ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ಹೊಸದುರ್ಗ, ಶಿವಮೊಗ್ಗ ಗ್ರಾಮಾಂತರ ಶಾಸಕರು.
ಸಿರಿಗೆರೆ : ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭೇಟಿ ನೀಡಿದ ಹೊಸದುರ್ಗ ಕ್ಷೇತ್ರ ನೂತನ ಶಾಸಕರಾದ ಶ್ರೀ ಬಿ.ಜಿ.ಗೋವಿಂದಪ್ಪನವರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕರವರು ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಫಲ ಪುಷ್ಪದೊಂದಿಗೆ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ ಮತ್ತು ಹೊಸದುರ್ಗ ಶಾಸಕರಾದ ಬಿ.ಜಿ. ಗೋವಿಂದಪ್ಪನವರಿಗೆ ಶ್ರೀ ಜಗದ್ಗುರುಗಳವರು ಶಾಲು, ಹಾರದೊಂದಿಗೆ ಅಭಿನಂದಿಸಿ ಆಶೀರ್ವಾದಿಸಿ: ನೂತನ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿದ ಹಣ ಅತ್ತೆಗೋ ಸೊಸೆಗೋ ಎಂಬ ವಿವಾದ ಭುಗಿಲೆದ್ದಿದೆ. ಮನೆಯ ಯಜಮಾನಿತಿಗೆ ಸಲ್ಲಬೇಕೆಂದರೆ ಈ ಫ್ರೀಬಿ ಪಡೆಯುವ ಸಲುವಾಗಿ ಅವಿಭಕ್ತ ಕುಟುಂಬಗಳು ವಿಭಜನೆಗೊಳ್ಳುವ ಸಾಧ್ಯತೆ ಇದೆ ಎಂಬ ಆತಂಕವೂ ಉಂಟಾಗಿದೆ. ಇದರಿಂದ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಲಿವೆ. ದೀರ್ಘಕಾಲದ ಯೋಜನೆಗಳನ್ನು ರೂಪಿಸಿ ನಾಡಿನ ವಿದ್ಯಾವಂತ ನಿರುದ್ಯೋಗಿ ಯುವಕರನ್ನು ಮತ್ತು ಶ್ರಮಜೀವಿಗಳನ್ನು ತೊಡಗಿಸಿ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಸರಕಾರದ ಹೊಣೆಗಾರಿಕೆ. “ಕೂತುಂಡರೆ ಕುಡಿಕೆ ಹಣ ಸಾಲದು!” ದುಡಿದು ಉಣ್ಣುವ ಸಂಸ್ಕೃತಿಯನ್ನು ಕಲಿಸಬೇಕು. ಎಂದು ತಿಳಿಸಿದರು.
ಬಹು ವರ್ಷಗಳ ಹಿಂದೆ ನಾವು ಅಮೇರಿಕೆಗೆ ಹೋದಾಗ ಅಲ್ಲಿನ ನಮ್ಮ ಶಿಷ್ಯರು ಗ್ರ್ಯಾಂಡ್ ಕ್ಯಾನ್ಯಾನ್ ಬಳಿ ನಮ್ಮನ್ನು ಕರೆದೊಯ್ದಿದ್ದರು. ನೇವಡಾ ಮತ್ತು ಅರಿಜೋನಾ ರಾಜ್ಯಗಳ ಮಧ್ಯೆ ಹರಿಯುವ ಕೊಲರಾಡೋ ನದಿಗೆ ಅಡ್ಡಲಾಗಿ ಕಟ್ಟಿರುವ ಒಂದು ಸುಂದರವಾದ ಅಣೆಕಟ್ಟನ್ನು (Hoover Dam) ತೋರಿಸಿದರು. 1931-36 ರ ಕಾಲಾವಧಿಯಲ್ಲಿ ಅಮೇರಿಕಾದಲ್ಲಿ ತೀವ್ರ ಬರಗಾಲ ಬಂದು ಜನರಿಗೆ ಒಂದು ಹೊತ್ತು ಉಣ್ಣಲೂ ಆಹಾರ ದೊರೆಯದಂತಾಗಿತ್ತು. ಆಗ ಅಧ್ಯಕ್ಷನಾಗಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ ಮುಂದಾಲೋಚನೆ ಮಾಡಿ ಸುಮಾರು 50 ಮಿಲಿಯನ್ ಡಾಲರ್ ವೆಚ್ಚದ ಈ ಅಣೆಕಟ್ಟನ್ನು ನಿರ್ಮಿಸುವ ಯೋಜನೆ ರೂಪಿಸಿದನು.ಇದರ ನಿರ್ಮಾಣ ಕಾರ್ಯದಲ್ಲಿ ಜನರಿಗೆ ಉದ್ಯೋಗ ದೊರಕಿಸಿ ಆಹಾರ ಪೂರೈಕೆ ಮಾಡುವುದರ ಜೊತೆಗೆ ಭವಿಷ್ಯ ಜೀವನದಲ್ಲಿ ಕ್ಷಾಮಡಾಮರ ಉಂಟಾಗದಂತೆ ಮಾಡಿದನು.ದೀರ್ಘಕಾಲ ಯೋಜನೆಗಳಿಂದ ಯುವಜನರ ಸ್ವಾವಲಂಬನೆ ಸಾಧ್ಯ ಎಂಬುದನ್ನು ಇದರಿಂದ ಮನಗಾಣಬೇಕು ಎಂದು ಅಭಿಪ್ರಾಯಪಟ್ಟರು.