ಶ್ರೀ ತರಳಬಾಳು ಜಗದ್ಗುರುಗಳವರ ಸಂಕಲ್ಪ ಸಾಕಾರ...!
ಜಗಳೂರು ಏತನೀರಾವರಿ ಯೋಜನೆಯ ಮೊದಲ ಹಂತದ 11 ಕೆರೆಗಳಿಗೆ ಹರಿದ ತುಂಗಭದ್ರೆ!
------------------
ಗಂಗಾವತರಣದ ಮಹಾಗುರುವಿಗೆ ಅನ್ನದಾತರ ಧನ್ಯತೆಯ ನಮನ..!
------------------
ಜಗಳೂರು ದಿನಾಂಕ 24-07-2023 : ಕರುನಾಡಿನ ಜಲಋಷಿ, ಹತ್ತಾರು ಏತನೀರಾವರಿ ಯೋಜನೆಗಳ ಮೂಲಕ ನೂರಾರು ಕೆರೆಗಳಿಗೆ ನೀರು ತುಂಬಿಸಿ ಅನ್ನದಾತರ ಬಾಳಲ್ಲಿ ನಗೆಬೆಳದಿಂಗಳ ಮೂಡಿಸಿದ ಭಗೀರಥರಾದ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಜಲಕೈಂಕರ್ಯವು ಸಾಕಾರಗೊಂಡಿದೆ.
ಜಗಳೂರು ತರಳಬಾಳು ಹುಣ್ಣಿಮೆ ಮಹೋತ್ಸವದ ಸಾರ್ಥಕತೆ ಸಾರುವ ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ಹರಿಸುವ ತುಂಗಭದ್ರಾ ಏತ ನೀರಾವರಿ ಯೋಜನೆಯ ಮೊದಲ ಭಾಗವಾಗಿ ಸೋಮವಾರ 11 ಕೆರೆಗಳಿಗೆ ನೀರು ಹರಿಸಲಾಗಿದೆ.
ಶ್ರೀ ಜಗದ್ಗುರುಗಳವರ ಕರಣಧಾರತ್ವದ ಮಾರ್ಗದರ್ಶನದಂತೆ ಹರಿಹರದ ದೀಟೂರಿನಿಂದ ತುಂಗಭದ್ರಾ ನದಿಯ ಮೂಲಕ ಜಗಳೂರು ಏತ ನೀರಾವರಿ ಪ್ರಾಜೆಕ್ಟ್ 665 ಕೋಟಿ ರೂ. ವೆಚ್ಚದಲ್ಲಿ 2018ರಲ್ಲಿ ಆರಂಭವಾಗಿತ್ತು.
ಕಳೆದ ವರ್ಷ 2022 ರಂದು ಪ್ರಾಯೋಗಿಕವಾಗಿ ತುಪ್ಪದಹಳ್ಳಿ ಕೆರೆಗೆ ನೀರು ಹರಿದು ರೈತರಲ್ಲಿ ಭರವಸೆ ಇಮ್ಮಡಿಗೊಳಿಸಿತ್ತು. ಆದರೆ ಈ ಬಾರಿ ಮಳೆಗಾಲ ವಿಳಂಬವಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಲ್ಲದ ಕಾರಣ ಕೆರೆಗಳಿಗೆ ನೀರು ಹರಿಯುವುದು ಸಂಶಯ ಎಂದು ಹೇಳಲಾಗಿತ್ತು.ಆದರೆ ಕಳೆದ ಒಂದು ವಾರದಿಂದ ತುಂಗಭದ್ರಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಶ್ರೀಗಳವರು ಮುಂದಾಲೋಚನೆಯಿಂದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ ಪರಿಣಾಮ ಜಗಳೂರು ತಾಲೂಕಿನ 11 ಕೆರೆಗಳಿಗೆ ಪ್ರಾಯೋಗಿಕವಾಗಿ ಮೂರು ಮೋಟರ್ ಗಳನ್ನು ಚಾಲನೆಗೊಳಿಸಿ ನೀರು ಹರಿಸಲಾಗಿದೆ.
ಯಾವ ಕೆರೆಗಳಿಗೆ ನೀರು:
ತಾಲೂಕಿನ ತುಪ್ಪದಹಳ್ಳಿ, ಅಸಗೋಡು, ಕಾಟೇನಹಳ್ಳಿ, ಮಾದನಹಳ್ಳಿ, ಮರಿಕುಂಟೆ, ಗೋಡೆ, ತಾರೆಹಳ್ಳಿ, ಉರಲ್ಲಕಟ್ಟೆ, ಬಿಳಿಚೋಡು, ಹಾಲೇಕಲ್ಲು ಮತ್ತು ಚದರಗೊಳ್ಳಿ ಗ್ರಾಮಗಳ ಕೆರೆಗಳಿಗೆ ಚಟ್ನಳ್ಳಿ ಗುಡ್ಡದಿಂದ ಗುರುತ್ವಾಕರ್ಷಣೆ ಮೂಲಕ ಮಂಗಳವಾರ ಬೆಳಿಗ್ಗೆ ನೀರು ಹರಿದು ಬರುವ ಸಾಧ್ಯತೆಯಿದೆ ಎಂದು ನೀರಾವರಿ ನಿಗಮದ ಎ.ಇ.ಮನೋಜ್ ಮಾಹಿತಿ ನೀಡಿದ್ದಾರೆ.
ನಿನ್ನೆ ತಾನೇ ವಚನ ಸಾಹಿತ್ಯ ಪ್ರಚಾರದ ಕೈಂಕರ್ಯಕ್ಕೆ ವಿದೇಶಿ ಪ್ರವಾಸ ಕೈಗೊಂಡ ಶ್ರೀಜಗದ್ಗುರುಗಳವರು ಕೆರೆಗಳಿಗೆ ನೀರು ತುಂಬಿಸಲು ನಿರಂತರವಾಗಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸುತ್ತಿದ್ದರು. ಶ್ರೀ ಜಗದ್ಗುರುಗಳವರ ರೈತರ ಕಲ್ಯಾಣಕ್ಕಾಗಿ ಮಾಹೇಶ್ವರ ನಿಷ್ಠೆಯ ಕಾರ್ಯಫಲದಂತೆ ಕೆರೆಗಳಿಗೆ ನೀರು ಹರಿದು ಬರುತ್ತಿರುವ ಅಪರೂಪದ ದೃಶ್ಯ ಜನಮನಕ್ಕೆ ಸಂತಸ ತಂದರೆ ಕೆರೆ ಪಾತ್ರದ ರೈತರ ಮೊಗದಲ್ಲಿ ಹರ್ಷ ತುಂಬಿದ ಧನ್ಯತಾ ಭಾವ ಮೂಡಿಸಿದೆ. ಪೂಜ್ಯ ಶ್ರೀಜಗದ್ಗುರುಗಳವರ ಜಲಕಲ್ಯಾಣವು ಅನ್ನದಾತರ ಬಾಳು ಬೆಳಗಲಿದೆ.
ಕೆರೆಗಳಿಗೆ ನೀರು ಹರಿಯುತ್ತಿರುವುದು ಸಂತೋಷ:
“ಈಗಾಗಲೇ ತುಪ್ಪದಹಳ್ಳಿ ಕೆರೆಯಿಂದ ಅಸಗೋಡು ಸೇರಿದಂತೆ ಅನೇಕ ಕೆರೆಗಳಿಗೆ ನೀರು ಹರಿಯುತ್ತಿರುವ ಮಾಹಿತಿ ಬಂದಿದೆ. ಬಹಳ ಸಂತಸದ ವಿಷಯ. ತರಳಬಾಳು ಶ್ರೀಜಗದ್ಗುರುಗಳವರ ದೂರದೃಷ್ಟಿಯ ಫಲವಾಗಿ ಯೋಜನೆ ಆರಂಭವಾಯಿತು. ಕೆರೆಗಳಿಗೆ ನೀರು ಹರಿಯುತ್ತಿರುವುದು ಸಂತೋಷ ತಂದಿದೆ”.
-ಬಿ.ದೇವೇಂದ್ರಪ್ಪ, ಶಾಸಕರು, ಜಗಳೂರು