ಶಿವಶರಣರ ವಚನ ಸಂಪುಟ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ : ಅಮೆರಿಕಾದ ಸಿಲಿಕಾನ್ ವ್ಯಾಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲೋಕಾರ್ಪಣೆ

  •  
  •  
  •  
  •  
  •    Views  

ಅಮೇರಿಕಾದ ಸಿಲಿಕಾನ್  ವ್ಯಾಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ  ಮೊಬೈಲ್  ಆಪ್ ಲೋಕಾರ್ಪಣೆ

12ನೆಯ ಶತಮಾನದಲ್ಲಿ ಶರಣರು ನಡೆಸಿದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕ್ರಾಂತಿಯ ಉಪ ಉತ್ಪನ್ನವಾಗಿ ಮೂಡಿಬಂದಿದ್ದು ಈ ವಚನ ಸಾಹಿತ್ಯ.  ಕನ್ನಡ ಸಾಹಿತ್ಯಕ್ಕೆ ಹೊಸ ಮೆರಗನ್ನು, ಹೊಸ ಬೆಳಕನ್ನು ತಂದುಕೊಟ್ಟದ್ದು ವಚನ ಸಾಹಿತ್ಯ. ಇದು ವಿಶ್ವ ಸಾಹಿತ್ಯ ಪರಂಪರೆಯಲ್ಲೂ ತನ್ನ ಅಸ್ಮಿತೆಯನ್ನು ಗುರುತಿಸಿಕೊಂಡಿದ್ದು ಜಾಗತಿಕ ಸತ್ಯ. ಜಾತ್ಯತೀತ, ಸರ್ವ ಸಮಾನತೆಯ, ವೈಚಾರಿಕ ನೆಲಗಟ್ಟಿನಲ್ಲಿ ನವ ಸಮಾಜದ ರಚನೆಯೇ ಈ ವಚನ ಚಳವಳಿಯ ಮುಖ್ಯ ಉದ್ದೇಶ. ಹೀಗಾಗಿ ಜಗತ್ತಿನ ಮೊಟ್ಟ ಮೊದಲ ಸಂಸತ್ ರೂಪಗೊಂಡದ್ದು ಸಹ ಕಲ್ಯಾಣದ ಅನುಭವ ಮಂಟಪದಲ್ಲಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಇದರ ಮುಖ್ಯ ನೇತಾರ ಬಸವಣ್ಣನವರು. ಇಂತಹ ಅಮೂಲ್ಯವೂ, ಅಪೂರ್ವವೂ ಆದ ವಚನ ಸಾಹಿತ್ಯವು ಫ.ಗು ಹಳಕಟ್ಟಿಯಂತಹ ಸಮರ್ಪಣಾ ಮನೋಭಾವದ ಪರಿಚಾರಕರಿಂದ ನಾಡಿಗೆ ಪರಿಚಿತವಾಯಿತು. ಇದಕ್ಕೆ ಮತ್ತೊಷ್ಟು ಹೊಳಪನ್ನು ನೀಡಿ, ನಾಟಕ, ಸಂಗೀತ, ಉಪನ್ಯಾಸಗಳ ಮೂಲಕ ಮನೆಮನೆಗಳಿಗೆ ತಲುಪಿಸುವ ಕೈಂಕರ್ಯ ಕೈಗೊಂಡವರು 20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಪೂಜ್ಯರ ಆಶಯದಂತೆ ವಚನ ಸಾಹಿತ್ಯವನ್ನು ಜಗದಗಲ ಪಸರಿಸುವ ಮಹಾಮಣಿಹದಲ್ಲಿ ತೊಡಗಿಕೊಂಡವರು 21ನೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. 

ಬೆರಳ ತುದಿಯಲ್ಲಿ ಶಿವಶರಣರ ವಚನ ಸಂಪುಟ: 

ಬಸವಾದಿ ಶಿವಶರಣರು ರಚಿಸಿದ ವಚನ ಸಾಹಿತ್ಯಕ್ಕೆ ಜಗತ್ತಿನಲ್ಲಿಯೇ ಮೊಟ್ಟಮೊದಲು ತಾಂತ್ರಿಕ ಸ್ಪರ್ಶ ನೀಡಿದ ಕೀರ್ತಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರದು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ಸಮಗ್ರ ವಚನ ಸಂಪುಟಗಳನ್ನು ಆಧರಿಸಿ, 1994ರಲ್ಲಿ ಮೊಟ್ಟಮೊದಲು ಪೂಜ್ಯರು "ಗಣಕ ವಚನ ಸಂಪುಟ". ದ ತಂತ್ರಾಂಶವನ್ನು ರೂಪಿಸಿದ್ದರು. ಅಂದಿನ ತಂತ್ರಜ್ಞಾನವನ್ನು ಅವಲಂಬಿಸಿ ರೂಪಿಸಿದ ಈ ತಂತ್ರಾಂಶದಲ್ಲಿ ವಚನದ ಯಾವುದಾದರು ಪದವನ್ನು ಟೈಪಿಸಿದರೆ ಸಾಕು, ಆ ಪದ ಬಳಕೆಯಾಗಿರುವ ಎಲ್ಲಾ ವಚನಗಳನ್ನು ಪರದೆಯ ಮೇಲೆ ತೋರಿಸುತ್ತಿತ್ತು. ವಚನ ಸಾಹಿತ್ಯವನ್ನು ಆಧರಿಸಿದ ಶಬ್ದಕೋಶ ಲಭ್ಯವಿತ್ತು.  ಆದರೆ ಈ ತಂತ್ರಾಂಶವನ್ನು ಸಾರ್ವತ್ರಿಕವಾಗಿ ಎಲ್ಲರೂ  ಬಳಸಲು ಬರುತ್ತಿರಲಿಲ್ಲ. ವೆಬ್ ಸೈಟಿನಲ್ಲಿ ನೋಂದಾಯಿಸಲ್ಪಟ್ಟವರು ಮಾತ್ರ ಬಳಸಬೇಕಾಗಿತ್ತು. ಈ ನಡುವಿನ ಎರಡೂವರೆ ದಶಕಗಳ ಅಂತರದಲ್ಲಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆ ಗಳಾಗಿವೆ. ಆಂಡ್ರಾಯ್ಡ್ ಮೊಬೈಲ್ ಸೆಟ್ ಮಾಡಿರುವ ಕ್ರಾಂತಿಯಿಂದ ಜಗತ್ತೇ ಬೆರಳ ತುದಿಯಲ್ಲಿದೆ. ಅಲ್ಲದೆ ಸಮಗ್ರ ವಚನ ಸಂಪುಟಗಳು ಸಹ ಈಗಾಗಲೇ ನಾಲ್ಕನೆಯ ಮುದ್ರಣಗಳನ್ನು ಕಂಡು ಸಾಕಷ್ಟು ಪರಿಷ್ಕರಣೆ ಗೊಂಡಿವೆ. ಈ ಎಲ್ಲಾ ಕಾರಣಗಳಿಂದ ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ತಂತ್ರಾಂಶ ರೂಪಿಸಲಾಗಿತ್ತು. ಈ ತಂತ್ರಾಂಶವನ್ನು 2022ರ ಬಸವ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ  ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಗೊಳಿಸಿದ್ದರು. ಈ ತಂತ್ರಾಂಶವು ಜಾಲತಾಣ(ವೆಬ್ ಸೈಟ್)ದಲ್ಲಿದ್ದು, ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಗಳಲ್ಲಿ ಮಾತ್ರ ಹುಡುಕಾಟ ನಡೆಸಿ ನೋಡಬಹುದಾಗಿತ್ತು. ಇದೀಗ ಪ್ರತಿಷ್ಠಿತ  ಗೂಗಲ್ ಪ್ಲೇಸ್ಟೋರಿನ ಮೂಲಕ ಪಡೆಯಬಹುದಾದ ಆಪ್ ರೂಪಿಸಲಾಗಿದೆ. ಇದನ್ನು ಮೊಬೈಲ್ ಆಂಡ್ರಾಯಿಡ್ ಸೆಟ್ಟಿನಲ್ಲಿ ಜಗತ್ತಿನ ಯಾವುದೇ ಮೂಲೆಯಿಂದಲೂ ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಬಳಸಬಹುದಾಗಿದೆ.

ತಂತ್ರಾಂಶದ ವೈಶಿಷ್ಟ್ಯ:

ಈ ತಂತ್ರಾಂಶದಲ್ಲಿ 200ಕ್ಕೂ ಹೆಚ್ಚು ವಚನಕಾರರ 22000ಕ್ಕೂ ಹೆಚ್ಚು ವಚನಗಳಿವೆ. ಕನ್ನಡ ಮತ್ತು ಇಂಗ್ಲಿಷ್ ಲಿಪಿಯಲ್ಲಿ ಮೂಲ ಪಠ್ಯ ಲಭ್ಯವಿದ್ದು, ಆ ವಚನ ಇತರೆ ಭಾಷೆಗಳಿಗೆ ಅನುವಾದಗೊಂಡಿದ್ದರೆ ಅದೇ ಲಿಪಿಯಲ್ಲಿ ಕಾಣಬಹುದು. ಉದಾಹರಣೆಗೆ, ಬಸವಣ್ಣನವರ ವಚನಗಳು ಈಗಾಗಲೇ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು ಭಾಷೆಗಳಿಗೆ ವಿವಿಧ ವಿದ್ವಾಂಸರಿಂದ ಅನುವಾದಗೊಂಡಿವೆ. ಈ ಅನುವಾದಗಳನ್ನು ಪ್ರಸ್ತುತ ತಂತ್ರಾಂಶದಲ್ಲಿ ಆಯಾಯ ಭಾಷಿಗರು ಬಸವಣ್ಣನವರ ವಚನಗಳನ್ನು ತಮ್ಮ ತಮ್ಮ ಭಾಷೆಗಳಲ್ಲಿ ಓದಬಹುದಾಗಿದೆ. ಹಾಗೆಯೇ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳ ವಚನಗಳು ಸಹ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದ ಗೊಂಡಿದ್ದೂ ಈ ಭಾಷಿಗರಿಗೂ ಅಲ್ಲಮ ಮತ್ತು ಅಕ್ಕನ ವಚನಗಳು ಲಭ್ಯ. ಅಲ್ಲದೆ ವಚನಗಳ ತಾತ್ಪರ್ಯ, ಶಬ್ದಕೋಶ ಈ ತಂತ್ರಾಂಶದಲ್ಲಿದೆ. ಈಗಾಗಲೇ ರಾಗ ಸಂಯೋಜನೆಗೊಂಡು, ನಾಡಿನ ಖ್ಯಾತ ಗಾಯಕರಿಂದ ಹಾಡಲ್ಪಟ್ಟ ವಿವಿಧ ವಚನಕಾರರ 300 ವಚನಗಳ ಆಡಿಯೋವನ್ನು ಸಹ ಅಳವಡಿಸಲಾಗಿದೆ. ಈ ತಂತ್ರಾಂಶದಲ್ಲಿ ಈ ವಚನ ಸಂಗೀತವನ್ನು ಆಲಿಸಬಹುದು. ಮುಂದಿನ ದಿನಗಳಲ್ಲಿ ಪರಿಷ್ಕೃತ ಆವೃತ್ತಿಯಾಗಿ ಪ್ರಮುಖ ವಚನಕಾರರ ಅನ್ಯಭಾಷೆಗಳ ಅನುವಾದಗಳನ್ನು  ಸಹ ಅಪ್ ಡೆಟ್ ಮಾಡಲಾಗುತ್ತದೆ.

ಕೋವಿಡ್ ಕಾಲದ ಸದುಪಯೋಗ:

ಜಗತ್ತಿನಾದ್ಯಂತ ಕೋವಿಡ್ ಆವರಿಸಿದ ಸಂದರ್ಭದಲ್ಲಿ ಪೂಜ್ಯರು ಈ ಸುಸಮಯವನ್ನು ಸದ್ಬಳಕೆ ಮಾಡಿಕೊಂಡು 22 ಸಾವಿರ ವಚನಗಳನ್ನು ಪರಿಷ್ಕರಿಸಿ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಿದರು. ಕನ್ನಡದ ಅಪೂರ್ವ ಜ್ಞಾನನಿಧಿಯಾದ ಶಿವಶರಣರ ಈ ವಚನ ಸಾಹಿತ್ಯವನ್ನು ತಂತ್ರಾಂಶದಲ್ಲಿ ರೂಪಿಸಲು ಚನ್ನಗಿರಿಯ ಗಣಕತಂತ್ರಜ್ಞ ಮಧು.ಜಿ ಸಾಫ್ಟ್ ವೇರ್ ಇಂಜಿನಿಯರ್, ತಂದೆ ಜಿ.ಶಂಕರಪ್ಪ ವಿಶ್ರಾಂತ ಸೂಪರಿಂಟೆಂಡಿಂಗ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬೆಸ್ಕಾಂ ತಾಂತ್ರಿಕ ನೆರವು ನೀಡಿರುತ್ತಾರೆ. ಈ ಮಹಾನ್ ಕಾರ್ಯದಲ್ಲಿ ವಿದ್ಯಾಸಂಸ್ಥೆಯ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಮೊದಲಾದ ಭಾಷಾ ಶಿಕ್ಷಕರು, ಕಂಪ್ಯೂಟರ್ ತಂತ್ರಜ್ಞರು, ಕರಣಿಕರು ನೆರವಾಗಿದ್ದಾರೆ.

ಸಿಲಿಕಾನ್ ಕಣಿವೆ ಸ್ಯಾನ್ ಫ್ರಾನ್ಸಿಸ್ಕೊ:

ಸ್ಯಾನ್ ಫ್ರಾನ್ಸಿಸ್ಕೊ ಅಮೇರಿಕಾ ದೇಶದ ಉತ್ತರ ಕ್ಯಾಲಿಫೋರ್ನಿಯಾದ ಮೂರನೆಯ ಅತಿದೊಡ್ಡ ನಗರ. ಕೊಲ್ಲಿ ಪ್ರದೇಶದ ದಕ್ಷಿಣದಲ್ಲಿರುವ ಈ ನಗರವು ಉನ್ನತ ತಂತ್ರಜ್ಞಾನ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗಿದೆ. ಅತಿಹೆಚ್ಚು ಟೆಕ್ ಕಂಪನಿಗಳು ಈ ನೆಲೆಯೂರಿವೆ. ಟ್ರಾನ್ಸಿಸ್ಟರ್ ಮತ್ತು ಕಂಪ್ಯೂಟರಿನ ಚಿಪ್ ಗಳನ್ನು ಬಳಸಲಾಗುವ ಸಿಲಿಕಾನಿಂದಾಗಿ ಈ ನಗರಕ್ಕೆ ಸಿಲಿಕಾನ್ ಕಣಿವೆ ಎಂಬ ಅನ್ವರ್ಥ ಬಂದಿದೆ. ಇಷ್ಟು ಮಹತ್ವದ ನಗರದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರು ಅಭಿವೃದ್ಧಿಪಡಿಸಿದ ಶಿವಶರಣರ ವಚನ ಸಂಪುಟದ ಮೊಬೈಲ್ ಆಫ್ ಲೋಕಾರ್ಪಣೆಗೊಂಡಿರುವುದು ವಿಶೇಷ.

ನಾಗರಾಜ ಸಿರಿಗೆರೆ