ತರಳಬಾಳು ಶ್ರೀ ಒತ್ತಾಸೆಗೆ ಮಣಿದು ಏತ ನೀರಾವರಿ ಯೋಜನೆ ಜಾರಿ
ಸಿರಿಗೆರೆ: ರಾಜ್ಯ ಸರ್ಕಾರವು ದೂರದೃಷ್ಟಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಲಹೆ ನೀಡಿದ್ದಾರೆ. ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಶುಕ್ರವಾರ ತಮ್ಮನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಆಶೀರ್ವಾದ ಪಡೆದ ಸಂದರ್ಭ ಮಾತನಾಡಿದ ಅವರು, ರಾಜ್ಯದ ಎಲ್ಲ ಕೆರೆಗಳಿಗೆ ನೀರು ತುಂಬಿಸಿ ರೈತರ ಬದುಕು ಸಮೃದ್ಧಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯುವಕನಿಗೆ ನೀಡುವ ಭತ್ಯೆ ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು ಪ್ರತಿಭಾವಂತ ಯುವಕರನ್ನು ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಕೆಲಸಕ್ಕೆ ಬಳಸಿಕೊಳ್ಳಬೇಕು, ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಭೂಮಾಪನ ಇಲಾಖೆಯಲ್ಲಿ ನೌಕರರೇ ಇಲ್ಲದೆ ಭೂಮಾಪನದಂತಹ ಕೆಲಸ ವರ್ಷಗಟ್ಟಲೇ ಆಗುತ್ತಿಲ್ಲ, ಅಂತಹ ತರಬೇತಿಯನ್ನು ಯುವಕರಿಗೆ ನೀಡಿ ಅವರನ್ನು ಸರ್ಕಾರದ ಕೆಲಸದಲ್ಲಿ ಬಳಸಿಕೊಳ್ಳಬೇಕೆಂದು ಸೂಚಿಸಿದರು.
ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಭತ್ಯೆ ನೇರವಾಗಿ ಮಹಿಳೆಯರಿಗೆ ಸೇರುವಂತೆ ನೋಡಿಕೊಳ್ಳಬೇಕು. ಈ ಹಣ ಮನೆಯ ಯಜಮಾನನಿಗೆ ತಲುಪಿ ಅದು ಮದ್ಯದ ಪಾಲಾಗದಂತೆ ಕಟ್ಟೆಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ ಎಂದರು.
ಶ್ರೀಗಳ ಆಶಯದಂತೆ ನೀರಾವರಿ: ರೈತ ಸಮುದಾಯದ ಬಗ್ಗೆ ಕಾಳಜಿ ಇರುವ ತರಳಬಾಳು ಜಗದ್ಗುರುಗಳ ಒತ್ತಾಸೆಯ ಮೇರೆಗೆ ಮಧ್ಯಕರ್ನಾಟಕದ ಹಲವು ಏತ ನೀರಾವರಿಗಳನ್ನು ಜಾರಿಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ವಿಶೇಷವಾಗಿ ಭರಮಸಾಗರ ಮತ್ತು ಜಗಳೂರು ಭಾಗದ ಕೆರೆಗಳನ್ನು ಭರ್ತಿ ಮಾಡುವ ಏತ ನೀರಾವರಿ ಯೋಜನೆಗೆ ಶ್ರೀಗಳು ಪ್ರಥಮವಾಗಿ ಕಾರಣವಾಗಿದ್ದಾರೆ ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಎಚ್.ಎಂ. ರೇವಣ್ಣ, ಚಿಕ್ಕಮಗಳೂರು ಶಾಸಕ ಎಚ್. ಬಿ. ತಮ್ಮಯ್ಯ, ರೈತಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜ ಮುಂತಾದವರು ಜೊತೆಗಿದ್ದರು.