ವಚನ ಸಾಹಿತ್ಯಕ್ಕೆ ತಾಂತ್ರಿಕ ಸ್ಪರ್ಶ : ಡಾ.ಈಶ್ವರ ಶರ್ಮ

  •  
  •  
  •  
  •  
  •    Views  


ಹೊಳಲ್ಕೆರೆ: ತರಳಬಾಳು ಮಠದಿಂದ ವಚನ ಸಾಹಿತ್ಯಕ್ಕೆ ತಾಂತ್ರಿಕ ಸ್ಪರ್ಶ ನೀಡಲಾಗಿದೆ ಎಂದು ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ.ಈಶ್ವರ ಶರ್ಮ ಹೇಳಿದರು. ಪಟ್ಟಣದ ಬಿ.ಪರಮೇಶ್ವರಪ್ಪ ಪದವಿ ಕಾಲೇಜಿನಲ್ಲಿ ನಡೆದ ಶಿವಶರಣರ ವಚನ ಸಂಪುಟ ಜಾಲತಾಣದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತರಳಬಾಳು ಮಠದಿಂದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಬಸವಣ್ಣನ ವಚನಗಳನ್ನು ಹಿಂದಿಗೆ ಭಾಷಾಂತರಿಸಲಾಗಿದೆ. ವಚನ ಸಾಹಿತ್ಯವನ್ನು ತಂತ್ರಾಂಶದಲ್ಲಿ ಅಳವಡಿಸುವ ಮೂಲಕ ಪ್ರಪಂಚದಾದ್ಯಂತ ಪಸರಿಸಲಾಗುತ್ತಿದೆ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶರಣರ ಕ್ಷೇತ್ರಗಳನ್ನು ಸಂಶೋಧಿಸಿ, ಸಂರಕ್ಷಣೆ ಮಾಡಿದರು. 

ಅವರು ಕದಳಿವನ ಸಂಶೋಧನಾ ಯಾತ್ರೆ ಕೈಗೊಂಡಾಗ ಸಾಹಿತಿಗಳಾದ ಮಹದೇವ ಬಣಕಾರ ಹಾಗೂ ಎಚ್.ತಿಪ್ಪೇರುದ್ರಸ್ವಾಮಿ ಭಾಗವಹಿಸಿದ್ದರು. ಈ ಯಾತ್ರೆಯ ಪ್ರೇರಣೆಯಿಂದ ತಿಪ್ಪೇರುದ್ರಸ್ವಾಮಿ ಅವರು ಅಕ್ಕಮಹಾದೇವಿ ಕುರಿತು "ಕದಳಿಯ ಕರ್ಪೂರ" ಕಾದಂಬರಿ ಬರೆದರು ಎಂದು ಸ್ಮರಿಸಿದರು.

ವಚನ ಸಾಹಿತ್ಯ ಪ್ರಕಟಣೆ ಹಾಗೂ ಪ್ರಚಾರ ಕೆಲಸದಲ್ಲಿ ಸಿರಿಗೆರೆ ತರಳಬಾಳು ಮಠ ಮಾಡುತ್ತಿರುವ ಕಾರ್ಯಗಳ ಬಗ್ಗೆ ಕನ್ನಡ ಅಧ್ಯಾಪಕ ನಾಗರಾಜ ಸಿರಿಗೆರೆ ಉಪನ್ಯಾಸ ನೀಡಿದರು. ನೇರಲಕೆರೆಯ ಅಮೃತೇಶ್ವರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಎಂ.ರಂಗಣ್ಣ ವಚನ ಸಾಹಿತ್ಯ ಜಾಲತಾಣದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಹೊಳಲ್ಕೆರೆಯ ಬಿ.ಪಿ. ಕಾಲೇಜಿನಲ್ಲಿ ಶನಿವಾರ ನಡೆದ ಶಿವಶರಣರ ವಚನಗಳು ಹಾಗೂ ವಚನ ಸಂಪುಟ ತಂತ್ರಾಂಶದ ಪ್ರಾತ್ಯಕ್ಷಿಕೆ ವಿಚಾರ ಸಂಕಿರಣವನ್ನು ಹಿಂದಿ ಪ್ರಾಧ್ಯಾಪಕ ಡಾ.ಈಶ್ವರ ಶರ್ಮ ಉದ್ಘಾಟಿಸಿದರು ಸಿರಿಗೆರೆಯ ಅಣ್ಣನ ಬಳಗದ ಅಧ್ಯಕ್ಷ ಮರುಳಸಿದ್ದಯ್ಯ,  ತರಳಬಾಳು ವಿದ್ಯಾಸಂಸ್ಥೆಯ ವಲಯಾಧಿಕಾರಿ ಪಿ.ಬಿ. ತಿಪ್ಪೇಸ್ವಾಮಿ, ಪ್ರಾಚಾರ್ಯರಾದ ಮುರುಗೇಂದ್ರಪ್ಪ, ಶಿವಗಂಗಮ್ಮ. ಉಪನ್ಯಾಸಕರಾದ ಜೆ.ಮಲ್ಲಿಕಾರ್ಜುನ, ಹರ್ಷಿತಾ, ಜಿ.ಬಸವರಾಜ, ದೀಪಾ, ಎಸ್.ಕಾಂತರಾಜ್ ಇದ್ದರು.