ದುಡಿದು ಉಣ್ಣುವ ಸಂಸ್ಕೃತಿಯನ್ನು ಕಲಿಸಬೇಕು
ದೀರ್ಘಕಾಲ ಯೋಜನೆಗಳಿಂದ ಯುವಜನರ ಸ್ವಾವಲಂಬನೆ
ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿದ ಹಣ ಅತ್ತೆಗೋ ಸೊಸೆಗೋ ಎಂಬ ವಿವಾದ ಭುಗಿಲೆದ್ದಿದೆ. ಮನೆಯ ಯಜಮಾನಿತಿಗೆ ಸಲ್ಲಬೇಕೆಂದರೆ ಈ ಫ್ರೀಬಿ ಪಡೆಯುವ ಸಲುವಾಗಿ ಅವಿಭಕ್ತ ಕುಟುಂಬಗಳು ವಿಭಜನೆಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವೂ ಉಂಟಾಗಿದೆ. ಇಂದು ಸರಕಾರ ಕೈಗೊಳ್ಳುವ ತೀರ್ಮಾನ ಅತ್ತೆಯ ಪರವಾಗಿ ಇರುತ್ತದೆಯೋ ಅಥವಾ ಸೊಸೆಯ ಪರವಾಗಿ ಇರುತ್ತದೆಯೋ ಎಂಬ ಕುತೂಹಲ ಮೂಡಿಸಿದೆ. "ಆರು ದೋಸೆ ಕೊಟ್ಟರೆ ಅತ್ತೆ ಕಡೆಗೆ, ಮೂರು ದೋಸೆ ಕೊಟ್ಟರೆ ಸೊಸೆ ಕಡೆಗೆ” ಎಂಬ ಗಾದೆ ಮಾತಿದೆ. ಯಾರ ಪರವಾಗಿಯೇ ತೀರ್ಮಾನವಾದರೂ ಭಾರತೀಯ ಕೌಟುಂಬಿಕ ಜೀವನದಲ್ಲಿ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ” ಎಂಬ ನಾಣ್ನುಡಿಯಂತೆ ಪರಂಪರಾಗತವಾಗಿ ಬಂದಿರುವ ಅತ್ತೆ-ಸೊಸೆ ಜಗಳ ಇನ್ನಷ್ಟೂ ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ.
“ಹಪ್ಪಾಳ ಮಾಡ್ಯಾಳ ಹದ ಹಾಕಿ ಗಂಡಾನು ಬಡಿದಾನಾ ಕದ ಹಾಕಿ” ಎಂಬ ರೋಚಕವಾದ ಒಂದು ಜನಪದಗೀತೆ ನೆನಪಿಗೆ ಬರುತ್ತಿದೆ. ಹಳ್ಳಿಯ ಅನಕ್ಷರಸ್ಥ ಜನರು ತಮ್ಮ ಸ್ವಾನುಭವದಿಂದ ರಚಿಸಿ ಹಾಡಿದ ಈ ಜನಪದ ಗೀತೆಯಲ್ಲಿ ಬಳಸಿರುವ ಪ್ರಾಸಬದ್ಧವಾದ ಶಬ್ದಗಳು ಮತ್ತು ಅದರ ಹಿಂದಿರುವ ಸ್ವಾರಸ್ಯಕರವಾದ ಅರ್ಥವು ಸಂಸ್ಕೃತದ ಶ್ರೇಷ್ಠ ಕವಿಗಳಾದ ದಂಡಿಯ “ಪದಲಾಲಿತ್ಯ”ವನ್ನೂ, ಭಾರವಿಯ "ಅರ್ಥಗೌರವ”ವನ್ನೂ ಮೀರಿಸುವಂತಿವೆ. ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವ ಗಂಡನೊಬ್ಬನ ಧರ್ಮಸಂಕಟದ ರೋಚಕ ಕಥಾನಕ ಈ ಜನಪದ ಗೀತೆಯಲ್ಲಿ ಅಡಗಿದೆ. ಹೊಲದಲ್ಲಿ ದಿನವೆಲ್ಲಾ ಕೆಲಸ ಮಾಡಿ ದಣಿದು ಸಂಜೆ ಮನೆಗೆ ಬಂದ ಮಗನಿಗೆ ಸಖೇದಾಶ್ಚರ್ಯ ಕಾದಿತ್ತು. ಅವನ ತಾಯಿ ಬೇಸರಗೊಂಡು ಮಧ್ಯಾಹ್ನ ಊಟ ಮಾಡದೆ ಮಲಗಿದ್ದಳು. ಆಕೆಯ ಕೋಪಕ್ಕೆ ಕಾರಣವೆಂದರೆ ಮನೆಯಲ್ಲಿದ್ದ ಸೊಸೆ ಅವಳ ಅನುಮತಿಯಿಲ್ಲದೆ ಹಪ್ಪಳ ಮಾಡಿದ್ದಳು. “ಯಾರನ್ನು ಕೇಳಿ ನಿನ್ನ ಹೆಂಡತಿ ಹಪ್ಪಳ ಮಾಡಿದಳು? ಈ ಮನೆಯ ಯಜಮಾನತಿ ಯಾರು? ನಾನೋ, ಮೊನ್ನೆ ಮೊನ್ನೆ ಬಂದ ಇವಳೋ? ಇದು ತೀರ್ಮಾನ ಆಗುವವರೆಗೂ ನಾನು ಉಣ್ಣುವುದಿಲ್ಲ” ಎಂದು ತಾಯಿ "ಸತ್ಯಾಗ್ರಹ” ಹೂಡಿದಳು. ನಿಜಸಂಗತಿಯೆಂದರೆ ಸೊಸೆಯ ತಪ್ಪು ಅದರಲ್ಲಿ ಏನೂ ಇರಲಿಲ್ಲ. ಮಗನೇ ತನ್ನ ಹೆಂಡತಿಗೆ ಹೇಳಿ ಹಪ್ಪಳ ಮಾಡಿಸಿದ್ದ ಅಳಿಯೂಟದಲ್ಲಿ ರುಚಿ ರುಚಿಯಾಗಿ ಉಣಬಡಿಸಿದ್ದ ಹಪ್ಪಳವನ್ನು ನೆನೆಸಿಕೊಂಡು ಅಂತಹ ಹಪ್ಪಳ ಮಾಡಲು ಹೆಂಡತಿಗೆ ಹೇಳಿದ್ದ. ಹಾಗೆಂದು ತಾಯಿಯ ಮುಂದೆ ಹೇಳಲು ಅವನಿಗೆ ಧೈರ್ಯ ಬರಲಿಲ್ಲ. ಒಂದು ಕಡೆ ತಾಯಿಯ ಮೇಲೆ ಪ್ರೀತಿ ಮತ್ತೊಂದು ಕಡೆ ಹೆಂಡತಿಯ ಮೇಲೆ ಅನುಕಂಪೆ. ಧರ್ಮಸಂಕಟಕ್ಕೆ ಸಿಲುಕಿದ ಅವನು ತಾಯಿಯನ್ನು ಸಮಾಧಾನಪಡಿಸಲು “ನಿನ್ನನ್ನು ಕೇಳದೆ. ಈಕೆ ಮಾಡಿದ್ದು ತಪ್ಪು” ಎಂದು ಹೆಂಡತಿಯನ್ನು ಹುಬ್ಬುಗಂಟಿಕ್ಕಿ ನೋಡಿ ರೇಗಿದ. ತಾಯಿಯ ಎದುರಿಗೆ ತನ್ನ ಹೆಂಡತಿಯನ್ನು ಮಲಗುವ ಕೋಣೆಗೆ ಎಳೆದುಕೊಂಡು ಹೋಗಿ ಬಾಗಿಲನ್ನು "ರಪ್” ಎಂದು ಹಾಕಿದ. ಸಿಟ್ಟಿನಲ್ಲಿ ಹೆಂಡತಿಯನ್ನು “ಧಪ್ ಧುಪ್” ಎಂದು ಹೊಡೆಯುತ್ತಿರುವ ಶಬ್ದ ಹೊರಗೆ ಕೇಳಿಸುತ್ತಿತ್ತು. "ಎಷ್ಟೇ ಆಗಲಿ ನಾನು ಹಡೆದ ಮಗನಲ್ಲವೇ?” ಎಂದು ತಾಯಿ ಸಮಾಧಾನಪಟ್ಟುಕೊಂಡಳು. ಆದರೆ ಅವನು ಕೋಣೆಯೊಳಗೆ ಹೊಡೆಯುತ್ತಿದ್ದುದು ತನ್ನ ಹೆಂಡತಿಯನ್ನಲ್ಲ, ಹಾಸಿಗೆಯ ಮೇಲಿನ ತಲೆದಿಂಬನ್ನು! ಸಂಸಾರದಲ್ಲಿ ಬರುವ ವಿರಸ ಪ್ರಸಂಗಗಳನ್ನು ಹೇಗೆ ಜಾಣ್ಮೆಯಿಂದ ನಿಭಾಯಿಸಬಹುದೆಂಬ ನೀತಿಬೋಧೆ ಈ ಜಾನಪದ ಕಥಾನಕದಲ್ಲಿದೆ.
ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಗಳನ್ನು ಕೊಡುವುದಲ್ಲದೆ ಉಚಿತವಾಗಿ ಬಸ್ ಸಂಚಾರ ಸೌಲಭ್ಯವನ್ನೂ ಒದಗಿಸುವುದಾಗಿ ಮಾಡಿರುವ ಘೋಷಣೆ ಕುರಿತು ಅಂತರಜಾಲದಲ್ಲಿ ಅನೇಕ ಪ್ರಹಸನಗಳು ಪ್ರಕಟಗೊಂಡಿವೆ. ಜವಾಬ್ದಾರಿ ಸ್ಥಾನದಲ್ಲಿರುವ ಆತ್ಮೀಯರೊಬ್ಬರು ನಮಗೆ ವಾಟ್ಸಾಪ್ ನಲ್ಲಿ ಮೊನ್ನೆಮೊನ್ನೆ ಕಳುಹಿಸಿದ ಅಂತಹ ಒಂದು ವೀಡಿಯೋ ತುಣುಕು ನಮ್ಮನ್ನು ನಗೆಗಡಲಲ್ಲಿ ತೇಲಿಸಿ ದಿನದ ದಣಿವಾರಿಸಿತು. ಅದರ ಪರಿಷ್ಕೃತ ಕಥಾನಕ ಹೀಗಿದೆ: ಬೆಂಗಳೂರಿನಲ್ಲಿದ್ದ ಯುವ ಮಹಿಳೆಯೊಬ್ಬಳಿಗೆ ಬಹಳ ದಿನಗಳಿಂದ ತವರು ಮನೆಗೆ ಹೋಗಿ ಬರಬೇಕೆಂಬ ಆಸೆ ಇತ್ತು. ಸಣ್ಣ ನೌಕರಿಯಲ್ಲಿದ್ದ ಗಂಡ ಒಪ್ಪಿಗೆ ಕೊಟ್ಟಿರಲಿಲ್ಲ. ಮಹಿಳೆಯರಿಗೆ ಬಸ್ ಸಂಚಾರ ಉಚಿತ ಎಂಬ ಸುದ್ದಿಯನ್ನು ಕೇಳಿದ ಮರುದಿನವೇ ಗಂಡ ಅನುಮತಿ ನೀಡಿದ. ಪತ್ನಿಗೆ ಎಲ್ಲಿಲ್ಲದ ಸಂತಸವನ್ನುಂಟು ಮಾಡಿತು. ಅವಳು ಲಗುಬಗನೆ ಸಿದ್ಧಳಾಗಿ ಹೊರಡುತ್ತಾಳೆ. ಗಂಡ ಕೈಯಲ್ಲಿ ಬ್ಯಾಗ್ ಹಿಡಿದು ಅವಳನ್ನು ಕರೆದುಕೊಂಡು ಬಸ್ ಹತ್ತಿಸಲು ಮನೆಯ ಮೆಟ್ಟಿಲು ಇಳಿದು ಬೀದಿಗೆ ಬರುತ್ತಿದ್ದಂತೆಯೇ ಒಂದು ಆಟೋ ಬರುವುದನ್ನು ನೋಡಿ ಖುಷಿಪಡುತ್ತಾರೆ. ಅದರಲ್ಲಿಯೇ ಬಸ್ ಸ್ಟ್ಯಾಂಡಿಗೆ ಹೋಗಲು ತವಕಿಸುತ್ತಿದ್ದ ಆ ಯುವ ಮಹಿಳೆ ಆಟೋ ಹತ್ತಿರ ಹತ್ತಿರ ಬಂದಾಗ ಅದರಲ್ಲಿ ತನ್ನ ತಾಯಿಯೇ ಬಂದು ಇಳಿಯುವುದನ್ನು ನೋಡಿ ಮುಖ ಕಿವುಚಿಕೊಳ್ಳುತ್ತಾಳೆ. ಅನಿವಾರ್ಯವಾಗಿ ತನ್ನ ಪ್ರಯಾಣವನ್ನು ರದ್ದುಪಡಿಸಿ. ತಾಯಿಯನ್ನು ಮನೆಯೊಳಗೆ ಕರೆದುಕೊಂಡು ಹೋಗುತ್ತಾಳೆ.
ತಾಯಿ ಮಗಳತ್ತ ತಿರುಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸುದ್ದಿಯನ್ನು ಕೇಳಿದೊಡನೆಯೇ ಬೆಳಿಗ್ಗೆ ಸ್ನಾನ ಮಾಡದೆಯೇ, ಗಂಡನಿಗೂ ಹೇಳದೆ, ತಿಂಡಿಯನ್ನೂ ತಿನ್ನದೆ ನಸುಕಿನಲ್ಲಿಯೇ ಹೊರಟು ಬಂದೆ ಎಂದು ತನ್ನ ಸಾಹಸವನ್ನು ವಿವರಿಸುತ್ತಾಳೆ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ನಿರುದ್ಯೋಗಿ ತಮ್ಮನೂ ಯುವತಿಯ ಮಾರುವೇಷದಲ್ಲಿ ಬಂದು ವಕ್ಕರಿಸುತ್ತಾನೆ. ಅತ್ತೆ ವಾರಗಟ್ಟಲೆ ಮನೆಯಲ್ಲಿ ಠಿಕಾಣಿ ಹೂಡುವುದಾಗಿ ತಿಳಿದ ಅಳಿಯ ಅವಳನ್ನು ಹೇಗೆ ಸಾಗಹಾಕಬೇಕೆಂದು ತೆರೆಮರೆಯಲ್ಲಿ ತನ್ನ ಮಡದಿಯೊಂದಿಗೆ ಸಮಾಲೋಚನೆ ನಡೆಸುತ್ತಾನೆ. ಬೆಳಗಿನ ಉಪಾಹಾರಕ್ಕೆ ಬೇಕಾದ ಹಾಲು, ಸಕ್ಕರೆ ತರುವ ನೆಪದಲ್ಲಿ ಅಳಿಯ ಮಗಳು ಹೊರಗೆ ಹೋಗಿ ಚಾಣಾಕ್ಷ ಸ್ನೇಹಿತನೊಬ್ಬನ ಸಲಹೆ ಕೇಳುತ್ತಾರೆ. ಅವನು ಗೃಹಲಕ್ಷ್ಮಿ, ನಿರುದ್ಯೋಗ ಭತ್ಯೆ ಇತ್ಯಾದಿ ಐದು ಗ್ಯಾರಂಟಿಗಳ ಒಟ್ಟು ಮೊತ್ತವನ್ನು ಲೆಕ್ಕ ಹಾಕಿ ಅತ್ತೆ ಮತ್ತು ಮೈದುನ ಬಂದದ್ದು ಒಳ್ಳೆಯದೇ ಆಯಿತು; ಅದರಿಂದ ಲಾಭವೇ ಹೊರತು ನಷ್ಟ ಇಲ್ಲ ಎಂದು ತಿಳಿಹೇಳುತ್ತಾನೆ. ಪತಿ-ಪತ್ನಿ ಸಂತಸದಿಂದ ಮನೆಗೆ ಹಿಂದಿರುಗುತ್ತಾರೆ. ಅನೀರೀಕ್ಷಿತವಾಗಿ ಬಂದ ಅತ್ತೆಯ ಶುಶ್ರೂಷೆಯನ್ನು ಅಳಿಯ ಅತ್ಯಂತ “ಶ್ರದ್ಧಾಭಕ್ತಿ”ಯಿಂದ ಮಾಡುತ್ತಾನೆ!. ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ತಂದಿದ್ದರೆ ಚನ್ನಾಗಿತ್ತು ಎಂದು ಹಲುಬುತ್ತಾನೆ. ಅಳಿಯನ ವರ್ತನೆ ಅತ್ತೆಯ ಮನಸ್ಸಿನಲ್ಲಿ ಸಂಶಯವನ್ನು ಮೂಡಿಸುತ್ತದೆ. ತನ್ನ ತಾಯಿಯನ್ನು ಕರೆದುಕೊಂಡು ಹೋಗಲು ಕುಡಿದು ತೂರಾಡುತ್ತಾ ಊರಿನಿಂದ ಅಪ್ಪ ಬಂದರೂ ಮಗಳು ಬಿಟ್ಟು ಕೊಡುವುದಿಲ್ಲ! ಇಬ್ಬರೂ ಯಜಮಾನಿಯ ಕೈಗಳನ್ನು ಹಿಡಿದು ಹಗ್ಗಜಗ್ಗಾಟದಂತೆ ಜಗ್ಗಾಡುತ್ತಾರೆ!.
ಈ ಪ್ರೀಬೀ ಯೋಜನೆಗಳಿಂದ ಸರಕಾರಕ್ಕೆ ತುಂಬಾ ಆರ್ಥಿಕ ಸಂಕಷ್ಟ ಎದುರಾಗಲಿದೆ. ಅನೇಕ ಸಾಮಾಜಿಕ ಸಮಸ್ಯೆಗಳು ಉದ್ಭವಿಸುತ್ತಿವೆ. ಸರಕಾರ ಆರ್ಥಿಕ ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು. ಕೆಲವು ವರ್ಷಗಳ ಹಿಂದೆ ಅಮೇರಿಕೆಗೆ ಹೋದಾಗ ಶಿಷ್ಯರು ಗ್ರ್ಯಾಂಡ್ ಕ್ಯಾನ್ಯಾನ್ ಬಳಿ ನಮ್ಮನ್ನು ಕರೆದೊಯ್ದಿದ್ದರು. ನೇವಡಾ ಮತ್ತು ಅರಿಜೋನಾ ರಾಜ್ಯಗಳ ಮಧ್ಯೆ ಹರಿಯುವ ಕೊಲರಾಡೋ ನದಿಗೆ ಅಡ್ಡಲಾಗಿ ಕಟ್ಟಿರುವ ಒಂದು ಸುಂದರವಾದ ಅಣೆಕಟ್ಟನ್ನು (Hoover Dam) ತೋರಿಸಿದರು. 1931-36 ರ ಕಾಲಾವಧಿಯಲ್ಲಿ ಅಮೇರಿಕಾದಲ್ಲಿ ತೀವ್ರ ಬರಗಾಲ ಬಂದು ಜನರಿಗೆ ಒಂದು ಹೊತ್ತು ಉಣ್ಣಲೂ ಆಹಾರ ದೊರೆಯದಂತಾಗಿತ್ತು. ಆಗ ಅಧ್ಯಕ್ಷನಾಗಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಮುಂದಾಲೋಚನೆ ಮಾಡಿ ಸುಮಾರು 50 ಮಿಲಿಯನ್ ಡಾಲರ್ ವೆಚ್ಚದ ಈ ಅಣೆಕಟ್ಟನ್ನು ನಿರ್ಮಿಸುವ ಯೋಜನೆ ರೂಪಿಸಿದನು. ಇದರ ನಿರ್ಮಾಣ ಕಾರ್ಯದಲ್ಲಿ ಜನರಿಗೆ ಉದ್ಯೋಗ ದೊರಕಿಸಿ ಆಹಾರ ಪೂರೈಕೆ ಮಾಡುವುದರ ಜೊತೆಗೆ ಭವಿಷ್ಯ ಜೀವನದಲ್ಲಿ ಕ್ಷಾಮಡಾಮರ ಉಂಟಾಗದಂತೆ ಮಾಡಿದನು. ಅಂತಹ ದೀರ್ಘಕಾಲದ ಯೋಜನೆಗಳನ್ನು ರೂಪಿಸಿ ನಾಡಿನ ವಿದ್ಯಾವಂತ ನಿರುದ್ಯೋಗಿ ಯುವಕರನ್ನು ಮತ್ತು ಶ್ರಮಜೀವಿಗಳನ್ನು ತೊಡಗಿಸಿ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಸರಕಾರದ ಹೊಣೆಗಾರಿಕೆ. “ಕೂತುಂಡರೆ ಕುಡಿಕೆ ಹಣ ಸಾಲದು!” ದುಡಿದು ಉಣ್ಣುವ ಸಂಸ್ಕೃತಿಯನ್ನು ಕಲಿಸಬೇಕು.
Give a man a fish, you feed him for a day
Teach him how to fish, you feed him for a lifetime!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.1-6-2023.