ಡಾ.ಭುಜಂಗಶೆಟ್ಟಿ ಲಿಂಗೈಕ್ಯ: ಪಾರ್ಥಿವ ಶರೀರಕ್ಕೆ ಪುಷ್ಪದೊಂದಿಗೆ ಶ್ರೀ ತರಳಬಾಳು ಜಗದ್ಗುರುಗಳವರ ಶ್ರದ್ಧಾಂಜಲಿ.

  •  
  •  
  •  
  •  
  •    Views  

ಖ್ಯಾತ ವೈದ್ಯರಾದ ಡಾ. ಭುಜಂಗ ಶೆಟ್ಟಿಯವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವುದು  ಆಘಾತಕಾರಿ ಘಟನೆಯಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮರುಗಿದರು.

ಬೆಂಗಳೂರಿನ ರಾಜಾಜಿನಗರದ  ನಾರಾಯಣ ನೇತ್ರಾಲಯದಲ್ಲಿ  ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿಯವರ ಪಾರ್ಥಿವ ಶರೀರಕ್ಕೆ ಪತ್ರೆ- ಪುಷ್ಪದೊಂದಿಗೆ ಶ್ರದ್ಧಾಂಜಲಿಗಳನ್ನು ಅರ್ಪಿಸಿದ ಶ್ರೀ ಜಗದ್ಗುರುಗಳವರು ಡಾ.ಭುಜಂಗಶೆಟ್ಟಿರವರು ಕಳೆದ ಹತ್ತಾರು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿದ್ದ ಮನುಷ್ಯತ್ವ ಬೆಸೆಯುವ ಅಪರೂಪದ ವೈದ್ಯರಾಗಿದ್ದರು.ನಮ್ಮ ಶಿಷ್ಯರುಗಳಿಗೆ ಕಣ್ಣಿನ ಸಮಸ್ಯೆಗಳು ಎದುರಾದಾಗ ಹಲವಾರು ಬಾರಿ ನಾವು ಗುಣಪಡಿಸುವಂತೆ ತಿಳಿಸಿದಾಗ ಗುರುಗಳ ಆಜ್ಞೆ ಎಂಬಂತೆ ಭಕ್ತಿ ಭಾವದಿಂದ ಪರಿಹರಿಸಿರುವುದನ್ನು ಸ್ಮರಿಸಿದರು.

ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು. ಆ ಮೂಲಕ ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ನೇತ್ರದಾನದ ಕ್ರಾಂತಿ ಮಾಡಿದ್ದ ಡಾ.ಭುಜಂಗಶೆಟ್ಟಿ. ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಬದುಕಿನ ಅಂಧಕಾರವನ್ನ ತೊಳೆದು ಬೆಳಕು ನೀಡಿದ್ದ ಖ್ಯಾತ ವೈದ್ಯ ಭುಜಂಗಶೆಟ್ಟಿ. ತಾವು ಮೃತಪಟ್ಟ ಮೇಲೆ ಕಣ್ಣು ದಾನ ಮಾಡಿ. ದೃಷ್ಟಿ ಹೀನರ ಬಾಳಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 

ಅವರ ಅಗಲುವಿಕೆಯಿಂದ ನೇತ್ರ ವೈದ್ಯಕೀಯ ವಿಭಾಗದಲ್ಲಿ ಅಂಧಕಾರ ಕವಿದಿದೆ. ಭುಜಂಗ ಶೆಟ್ಟಿ ರವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ  ಸ್ನೇಹಿತ, ಸಹುದ್ಯೂಗಿಗಳಿಗೆ, ದುಃಖ ತಪ್ತ ಕುಟುಂಬಕ್ಕೆ ಭಗವಂತ ಈ ನೋವನ್ನು ನಿವಾರಿಸುವ ಶಕ್ತಿ ದಯಪಾಲಿಸಲೆಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.