ಸಾಸ್ವೇಹಳ್ಳಿ ಏತನೀರಾವರಿ ಸಂಪೂರ್ಣತೆಗೆ ನೂತನ ಶಾಸಕರುಗಳಿಗೆ ಶ್ರೀ ಜಗದ್ಗುರುಗಳವರ ಯೋಜನಾ ಪಾಠ...!
ದಿನಾಂಕ: 30-06-2023 ಸ್ಥಳ: ಸಿರಿಗೆರೆ
ಯೋಜನೆಯ ಯಶಸ್ಸಿಗೆ ನಮ್ಮ ಮೊದಲ ಆದ್ಯತೆ : ಚನ್ನಗಿರಿ ಶಾಸಕ ಶ್ರೀ ಬಸವರಾಜು ವಿ. ಶಿವಗಂಗಾ
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲೇಬೇಕು ಈ ನಿಟ್ಟಿನಲ್ಲಿ ನೀವು ಮೊದಲ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುವಂತೆ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಯಲ್ಲಿ ಶುಕ್ರವಾರ ನಡೆದ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ನೂತನ ಶಾಸಕರುಗಳಿಗೆ ಆಗ್ರಹ ಪಡಿಸಿದರು.
ಶ್ರೀ ಜಗದ್ಗುರುಗಳವರ ಮಾರ್ಗದರ್ಶನದಲ್ಲಿರುವ ಯೋಜನೆಯಾಗಿದೆ. ಶಾಸಕರುಗಳಿಗೆ ಯೋಜನೆಯ ಬಗ್ಗೆ ಸಂಪೂರ್ಣ ವಿವರಿಸಿದ ಪೂಜ್ಯರು 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ₹604 ಕೋಟಿಯ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಕಾಮಗಾರಿ ಅನುಷ್ಠಾನದಲ್ಲಿದೆ. ಈ ಯೋಜನೆಯ ಅನುಷ್ಠಾನವು ಪ್ರಗತಿಯಲ್ಲಿದ್ದು ಮುತ್ತಗದೂರು, ಜಕ್ಕಲಿ ಹಾಗೂ ಚನ್ನೇಶಪುರ ಪಂಪ್ ಹೌಸ್ ಗಳು ಮತ್ತು ಬಿದರಗಡ್ಡೆ ಮೂಲಕ ಹಾದು ಬರುವ 11ಕಿ.ಮೀ. 66ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಬರುವ 49 ಗೋಪುರಗಳ ನಿರ್ಮಾಣ ಹಂತದಲ್ಲಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಅಡೆತಡೆಗಳಿದ್ದರೆ ಆಯಾ ಭಾಗದ ಶಾಸಕರು ಪರಿಹರಿಸುವಂತೆ ತಿಳಿಸಿದರು.
ಏತನೀರಾವರಿ ಯೋಜನೆಯ ಪೈಪ್ ಲೈನ್ ಕೆಲವು ಕಡೆ ಮಾತ್ರ ಬಾಕಿ ಇದ್ದು ರೈತರನ್ನು ಮನವೂಲಿಸಿ ಅಳವಡಿಸಲು ಕ್ರಮ ವಹಿಸಲಾಗುತ್ತದೆ. ಉಳಿದಂತೆ ಪೈಪ್ ಲೈನ್ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ನೀರನ್ನು ಮೇಲೆತ್ತಲು ಜಾಕ್ವೆಲ್ ಕಾಮಗಾರಿ, ವಿದ್ಯುತ್ ಸರಬರಾಜು ಕಾಮಗಾರಿ ಬಾಕಿ ಇವೆ. ಅವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಈ ಯೋಜನೆಯಿಂದ ಹೊನ್ನಾಳಿ ತಾಲ್ಲೂಕಿನ 4, ಶಿವಮೊಗ್ಗ ಗ್ರಾಮಾಂತರ 3, ಚನ್ನಗಿರಿ 72, ಹೊಳಲ್ಕೆರೆ 72 ಹಾಗೂ ಚಿತ್ರದುರ್ಗ ತಾಲ್ಲೂಕಿನ 1 ಕೆರೆಗೆ ನೀರು ತುಂಬಲಿದೆ. ಇದರಿಂದ 116 ಗ್ರಾಮಗಳಿಗೆ ಅನುಕೂಲವಾಗಲಿದೆ. ಪೈಪ್ ಲೈನ್ ಕಾಮಗಾರಿಗೆ ₹431.24 ಕೋಟಿಗಳು ಹಾಗೂ ₹167 ಕೋಟಿ ಇತರೆ ಕಾಮಗಾರಿಗೆ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
ಭೂಮಿ ನೀಡಲು ವಿಳಂಬ ಮಾಡುತ್ತಿರುವ ರೈತರಿಗೆ ಕೂಡಲೇ ನಿಗದಿ ಮಾಡಿದ ಪರಿಹಾರವನ್ನು ಮತ್ತು ಈ ಬಾರಿಯ ಬೆಳೆ ಪರಿಹಾರವನ್ನು ನೀಡಿ ಭೂಮಿ ಪಡೆದು ಕಾಮಗಾರಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಏತನೀರಾವರಿ ಯೋಜನೆಯ ಪೈಪ್ಲೈನ್ ಕೆಲವು ಕಡೆ ಮಾತ್ರ ಬಾಕಿ ಇದ್ದು ರೈತರನ್ನು ಮನವೂಲಿಸಿ ಅಳವಡಿಸಲು ಕ್ರಮ ವಹಿಸಲಾಗುತ್ತದೆ. ಉಳಿದಂತೆ ಪೈಪ್ ಲೈನ್ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ನೀರನ್ನು ಮೇಲೆತ್ತಲು ಜಾಕ್ವೆಲ್ ಕಾಮಗಾರಿ, ವಿದ್ಯುತ್ ಸರಬರಾಜು ಕಾಮಗಾರಿ ಬಾಕಿ ಇರುವುದಾಗಿ ತಿಳಿಸಿದರು.
ಚನ್ನಗಿರಿ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜು ವಿ.ಶಿವಗಂಗಾರವರು ಮಾತನಾಡಿ ಯೋಜನೆಯು ಶ್ರೀ ಜಗದ್ಗುರುಗಳವರ ಸಂಕಲ್ಪದ ಕೂಸಾಗಿದ್ದು ನನ್ನ ಮೊದಲ ಆದ್ಯತೆ ರೈತರ ಹಿತ ಕಾಪಾಡುವುದಾಗಿದೆ. ರೈತರ ಸಂಕಷ್ಟಗಳಿಗೆ ಹಗಲಿರುಳು ಶ್ರಮಿಸುವ ಶ್ರೀ ಜಗದ್ಗುರುಗಳವರಿಗೆ ಹೆಗಲಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರವರು, ಜಗಳೂರು ಶಾಸಕರಾದ ಶ್ರೀ ದೇವೇಂದ್ರಪ್ಪರವರು, ಯೋಜನೆಯನ್ನು ಸಂಪೂರ್ಣ ಯಶಸ್ವಿಗೊಳಿಸಲು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು..
ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಗುಂಗೆ, ಚಿತ್ರದುರ್ಗ ದಾವಣಗೆರೆ ಜಿಲ್ಲೆಯ ನೀರಾವರಿ ನಿಗಮದ ಅಧಿಕಾರಿಗಳು, ರೈತಮುಖಂಡರು, ವರ್ತಕರಾದ ಬಿ.ಟಿ.ಪುಟ್ಟಪ್ಪನವರು, ಸೇರಿದಂತೆ ಇತರರು ಹಾಜರಿದ್ದರು.