ದ್ವೇಷ ಸಾಧಿಸಲು ಮಾಧ್ಯಮಗಳ ದುರ್ಬಳಕೆ
ಮನುಷ್ಯನು ತಪ್ಪು ದಾರಿಯಲ್ಲಿ ಹೆಜ್ಜೆ ಇಡದೆ ಸರಿದಾರಿಯಲ್ಲಿ ನಡೆಯಲು ಮೂರು ತೆರನಾದ ಭಯಗಳು ಇರುತ್ತವೆ: 1) ಸಮಾಜದ ಭಯ (fear of the society), 2) ಕಾನೂನು ಭಯ (fear of the law) ಮತ್ತು 3) ಆತ್ಮಭಯ (fear of inner conscience). ಈ ಮೂರೂ ಭಯಗಳು ಅವರವರ ಸಂಸ್ಕಾರ ಮತ್ತು ಮನಃಸ್ಥಿತಿಯನ್ನು ಅವಲಂಬಿಸಿರುತ್ತವೆ. ಮೊದಲನೆಯದಾದ “ಸಮಾಜದ ಭಯ”ವುಳ್ಳ ವ್ಯಕ್ತಿ ತಾನು ಹೀಗೆ ಮಾಡಿದರೆ ಸಮಾಜದಲ್ಲಿ ನಾಲ್ಕು ಜನರು ಏನಂದಾರು ಎಂದು ತಪ್ಪು ಹೆಜ್ಜೆ ಇಡಲು ಹಿಂಜರಿಯುತ್ತಾನೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಮದ್ಯಪಾನ ಮಾಡುವುದು ಮಾನಗೇಡಿ ಕೆಲಸವಾಗಿತ್ತು. ಕದ್ದುಮುಚ್ಚಿ ಕುಡಿಯುತ್ತಿದ್ದರು. ಯಾರಾದರೂ ಕುಡಿದು ಊರಿಗೆ ಬಂದರೆ ಬಾಯ ದುರ್ವಾಸನೆಯಿಂದ ಜನರಿಗೆ ಗೊತ್ತಾಗಬಹುದೆಂದು ತಲೆತಗ್ಗಿಸಿ ಮುಖದ ಮೇಲೆ ಟವಲ್ ಮುಚ್ಚಿಕೊಳ್ಳುತ್ತಿದ್ದರು. ತಾನು ಕುಡಿದಿದ್ದೇನೆಂದು ಜನರಿಗೆ ಗೊತ್ತಾಗಬಾರದೆಂದು ಹೆದರುತ್ತಿದ್ದರು. ಏಕೆಂದರೆ ಕುಡಿಯುವುದು ಆಗಿನ ಕಾಲದಲ್ಲಿ ಒಂದು ಅಪರಾಧವಾಗಿತ್ತು. ನೀತಿಬಾಹಿರ ನಡವಳಿಕೆಯಾಗಿತ್ತು. ಆದರೆ ಹಿಂದಿನ ಕಾಲದಲ್ಲಿದ್ದ ಕಳ್ಳಭಟ್ಟಿ ಸಾರಾಯಿ ಈಗ “ಕಾನೂನುಭಟ್ಟಿ”ಯಾಗಿ ಪರಿಣಮಿಸಿದೆ. ಕಾನೂನು ಬದ್ಧವಾಗಿ ಕುಡಿಯಲು ಸರಕಾರದ ಪರವಾನಗಿ ಇರುವುದರಿಂದ ಯಾರ ಭಯವೂ ಇಲ್ಲದೆ ರಾಜಾರೋಷವಾಗಿ ಹಗಲು ಹೊತ್ತೇ ಮದ್ಯದಂಗಡಿಗಳ ಮುಂದೆ ನಿರ್ಲಜ್ಜೆಯಿಂದ ಸಾಲುಗಟ್ಟಿ ನಿಲ್ಲುತ್ತಾರೆ. “ಮಂಜುನಾಥ ಬಾರ್ ಅಂಡ್ ರೆಸ್ಟೋರೆಂಟ್, ವೆಂಕಟೇಶ್ವರ ಬಾರ್ ಅಂಡ್ ರೆಸ್ಟೋರೆಂಟ್, ವಿಷ್ಣುಪ್ರಸಾದ್ ವೈನ್ಸ್” ಇತ್ಯಾದಿ ದೇವರುಗಳ ಹೆಸರಿನಲ್ಲಿಯೇ ಇರುವ ಈ “(ಅ)ಪವಿತ್ರ ತಾಣ”ಗಳಲ್ಲಿ ಕುಳಿತು ಗುಟುಕರಿಸಿ ತೂರಾಡಿ ಹೂಂಕರಿಸಲು ಯಾವ ದೇವರ ಭಯವೂ ಇವರಿಗೆ ಇರುವುದಿಲ್ಲ. ಅವರೊಂದಿಗೆ ಮಾತನಾಡುವವರೇ ಈಗ ಭಯಪಟ್ಟುಕೊಳ್ಳುವಂತಾಗಿದೆ. “ಕುಡುಕರ ಸಹವಾಸ ಬೇಡಪ್ಪಾ” ಎಂದು ಕುಡಿಯದವರೇ ಹೆದರಿ ಬಾಯಿ ಮುಚ್ಚಿಕೊಂಡು ತೆಪ್ಪಗೆ ಮುಂದೆ ಸಾಗಬೇಕಾಗಿದೆ.
ಕುಡಿತದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಡಿತವು ನವನಾಗರೀಕತೆಯ ಸಂಕೇತವಾಗಿದೆ. ಐದು ಗ್ಯಾರಂಟಿಗಳನ್ನು ಕೊಡಲು ಮುಂದಾಗಿರುವ ಸರಕಾರ ಆದಾಯವನ್ನು ಹೆಚ್ಚಿಸಿಕೊಳ್ಳಲು ಅಬಕಾರಿ ಶುಲ್ಕವನ್ನು ಹೆಚ್ಚಿಸಿ ಮದ್ಯಪ್ರಿಯರ ಕೆಂಗಣ್ಣಿಗೆ ಗುರಿಯಾಗಬೇಕಾಗಿರಲಿಲ್ಲ. ಮಹಿಳೆಯೊಬ್ಬಳು ಸರಕಾರ ಪುರುಷರಿಗೆ “ಮದಿರಾಭಾಗ್ಯ”ವನ್ನು ಕೊಡದೆ ಅನ್ಯಾಯ ಮಾಡಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಅಲವತ್ತುಕೊಂಡಿದ್ದಾಳೆ. ಪರೋಕ್ಷವಾಗಿ ಗೃಹಲಕ್ಷ್ಮೀ ಭಾಗ್ಯದಲ್ಲಿ ತಿಂಗಳಿಗೆ 2 ಸಾವಿರ ರೂ. ಗಳಂತೆ ಹೆಣ್ಣುಮಕ್ಕಳ ಬ್ಯಾಂಕ್ ಅಕೌಂಟಿಗೆ ಜಮಾ ಆಗುವ ಸಾವಿರಾರು ಕೋಟಿ ರೂ. ಗಳು ಅವರ ಪತಿರಾಯರ ಕೈಯಲ್ಲಿ ಎ.ಟಿ.ಎಂ ಕಾರ್ಡ್ ಗಳಾಗಿ ಸಿಕ್ಕು ಮದ್ಯದ ಅಂಗಡಿಗಳಿಗೆ ಗ್ಯಾರಂಟಿಯಾಗಿ ಸಂದಾಯವಾಗಿ ಬಡ್ಡಿ ಸಮೇತ ಸರಕಾರಕ್ಕೆ ಹಿಂದಿರುಗಿ ಬರುವುದರಲ್ಲಿ ಯಾವ ಸಂದೇಹವೂ ಇಲ್ಲ!
ಎರಡನೆಯದಾದ ಕಾನೂನು ಭಯ. ಯಾರಿಗೆ ಸಮಾಜದ ಭಯ ಇರುವುದಿಲ್ಲವೋ ಅವರು ತಪ್ಪು ದಾರಿ ತುಳಿಯದಂತೆ ಕಾನೂನಿನ ಕಲಂಗಳು ಭಯ ಹುಟ್ಟಿಸುತ್ತವೆ. ಆ ಭಯದಿಂದಲಾದರೂ ವ್ಯಕ್ತಿ ಸರಿದಾರಿಯಲ್ಲಿ ಹೋಗಲು ಪ್ರಯತ್ನ ಮಾಡಬೇಕಾಗುತ್ತದೆ. ಇಲ್ಲದೇ ಹೋದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಶಿಕ್ಷೆಯನ್ನು ಕೊಡುವ ಉದ್ದೇಶವೇ ಅದರ ಭಯದಿಂದ ಜನರು ಸರಿದಾರಿಯಲ್ಲಿ ನಡೆಯುವಂತಾಗಲಿ ಎಂದು. ತಲೆಯ ಮೇಲೆ ಹೆಲ್ಮೆಟ್ ಹಾಕಿಕೊಳ್ಳಬೇಕೆಂಬ ಕಾನೂನು ಇರುವುದು ತನ್ನ ತಲೆಯ ರಕ್ಷಣೆಗಾಗಿ, ತನ್ನ ಹೆಂಡತಿ ಮಕ್ಕಳ ಒಳಿತಿಗಾಗಿ ಎಂಬ ಪರಿಕಲ್ಪನೆಯೇ ಮೋಟಾರ್ ಸೈಕಲ್ ಸವಾರರಿಗಿರುವುದಿಲ್ಲ. ನೆಪ ಮಾತ್ರಕ್ಕೆ ಹೆಲ್ಮೆಟ್ ನ್ನು ತಲೆಯ ಮೇಲೆ ಧರಿಸುತ್ತಾರೆ. ಬೆಲ್ಟನ್ನು ಸರಿಯಾಗಿ ಕಟ್ಟಿಕೊಳ್ಳುವುದಿಲ್ಲ. ಅಪಘಾತ ಸಂಭವಿಸಿದಾಗ ಹೆಲ್ಮೆಟ್ ಒಂದು ಕಡೆ ಬಿದ್ದು ಅವರೊಂದು ಕಡೆ ಬಿದ್ದು ತಲೆ ಜಜ್ಜಿಹೋಗಿರುತ್ತದೆ. ಬಹಳ ವರ್ಷಗಳ ಹಿಂದೆ ದೂರದರ್ಶನದಲ್ಲಿ ಒಂದು ಅಪರೂಪದ ಹೆಲ್ಮೆಟ್ ಜಾಹೀರಾತು ಬರುತ್ತಿತ್ತು. ಕಲ್ಲಂಗಡಿ ಹಣ್ಣನ್ನು ಹೆಲ್ಮೆಟ್ ಒಳಗಡೆ ಇಟ್ಟು ಬೀಳಿಸಿದಾಗ ಅದು ಒಡೆಯುವುದಿಲ್ಲ ಎಂಬ ದೃಶ್ಯ ತೋರಿಸಿ ಮರುಕ್ಷಣವೇ ಅದಿಲ್ಲದೆ ಬೀಳಿಸಿ ಒಡೆದು ಹೋಳಾಗಿ ಕೆಂಬಣ್ಣದ ರಸ ಚಿಮ್ಮುವ ಮತ್ತೊಂದು ದೃಶ್ಯ! ಹೆಲ್ಮೆಟ್ ಹಾಕಿಕೊಳ್ಳದಿದ್ದರೆ ಅಪಘಾತ ಸಂಭವಿಸಿದಾಗ ಈ ರೀತಿ ತಲೆ ಒಡೆದು ರಸ್ತೆಗೆ ರಕ್ತದೋಕುಳಿಯಾಗುತ್ತದೆ ಎಂದು ಅದರ ಅರ್ಥ. ಆದರೆ ಈ ಭಯದಿಂದ ಅದೆಷ್ಟು ಜನ ಸವಾರರು ಮನೆಯಿಂದ ಹೊರಡುವಾಗ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ? ರಸ್ತೆಯಲ್ಲಿ ಹದ್ದಿನ ಕಣ್ಣುಗಳ ಪೋಲೀಸರಿಗೆ ದಂಡ ತೆರಬೇಕಾಗುತ್ತದೆ ಎಂಬ ಭಯದಿಂದ ಹಾಕಿಕೊಳ್ಳುತ್ತಾರೆಯೇ ಹೊರತು ಯಮದೂತರಿಗೆ “ತಲೆದಂಡ” ತೆರಬೇಕಾಗುತ್ತದೆಯೆಂದು ಅಲ್ಲ!
ಸಮಾಜದ ಭಯವೂ ಇಲ್ಲದೆ, ಕಾನೂನಿನ ಭಯವೂ ಇಲ್ಲದೆ ದ್ವೇಷಭಾವನೆಯಿಂದ ಕಾನೂನಿನ ಬೆನ್ನ ಮೇಲೆಯೇ ಬಂದೂಕನ್ನು ಇರಿಸಿಕೊಂಡು ತನಗಾಗದವರತ್ತ ಗುಂಡು ಹಾರಿಸುವ ಕೆಟ್ಟ ಪ್ರವೃತ್ತಿಯುಳ್ಳ ಜನರೂ ಇದ್ದಾರೆ. ಘನತೆ-ಗೌರವಗಳಿಂದ ಬಾಳುವ ಜನರ ವಿರುದ್ಧ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ವ್ಯವಸ್ಥಿತವಾದ ಹುನ್ನಾರ ನಡೆಸಿ ಅಪಪ್ರಚಾರ ಮಾಡುವ ದುಷ್ಟ ಜನರು ಇವರು. ತಾನೇ ಕಳ್ಳತನ ಮಾಡಿ ಜನರ ಗುಂಪಿನಲ್ಲಿ ಸೇರಿಕೊಂಡು “ಕಳ್ಳಾ, ಕಳ್ಳಾ” ಎಂದು ಕೂಗಿ ಬೇರೊಬ್ಬನ ಕಡೆ ಬೆರಳು ಮಾಡಿ ತೋರಿಸಿ ಬೆನ್ನಟ್ಟಿಕೊಂಡು ಹೋಗುವಂತೆ ಮಾಡಿ ಪಾರಾಗಲೆತ್ನಿಸುವ ನುರಿತ ಕಳ್ಳರು ಇವರು! ಇಂತಹ ಖದೀಮರೊಂದಿಗೆ ಶಾಮೀಲಾಗಿ ಗೌರವಾನ್ವಿತರ ಚಾರಿತ್ರ್ಯ ವಧೆ ಮಾಡುವ prepaid ಚಾನಲ್ ಗಳೂ ಹುಟ್ಟಿಕೊಂಡಿವೆ. “ಸತ್ಯ ಮನೆಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರೆಲ್ಲಾ ಸುತ್ತಿ ಬಂದಿತ್ತು” ಎಂಬ ಗಾದೆ ಮಾತು ಹಳೆಯದಾಯಿತು. ಈಗ ಇಂತಹ ಕೆಟ್ಟ ಮಾಧ್ಯಮಗಳಿಂದ ಸುಳ್ಳು ಜಗತ್ತನ್ನೇ ಸುತ್ತಿ ಬರುವಂತಾಗಿದೆ. ಈ ಮಾಧ್ಯಮಗಳು ತಮ್ಮ TRP ಹೆಚ್ಚಿಸಿಕೊಳ್ಳುವ ಸಲುವಾಗಿ ನಿಮ್ಮ ಹೇಳಿಕೆ ಏನಾದರೂ ಇದ್ದರೆ ಹೇಳಿ ಹಾಕುತ್ತೇವೆ ಎನ್ನುತ್ತಾರೆ. ನೀವು ಪ್ರಾಮಾಣಿಕರಾಗಿದ್ದರೆ ನಮ್ಮ ಅಭಿಪ್ರಾಯದಲ್ಲಿ ನೀವು ಹೇಳಬೇಕಾದ್ದು ಇಷ್ಟೆ: "Those who know me well need no explanation. Those who do not know me make passing remarks which I damn care. Those who are prejudicial will not be convinced by any amount of explanation. Hell with them! Get lost!" ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ ಅಂಥವರು “ತನ್ನ ಯಜಮಾನ ಹೊರಿಸಿದ ಭಾರವಾದ ಹೊರೆಯನ್ನು ನಿಷ್ಠೆಯಿಂದ ಹೊತ್ತು ಮುಂದೆ ಸಾಗುವ ಶ್ರಮಜೀವಿ ಕೋಣನ ಹಿಂದೆ ಬಾಲ ಬಡಿಯುತ್ತಾ ಬೊಗಳುವ ಬೀದಿ ನಾಯಿಗಳಿದ್ದಂತೆ”!
ಕೋಣನ ಹೇರಿಂಗೆ ಕುನ್ನಿ ಬುಸುಗುಟ್ಟುತ್ತಾ ಬಾಲವ ಬಡಿವಂತೆ
ತಾವೂ ಮಾಡರು ಮಾಡುವವರನ್ನೂ ಮಾಡಲೀಯರು
ಮಾಡುವ ಭಕ್ತರ ಕಂಡು ಸೈರಿಸಲಾರದವರ ಕೂಗಿಡೆ ಕೂಗಿಡೆ
ನರಕದಲ್ಲಿಕ್ಕುವ ಕೂಡಲ ಸಂಗಮದೇವಾ!
ನಿಮ್ಮ ವಿರುದ್ಧ ಕೂಗೆಬ್ಬಿಸುವ ದುಷ್ಟ ಜನರನ್ನು ಕುರಿತು "You will never reach your destination if you stop and throw stones at every dog that barks” (ನೀವು ದಾರಿಯಲ್ಲಿ ಬೊಗಳುವ ನಾಯಿಗಳಿಗೆಲ್ಲಾ ಕಲ್ಲು ಹೊಡೆಯುತ್ತಾ ನಿಂತರೆ ನಿಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ) ಎನ್ನುತ್ತಾನೆ ನೋಬೆಲ್ ಬಹುಮಾನ ವಿಜೇತನಾದ ಬ್ರಿಟನ್ನಿನ ಸುಪ್ರಸಿದ್ಧ ವಾಗ್ಮಿ Winston Churchill. ನಾಯಿಗಳು ಬೊಗಳುವುದನ್ನು ನಿರ್ಲಕ್ಷಿಸಿ ಮುಂದೆ ನಡೆಯುವುದು ಒಳ್ಳೆಯದು ಎಂದು ಅವನ ಮಾತಿನ ಮಥಿತಾರ್ಥ. “ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ”, ಬೊಗಳುವ ನಾಯಿ ಕಚ್ಚುವುದಿಲ್ಲ” ಎಂಬ ಹಿತೋಕ್ತಿಗಳೂ ಕನ್ನಡದಲ್ಲಿವೆ. ಆದರೆ ಕಾಲು ಕೆರೆದು ನ್ಯಾಯ ತೆಗೆಯುವ ಜನರಿದ್ದಾರೆ. “ಅಪದ್ದಿಗೆ ಉದಾಸೀನವೇ ಮದ್ದು” ಎನ್ನುವಂತೆ ಸುಮ್ಮನಿರುವುದು ಲೇಸು ಎಂದರೆ ಸುಮ್ಮನಿದ್ದರೂ ಕಚ್ಚಲು ಬಂದರೆ ಏನು ಮಾಡಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಮಾಜದಲ್ಲಿ ಅನೇಕ ಕಹಿ ಘಟನೆಗಳನ್ನು ಎದುರಿಸಿದ ನಮ್ಮ ಗುರುವರ್ಯರು ತಮ್ಮ ದಿನಚರಿ “ಆತ್ಮನಿವೇದನೆ”ಯಲ್ಲಿ ಹೀಗೆ ಬರೆದಿದ್ದಾರೆ: “ಹೆದರುವವನನ್ನು ಕಂಡರೆ ನಾಯಿಗಳು ಬೊಗಳುತ್ತವೆ; ಕೈಯಲ್ಲಿ ದೊಣ್ಣೆ ಇರುವವನನ್ನು ಕಂಡರೆ ದಿಕ್ಕಾಪಾಲಾಗಿ ಓಡುತ್ತವೆ”! ಆದರೆ ಕೈಯಲ್ಲಿ ದೊಣ್ಣೆ ಹಿಡಿದು ಹೆದರಿಸಿ ಓಡಿಸಿದರೂ ಮರು ದಿನ ಮತ್ತೆ ಬೊಗಳುತ್ತವೆ. “ನಾಯಿ ಬಾಲ ಡೊಂಕು” ಎನ್ನುವಂತೆ ನಾಯಿಗಳ ಸ್ವಭಾವವೇ ಹಾಗೆ. “ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಕೃತಾಂ, ಧರ್ಮಸಂಸ್ಥಾಪನಾರ್ಥಾಯ” ಎಂದು ಭಗವದ್ಗೀತೆಯು ಹೇಳುವಂತೆ ಸಜ್ಜನರನ್ನು ರಕ್ಷಿಸಿ, ದುಷ್ಟರನ್ನು ಸದೆಬಡಿಯುವ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾದ್ದು ಧರ್ಮ ಅಂದರೆ ವ್ಯವಹಾರ ಜಗತ್ತಿನಲ್ಲಿ ನ್ಯಾಯಾಲಯ. ನ್ಯಾಯ ಅನ್ಯಾಯಗಳನ್ನು ಪರಿಶೀಲಿಸಿ ಶಿಕ್ಷಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳದೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ. ನ್ಯಾಯಾಲಯಗಳು ತಪ್ಪು ಮಾಡಿದವರನ್ನು ದಂಡಿಸಿದಂತೆ benefit of doubt ಮೇಲೆ ಕೇಸುಗಳನ್ನು ವಜಾ ಮಾಡದೆ ಸತ್ಯಶೋಧನೆ ಮಾಡಿ ಸುಳ್ಳು ಫಿರ್ಯಾದು ಕೊಡುವವರನ್ನೂ ದಂಡಿಸಿದರೆ ದ್ವೇಷದಿಂದ ಹಾಕುವ ವರದಕ್ಷಿಣೆ ಕಿರುಕುಳದ ಕೇಸುಗಳು, ಜಾತಿ ನಿಂದನೆಯ ಕೇಸುಗಳು ಇತ್ಯಾದಿ ಎಷ್ಟೋ ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರುವುದು ಕಡಿಮೆಯಾಗುತ್ತವೆ. ಕಾನೂನಿನ ಕಣ್ಣಿಗೆ ಮಣ್ಣೆರಚುವ ಹೀನ ಪ್ರವೃತ್ತಿ ಸಹ ನಿಲ್ಲುತ್ತದೆ.
ಇನ್ನು ಮೂರನೆಯದಾದ ಆತ್ಮಭಯ. ಇದು ಸಮಾಜದ ಭಯ ಮತ್ತು ಕಾನೂನಿನ ಭಯಕ್ಕಿಂತ ಶ್ರೇಷ್ಠವಾದುದು. ಯಾವಾತನಿಗೆ ಉತ್ತಮ ಸಂಸ್ಕಾರವಿರುತ್ತದೆಯೋ, ಪರಿಶುದ್ಧವಾದ ಮನಸ್ಸು ಇರುತ್ತದೆಯೋ ಅವನು ತನ್ನ ಆತ್ಮಕ್ಕೆ ಅಂಜಿ ನಡೆಯುತ್ತಾನೆ. ಅವನು ಎಂದೂ ತಪ್ಪು ಮಾಡುವುದಿಲ್ಲ. ಸಮಾಜದ ಭಯವಾಗಲೀ ಕಾನೂನಿನ ಭಯವಾಗಲೀ ಅವನನ್ನು ಧೃತಿಗೆಡಿಸುವುದಿಲ್ಲ. “ಸತ್ಯವೆಂಬ ಕೂರಲಗನೆ ಹಿಡಿದು ಸದ್ಭಕ್ತರು ಗೆದ್ದರು ಕಾಣಾ ಕೂಡಲ ಸಂಗಮದೇವಾ” ಎನ್ನುತ್ತಾರೆ ಬಸವಣ್ಣನವರು. ವೈಯಕ್ತಿಕ ಜೀವನದಲ್ಲಿಯೂ ಅಂತಹ ಸತ್ವಪರೀಕ್ಷೆಯ ಸಂದರ್ಭ ಬಂದಾಗ ಅವರು ತಳೆದ ಗಟ್ಟಿ ನಿಲುವು:
ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ ಶರಣನಾರಿಗೂ ಅಂಜುವನಲ್ಲ
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.13-7-2023.