ಶ್ರೀ ತರಳಬಾಳು ಜಗದ್ಗುರುಗಳವರಿಂದ ಆಶೀರ್ವಾದ ಪಡೆದ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ.
ಸಿರಿಗೆರೆ : ಸಿರಿಗೆರೆಗೆ ಭೇಟಿ ನೀಡಿದ ರಾಣೇಬೆನ್ನೂರು ಶಾಸಕರಾದ ಪ್ರಕಾಶ್ ಕೋಳಿವಾಡ ಅವರು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಮಾಲೆಯೊಂದಿಗೆ ಭಕ್ತಿ ಸಮರ್ಪಿಸಿ ಕೃಪಾಶೀರ್ವಾದ ಪಡೆದರು.
ನೂತನ ಶಾಸಕರಾದ ಪ್ರಕಾಶ್ ಕೋಳಿವಾಡರವರಿಗೆ ಶಾಲು ಹಾರದೊಂದಿಗೆ ಅಭಿನಂದಿಸಿ, ಆಶೀರ್ವಾದಿಸಿ ಮಾರ್ಗದರ್ಶನದ ನುಡಿಗಳನ್ನಾಡಿದ ಶ್ರೀ ಜಗದ್ಗುರುಗಳವರು: ಕುರುಕ್ಷೇತ್ರ ಯುದ್ಧ ಗೆದ್ದ ಮೇಲೆ ಧರ್ಮರಾಯನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಂಧು-ಬಾಂಧವರ ಹೆಣಗಳ ರಾಶಿಯನ್ನು ನೋಡಿ ದುಃಖಿತನಾಗಿ ತನ್ನಿಂದಲೇ ಈ ದುರಂತ ಸಂಭವಿಸಿತೆಂದು ಪಶ್ಚಾತ್ತಾಪ ಪಟ್ಟು ರಾಜ್ಯಸಿಂಹಾಸನವನ್ನು ಏರಲು ಬಯಸದೆ ಕಾಡಿಗೆ ಹೋಗುವ ತನ್ನ ನಿರ್ಧಾರವನ್ನು ಪ್ರಕಟಿಸುತ್ತಾನೆ. ಅರ್ಜುನಾದಿ ಸಹೋದರರು ಎಷ್ಟೇ ಹೇಳಿದರೂ ಕೇಳುವುದಿಲ್ಲ. ಶ್ರೀಕೃಷ್ಣನು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಪಿತಾಮಹನ ಹತ್ತಿರ ಕರೆದೊಯ್ಯುತ್ತಾನೆ. ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮಪಿತಾಮಹರು ಧರ್ಮರಾಯನಿಗೆ ರಾಜಧರ್ಮದ ವಿಚಾರವಾಗಿ ಹೇಳಿದ ಕೆಲವು ಹಿತ ನುಡಿಗಳು ಹೀಗಿವೆ:
“ಕೃಪಣಾನಾಥವೃದ್ಧಾನಾಂ ವಿಧವಾನಾಂ ಚ ಯೋಷಿತಾಂ.| ಯೋಗಕ್ಷೇಮಂ ಚ ವೃತ್ತಿಂ ಚ ನಿತ್ಯಮೇವ ಪ್ರಕಲ್ಪಯೇತ್" (ಬಡವರು, ಅನಾಥರು, ವೃದ್ಧರು, ವಿಧವೆಯರು, ಮಹಿಳೆಯರು ಮೊದಲಾದವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದ್ದು ರಾಜನ ಕರ್ತವ್ಯ).
“ನೃಪತಿಃ ಸುಮುಖಶ್ಚ ಸ್ಯಾತ್ಸ್ಮಿತಪೂರ್ವಾಭಿಭಾಷಿತಾ|” ರಾಜನು ಯಾವಾಗಲೂ ಪ್ರಸನ್ನವದನನಾಗಿರಬೇಕು, ಇತರರೊಡನೆ ಮಾತನಾಡುವಾಗ ಹಸನ್ಮುಖಿಯಾಗಿರಬೇಕು.
“ಪುತ್ರಾ ಇವ ಪಿತುರ್ಗೇಹೇ ವಿಷಯೇ ಯಸ್ಯ ಮಾನವಾಃ| ನಿರ್ಭಯಾ ವಿಚರಿಷ್ಯಂತಿ ಸ ರಾಜಾ ರಾಜಸತ್ತಮಃ||” ತಂದೆಯ ಮನೆಯಲ್ಲಿ ಹೇಗೆ ಮಕ್ಕಳು ನಿರ್ಭಯವಾಗಿ ಆಡಿಕೊಂಡು ಇರುತ್ತಾರೋ ಹಾಗೆ ಯಾವ ರಾಜನ ರಾಜ್ಯದಲ್ಲಿ ಪ್ರಜೆಗಳು ನಿರಾತಂಕವಾಗಿ ಜೀವನವನ್ನು ಸಾಗಿಸುತ್ತಾರೋ ಆ ರಾಜನೇ ಶ್ರೇಷ್ಠನು.
“ನ ಯಸ್ಯ ಕೂಟಂ ಕಪಟಂ ನ ಮಾಯಾ ನ ಚ ಮತ್ಸರಃ| ವಿಷಯೇ ಭೂಮಿಪಾಲಸ್ಯ ತಸ್ಯ ಧರ್ಮಃ ಸನಾತನಃ||” ಒಳ್ಳೆಯ ರಾಜನ ಆಡಳಿತದಲ್ಲಿ ಸುಳ್ಳು, ಮೋಸ, ವಂಚನೆ, ಕಳ್ಳತನ, ಅಸೂಯೆ ಇರುವುದಿಲ್ಲ.
“ಮಾ ತೇ ರಾಷ್ಟ್ರೇ ಯಾಚನಕಾಃ ಭೂವನ್ಮಾ ಚಾsಪಿ ದಸ್ಯವಃ|” ನಿನ್ನ ರಾಜ್ಯದಲ್ಲಿ ಭಿಕ್ಷುಕರು ಇಲ್ಲದಂತಾಗಲಿ, ಕಳ್ಳಕಾಕರು ಇಲ್ಲದಂತಾಗಲಿ.
“ತದ್ರಾಜ್ಯೇ ರಾಜಕಾಮಾನಾಂ ನಾನ್ಯೋ ಧರ್ಮಃ ಸನಾತನಃ| ಋತೇ ರಕ್ಷಾಂ ತು ವಿಸ್ಪಷ್ಟಾಂ ರಕ್ಷಾ ಲೋಕಸ್ಯ ಧಾರಿಣೀ||” ರಾಜ್ಯದಲ್ಲಿರುವ ಪ್ರಜೆಗಳನ್ನು ಸಂರಕ್ಷಿಸುವುದೇ ರಾಜನ ಪ್ರಮುಖ ಕರ್ತವ್ಯ. ಇದಕ್ಕಿಂತ ಮಿಗಿಲಾದ ಕರ್ತವ್ಯ ಬೇರೇನೂ ಇಲ್ಲ.
“ರಾಜಧರ್ಮ”ವನ್ನು ಕುರಿತು ಹೇಳಿದ ಮೇಲಿನ ಹಿತೋಕ್ತಿಗಳು ಇಂದಿನ ಮಂತ್ರಿಮಹೋದ ಶಾಸಕರಿಗೂ ಅನ್ವಯಿಸುತ್ತವೆ. ರಾಜಪ್ರಭುತ್ವವೇ ಆಗಲಿ, ಪ್ರಜಾಪ್ರಭುತ್ವವೇ ಆಗಲಿ, ಅದು ಜನರ ಹಿತರಕ್ಷಣೆಯ ಒಂದು ಆಡಳಿತ ವ್ಯವಸ್ಥೆ. ಯಾವುದೇ ವ್ಯವಸ್ಥೆ ಇರಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕೈಗಳು ಎಂಥವು ಎಂಬುದರ ಮೇಲೆ ಅದರ ಯಶಸ್ಸು ನಿಂತಿದೆ.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವವೆಂಬ ಸೌಧದ ಮೂರು ಬಲವಾದ ಸ್ತಂಭಗಳೆಂದು ಪರಿಭಾವಿಸಲಾಗಿದೆ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ ಹೇಳುವುದಾದರೆ ಈ ಕಂಬಗಳು ದುರ್ಬಲವಾಗಿ ಒಂದೊಂದೇ ಕಳಚಿ ಬೀಳತೊಡಗಿವೆ. ನಿತ್ಯವೂ ಹಿಂಸೆ, ಕ್ರೌರ್ಯ, ಆತಂಕ ಮತ್ತು ಭಯದ ವಾತಾವರಣದಲ್ಲಿ ನಾಡಿನ ಜನತೆ ಬದುಕುತ್ತಿದ್ದು ಯಾರೂ ಏನೂ ಮಾಡಲು ಸಾಧ್ಯವಿಲ್ಲ ವೆಂಬಂತಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಯುತವಾಗಿ ಕಾರ್ಯ ನಿರ್ವಹಿಸುವಂತೆ ನೂತನ ಶಾಸಕರಿಗೆ ಸೂಚಿಸಿದರು.