ಸಿರಿಗೆರೆ: ದಂದಣ ದತ್ತಣ ಗೋಷ್ಠಿ

  •  
  •  
  •  
  •  
  •    Views  

ಕಾಲ, ಕಾಸು ಮತ್ತು ಕಾಯಕಕ್ಕೆ ಮಹತ್ವ ನೀಡಿದವರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.  ಎಚ್.ಎನ್. ಓಂಕಾರಪ್ಪ ಅಭಿಪ್ರಾಯ

ಇಲ್ಲಿನ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು,  ಪ್ರೌಢಶಾಲಾ ವಿಭಾಗದವರು ಶ್ರೀ ಗುರುಶಾತೇಶ್ವರ ದಾಸೋಹ ಮಂಟಪದಲ್ಲಿ  ಏರ್ಪಡಿಸಿದ್ದ ದಂದಣ  ದತ್ತಣ ಗೋಷ್ಠಿಯಲ್ಲಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದರು.

ತರಳಬಾಳು ಗುರು ಪರಂಪರೆಯ ಬಗ್ಗೆ ಮಾತನಾಡಿದ ಅವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ, ಮಾತುಗಾರಿಕೆ, ವಿಷಯ ಮಂಡನೆ ಮತ್ತು ಧಾರ್ಮಿಕ ಮನೋಭಾವನೆ ಮೂಡಿಸಲು ದಂದಣ ದತ್ತಣ ಗೋಷ್ಠಿ ಕಾರ್ಯಕ್ರಮಗಳನ್ನು ರೂಪಿಸಿದರು.

ನಮ್ಮ ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ದರು ಜನರಲ್ಲಿದ್ದ ಮೂಢನಂಬಿಕೆ, ಅಂಧಾನುಕರಣೆ, ಪ್ರಾಣಿ ಬಲಿ  ಇತ್ಯಾದಿಗಳನ್ನು ವಿರೋಧಿಸಿ ಸಮಾಜವನ್ನು ಸರಿ ದಾರಿಗೆ ತರಲು ಹೋರಾಡಿದರು. ಮರುಳಸಿದ್ಧರು ಚಿನ್ಮೂಲಾದ್ರಿಯ ಶ್ರೀ ಗುರು ರೇವಣಸಿದ್ದರಿಂದ ಆಶೀರ್ವಾದ ಪಡೆದವರಾಗಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ಯಾತ್ರೆ ಕೈಗೊಂಡ ವಿಶ್ವಬಂಧು ಮರುಳಸಿದ್ಧರು ಬೇತೂರಿನಲ್ಲಿ ನಡೆದ ಪಾಂಡ್ಯ ರಾಜನ ಯಜ್ಞ ಯಾಗಗಳನ್ನು ತಡೆದರು. ಮರುಳಸಿದ್ಧರನ್ನು ಹತ್ಯೆಗೈಯಲು ರಾಜ  ಆನೆಯ ಕಾಲಿಂದ ತುಳಿಸಲು ಪ್ರಯತ್ನಿಸಿದನು. ಮರುಳಸಿದ್ಧರು ಆನೆಯ ಕೊಂಬನ್ನು ಮುರಿದರು ಅದುವೇ ಆನಗೋಡು ಎಂದಾಯಿತು.

ವಿಶ್ವ ಬಂಧು ಮರುಳಸಿದ್ಧರು ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಯಲ್ಲಿ ಅಕ್ಕನಿಗೆ ಮಹಾದೇವಿ ಎಂದು ನಾಮಕರಣ ಮಾಡಿದರು. 

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು "ರಟ್ಟೆ ಇದ್ದವನು ದುಡಿಯಬೇಕು, ಹೊಟ್ಟೆ ಇದ್ದವನು ಉಣ್ಣಬೇಕು, ನೆತ್ತಿ  ಇದ್ದವನು ಓದಬೇಕು" ಎನ್ನುತ್ತಿದ್ದರು ಎಂಬುದನ್ನು ಸ್ಮರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಬಿ.ಲಿಂಗಯ್ಯ ವಸತಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳೇ ನೀವೇ ಭಾಗ್ಯಶಾಲಿಗಳು ಹಾಗೂ ಧನ್ಯರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಣ್ಣನ ಬಳಗದ ಅಧ್ಯಕ್ಷರಾದ ಶರಣ ಬಿ. ಎಸ್ ಮರುಳಸಿದ್ದಯ್ಯ ಮಾತನಾಡಿ ತರಳಬಾಳು ಗುರುಪರಂಪರೆ ವಿಶ್ವಬಂಧು ಮರುಳಸಿದ್ದರಿಂದ ಪ್ರಾರಂಭವಾಯಿತು. ಆರಂಭದಲ್ಲಿ ಉಜ್ಜನಿಯಲ್ಲಿ ವಿಶ್ವಬಂಧು ಮರುಳಸಿದ್ಧರು ನಂತರ ಜಗದ್ಗುರು ಸಿದ್ದೇಶ್ವರ, ಶ್ರೀ ಗಡ್ಡದ ಸಿದ್ಧಲಿಂಗ ದೇವರು, ಕೆಂಚಪ್ಪ ದೇವರು, ಚೆನ್ನಬಸವ ದೇವರು, ಗುರುಸಿದ್ಧ ದೇವರು, ಶಿವಲಿಂಗ ದೇವರು, ಗುರುಬಸವ ದೇವರು, ಕರಿಸಿದ್ದ ದೇವರು, ಶಾಂತವೀರ ದೇವರು, ಕರಿಸಿದ್ದ ದೇವರು ಜಂಬಪ್ಪ ದೇವರು ಇವರುಗಳು  ಉಜ್ಜಿನಿಯಲ್ಲಿನ ಪರಂಪರೆ.

ಉಜ್ಜಿನಿಯಿಂದ ಬಂದ ಶ್ರೀ ಜಂಬಪ್ಪ ದೇವರಿಂದ ಸಿರಿಗೆರೆಯಲ್ಲಿ ತರಳಬಾಳು ಗುರುಪರಂಪರೆಯನ್ನು ಮುಂದುವರೆಸಿದರು. ನಂತರ ಶ್ರೀ ಗುರುಸಿದ್ಧ ದೇವರು, ಶ್ರೀ ಸಿದ್ದಲಿಂಗ ದೇವರು, ಶ್ರೀ ಗುರುಸಿದ್ಧ ದೇವರು, ಶ್ರೀ ಶಿವಲಿಂಗ ರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು, ಶ್ರೀ ಗುರುಸಿದ್ಧ ರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು, ಶ್ರೀ ಶಿವಲಿಂಗರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು, ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು, ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತರಳಬಾಳ ಗುರು ಪರಂಪರೆಯಲ್ಲಿ ತರಳಬಾಳು  ಜಗದ್ಗುರುಗಳಾಗಿ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಬದ್ಧರಾಗಿ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ,ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೀಮಠವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.

ಜಲಋಷಿ ಎಂದೇ ಖ್ಯಾತವಾಗಿರುವ 21ನೆಯ ಶ್ರೀ  ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೈಗೊಂಡ  ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೈತರಿಗೆ ಪಾಲಿಗೆ ಆಶಾಕಿರಣವಾಗಿದೆ. ಗಣಕ ಋಷಿಗಳಾದ  ಇವರು ಬಸವಾದಿ ಶಿವಶರಣರ 22,000 ವಚನಗಳು ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ ಎಂದರು.ಎಲ್ಲಾ ವಿದ್ಯಾರ್ಥಿಗಳಿಗೂ ಯಾವುದೇ ಜಾತಿ,ಮತ, ಪ್ರಾಂತ್ಯ, ಪಂಥಗಳ ಭೇದವಿಲ್ಲದೆ ಉಚಿತ ಊಟ ಮತ್ತುವಸತಿ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪರಾಚಾರ್ಯ ಜೆ.ಡಿ. ಬಸವರಾಜ ಅವರು ಮಾತನಾಡಿ  "ಸಿರಿಗೆರೆ -  ನೀರು ತುಂಬಿದ ಕೆರೆ ಇದ್ದಂತೆ,  ಫಲ ಭರಿತವಾದ ಮರ ಇದ್ದಂತೆ. ಕೇವಲ ಶಿಕ್ಷಣ ಕ್ಷೇತ್ರವಲ್ಲದೆ ಎಲ್ಲಾ ರಂಗಗಳಿಗೂ ದಾರಿದೀಪವಾದ ಸುಕ್ಷೇತ್ರ ಸಿರಿಗೆರೆ  ಎಂದರು. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳಾದ ನೀವೇ ಧನ್ಯರು, ಭಾಗ್ಯಶಾಲಿಗಳು ಎಂದರು ದಂದಣ ದತ್ತಣ  ಗೋಷ್ಠಿಯ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಬಂಧು ಮರಳುಸಿದ್ಧರನ್ನು ಕುರಿತು ಸ್ವಾತಿ ವಿಷಯವನ್ನು ಮಂಡಿಸಿದರು. ಶ್ರೀ ಗುರುಶಾಂತ ದೇಶಿಕೇಂದ್ರ  ಮಹಾಸ್ವಾಮಿಗಳವರನ್ನು ಕುರಿತು ಪುನೀತ್ ಕುಮಾರ್ ವಿಷಯವನ್ನು ಮಂಡಿಸಿದರು. ಕೀರ್ತಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಬಗ್ಗೆ ವಿಷಯವನ್ನು ಮಂಡಿಸಿದರು.

ಈಗಿನ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಬಗ್ಗೆ ಆರ್. ರಮ್ಯಾ  ವಿಷಯವನ್ನು ತಿಳಿಯಪಡಿಸಿದರು. ಈ ಗೋಷ್ಟಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ನೌಕರ ವರ್ಗದವರು ಪಾಲ್ಗೊಂಡಿದ್ದರು. ಕುಮಾರಿ ವೈಷ್ಣವಿ ಕಾರ್ಯಕ್ರಮವನ್ನು ನಿರೂಪಿಸಿದರು. ಆರ್. ಲಾವಣ್ಯ ಮತ್ತು ಸಂಗಡಿಗರು  ವಚನಗೀತೆ ಹಾಡಿದರು.