ ಜಗದ್ಗುರುಗಳವರ ಆಶೀರ್ವಾದ ಪಡೆದ ಹರಿಹರ, ಜಗಳೂರು, ಹೊಳಲ್ಕೆರೆ, ಬೇಲೂರು ಶಾಸಕರು.
ಜಾತಿ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಕು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾನವರೆಲ್ಲರಿಗೂ. ಮನುಷ್ಯ ಧರ್ಮ ಶ್ರೇಷ್ಠವಾದದ್ದು. ಸತ್ಕರ್ಮಗಳು ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತವೆ. ಧಾರ್ಮಿಕತೆ ವಾದಿಸಲು ಅಲ್ಲ. ಜಯಿಸಲು ಕೂಡ ಅಲ್ಲ.ಅದು ತಿಳಿದು, ತಿಳಿಸಲು. ಸಮಾಜಸೇವೆ ನಮ್ಮ ಋಣದ ಹೊರೆಯನ್ನು ಹಗುರ ಮಾಡುವ ದಾರಿ. ನಾವು ಉಪಕಾರ ಮಾಡುತ್ತೇವೆ ಎಂಬ ಭ್ರಮೆ ಸರಿ ಅಲ್ಲ! ಪರಂಪರೆ ನಮ್ಮ ಗತ ಕಾಲದ ಸಂಚಯ. ಆ ಪರಂಪರೆ ಒಂದು ಜಾತಿಗೆ ಸೀಮಿತ ಆಗಬಾರದು. ಮನುಷ್ಯ ಜಾತಿಯ ಪರಂಪರೆಯ ಬಗ್ಗೆ ಮಾತ್ರ ನಾವು ಯೋಚಿಸಬೇಕು ಎಂಬ ಮಾರ್ಗದರ್ಶನದ ಆಶಯಗಳನ್ನು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನೂತನವಾಗಿ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾಗಿ ಶಾಸಕರುಗಳಾದ ಹರಿಹರ ಕ್ಷೇತ್ರದ ಶಾಸಕ ಬಿ.ಪಿ.ಹರೀಶ್, ಹೊಳಲ್ಕೆರೆಯ ಶಾಸಕ ಶ್ರೀ ಎಂ.ಚಂದ್ರಪ್ಪ,ಬೇಲೂರಿನ ಶಾಸಕ ಶ್ರೀ ಹೆಚ್.ಸುರೇಶ್, ಜಗಳೂರಿನ ಶಾಸಕ ಶ್ರೀ ದೇವೇಂದ್ರಪ್ಪನವರಿಗೆ ಮಾರ್ಗದರ್ಶನ ನೀಡಿದರು.
ಪ್ರತ್ಯೇಕವಾಗಿ ಶ್ರೀ ಜಗದ್ಗುರುಗಳವರನ್ನು ಸದ್ಧರ್ಮ ಪೀಠದಲ್ಲಿ ಭೇಟಿಮಾಡಿ ಪುಷ್ಪ ಮಾಲೆಯೊಂದಿಗೆ ಭಕ್ತಿ ಸಮರ್ಪಿಸಿದ ಶಾಸಕರುಗಳಿಗೆ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಶಾಲು, ಹಾರ, ಸ್ಮರಣಿಕೆ ನೀಡಿ ಗೌರವಿಸಿ ಆಶೀರ್ವಾದಿಸಿದರು.
ರೈತರ ಹಿತ, ಹಳ್ಳಿಗಳಲ್ಲಿ ಸೌಹಾರ್ದತೆ ಕಾಪಾಡಿ:
ನಿಮ್ಮ ನಿಮ್ಮ ಕ್ಷೇತ್ರದ ರೈತರುಗಳ ಹಿತ ಕಾಯುವ ವಿಶೇಷವಾಗಿ ಏತ ನೀರಾವರಿ ಯೋಜನೆ, ಬೆಳೆದ ಬೆಲೆಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಸೂಚಿಸಿದರು.ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯು ಪರ ಮತ್ತು ವಿರೋಧವಾಗಿ ಮತ ಚಲಾಯಿಸಿದವರೆಲ್ಲರನ್ನು ಪ್ರೀತಿ ವಿಶ್ವಾಸದಿಂದ ಜೊತೆ ಕರೆದೊಯ್ದು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಕಾರಣಗಳಿಂದ ಉಂಟಾಗಿರುವ ದ್ವೇಷ ಮತ್ಸರವನ್ನು ತೊಡೆದುಹಾಕಿ ಸೌಹಾರ್ದತೆ ಕಾಪಾಡುವ ಹೊಣೆಗಾರಿಕೆ ನಿಭಾಯಿಸುವಂತೆ ಸೂಚಿಸಿದರು.
ಭೈರನಪಾದ ಏತ ನೀರಾವರಿ ಜಾರಿಗೆ ಮಾರ್ಗದರ್ಶನ ನೀಡಲು ಶ್ರೀ ಜಗದ್ಗುರುಗಳವರಿಗೆ ಬಿ.ಪಿ.ಹರೀಶ್ ಮನವಿ:
ಹರಿಹರ ಕ್ಷೇತ್ರದ ಮಲೇಬೆನ್ನೂರು: ಹೋಬಳಿಯ ಅನೇಕ ಗ್ರಾಮಗಳ ನೂರಾರು ಎಕರೆ ನೀರಾವರಿ ಜಮೀನುಗಳಿಗೆ ನೀರು ಹರಿಸುವ ಬೈರನಪಾದ ಏತನೀರಾವರಿ ಯೋಜನೆ ಜಾರಿಗೊಳಿಸಲು ತಮ್ಮ ನೇತೃತ್ವದ ಮಾರ್ಗದರ್ಶನ ಅಗತ್ಯವಾಗಿದ್ದು, ನೂತನ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಿ.ಪಿ.ಹರೀಶ್ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಲ್ಲಿ ಪ್ರಾರ್ಥಿಸಿದರು.
ಮಲೇಬೆನ್ನೂರು ಸಮೀಪದ ಗೋವಿನಹಾಳು ಬಳಿಯ ತುಂಗಭದ್ರಾ ನದಿಯಲ್ಲಿ ಭೈರನಪಾದ ಸ್ಥಳವಿದ್ದು ಆ ನದಿಯಿಂದ ನೀರು ಭದ್ರಾ ಕಾಲುವೆ ಹರಿಸಿ ಕೊನೇ ಭಾಗದ ರೈತರ ಜಮೀನುಗಳಿಗೆ ಹರಿಸಿದರೆ ನೀರಿನ ಬವಣೆಯಿಂದ ರೈತರು ಪ್ರತಿಭಟನೆ ಮಾಡುವುದು ತಪ್ಪಲಿದೆ. ಕೊನೇ ಭಾಗದ ನಂದಿತಾವರೆ, ಕಡರನಾಯಕನಹಳ್ಳಿ ಪಾಳ್ಯ, ಹೊಳೆಸಿರಿಗೆರೆ, ಕಮಲಾಪುರ, ಶೆಟ್ಟಿಹಳ್ಳಿ, ಎಳೆಹೊಳೆ, ಮಳಲಹಳ್ಳಿ, ಇಂಗಳಗೊಂದಿ, ರಾಜನಹಳ್ಳಿ, ಹೊಸಳ್ಳಿ ಗ್ರಾಮಗಳ ನೂರಾರು ಎಕರೆ ಜಮೀನುಗಳಿಗೆ ಯೋಜನೆ ಲಾಭ ದೊರಕಲಿದೆ.
ಈ ಹಿಂದೆ ಭೈರನಪಾದ ಯೋಜನೆ ಜಾರಿಗೆ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಭೈರನಪಾದ ಏತನೀರಾವರಿ ಯೋಜನೆಗೆ ಅದ್ಧೂರಿ ಭೂಮಿಪೂಜೆ ನೆರವೇರಿಸಲಾಗಿತ್ತು ಆದರೆ ಯೋಜನೆ ಕಾರ್ಯರೂಪವಾಗಿಲ್ಲ ಈ ಯೋಜನೆಯ ಸಾಕಾರಗೊಳಿಸುವಂತೆ ಕ್ಷೇತ್ರದ ಜನರ ಒಕ್ಕರೂಲಿನ ಮನವಿಯನ್ನು ಪೂಜ್ಯರೊಂದಿಗೆ ಚರ್ಚಿಸಿದರು.
ಜಗಳೂರು ಏತ ನೀರಾವರಿ ಯೋಜನೆಯ ಬಗ್ಗೆ ನಿಗಾ ವಹಿಸಲು ಶಾಸಕ ದೇವೇಂದ್ರಪ್ಪಗೆ ಶ್ರೀ ಜಗದ್ಗುರುಗಳವರ ಸೂಚನೆ:
2018ರ ಜಗಳೂರು ತರಳಬಾಳು ಹುಣ್ಣಿಮೆ ಮಹೋತ್ಸವದ ನಿಮಿತ್ತ ಸಾಕಾರಗೊಂಡು ಅಂತಿಮ ಹಂತದಲ್ಲಿರುವ ಕಾಮಗಾರಿಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಈ ಯೋಜನೆ ವ್ಯಾಪ್ತಿಯ ಜಗಳೂರು ಹರಪನಹಳ್ಳಿ ತಾಲೂಕಿನ 57 ಕೆರೆಗಳಿಗೆ ಈ ವರ್ಷ ನೀರು ತುಂಬಿಸಿ ರೈತರು ಮೊಗದಲಿ ಸಂತಸ ನೋಡುವ ಆಸೆ ನಮ್ಮದಾಗಿದ್ದು, ಆಡಳಿತ ಪಕ್ಷದ ಶಾಸಕರಾಗಿರುವ ನೀವು ಯೋಜನೆಯ ಫಲಶೃತಿಗೆ ಹೆಚ್ಚು ಗಮನ ನೀಡಬೇಕು ಎಂದು ಜಗಳೂರು ಕ್ಷೇತ್ರದ ನೂತನ ಶಾಸಕರಾದ ಶ್ರೀ ದೇವೇಂದ್ರಪ್ಪನವರಿಗೆ ಶ್ರೀ ಜಗದ್ಗುರುಗಳವರು ಸೂಚಿಸಿದರು.
ರಣಘಟ್ಟ ಏತ ನೀರಾವರಿ ಯೋಜನೆ ಫಲಪ್ರದವಾಗಲು ಶ್ರೀ ಜಗದ್ಗುರುಗಳವರಲ್ಲಿ ಬೇಲೂರು ಶಾಸಕ ಸುರೇಶ್ ಕೋರಿಕೆ:
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಐತಿಹಾಸಿಕ ಹಳೇಬೀಡಿನಲ್ಲಿ 2020 ರಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂಕಲ್ಪದಂತೆ ಪೂಜ್ಯ ಶ್ರೀ ಜಗದ್ಗುರುಗಳವರ ನಿರಂತರ ಆಸಕ್ತಿಯ ಫಲವಾಗಿ ಜಾರಿಯಾದ ಹಳೇಬೀಡು, ಜಾವಗಲ್,ಮಾದಿಹಳ್ಳಿ ಹೋಬಳಿಗಳ ವ್ಯಾಪ್ತಿಯ ಕೆರೆಗಳಿಗೆ ಯಗಚಿ ನದಿಯಿಂದ ರಣಘಟ್ಟ ಯೋಜನೆಯ ಮುಖಾಂತರ ನೀರು ತುಂಬಿಸುವ 128 ಕೋಟಿ ರೂ. ಗಳ ರಣಘಟ್ಟ ನೀರಾವರಿ ಯೋಜನೆಯ ಟೆಂಡರ್ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಸಂಪೂರ್ಣಗೊಂಡು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದ್ವಾರಸಮುದ್ರ (ಹಳೇಬೀಡು) ಮತ್ತು 6 ಕೆರೆಗಳನ್ನು ಹಾಗೂ ಚಿಕ್ಕಮಗಳೂರಿನ ಬೆಳವಾಡಿ ಕರೆಯನ್ನು ರಣಘಟ್ಟ ಪಿಕಪ್ ವಿಯರ್ ತಿರುವಿನಿಂದ ಕೆರೆ ತುಂಬಿಸುವ ಕಾಮಗಾರಿಗೆ ನೆರವಾಗುವಂತೆ ಬೇಲೂರು ಶಾಸಕ ಶ್ರೀ ಸುರೇಶ್ ರವರು ಶ್ರೀ ಜಗದ್ಗುರುಗಳವರಲ್ಲಿ ನಿವೇದಿಸಿಕೊಂಡರು.
ಆಶೀರ್ವಾದ ಪಡೆಯಲು ಬಂದ ಶಾಸಕರುಗಳು ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಸಾಕಾರಕ್ಕೆ ಮಾರ್ಗದರ್ಶನ ನೀಡುವಂತೆ ಶ್ರೀ ಜಗದ್ಗುರುಗಳವರಲ್ಲಿ ಚರ್ಚಿಸಿದರು. ರೈತರಿಗೆ, ಸಂಕಷ್ಟಿತರಿಗೆ ನೆರವಾಗಿ, ಭ್ರಷ್ಟಾಚಾರ ರಹಿತ ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಶಾಸಕರುಗಳಿಗೆ ಮಾರ್ಗದರ್ಶನ ನೀಡುವ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕ್ರೀಯಾತ್ಮಕ ತತ್ವಗಳ ಬೆಳಕಿನಲ್ಲಿ ಮುನ್ನಡೆಸುವ ದಿವ್ಯ ಜ್ಯೋತಿ. ಅವರ ಬೋಧನೆ ಮತ್ತು ತತ್ವಗಳೇ ನಮ್ಮ ಇಂದಿನ ನಿಜವಾದ ಐಕಾನ್! ಎಂದು ಹೇಳಿದ ಮಾತು ಅಕ್ಷರಶಃ ಸತ್ಯ.