ಬಾನಂಗಳದಿಂದ ನಿಮ್ಮ ಮನದಂಗಳಕ್ಕೆ
ಏರ್ ಇಂಡಿಯಾ ವಿಮಾನವು ಆಗಸದತ್ತ ಭೋರ್ಗರೆಯುತ್ತಾ ಜಿಗಿದು ಬೆಂಗಳೂರಿಗೆ ವಿದಾಯ ಹೇಳಿ ಅಮೇರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರದತ್ತ ಹಾರಿತು. ಗಗನಸಖಿಯು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಸೂಚನೆಗಳನ್ನು ನೀಡಿದಳು. ಆಪತ್ಕಾಲದಲ್ಲಿ ವಿಮಾನವು ಸಮುದ್ರದ ಮೇಲೆ ಇಳಿಯುವ ಪ್ರಸಂಗ ಬಂದರೆ ಸೀಟಿನ ಕೆಳಭಾಗದಲ್ಲಿರುವ ಲೈಫ್ ಜಾಕೆಟ್ ಗಳನ್ನು ಬಳಸುವ ಬಗೆ ಹೇಗೆಂದು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದಳು. ಆದರೆ ಶಾಲೆಯಲ್ಲಿ ತುಂಟ ಹುಡುಗರು ಶಿಕ್ಷಕಿಯು ಮಾಡುವ ಪಾಠದತ್ತ ಗಮನ ಹರಿಸದೆ ಗಲಾಟೆ ಮಾಡುವಂತೆ ಯಾವೊಬ್ಬ ಪ್ರಯಾಣಿಕನೂ ಅವಳ ಮಾತಿನತ್ತ ಗಮನ ಹರಿಸಲಿಲ್ಲ! ಪಕ್ಕದಲ್ಲಿ ಕುಳಿತಿರುವ ಸಹಪ್ರಯಾಣಿಕರು ಯಾರೆಂದೂ ಸಹ ಕಣ್ಣೆತ್ತಿ ನೋಡುತ್ತಿರಲಿಲ್ಲ. ಎಲ್ಲರೂ ಅವರವರ ಕೈಯಲ್ಲಿರುವ ಮೊಬೈಲ್ ಗಳಲ್ಲಿ ತಲ್ಲೀನರಾಗಿದ್ದು ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಬ್ಯುಸಿನೆಸ್ ದರ್ಜೆಯ ಪ್ರಯಾಣಿಕರಂತೂ ಒಬ್ಬೊಬ್ಬರು ಒಂದೊಂದು ವಿಶೇಷ ಕ್ಯಾಬಿನ್ನಲ್ಲಿ ಆಸೀನರಾಗಿದ್ದು ಬೇರೆ ಪ್ರಯಾಣಿಕರ ಸಂಪರ್ಕಕ್ಕೆ ಬರುವಂತೆಯೇ ಇರಲಿಲ್ಲ. ನಾವು ಕುಳಿತಿದ್ದ ಈ ಕ್ಯಾಬಿನ್ ಗಳು ಒಂದು ರೀತಿಯಲ್ಲಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳನ್ನು ಇಡುವ ಇನ್ಕ್ಯೂಬೇಟರ್ ಗಳಂತೆ ಕಾಣಿಸುತ್ತಿದ್ದವು. ಅಂತಹ ಶಿಶುಗಳನ್ನು ನರ್ಸ್ ಗಳು ವಿಶೇಷ ಕಾಳಜಿ ವಹಿಸಿ ನೋಡಿಕೊಳ್ಳುವಂತೆ ಗಗನಸಖಿಯರು ವಿಶೇಷ ಕ್ಯಾಬಿನ್ ನಲ್ಲಿರುವವರನ್ನು ಗೌರವಾದರಗಳಿಂದ ಉಪಚರಿಸುತ್ತಿದ್ದರು.
ಸ್ವಲ್ಪ ಹೊತ್ತಿನಲ್ಲಿಯೇ ಗಗನಸಖಿಯು ನಮ್ಮ ಹತ್ತಿರ ಬಂದು "What would you like to drink Swamiji?” ಎಂದು ಅತ್ಯಂತ ವಿನಯ ಹಾಗೂ ಶ್ರದ್ಧಾಭಾವನೆಯಿಂದ ಕೇಳಿದಳು. ಅವಳು ತೆಗೆದುಕೊಂಡು ಬಂದಿದ್ದ ಟ್ರೇನಲ್ಲಿ ಎರಡು ಗ್ಲಾಸ್ ಗಳು ಇದ್ದವು. ನಾವು ಗಮನಿಸಿದಂತೆ ಒಂದರಲ್ಲಿ ಮಜ್ಜಿಗೆ ಇತ್ತು; ಇನ್ನೊಂದರಲ್ಲಿ ಕಿತ್ತಲೆ ಹಣ್ಣಿನ ರಸ ಇತ್ತು. ಅವುಗಳಲ್ಲಿ ನಮಗೆ ಇಷ್ಟವಾಗಿದ್ದು ಮಜ್ಜಿಗೆ. ಕನ್ನಡದಲ್ಲಿ ಮಜ್ಜಿಗೆಯನ್ನು “ಶಿವದಾನ” ಎಂದು ಕರೆಯುತ್ತಾರೆ. ಏಕೆಂದು ಯಾರಿಗೂ ಗೊತ್ತಿಲ್ಲ. ಅದು ಏನೇ ಇರಲಿ, ಗ್ಯಾಸ್ಟ್ರಿಕ್/ಅಸಿಡಿಟಿ ಸಮಸ್ಯೆ ಇರುವವರಿಗಂತೂ ಮಜ್ಜಿಗೆ ಒಂದು ವರದಾನ. ರಾಮನವಮಿಯಂದು ರಾಮನ ಭಕ್ತರಿಗೆ ಪಾನಕ ಮತ್ತು ಮಜ್ಜಿಗೆ ಕೊಡುವ ಒಂದು ಧಾರ್ಮಿಕ ಸಂಪ್ರದಾಯವೇ ಇದೆ. ಗಗನಸಖಿಯು ನಮ್ಮ ಇಷ್ಟದಂತೆ ಕುಡಿಯಲು ಮಜ್ಜಿಗೆಯನ್ನು ಕೊಟ್ಟ ಮೇಲೆ ಓದಲು ಕೆಲವು ವಾರಪತ್ರಿಕೆಗಳನ್ನೂ ಕೊಟ್ಟಳು. ಮಜ್ಜಿಗೆಯು ನಮ್ಮ ಉದರಕ್ಕೆ ಆಹಾರವಾದರೆ ವಾರಪತ್ರಿಕೆಗಳು ನಮ್ಮ ಮೆದುಳಿಗೆ ಆಹಾರವಾದವು.
ಗಣಿತದ ಲೆಕ್ಕಾಚಾರ ಎಲ್ಲ ಸಂದರ್ಭಗಳಲ್ಲೂ ಸರಿಯಾಗಿ ಇರುತ್ತದೆಯೆಂದು ಹೇಳಲಾಗದು. ನಮ್ಮ ವಿಮಾನವು ಬೆಂಗಳೂರಿನಿಂದ ಹೊರಟ ವೇಳೆ ಮಧ್ಯಾಹ್ನ 2 ಗಂಟೆ. ಸ್ಯಾನ್ ಫ್ರಾನ್ಸಿಸ್ಕೋ ತಲುಪಿದ ವೇಳೆ ಅದೇ ದಿನ ಸಂಜೆ 6 ಗಂಟೆ. ಅಂದರೆ ಗಣಿತದ ಪ್ರಕಾರ ಪ್ರಯಾಣದ ಕಾಲಾವಧಿ 4 ಗಂಟೆಗಳು. ಆದರೆ ವಾಸ್ತವವಾಗಿ ನಮ್ಮ ವಿಮಾನ ಸ್ಯಾನ್ ಫ್ರಾನ್ಸಿಸ್ಕೋ ನಗರ ತಲುಪಲು ತೆಗೆದುಕೊಂಡ ಒಟ್ಟು ಕಾಲಾವಧಿ 16 ಗಂಟೆ 30 ನಿಮಿಷಗಳು. ಕ್ರಮಿಸಿದ ವಾಯುಮಾರ್ಗ ಸುಮಾರು 14 ಸಾವಿರ ಕಿ.ಮೀ. ಇದಕ್ಕೆ ಕಾರಣ ಬೆಂಗಳೂರಿಗೂ ಇಲ್ಲಿಗೂ ಇರುವ ಹನ್ನೆರಡುವರೆ ಗಂಟೆಗಳ ಕಾಲಮಾನದ ವ್ಯತ್ಯಾಸ. ನಮ್ಮ ನಾಲ್ಕು ದಶಕಗಳ ವಿದೇಶ ಪ್ರವಾಸದ ಅನುಭವದಲ್ಲಿ ವಿಮಾನವು ಮಧ್ಯೆ ಎಲ್ಲಿಯೂ ಇಳಿಯದೆ ಇಷ್ಟೊಂದು ದೀರ್ಘಕಾಲ ಯಾನ ಮಾಡಿದ್ದು ಇದೇ ಮೊದಲು.
ಇದೇ ರೀತಿ ಅಮೇರಿಕಾ ದೇಶವನ್ನು ಪಾಶ್ಚಿಮಾತ್ಯ ರಾಷ್ಟ್ರವೆಂದು ಕರೆಯುವುದೂ ಒಂದು ದೃಷ್ಟಿಯಿಂದ ಸರಿಯಲ್ಲವೆಂದು ತೋರುತ್ತದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳೆಂಬುವು ಸಂಪೂರ್ಣ ಸತ್ಯವಲ್ಲ, ಅವು ಸಾಪೇಕ್ಷ. ನೀವು ನಿಂತ ಜಾಗವನ್ನು ಅವಲಂಬಿಸಿರುತ್ತವೆ. ನಮ್ಮ ವಿಮಾನವು ಆರಂಭದಲ್ಲಿ ಪಶ್ಚಿಮಾಭಿಮುಖವಾಗಿಯೇ ಹೊರಟರೂ ಅದರ ಹಾರಾಟಕ್ಕೆ ಬೇಕಾದ ನಿರ್ದಿಷ್ಟ ಎತ್ತರ ತಲುಪಿದಾಗ ಪೂರ್ವ ದಿಕ್ಕಿಗೆ ತಿರುಗಿತು. ಸ್ವತಃ ವಿಮಾನ ಚಾಲಕ ಕ್ಯಾಪ್ಟನ್ ಅಭಿರಾಜ್ ರವರು ವಿಮಾನಯಾನವನ್ನು ಪೂರ್ವ ದಿಕ್ಕಿಗೆ ತಿರುಗಿಸುತ್ತಿರುವುದಾಗಿ ಪ್ರಯಾಣಿಕರಿಗೆ ಸೂಚನೆ ನೀಡಿದಾಗಲಂತೂ ನಮಗೆ ಅಚ್ಚರಿ ಉಂಟಾಯಿತು. ಅಮೇರಿಕೆಯು ಭಾರತದಿಂದ ಪಶ್ಚಿಮದ ಕಡೆಗೆ ಇರುವಾಗ ಪೂರ್ವ ದಿಕ್ಕಿನತ್ತ ವಿಮಾನವನ್ನು ಚಾಲನೆ ಮಾಡುವುದು ಸರಿಯೇ ಎಂಬ ಜಿಜ್ಞಾಸೆ ನಮ್ಮ ಮನಸ್ಸಿನಲ್ಲಿ ಮೂಡಿತು. ಕರೆ ಗಂಟೆಯನ್ನು ಒತ್ತಿ ಗಗನ ಸಖಿಯನ್ನು ಕೇಳಿದಾಗ ಬಂದ ಉತ್ತರ: ಈ ಮೊದಲು ಏರ್ ಇಂಡಿಯಾ ವಿಮಾನ ಪಶ್ಚಿಮಾಭಿಮುಖವಾಗಿ ಚಲಿಸುತ್ತಿತ್ತು. ಅಮೇರಿಕಾ ಹತ್ತಿರವಾಗುವುದೆಂದು ಯೂರೋಪ್ ಮಾರ್ಗವಾಗಿ ಹಾರುತ್ತಿತ್ತು. ಸ್ಯಾನ್ ಫ್ರಾನ್ಸಿಸ್ಕೋ ನಗರವು ಫೆಸಿಫಿಕ್ ಸಾಗರದ ದಂಡೆಯಲ್ಲಿರುವುದರಿಂದ ಭಾರತದಿಂದ ಪೂರ್ವಾಭಿಮುಖವಾಗಿ ಚಲಿಸಿದರೆ ಒಂದು ಸಾವಿರ ಕಿ.ಮೀ. ನಷ್ಟು ಹೆಚ್ಚು ದೂರವಾದರೂ ವಾಯುವಿನ ಅಧಿಕ ಒತ್ತಡದಿಂದ (tail wind) ವೇಗವಾಗಿ ಚಲಿಸಬಹುದು, ಎರಡು ಗಂಟೆ ಪ್ರಯಾಣ ಉಳಿತಾಯವಾಗುತ್ತದೆ, ಇಂಧನದ ಬಳಕೆಯೂ ಕಡಿಮೆಯಾಗುತ್ತದೆ ಎಂಬ ವೈಮಾನಿಕ ಲೆಕ್ಕಾಚಾರ ಮಾಡಿ 2016 ರ ಅಕ್ಟೋಬರ್ ತಿಂಗಳಿನಿಂದ ಫೆಸಿಫಿಕ್ ಮಾರ್ಗವಾಗಿ ಚಲಿಸುತ್ತಿದೆ. ಅಮೇರಿಕೆಯು ಪಾಶ್ಚಿಮಾತ್ಯ ದೇಶವಾಗಿದ್ದರೂ ನಮ್ಮ ವಿಮಾನವು ಅದನ್ನು ತಲುಪಿದ್ದು ಭಾರತದಿಂದ ಪೂರ್ವಾಭಿಮುಖವಾಗಿ ಚಲಿಸಿದಾಗ. ಭೂಮಿಯು ಗೋಲಾಕಾರವಾಗಿರುವುದರಿಂದ ಇದು ಸಾಧ್ಯವಾಯಿತು. ಜಾಗತಿಕ ವಿಮಾನಯಾನ ಸ್ಪರ್ಧೆಯಲ್ಲಿ ಏರ್ ಇಂಡಿಯಾ ವಿಮಾನವು ವೇಗವಾಗಿ ಒಂದೇ ನೆಗೆತದಲ್ಲಿ ವಿಶಾಲವಾದ ಫೆಸಿಫಿಕ್ ಮಹಾಸಾಗರವನ್ನು ದಾಟಿ ಭಾರತದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದೆ ಎಂಬ ಹೆಮ್ಮೆಯನ್ನುಂಟುಮಾಡಿತು.
ಗಗನಸಖಿಯು ಪ್ರಯಾಣಿಕರಿಗೆ ಚಹಾಪಾನೀಯವನ್ನು ವಿತರಿಸಿದ ಮೇಲೆ ಇತಿಹಾಸದ ಒಳ್ಳೆಯ ಶಿಕ್ಷಕಿಯಾಗಿಯೂ ಕಾಣಿಸಿಕೊಂಡಳು. ಆಗಸದಲ್ಲಿ ಸುಂದರವಾದ ಲೋಹದ ಹಕ್ಕಿ ಏರ್ ಇಂಡಿಯಾ ಬೋಯಿಂಗ್ 787 ರಲ್ಲಿ ಹಾಯಾಗಿ ಕುಳಿತಿದ್ದ ಸುಮಾರು 250 ಜನ ಯಾತ್ರಿಕರಿಗೆ “ಭಾರತದ ಸ್ವಾತಂತ್ರ್ಯ ಚಳುವಳಿ”ಯಲ್ಲಿ ಸುಭಾಷ್ ಚಂದ್ರ ಬೋಸ್ ರವರ ಹೆಜ್ಜೆಗೆ ಹೆಜ್ಜೆ ಹಾಕಿದ ಕೇರಳ ಮೂಲದ ಧೀರ ಮಹಿಳೆ ಲಕ್ಷ್ಮೀ ಸೆಹಗಲ್ ರವರ ಜೀವನ ವೃತ್ತಾಂತವನ್ನು ಕುರಿತು ಮಾಡಿದ ನಿರೂಪಣೆ ಮೈನವಿರೇಳಿಸುವಂತಿತ್ತು; ದೇಶಭಕ್ತಿಯನ್ನು ಜಾಗೃತಗೊಳಿಸುವಂತಿತ್ತು:
“ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಇಂದು ಜುಲೈ 23 ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರ ಪುಣ್ಯ ತಿಥಿಯ ದಿನ. ಮಹಾ ಕ್ರಾಂತಿಕಾರಿಯಾಗಿದ್ದ ಆಕೆಯು ಸುಭಾಷ್ ಚಂದ್ರ ಬೋಸ್ ರವರ “ಅಜಾದ್ ಹಿಂದ್ ಫೌಜ್” ನಲ್ಲಿ ಝಾನ್ಸಿರಾಣಿ ರೆಜಿಮೆಂಟಿನ ಕಮ್ಯಾಂಡರ್ ಆಗಿದ್ದರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿನ ಅವರ ಅಮೂಲ್ಯ ಸೇವೆಗಾಗಿ ಅವರಿಗೆ ಈ ದಿನದಂದು ನಮ್ಮ ಗೌರವಾದರಗಳ ನಮನಗಳು.”
ಗಗನಸಖಿಯ ಮೇಲಿನ ಮಾತುಗಳನ್ನು ಕೇಳಿದ ಮೇಲೆ ನಮಗೆ ಅನಿಸಿದ್ದು:
The more you travel outside India
The more you understand
Your own India!
ಭಾರತದ ಹೊರಗೆ ಸಂಚರಿಸಿದಷ್ಟೂ ಹೆಚ್ಚು ಭಾರತದ ಹಿರಿಮೆ ಗರಿಮೆಗಳ ಅರಿವಾಗುತ್ತದೆ !
ಜೈ ಹಿಂದ್! ಜೈ ಭಾರತ್!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ. 27-7-2023.