ಶಾಲಾ ನೂತನ ಕಟ್ಟಡ ವೀಕ್ಷಣೆ ಹಾಗೂ ಸಮಾಲೋಚನಾ ಸಭೆ
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ : ಶ್ರೀ ರುದ್ರೇಶ್ವರ ಪ್ರೌಢಶಾಲೆ, ಪಾಂಡೋಮಟ್ಟಿ-ಗೊಪ್ಪೇನಹಳ್ಳಿ, ಚನ್ನಗಿರಿ ತಾ|| ದಾವಣಗೆರೆ ಜಿ.
ಶಾಲಾ ನೂತನ ಕಟ್ಟಡ ವೀಕ್ಷಣೆ ಹಾಗೂ ಸಮಾಲೋಚನಾ ಸಭೆ ದಿನಾಂಕ: 17.06.2023 ರ ಶನಿವಾರ ಬೆಳಗ್ಗೆ 11 ಗಂಟೆಗೆ ಶಾಲಾ ಆವರಣದಲ್ಲಿ ಜರುಗುವುದು
ಶ್ರೀ ಮದುಜ್ಜಯಿನಿಸದ್ಧರ್ಮಸಿಂಹಾಸನಾಧೀಶ ಶ್ರೀ ತರಳಬಾಳು ಹಿರಿಯ ಜಗದ್ಗುರು ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯಕೃಪೆ, ದೂರದೃಷ್ಟಿ ಹಾಗೂ ಗ್ರಾಮೀಣ ಜನತೆಗೆ ವಿದ್ಯಾಭ್ಯಾಸ ನೀಡುವ ಕಾಳಜಿಯಿಂದ 1962 ರಲ್ಲಿ ಪಾಂಡೋಮಟ್ಟಿ-ಗೊಪ್ಪೇನಹಳ್ಳಿ ಗ್ರಾಮಗಳ ಮಧ್ಯೆ ಶ್ರೀ ರುದ್ರೇಶ್ವರ ಪ್ರೌಢಶಾಲೆಯನ್ನು ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆವಿಗೂ ಈ ಶಾಲೆಯಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ನಾಡು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನ ಪಡೆದು ದೊಡ್ಡ ಸಾಧನೆ ಮಾಡಿರುವವರು ಹಲವಾರು ಜನರಿದ್ದಾರೆ.
ಚನ್ನಗಿರಿ ಭಾಗದ ಈ ಮಲೆನಾಡ ಸೆರಗು, ಅಡಿಕೆಯ ನಾಡಾಗಿದೆ. ಇಲ್ಲಿನ ಜನರು ಹಿರಿಯ ಗುರುಗಳ ಪ್ರೇರಣೆಯಿಂದ ಅಡಿಕೆ ತೋಟಗಳನ್ನು ಕಟ್ಟಿ ಬೆಳೆಸಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಔನ್ನತ್ಯ ಪಡೆದು ಸುಖ- ಸಮೃದ್ಧ ಸಹಜೀವನ ನಡೆಸುತ್ತಿದ್ದಾರೆ. ಇಂತಹ ಪ್ರತಿಭಾನ್ವಿತರನ್ನು ಈ ನಾಡಿಗೆ ನೀಡಿದ ಕೀರ್ತಿ ಶ್ರೀ ರುದ್ರೇಶ್ವರ ಪ್ರೌಢಶಾಲೆಗೆ ಸಲ್ಲುತ್ತದೆ.
ಇದನ್ನೆಲ್ಲಾ ಗಮನಿಸಿ ಹಿರಿಯ ಗುರುಗಳ ಮಾರ್ಗದರ್ಶನದಂತೆಯೇ ಶ್ರೀಸಂಸ್ಥೆಯನ್ನು ಅತ್ಯುನ್ನತ ಗೌರವ ಪಡೆಯುವಂತೆ ಈಗಿನ ಗುರುಗಳಾದ ಶ್ರೀ ಮದುಜ್ಜಯಿನಿಸದ್ದರ್ಮಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬೆಳೆಸುತ್ತಾ ಬಂದಿದ್ದಾರೆ. ಶ್ರೀ ಸಂಸ್ಥೆಯು ಎರಡನೆಯ ಶಾಲೆಯಾಗಿ ಆರಂಭಿಸಿದ ಶ್ರೀ ರುದ್ರೇಶ್ವರ ಪ್ರೌಢಶಾಲೆಗೆ ಇದೀಗ 60 ವರ್ಷಗಳು ಪೂರ್ಣಗೊಂಡಿರುವ ಸವಿನೆನಪಲ್ಲಿ ಪೂಜ್ಯರ ಕೃಪಾಶೀರ್ವಾದದಿಂದ ಈಗ ನೂತನ ಶಾಲಾಕಟ್ಟಡ ನಿರ್ಮಾಣವಾಗುತ್ತಿರುವುದು ಈ ಭಾಗದ ಭಕ್ತಾದಿಗಳಲ್ಲಿ ಸಂಭ್ರಮ ಉಂಟುಮಾಡಿದೆ.
ಶಾಲೆಯ ನೂತನ ಕಟ್ಟಡದ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ, ಹೆಚ್ಚಿನ ಸಲಹೆ ಸೂಚನೆ ಮಾರ್ಗದರ್ಶನ ನೀಡಲು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿನಾಂಕ: 17.06.2023 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಶಾಲಾವರಣಕ್ಕೆ ದಯಮಾಡಿಸಲಿದ್ದಾರೆ.
ಈ ಸಮಾಲೋಚನಾ ಸಭೆಗೆ ಚನ್ನಗಿರಿ ತಾಲ್ಲೂಕಿನ ಹಾಲಿ ಹಾಗೂ ಮಾಜಿ ಶಾಸಕರು, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಸುತ್ತಮುತ್ತಲ ಗ್ರಾಮಪಂಚಾಯತಿಗಳ ಜನಪ್ರತಿನಿಧಿಗಳು, ಎಲ್ಲಾ ಗ್ರಾಮಗಳ ಭಕ್ತಾದಿಗಳು ಹಾಗೂ ಹಳೆಯ ವಿದ್ಯಾರ್ಥಿ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜ್ಯ ಜಗದ್ಗುರುಗಳ ಕೃಪಾಶೀರ್ವಾದ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ.
“ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ"
ಶಾಲಾ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು