ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಈರುಳ್ಳಿ ಸಮಗ್ರ ಬೆಳೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆ
ದಾವಣಗೆರೆ: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಗಳೂರು ತಾಲ್ಲೂಕಿನಾದ್ಯಂತ ಬಿತ್ತನೆಗೆ ರೋಗ ನಿರೋಧಕ ಹಾಗೂ ಅಧಿಕ ಇಳುವರಿ ಕೊಡುವ ಭೀಮಾ ಸೂಪರ್ ಈರುಳ್ಳಿ ತಳಿ ಸೂಕ್ತವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಬಸವನಗೌಡ ಎಂ.ಜಿ. ತಿಳಿಸಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಹಾಗೂ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಈರುಳ್ಳಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವರ್ಷ ಅರಿಶಿನಗುಂಡಿ ಮತ್ತು ಕಟ್ಟಿಗೆಹಳ್ಳಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಇದೇ ಮುಂಚೂಣಿ ಪ್ರಾತ್ಯಕ್ಷಿಕೆಯು ಅತೀ ಮಳೆಯ ನಡುವೆಯೂ ಉತ್ತಮ ಇಳುವರಿಯನ್ನು ನೀಡಿರುವುದನ್ನು ಸ್ಮರಿಸಿದ ಅವರು, ಪ್ರಸ್ತುತ ತಳಿ ನೇರಳೆ ಎಲೆ ಮಚ್ಚೆ ರೋಗಕ್ಕೆ ನಿರೋಧಕತೆ ಇದ್ದು, ನಾಟಿ ಸಂದರ್ಭದಲ್ಲಿ ಟ್ರೆöÊಕೊಡರ್ಮಾದೊಂದಿಗೆ ಬೀಜೋಪಚಾರ ಮಾಡುವುದರಿಂದ ಬೀಜದಿಂದ ಹರಡುವ ರೋಗಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬಿತ್ತನೆ ಮಾಡಿದ 45, ರಿಂದ 60 ನೇ ದಿನದಂದು ಬೆಳೆಗೆ ತರಕಾರಿ ಸ್ಪೆಷಲ್ 5 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದರಿಂದ ಗಡ್ಡೆಯ ಗಾತ್ರ ಮತ್ತು ತೂಕವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಹಾಗೆಯೇ ರಸ ಹೀರುವ ಕೀಟಗಳ ನಿಯಂತ್ರಣಕ್ಕೆ ಹಳದಿ ಮತ್ತು ನೀಲಿ ಅಂಟು ಪಟ್ಟಿಗಳನ್ನು ಎಕರೆಗೆ 10 ರಂತೆ ಅಲ್ಲಲ್ಲಿ ಕಟ್ಟುವುದರಿಂದ ಕೀಟಗಳ ಹಾನಿಯ ಮಟ್ಟವನ್ನು ತಿಳಿಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ, ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಲ್ಲಿ ಕೈಗೊಳ್ಳಬೇಕಾದ ತಂತ್ರಜ್ಞಾನಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕ ನಾಗರಾಜ, ಜಿಲ್ಲಾ ಯೋಜನಾ ಸಂಯೋಜಕ ಆಕಾಶ್ ಎನ್.ಆರ್., ಬಸವನಗೌಡ, ಕೃಷ್ಣ ಮೂರ್ತಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.