ಗುರಿ ಸಾಧನೆಗೆ ಶ್ರಮಿಸಿದಾಗ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು : ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ: (ವಿಜಯನಗರ ಜಿಲ್ಲೆ) :- ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತುಗಾರಿಕೆ, ಸ್ವಯಂ ಪ್ರೇರಣಾಶಕ್ತಿಯ ಜೊತೆಗೆ ಸಣ್ಣ ಸಣ್ಣ ವಿಷಯದಲ್ಲಿ ಜೀವನದಲ್ಲಿ ವೈಫಲ್ಯ ಉಂಟಾದಾಗ ನಿರಾಶಾರಾಗಿ ಜೀವನವನ್ನು ಕೊನೆಗೊಳಿಸುದನ್ನು ಬಿಟ್ಟು ಬದುಕಿನಲ್ಲಿ ವೈಫಲ್ಯತೆಯನ್ನು ಚಾಲೇಂಜಾಗಿ ಸ್ವೀಕರಿಸಿ ಮುನ್ನಡೆದಾಗ ಮಾತ್ರ ಯಶಸ್ವಿ ಜೀವನ ನಮ್ಮದಾಗುತ್ತದೆ ಹಾಗಾಗಿ ಗುರಿ ಸಾಧನೆಗೆ ಶ್ರಮಿಸಿದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸುಗಳಿಸಲಿಕ್ಕೆ ಸಾದ್ಯ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಜೀವನಾನುಭವದ ಮಾತನ್ನು ಹೇಳಿದರು.
ಪಟ್ಟಣದ ಹೆಚ್.ಪಿ.ಎಸ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಬೆಳಗಿಸಿವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ ಹೆತ್ತವರು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಅಂತೆಯೇ ವಿದ್ಯೆಯನ್ನು ನೀಡಿದ ಗುರುಗಳನ್ನು ಅಪಾರವಾಗಿ ಗೌರವಿಸಬೇಕು. ಆಗ ನಮ್ಮ ವ್ಯಕ್ತಿತ್ವ ಉತ್ತಮರೀತಿಯಲ್ಲಿರುತ್ತದೆ, ಸೋಲು ಮತ್ತು ಗೆಲುವು ಬದುಕಿನ ಭಾಗವೇ ಆಗಿದೆ. ಆದ್ದರಿಂದ ಅವೆರಡನ್ನೂ ಸಮಾನವಾಗಿ ಸ್ವೀಕರಿಸಿ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣವನ್ನು ರೂಢಿಸಿಕೊಂಡು ವಿದ್ಯಾಸಂಸ್ಥೆಗಳಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಿಸಿಕೊಂಡು ಉತ್ತಮ ವಿಚಾರಧಾರೆಯೊಂದಿಗೆ ಜ್ಞಾನ ಸಂಪಾದಿಸಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದೆಂದು ತಿಳಿಸಿದರು.
ಈ ವೇಳೆ ಹೆಚ್.ಪಿ.ಎಸ್ ಪಿಯು ಕಾಲೇಜಿನ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಪಿ.ಮಹಾಬಲೇಶ್ವರಗೌಡ್ರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ವಿದ್ಯೆಯನ್ನು ಸಂಪಾದಿಸುವುದೆಂದರೆ ಅದೊಂದು ತಪಸ್ಸು, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಶಿಸ್ತಿನಿಂದ ಸಾಧನೆಗೈಲು ಸಾಧ್ಯ. ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆಗೈಯುತ್ತಿರುವ ಸಂಸ್ಥೆಯನ್ನು ತಮ್ಮ ಮನೆಯಂತೆ ಪ್ರೀತಿ ಕಾಳಜಿಯಿಂದ ಗೌರವಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರಕುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಸರ್ವತೋಮುಖ ಬೆಳವಣಿಗೆ ಹೊಂದಬಹುದೆಂದು ತಳಿಸಿದರು.
ವಿದ್ಯಾರ್ಥಿಗಳು ಹೆಚ್ಚು ಧೈರ್ಯವಂತರಾಗಬೇಕು, ವಿನಯವಂತರಾಗಬೇಕು ಮಾತ್ರವಲ್ಲದೆ ತಾನು ಓದುತ್ತಿರುವ ಸಂಸ್ಥೆಯ ಬಗೆಗೆ ಅಪಾರ ಗೌರವವನ್ನು ಹೊಂದಬೇಕು. ಬದುಕನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಬೇಕು. ಆಗ ಬದುಕು ಅರ್ಥಪೂರ್ಣಗೊಳ್ಳುತ್ತದೆ ಎಂದರು.
ರಾಣೆಬೆನ್ನೂರು ಹೆಚ್.ಎಸ್.ಪಿ.ಯು ಕಾಲೇಜಿನ ಉಪನ್ಯಾಸಕರಾದ ಡಾ.ಹೆಚ್ ಓಂಕಾರನಾಯ್ಕ್ರವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಕಾರಣವಾದಂತೆ, ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಕಾರಣ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಸರ್ವತೋಮುಖ ಬೆಳವಣಿಯಿಂದ ಸಮಾಜದ ಪ್ರಗತಿಗೆ ಕಾರಣರಾಗಬೇಕು. ಕಾಲೇಜಿನ ಶಿಸ್ತುಪಾಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾದುದು. ಈ ಶಿಸ್ತು ಮುಂದಿನ ಬದುಕಿಗೆ ಸ್ಫೂರ್ತಿದಾಯಕವಾಗಬೇಕು ಎಂದರು.
ವಿದ್ಯಾರ್ಥಿಗಳ ಒಕ್ಕೂಟಕ್ಕೆ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಕಾರ್ಯಗಳನ್ನು ಕಾಯಾ ವಾಚಾ ಮನಸಾ ಪೂರ್ವಕವಾಗಿ ಮಾಡಬೇಕಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗಬಾರದು. ಇದರ ಜೊತೆಗೆ ಸಾಮಾನ್ಯ ಜ್ಞಾನವೂ ಮುಖ್ಯ. ಈ ನಿಟ್ಟಿನಲ್ಲಿ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ತರಳಬಾಳು ವಿದ್ಯಾ ಸಂಸ್ಥೆಯ ಹರಪನಹಳ್ಳಿ ವಲಯ ಅಧಿಕಾರಿ(ಆರ್.ಒ) ಯು.ಜಿ ಶರಣಪ್ಪ ಮಾತನಾಡಿ ಅಧ್ಯಾಪಕರಿಗೆ, ಹೆತ್ತವರಿಗೆ ವಿಧೇಯರಾಗಿ, ಸತ್ಪ್ರಜೆಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಮೊಬೈಲ್, ವಾಟ್ಸಪ್ ಪ್ರಭಾವಗಳಿಂದ ದೂರ ಇದ್ದು ಕಲಿಕೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಮುಖ್ಯ ಆಶಯ. ಇಂತಹ ಆಶಯ ಈಡೇರಿಸುವಲ್ಲಿ ಪಠ್ಯಪೂರಕ ಚಟುವಟಿಕೆಗಳೆರಡು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿಯೇ ಶೈಕ್ಷಣಿಕವಾಗಿ ಪಠ್ಯಪೂರಕವು ಅವಿಭಾಜ್ಯ ಅಂಗವಾಗಿ ಇರಿಸಲಾಗಿದೆ ಎಂದು ಹೇಳಿದರು.
ಚ್.ಪಿ.ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಸಿ ಬೆನಕನಕೊಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬದುಕಿನ ಮೌಲ್ಯ ಅರಿಯುವಲ್ಲಿ, ಬೌದ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆ ಪಸರಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗಿವೆ ಹಾಗಾಗಿ ಪಠ್ಯದ ಜೊತೆಗೆ ಪಠ್ಯೇತರ ಕಾರ್ಯಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೋಂಡರೆ ಮಹಾವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ, ಆಟದಲ್ಲಿ, ಶಾಲಾ ಕಾಲೇಜಿನ ಚಟುವಟಿಕೆಗಳಲ್ಲಿ, ಮನೆಯ ಕೆಲಸ-ಕಾರ್ಯಗಳಲ್ಲಿ ಆಸಕ್ತಿಯ ಜೊತೆಗೆ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೋ ಅಂತಹ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ಘಟ್ಟವನ್ನು ತಲುಪಿದಂತೆಯೇ ಸರಿ ಎಂದು ಹೇಳಿದರು.
ಈ ವೇಳೆ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣವಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಹರಪನಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಬಿ.ರವೀಂದ್ರ, ಕುಂಚೂರು ಸರ್ಕಾರಿ ಪ್ರೌಢಶಾಲೆಯ ಮಹೇಶ್ ಬಸರಿಕಟ್ಟೆ, ಹಾರಕನಾಳ್ ಸರ್ಕಾರಿ ಪ್ರೌಢಶಾಲೆಯ ಎಲ್.ಎಸ್ ಮೃತ್ಯುಂಜಯ, ಮೈದೂರು ಸರ್ಕಾರಿ ಪ್ರೌಢಶಾಲೆಯ ಹುಸೇನ್ ಪೀರ್, ಉಚ್ಚಂಗಿದುರ್ಗದ ಉತ್ಸವಾಂಬ ಪ್ರೌಢಶಾಲೆಯ ಎಸ್.ರಮೇಶ್ ನಾಯ್ಕ್ ಈ ಐದು ಪ್ರೌಢಶಾಲಾ ಮುಖ್ಯೋಪಾಧ್ಯಯರುಗಳನ್ನ ವಿಶೇಷವಾಗಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜಶಾಸ್ತ್ರ ಉಪನ್ಯಾಸಕ ಅಜ್ಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರೆ, ದೈಹಿಕ ಉಪನ್ಯಾಸಕರಾದ ಕೆ.ಟಿ ವೆಂಕಟೇಶ್ ಪ್ರತಿಭಾ ಪುರಸ್ಕಾರ ನೆಡಸಿಕೊಟ್ಟರು. ಶಂಕರಪ್ಪ ವಂದನಾರ್ಪಣೆ ನೆರವೇರಿಸಿದರು. ಆಂಗ್ಲಭಾಷಾ ಉಪನ್ಯಸಕರಾದ ಡಿ.ಸಿ ಪ್ರದೀಪ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಸಾಸ್ವಿಹಳ್ಳಿ ಚನ್ನಬಸವನಗೌಡ್ರು, ಕಡಬಗೇರಿ ನಾಗನಗೌಡ ಪಾಟೀಲ್, ಹರಪನಹಳ್ಳಿ ನರಸಿಂಹಚಾರ್ಯ, ಉಚ್ಚಂಗಿದುರ್ಗದ ರವೀಂದ್ರನಾಥ್, ಕವಲಹಳ್ಳಿ ಕೆ.ರವೀಂದ್ರನಾಥ್, ಬಾಗಳಿ ಆರ್.ಶಿವಕುಮಾರ್ ಗೌಡ, ಹರಪನಹಳ್ಳಿ ಫಣಿರಾಜ, ನಂದಿಬೇವೂರ ಯು.ಕೆ ಮಲ್ಲಿಕಾರ್ಜುನ, ಗೌರಿಪುರದ ವಸಂತಗೌಡ, ಹರಪನಹಳ್ಳಿಯ ಎಸ್.ಕವಿತಾ ಪುರಸಭೆ ಸದಸ್ಯರಾದ ಎಂ.ವಿ ಅಂಜಿನಪ್ಪ, ಉದ್ದಾರ ಗಣೇಶ್, ಲಾಟಿ ದಾದಾಪೀರ್, ಚಿಕ್ಕೇರಿ ಬಸಣ್ಣ, ರಾಜಕೀಯ ಮುಖಂಡರಾದ ಬಿ.ಕೆ ಪ್ರಕಾಶ್, ವಸಂತಪ್ಪ, ಇಸ್ಮಾಯಿಲ್ ಯಲಿಗಾರ್, ಮತ್ತೂರು ಬಸವರಾಜ್, ಹಾಗೂ ಕಾಲೇಜಿನ ಉಪನ್ಯಸಕರಾದ ಸಿ.ಎಸ್ ಬಸವರಾಜ್, ಕೆ.ಬಿ ರವೀಂದ್ರ, ಬಿ.ಒ ಸುಧಾ, ಕೆ.ಟಿ ವೆಂಕಟೇಶ್, ಶಂಕರಪ್ಪ, ಮಂಜುನಾಥ್ ಮಾಳ್ಗಿ, ಕೆ.ಎಸ್ ನಾಗರಾಜ್, ವೀರಣ್ಣ, ಸಂಗೀತ, ಮಂಜುಳ, ಮರುಳಪ್ಪ, ಅರುಣ್, ಶಿವಕುಮಾರ್ ಶಾಸ್ತ್ರೀ, ಗುರುಬಸವರಾಜ್, ಪ್ರೀತಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.